ಶಾಂಭವಿ ನದಿಗೆ ಕಿಂಡಿ ಅಣೆಕಟ್ಟು

ಹೇಮನಾಥ್ ಪಡುಬಿದ್ರಿ
ಸಣ್ಣ ನೀರಾವರಿ ಇಲಾಖೆ ಮೂಲಕ 6.5 ಕೋಟಿ ರೂಪಾಯಿ ವೆಚ್ಚದಲ್ಲಿ ಪಲಿಮಾರಿನಲ್ಲಿ ಶಾಂಭವಿ ನದಿಗೆ ಅಡ್ಡಲಾಗಿ ಉಪ್ಪುನೀರು ತಡೆ ಗೆ ಅಣೆಕಟ್ಟು ನಿರ್ಮಾಣ ಮಾಡಲಾಗುತ್ತಿದೆ.
ಸುಮಾರು 600 ಎಕರೆ ಪ್ರದೇಶಕ್ಕೆ ನೀರೊದಗಿಸುವ ಸಲುವಾಗಿ 25 ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ನಿರ್ಮಿಸಿದ್ದ ಅಣೆಕಟ್ಟಿನ ಕಾಮಗಾರಿ ದೋಷದಿಂದ ಹಲವಾರು ಬಾರಿ ದುರಸ್ತಿ ಮಾಡಿದ್ದರೂ ಸಮಸ್ಯೆಗೆ ಮುಕ್ತಿ ದೊರೆತಿರಲಿಲ್ಲ. ಅಣೆಕಟ್ಟಿನ ಬಗ್ಗೆ ಗ್ರಾಮಸ್ಥರಿಂದ ಸದಾ ಒಂದಿಲ್ಲೊಂದು ದೂರುಗಳು ಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಹಳೇ ಅಣೆಕಟ್ಟು ಬಳಿಯಲ್ಲಿಯೇ ನೂತನ ಅಣೆಕಟ್ಟು ನಿರ್ಮಿಸಲಾಗುತ್ತಿದೆ.

ಮುಳುಗಡೆ ಭೀತಿಯಿಂದ ಈಗ ನಿರ್ಮಾಣವಾಗುತ್ತಿರುವ ಅಣೆಕಟ್ಟನ್ನೂ ಹಿಂದಿನ ಅಣೆಕಟ್ಟೆಯಷ್ಟೇ ಅಂದರೆ 7.5 ಮೀಟರ್‌ವರೆಗೆ ಎತ್ತರಿಸಲಾಗುತ್ತದೆ. ಅಣೆಕಟ್ಟೆಯ ನಾಲ್ಕು ಕಡೆ 4100 ಮೀಟರ್ ವ್ಯಾಪ್ತಿಯಲ್ಲಿ ನದಿಗೆ ತಡೆಗೋಡೆ ನಿರ್ಮಾಣ ಮಾಡಲಾಗುತ್ತದೆ. ಮೂವತ್ತಕ್ಕಿಂತ ಹೆಚ್ಚು ಕಿಂಡಿಗಳನ್ನೂ ನಿರ್ಮಿಸಲಾಗುವುದು. ಕಿಂಡಿಗಳ ಸುತ್ತಳತೆ ಹೆಚ್ಚಿಸಲಾಗುವುದು. ಹಲಗೆ ರಹಿತವಾಗಿ ಅಣೆಕಟ್ಟಿನ ನಾಲ್ಕು ಕಡೆ ಗೇಟ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ನದಿಯಲ್ಲಿ ಅಣೆಕಟ್ಟೆಯ ತಳಮಟ್ಟದಲ್ಲಿ ಬೆಡ್ ಹಾಕುವ ಕಾಮಗಾರಿ ನಡೆಯುತ್ತಿದೆ. ಮಳೆಗಾಲ ಆರಂಭಕ್ಕೂ ಮುನ್ನ ಶೀಘ್ರವಾಗಿ ನೀರಿನ ಮೇಲ್ಮಟ್ಟದವರೆಗಿನ ಕಾಮಗಾರಿಯನ್ನು ಪೂರ್ಣಗೊಳಿಸುವ ಇರಾದೆ ಅಧಿಕಾರಿಗಳದ್ದು.

ಚುನಾವಣೆ ಹಾಗೂ ನಿರ್ಮಾಣ ಸಾಮಗ್ರಿಗಳ ಕೊರತೆಯಿಂದ ಯೋಜನೆ ಆರಂಭಕ್ಕೆ ಹಿನ್ನಡೆಯಾಗಿದೆ. ಹನ್ನೆರಡು ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಹಿಂದಿನ ಅಣೆಕಟ್ಟೆಗೆ ಹೊಂದಿಕೊಂಡು ನಿರ್ಮಿಸಿದ್ದ ಶೆಡ್ ಕೂಡ ಶಿಥಿಲವಾಗಿದ್ದು, ಅದನ್ನೂ ನಿರ್ಮಾಣ ಮಾಡಲಾಗುವುದು. ಅಣೆಕಟ್ಟು ನಿರ್ಮಾಣವಾದ ಬಳಿಕ ಹಳೇ ಅಣೆಕಟ್ಟನ್ನು ಕೆಡವಲಾಗುವುದು. ಮರದ ಹಲಗೆ ರಹಿತವಾದ ಗೇಟ್‌ಗಳನ್ನು ನಿರ್ಮಿಸಲಾಗುತ್ತಿದೆ.
ಎಸ್.ಟಿ.ಗೌಡ, ಸಣ್ಣ ನೀರಾವರಿ ಇಲಾಖೆ ಸಹಾಯಕ ಇಂಜಿನಿಯರ್.

ಅಣೆಕಟ್ಟೆ ಸಮಸ್ಯೆಯಿಂದ ಮಾರ್ಚ್ ತಿಂಗಳಿನಲ್ಲಿಯೇ ನೀರು ತಳಮಟ್ಟಕ್ಕೆ ಇಳಿದಿತ್ತು. ಇದು ಈ ಭಾಗದಲ್ಲಿನ ನೀರಿನ ಸಮಸ್ಯೆಗೂ ಕಾರಣವಾಗಿತ್ತು. ಅಣೆಕಟ್ಟೆಯಿಂದ ಸುತ್ತಮುತ್ತಲಿನ ಬಾವಿಗಳ ಅಂತರ್ಜಲ ಮಟ್ಟ ಏರಿಕೆ ಹಾಗೂ ಕೃಷಿಗೂ ಅನುಕೂಲವಾಗಲಿದೆ. ನಿರ್ಮಾಣದಿಂದ ಬಳ್ಕುಂಜೆ, ಇನ್ನ, ಮುಂಡ್ಕೂರು, ಸಾಣೂರುವರೆಗಿನ ಗ್ರಾಮದ ಪ್ರದೇಶಗಳ ನೀರಿನ ಮಟ್ಟ ಏರಿಕೆಗೆ ಈ ಅಣೆಕಟ್ಟೆ ಕಾರಣವಾಗಲಿದೆ.
ಜಿತೇಂದ್ರ ಪುಟಾರ್ಡೋ, ಪಲಿಮಾರು ಗ್ರಾಪಂ ಅಧ್ಯಕ್ಷ

Leave a Reply

Your email address will not be published. Required fields are marked *