ಬಂಗಾಳಕ್ಕೆ ಬಿಜೆಪಿ ನುಸುಳಲು ಕಾರಣವಾದ ದೀದಿ ಯೂಟರ್ನ್

| ರಾಘವ ಶರ್ಮನಿಡ್ಲೆ ಕೋಲ್ಕತ

2005ರ ಆ.4ರಂದು ಲೋಕಸಭಾ ಸ್ಪೀಕರ್ ಸೋಮನಾಥ್ ಚಟರ್ಜಿ ಪೀಠದ ಮೇಲೆ ಕಾಗದ ಪತ್ರಗಳ ಚೂರನ್ನು ಎಸೆದು ಹೊರಬಂದಿದ್ದ ಬಂಗಾಳಿ ಹೆಣ್ಣು ಹುಲಿ ಮಮತಾ ಬ್ಯಾನರ್ಜಿ, ‘ಎಡರಂಗದ ಸರ್ಕಾರ ಬಾಂಗ್ಲಾ ನುಸುಳುಕೋರರ ರಕ್ಷಣೆಗೆ ನಿಂತಿದೆ. ಮತಚೀಟಿ ಮಾಡಿಕೊಡಲಾಗುತ್ತಿದೆ. ಇದನ್ನು ಖಂಡಿಸಿ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಗುಡುಗಿದ್ದರು. ಆದರೆ ಅಂದಾಜು ಒಂದೂವರೆ ದಶಕದ ಬಳಿಕ ಅದೇ ಮಮತಾ ಬ್ಯಾನರ್ಜಿ ನುಸುಳುಕೋರರ ವಿಚಾರ ಪ್ರಸ್ತಾಪಿಸಿದರೆ ಕೆಂಡಕಾರಲು ಆರಂಭಿಸಿದ್ದಾರೆ. ಅಂದಿನ ಸಿಪಿಐ-ಎಂ ಪಾತ್ರವನ್ನು ಮಮತಾ ನೇತೃತ್ವದ ಟಿಎಂಸಿ ಸರ್ಕಾರ ನಿರ್ವಹಿಸುತ್ತಿದ್ದು, 2005ರ ಮಮತಾ ಬ್ಯಾನರ್ಜಿ ಪಾತ್ರವನ್ನು ಬಿಜೆಪಿ ನಿಭಾಯಿಸುತ್ತಿದೆ. ಇದು ಹಾಲಿ ಪಶ್ಚಿಮ ಬಂಗಾಳ ಲೋಕಸಭಾ ಚುನಾವಣೆಯ ಮುಖ್ಯ ವಿಚಾರವಾಗಿದೆ. 2005ರಲ್ಲಿ ನುಸುಳುಕೋರರ ಬಗ್ಗೆ ಧ್ವನಿ ಎತ್ತಿದ್ದ ಟಿಎಂಸಿಗಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಬಿಜೆಪಿ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್​ಆರ್​ಸಿ) ಪ್ರಸ್ತಾಪ ಮಾಡುತ್ತಿದೆ. ಹಿಂದು ವಲಸಿಗರು ಹಾಗೂ ಮುಸ್ಲಿಂ ನುಸುಳುಕೋರರು ಎಂಬ ಪ್ರತ್ಯೇಕತೆ ಮಾಡಿ ಧರ್ಮ ರಾಜಕೀಯಕ್ಕೆ ಮುನ್ನುಡಿ ಬರೆದಿದೆ. ಟಿಎಂಸಿ ಸರ್ಕಾರದ ಅತಿಯಾದ ಓಲೈಕೆ ರಾಜಕಾರಣಕ್ಕೆ ಬೇಸತ್ತಿರುವ ಬಂಗಾಳಿಗರು ಮೊದಲ ಬಾರಿಗೆ ಧರ್ಮ ರಾಜಕೀಯಕ್ಕೆ ಮಣೆ ಹಾಕುತ್ತಿದ್ದಾರೆ. ವಿಪರ್ಯಾಸವೆಂದರೆ ಈ ರಾಜ್ಯವು ಜಾತಿ ರಾಜಕಾರಣ ಕೂಡ ಪೋಷಿಸುತ್ತಿರಲಿಲ್ಲ. ಆದರೆ ಮಮತಾ ಬ್ಯಾನರ್ಜಿಯ ಸ್ವಯಂಕೃತ ಅಪರಾಧಗಳಿಂದ ಬಂಗಾಳದ ರಾಜಕೀಯ ನಕ್ಷೆಯಲ್ಲಿ ಬಿಜೆಪಿ ಗಟ್ಟಿಯಾಗಿ ಬೇರೂರುವ ಸ್ಥಿತಿ ಬಂದಿದೆ.

ಆದರೆ ವಾಸ್ತವದಲ್ಲಿ ಎನ್​ಆರ್​ಸಿ ವಿಚಾರವು ಟಿಎಂಸಿ ಹಾಗೂ ಬಿಜೆಪಿ ಎರಡೂ ಪಕ್ಷಗಳಿಗೆ ರಾಜಕೀಯವಾಗಿ ಲಾಭ ತಂದಿದೆ. ಬಾಂಗ್ಲಾದ ಅಕ್ರಮ ವಲಸಿಗರಲ್ಲಿ ಬಹುಪಾಲು ಅಲ್ಪಸಂಖ್ಯಾತರಿದ್ದಾರೆ. ಕಳೆದ ಹಲವು ವರ್ಷಗಳಿಂದ ಈ ಗುಂಪು ತೃಣಮೂಲ ಕಾಂಗ್ರೆಸ್ಸಿನ ಸುರಕ್ಷಿತ ಮತಬ್ಯಾಂಕ್ ಎಂದು ಗುರುತಿಸಿಕೊಂಡಿದೆ. ಈ ಗುಂಪಿಗೆ ಎನ್​ಆರ್​ಸಿ ಜಾರಿ ಬೇಕಿಲ್ಲ. ಒಂದು ವೇಳೆ ಮೋದಿ ಸರ್ಕಾರ ಎನ್​ಆರ್​ಸಿಯನ್ನು ಬಂಗಾಳಕ್ಕೆ ವಿಸ್ತರಿಸಿದರೆ ಇವರೆಲ್ಲರೂ ಭಾರತ ಬಿಟ್ಟು ಬಾಂಗ್ಲಾದೇಶಕ್ಕೆ ಹೋಗುವುದು ಅನಿವಾರ್ಯವಾಗಲಿದೆ. ಬಂಗಾಳದ ಬಹುತೇಕ ಹಿಂದುಗಳು ಅಸ್ಸಾಂನಂತೆ ಇಲ್ಲೂ ಎನ್​ಆರ್​ಸಿ ಜಾರಿಗೊಳಿಸುವ ಅಗತ್ಯವಿದೆ ಎಂದು ಪ್ರತಿಪಾದಿಸುತ್ತಿದ್ದಾರೆ. ಬಾಂಗ್ಲಾದ ನೂರಾರು ಕ್ರಿಮಿನಲ್​ಗಳು ಭಾರತದ ಮತಚೀಟಿ ಹೊಂದಿರುವುದರಿಂದ ಯಾವುದೇ ಹಂತದಲ್ಲೂ ದೇಶದ ಭದ್ರತೆಗೆ ಹಾನಿ ತರಬಲ್ಲರು ಎಂಬ ಆತಂಕ ಅನೇಕರಲ್ಲಿದೆ. ಈ ಭಾವನೆ ಹೊಂದಿರುವ ಹಿಂದುಗಳನ್ನು ಒಗ್ಗೂಡಿಸಿ ತನ್ನೆಡೆಗೆ ಸೆಳೆದುಕೊಳ್ಳಲು ಬಿಜೆಪಿ ಪ್ರಯತ್ನಿಸಿದೆ. ಅದಕ್ಕಾಗಿ, ಎನ್​ಆರ್​ಸಿಯನ್ನು ಪ್ರಮುಖ ಅಸ್ತ್ರವನ್ನಾಗಿ ಪರಿಗಣಿಸಿದೆ. ಎನ್​ಆರ್​ಸಿ ಬಗ್ಗೆ ವಿರೋಧಿ ಧೋರಣೆ ಹಾಗೂ ಅಲ್ಪಸಂಖ್ಯಾತರ ರಕ್ಷಣೆ ಹೆಸರಲ್ಲಿ ಟಿಎಂಸಿ ಮತಬ್ಯಾಂಕ್ ಉಳಿಸಿಕೊಳ್ಳುತ್ತಿದ್ದರೆ, ಹಿಂದು ಮತಗಳ ಕ್ರೋಢೀಕರಣ ಬಿಜೆಪಿಗೆ ರಾಜಕೀಯ ನೆಲೆಯನ್ನು ಒದಗಿಸುತ್ತಿದೆ.

ಬಂಗಾಳವೇ ಪ್ರವೇಶದ್ವಾರ: ಬಾಂಗ್ಲಾದ ಅಕ್ರಮ ನುಸುಳುಕೋರರಿಗೆ ಭಾರತದಲ್ಲಿ ವ್ಯವಹರಿಸಲು ಬಂಗಾಳವೇ ಪ್ರವೇಶದ್ವಾರ. ಉತ್ತರ ಬಂಗಾಳದ ಗಡಿ ಜಿಲ್ಲೆಗಳಾದ ಮಾಲ್ಡಾ, ಉತ್ತರ 24 ಪರಗಣ, ಬಸೀರ್ಹತ್, ನದಿಯಾ, ಕೂಚ್ ಬೆಹರ್, ಜಲ್ಪಯ್ಗುರಿ ಸೇರಿ ವಿವಿಧ ಜಿಲ್ಲೆಗಳ ಮೂಲಕ ಬಾಂಗ್ಲಾ ಅಕ್ರಮ ವಲಸಿಗರು ಭಾರತದೊಳಗೆ ಸೇರಿದ್ದಾರೆ. ಈಚೆಗಷ್ಟೇ ಬೆಂಗಳೂರಿನಲ್ಲಿ ಕ್ರಿಮಿನಲ್ ವ್ಯವಹಾರದಲ್ಲಿ ಬಂಧಿಸಲ್ಪಟ್ಟಿದ್ದ ಮೂರ್ನಾಲ್ಕು ಬಾಂಗ್ಲಾ ಅಕ್ರಮ ವಲಸಿಗರು ಉತ್ತರ 24 ಪರಗಣ ಜಿಲ್ಲೆಯ ಮತಚೀಟಿ ಹೊಂದಿದ್ದರು ಎಂದು ಸ್ಥಳೀಯ ಬಿಜೆಪಿ ಕಾರ್ಯಕರ್ತರು ದೂರುತ್ತಾರೆ. ಅಕ್ರಮ ವಲಸಿಗರಿಗೆ ಅನಾಯಾಸವಾಗಿ ಮತಚೀಟಿಗಳು ಲಭಿಸಿಬಿಡುತ್ತವೆ. ಈ ದಂಧೆಯಲ್ಲೇ ತೊಡಗಿರುವ ಗಡಿ ಜಿಲ್ಲೆಗಳ ಕ್ರಿಮಿನಲ್ ಗ್ಯಾಂಗ್​ಗಳು ಬಾಂಗ್ಲಾದ ದುಷ್ಕರ್ವಿುಗಳೊಂದಿಗೆ ಸಂಪರ್ಕ ಸಾಧಿಸಿ, ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ಕಳ್ಳತನ, ಅಕ್ರಮ ಮಾನವ ಸಾಗಣೆಯಲ್ಲಿ ತೊಡಗಿಕೊಳ್ಳುತ್ತಾರೆ. ಈ ಜಿಲ್ಲೆಗಳ ವ್ಯಾಪ್ತಿಯ ಲೋಕಸಭೆ ಕ್ಷೇತ್ರಗಳು ಬಿಜೆಪಿ ಮತ್ತು ಟಿಎಂಸಿ ಮಧ್ಯೆ ನೇರ ಹಣಾಹಣಿಗೆ ಸಾಕ್ಷಿಯಾಗುತ್ತಿವೆ.

ಅಕ್ರಮ ವಲಸೆ ಸುತ್ತಲಿನ ಮಾಫಿಯಾ: ಎಡರಂಗದ ಆಡಳಿತವಿದ್ದಾಗಲೂ ರಾಜ್ಯದಲ್ಲಿ ಬಾಂಗ್ಲಾ ಅಕ್ರಮ ವಲಸಿಗರ ಸಮಸ್ಯೆಯಿತ್ತು. ಅಂದಿನ ಸರ್ಕಾರ ಗಡಿ ಭದ್ರತಾ ಪಡೆ ನಿಯೋಜಿಸಿ ನುಸುಳುಕೋರರಿಗೆ ಕಡಿವಾಣ ಹಾಕುವ ಯತ್ನ ಮಾಡಿತ್ತು. ಆದರೆ ಹೆಚ್ಚಿನ ಪ್ರಯೋಜನ ಆಗಿರಲಿಲ್ಲ. ಆದರೆ ಮೋದಿ ಸರ್ಕಾರ ಎನ್​ಆರ್​ಸಿ ಜಾರಿ ಬಗ್ಗೆ ಪ್ರಸ್ತಾಪಿಸಿದ್ದರಿಂದ ಅಕ್ರಮ ವಲಸಿಗರಲ್ಲಿ ಭಯ ಶುರುವಾಗಿದೆ ಎಂದು ಬಂಗಾಳದ ಹಿರಿಯ ಪತ್ರಕರ್ತ ಅರಿಂದಮ್ ಬ್ಯಾನರ್ಜಿ ಹೇಳುತ್ತಾರೆ. ಗಡಿ ಜಿಲ್ಲೆಗಳ ಸ್ಥಳೀಯ ಹಂತದ ರಾಜಕಾರಣಿಗಳು ಬಾಂಗ್ಲಾ ಅಕ್ರಮ ವಲಸಿಗರೊಂದಿಗೆ ಸಂಪರ್ಕ ಸಾಧಿಸಿ, ಅವರ ಅವ್ಯವಹಾರಗಳಿಗೆ ಸಹಕರಿಸುವುದರಿಂದ ಸಮಸ್ಯೆ ದುಪ್ಪಟ್ಟಾಗಿದೆ. ಎಡರಂಗದ ಆಡಳಿತವಿದ್ದಾಗ ಟಿವಿ ಮಾಧ್ಯಮ, ಸಾಮಾಜಿಕ ಜಾಲತಾಣಗಳು ಇರಲಿಲ್ಲ. ಹೀಗಾಗಿ ಈ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿರಲಿಲ್ಲ. ಆದರೆ ಈಗ ಮಾಧ್ಯಮ ಚರ್ಚೆಗಳಿಂದಾಗಿ ಅಕ್ರಮ ವಲಸಿಗರಿಗೆ ಏಕೆ ಕಡಿವಾಣ ಹಾಕಲಾಗುತ್ತಿಲ್ಲ ಎಂದು ಜನ ಪ್ರಶ್ನಿಸಲು ಶುರುಮಾಡಿದ್ದಾರೆ.

ಗಡಿ ಜಿಲ್ಲೆಗಳಲ್ಲಿ ಗೋವುಗಳನ್ನು ಬಾಂಗ್ಲಾದೇಶಕ್ಕೆ ಅಕ್ರಮ ಸಾಗಣೆ ಮಾಡುತ್ತಿರುವುದೂ ಬಿಜೆಪಿಗೆ ಚುನಾವಣಾ ಪ್ರಚಾರದ ಅಸ್ತ್ರವಾಗಿದೆ. ಅಕ್ರಮ ವಲಸಿಗರು ಗೋವುಗಳನ್ನು ಬಾಂಗ್ಲಾದೇಶದ ಕಸಾಯಿಖಾನೆಗಳಿಗೆ ಕೊಂಡೊಯ್ಯುತ್ತಾರೆ. ಇದಕ್ಕೆ ಸ್ಥಳೀಯರೇ ನೆರವಾಗುತ್ತಾರೆ. ಟಿಎಂಸಿ ಬೆಂಬಲಿಗ ಕಾರ್ಯಪಡೆಯೇ ತುಂಬಿರುವ ಗಡಿ ಜಿಲ್ಲೆಗಳಲ್ಲಿ ಇದರ ವಿರುದ್ಧ ಹೋರಾಡುವುದು ಸುಲಭ ಸಾಧ್ಯವಲ್ಲ. ಹಾಗಿದ್ದರೂ ಟಿಎಂಸಿ-ಬಿಜೆಪಿ ಕಾರ್ಯಕರ್ತರ ಮಧ್ಯೆ ಹೊಡೆದಾಟ ಇಲ್ಲಿ ಮಾಮೂಲು ಎನ್ನುತ್ತಾರೆ ಜಾಧವಪುರದ ಉದ್ಯಮಿ ಚಂದನ್ ರಾಯ್. ವೇಶ್ಯಾವಾಟಿಕೆ ದಂಧೆ ನಡೆಸಲು ನೇಪಾಳಕ್ಕೂ ಬಂಗಾಳದ ಗಡಿ ಜಿಲ್ಲೆಗಳಿಂದ ಹೆಣ್ಣುಮಕ್ಕಳನ್ನು ಪೂರೈಸಲಾಗುತ್ತದೆ. ಇಲ್ಲೂ ಬಾಂಗ್ಲಾ ಅಕ್ರಮ ವಲಸಿಗರದ್ದೇ ಕೈವಾಡವಿರುತ್ತದೆ ಎಂದು ಕಲ್ಕತ್ತಾ ವಿವಿ ಪ್ರಾಧ್ಯಾಪಕಿ ಕಾವೇರಿ ಚಕ್ರವರ್ತಿ ಹೇಳುತ್ತಾರೆ.

ಗಡಿ ಜಿಲ್ಲೆಗಳ ಅನೇಕ ಮಂದಿಗೆ ಇನ್ನೂ ಎನ್​ಆರ್​ಸಿ ಏನೆಂಬುದು ಅರ್ಥವಾಗಿಲ್ಲ. ಆದರೆ ನುಸುಳುಕೋರರ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಆತಂಕವಿದೆ. ಅಸ್ಸಾಂ ಎನ್​ಆರ್​ಸಿ ಬಳಿಕ ಈಗಾಗಲೇ ಇಲ್ಲಿ ಕೆಲ ಕುಟುಂಬಗಳು ದಾಖಲೆಗಳ ಸಂಗ್ರಹದಲ್ಲಿ ತೊಡಗಿಕೊಂಡಿವೆ ಎಂದು ಹೇಳಲಾಗುತ್ತಿದೆ.

ಬಂಗಾಳಿಗರ ಆತಂಕವೇನು?

  • ಬಾಂಗ್ಲಾದೇಶದಲ್ಲಿ ಉಗ್ರ ಸಂಘಟನೆಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತಿದ್ದು, ಅಲ್ಲಿಯ ಜಮಾತ್-ಎ-ಇಸ್ಲಾಮಿ ಸದಸ್ಯರು ಪಶ್ಚಿಮ ಬಂಗಾಳದತ್ತ ನುಸುಳುತ್ತಿದ್ದಾರೆ.
  • ಆರಂಭದಲ್ಲಿ ಸಣ್ಣ ಪುಟ್ಟ ಅಂಗಡಿ, ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡು ಬಳಿಕ ಸಮಾಜ ವಿರೋಧಿ ಚಟುವಟಿಕೆಯಲ್ಲಿ ಭಾಗಿ.
  • ನುಸುಳುಕೋರರಿಂದ ಸ್ಥಳೀಯ ಉದ್ಯೋಗ ಹಾಗೂ ಕೂಲಿಗಳ ಮೇಲೆ ಕೆಟ್ಟ ಪರಿಣಾಮ
  • ಸ್ಥಳೀಯ ಸಂಸ್ಥೆಗಳ ಚುನಾವಣೆ ಯಲ್ಲೂ ನುಸುಳುಕೋರರ ಸ್ಪರ್ಧೆ
  • ‘ಲ್ಯಾಂಡ್ ಜಿಹಾದಿ’ ಎಂದು ಸ್ಥಳೀಯವಾಗಿ ಪರಿಚಿತವಿರುವ ರೀತಿಯಲ್ಲಿ ಸ್ಥಳೀಯರ ಭೂಮಿ ನುಸುಳುಕೋರರಿಂದ ಅತಿಕ್ರಮಣ.

ಬಾಂಗ್ಲಾ ಅಕ್ರಮ ವಲಸಿಗರು ರಾಜ್ಯ ಮತ್ತು ಲೋಕಸಭೆ ಚುನಾವಣೆಯಿದ್ದಾಗ ಗಡಿ ಜಿಲ್ಲೆಗಳಿಗೆ ಬರುತ್ತಾರೆ ಮತ್ತು ಭಾರತದ ಮತಚೀಟಿ ಇರುವುದರಿಂದ ಮತದಾನ ಮಾಡಿ ಬಾಂಗ್ಲಾಕ್ಕೆ ವಾಪಸಾಗುತ್ತಾರೆ. ಸ್ಥಳೀಯ ಮರಿ ಪುಡಾರಿಗಳ ಚುನಾವಣಾ ಖರ್ಚನ್ನೂ ಇದೇ ವಲಸಿಗರು ನೋಡಿಕೊಳ್ಳುತ್ತಾರೆ. ಇಂದೊಂದು ರೀತಿಯ ಕೊಡು-ಕೊಳ್ಳುವಿಕೆ ವ್ಯವಹಾರ ಎನ್ನುತ್ತಾರೆ ಸ್ಥಳೀಯರು.

ಬಾಂಗ್ಲಾ ವಲಸಿಗರು ಮಾತ್ರವಲ್ಲ ಗಡಿ ಜಿಲ್ಲೆಗಳ ಅನೇಕ ಸ್ಥಳೀಯರು ಕೂಡ ಅಕ್ರಮ ದಂಧೆ ಯಿಂದಲೇ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಭಾರತದಲ್ಲಿ ಅತಿ ಹೆಚ್ಚು ಖೋಟಾ ನೋಟು ವ್ಯವಹಾರ ನಡೆಯುತ್ತಿರುವುದೇ ಬಂಗಾಳದಲ್ಲಿ ಮತ್ತು ಇದಕ್ಕೆಲ್ಲ ಗಡಿ ಜಿಲ್ಲೆಗಳೇ ಮುಖ್ಯದ್ವಾರ.

| ಕಾವೇರಿ ಚಕ್ರವರ್ತಿ ಕಲ್ಕತಾ ವಿವಿ ಪ್ರಾಧ್ಯಾಪಕಿ