ವೆಸ್ಟ್​ಇಂಡೀಸ್​ ವಿರುದ್ಧ 10 ವಿಕೆಟ್​ಗಳ ಜಯ: ಟೆಸ್ಟ್​ ಸರಣಿ ಭಾರತದ ತೆಕ್ಕೆಗೆ

ಹೈದರಾಬಾದ್​: ವೆಸ್ಟ್​ಇಂಡೀಸ್​ ವಿರುದ್ಧದ ಎರಡನೇ ಟೆಸ್ಟ್​ ಪಂದ್ಯದಲ್ಲೂ ಭಾರತ 10 ವಿಕೆಟ್​ಗಳಿಂದ ಜಯ ಸಾಧಿಸುವ ಮೂಲಕ ಕ್ಲೀನ್​ ಸ್ವೀಪ್​ ಮಾಡಿದೆ.

ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟೆಸ್ಟ್​ ಪಂದ್ಯಾವಳಿಯ ಮೂರನೇ ದಿನ ವೆಸ್ಟ್​ಇಂಡೀಸ್​ ವಿರುದ್ಧ ಗೆಲುವು ಸಾಧಿಸಿರುವ ಭಾರತ ರಾಜ್​ಕೋಟ್​ನಲ್ಲಿ ನಡೆದಿದ್ದ ಮೊದಲನೇ ಟೆಸ್ಟ್​ನಲ್ಲಿ ಇನಿಂಗ್ಸ್ ಹಾಗೂ 272 ರನ್​ಗಳ ಭರ್ಜರಿ ಜಯ ಸಾಧಿಸಿತ್ತು.

ವೆಸ್ಟ್​ಇಂಡೀಸ್​ ತನ್ನ ಎರಡನೇ ಇನ್ನಿಂಗ್ಸ್​ನಲ್ಲಿ 127 ರನ್​ಗಳನ್ನು ಮಾತ್ರ ಗಳಿಸಿ ಭಾರತಕ್ಕೆ 72 ರನ್​ಗಳ ಗುರಿ ಒಡ್ಡಿತ್ತು. ಆರಂಭಿಕವಾಗಿ ಬ್ಯಾಟ್​ ಮಾಡಿದ ಕೆ.ಎಲ್​.ರಾಹುಲ್​ (33), ಪ್ರಥ್ವಿ ಷಾ (33) ಜತೆಯಾಟದಲ್ಲಿ 16.1 ಓವರ್​ಗಳಲ್ಲಿ ಗೆಲುವು ತಂದು ಕೊಟ್ಟು ಅಜೇಯರಾಗಿ ಉಳಿದರು. ಭಾರತದ ಉಮೇಶ್​ ಯಾದವ್​ 4, ರವೀಂದ್ರ ಜಡೇಜಾ 3, ಆರ್​. ಅಶ್ವಿನ್ 2 ವಿಕೆಟ್​ ಪಡೆದರು.

ಎರಡನೇ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ ವೆಸ್ಟ್​ಇಂಡೀಸ್ 311 ರನ್ ಗಳಿಸಿ ಆಲೌಟ್​ ಆಗಿತ್ತು. ನಂತರ ಬ್ಯಾಟ್​ ಮಾಡಿದ ಭಾರತ 367 ರನ್​ ಗಳಿಸಿತ್ತು. ಎರಡನೇ ಇನ್ನಿಂಗ್ಸ್​ನಲ್ಲಿ ವೆಸ್ಟ್​ ಇಂಡೀಸ್​ 127 ರನ್​ ಗಳಿಸುವ ಮೂಲಕ ಭಾರತಕ್ಕೆ 72 ರನ್​ಗಳ ಸವಾಲು ಹಾಕಿದ್ದರು.

ಅಕ್ಟೋಬರ್​ 21ರಿಂದ ವೆಸ್ಟ್​ಇಂಡೀಸ್​ ವಿರುದ್ಧ ಏಕದಿನ ಪಂದ್ಯಾವಳಿಗಳು ಶುರುವಾಗಲಿವೆ.