ಬಾವಿ ಕಲುಷಿತಗೊಳಿಸಿದ ಚರಂಡಿ ಕಾಮಗಾರಿ

ಆರ್.ಬಿ.ಜಗದೀಶ್, ಕಾರ್ಕಳ
ಕಾರ್ಕಳ ಪುರಸಭೆಯ ಒಂದನೇ ವಾರ್ಡ್‌ನಲ್ಲಿ ನಿರ್ಮಾಣವಾಗಿರುವ ಚರಂಡಿ ದುರವಸ್ಥೆಯಿಂದ ಪರಿಸರದ ಬಾವಿಗಳು ಕಲುಷಿತಗೊಂಡಿವೆ. ಪರಿಣಾಮ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.
ಬಂಗ್ಲೆಗುಡ್ಡೆ ಸಲ್ಮಾನ್ ಜಾಮಿಯಾ ಮಸೀದಿ ಅಥವಾ ಕುದುರೆಮುಖ ಕಾಲನಿಯಲ್ಲಿ ಕಾಡುತ್ತಿರುವ ಈ ಸಮಸ್ಯೆ ಬಿರು ಬಿಸಿಲಿನ ವಾತಾವರಣದಲ್ಲಿ ಬಿಗಡಾಯಿಸಿದೆ. ಅವೈಜ್ಞಾನಿಕವಾಗಿ ನಿರ್ಮಾಣವಾಗಿರುವ ಚರಂಡಿಯಲ್ಲಿ ಹರಿದು ಹೋಗುತ್ತಿರುವ ತ್ಯಾಜ್ಯ ನೀರು ತಳಭಾಗಕ್ಕೆ ಇಳಿದು ಭೂಗರ್ಭದಲ್ಲಿ ಲೀನವಾಗಿ ಪರಿಸರದ ಬಾವಿಗಳ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಸ್ಥಳೀಯರು ಕುಡಿಯುವ ನೀರಿಗಾಗಿ ಹಿತ್ತಲಿನ ಬಾವಿಗಳನ್ನೇ ಆಶ್ರಯಿಸುತ್ತಿದ್ದರು. ಆದರೆ ಪುರಸಭಾ ಅಭಿವೃದ್ಧಿ ಕಾಮಗಾರಿಯ ನ್ಯೂನತೆಗಳಿಂದ ಸಂಪದ್ಭರಿತ ನೀರಿನ ಬಾವಿ ನಿರುಪಯುಕ್ತವಾಗುವಂತಾಗಿದೆ.

ಒಳಚರಂಡಿ ವ್ಯವಸ್ಥೆ ಗಗನ ಕುಸುಮ: ಎಂ.ವೀರಪ್ಪ ಮೊಯ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಅವರು ಪ್ರತಿನಿಧಿಸಿದ ಕಾರ್ಕಳ ಕ್ಷೇತ್ರದ ಪ್ರಮುಖ ಕೇಂದ್ರವಾಗಿರುವ ಪುರಸಭಾ ವ್ಯಾಪ್ತಿಗೆ ಒಳಚರಂಡಿ ಯೋಜನೆ ಅನುಷ್ಠಾನಗೊಳಿಸಿದ್ದರು. ಆ ಯೋಜನೆ ಆಗಿನ ಕಾಲದಲ್ಲಿ ಬಹುದೊಡ್ಡ ಯೋಜನೆಯಾಗಿತ್ತು. ಪುರಸಭಾ ವ್ಯಾಪ್ತಿಯ ಒಂದನೇ ವಾರ್ಡ್ ಎಂದೇ ಗುರುತಿಸಿಕೊಂಡಿರುವ ಬಂಗ್ಲೆಗುಡ್ಡೆ ಪರಿಸರದಲ್ಲಿ ಒಳಚರಂಡಿ ಯೋಜನೆ ಇಂದಿಗೂ ಗಗನಕುಸುಮವಾಗಿಯೇ ಉಳಿದುಕೊಂಡಿದೆ. ಈ ಕಾರಣದಿಂದ ಬಂಗ್ಲೆಗುಡ್ಡೆ ಪ್ರದೇಶದ ನಾಗರಿಕರು ದಿನಬಳಕೆಯ ತ್ಯಾಜ್ಯ ನೀರು ಹರಿದು ಬಿಡಲು ತೆರೆದ ಚರಂಡಿಯನ್ನೇ ಉಪಯೋಗಿಸುತ್ತಿದ್ದಾರೆ.

ಕ್ರಿಮಿಗಳ ಉಗಮಸ್ಥಾನ: ತೆರೆದ ಚರಂಡಿಯಲ್ಲಿ ತ್ಯಾಜ್ಯ ನೀರು ಹರಿದು ಬಿಡುವುದರಿಂದ ಪರಿಸರ ಪೂರ್ತಿ ಅಸಹ್ಯ ವಾಸನೆ ಹರಡಿದೆ. ಇದರಿಂದ ಸೊಳ್ಳೆ ಇತ್ಯಾದಿ ಸಾಂಕ್ರಾಮಿಕ ಕ್ರಿಮಿಗಳು ಸೃಷ್ಟಿಯಾಗುತ್ತಿವೆ. ಚರಂಡಿಯಲ್ಲಿ ಲೀನವಾಗಿರುವ ತ್ಯಾಜ್ಯ ವಸ್ತುವನ್ನು(ಟಯರ್, ಬಾಟಲ್, ದೊಣ್ಣೆ, ಪ್ಲಾಸ್ಟಿಕ್,.. ಇತ್ಯಾದಿಗಳು) ಹೊರತೆಗೆಯುವ ಕಾರ್ಯಕ್ಕೆ ಪುರಸಭೆ ಇನ್ನೂ ಮುಂದಾಗಿಲ್ಲ. ಕ್ರಿಮಿನಾಶಕ ಸಿಂಪಡಿಸುವ ಕಾರ್ಯಕ್ಕೆ ಕಾರ್ಕಳ ಪುರಸಭಾ ಆಡಳಿತ ವರ್ಗ ಮುಂದಾಗದೆ ಹೋಗಿರುವುದಕ್ಕೆ ಬಂಗ್ಲೆಗುಡ್ಡೆ ವಾರ್ಡ್‌ನ ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅಸಹ್ಯ ವಾಸನೆ ಹಾಗೂ ಕ್ರಿಮಿಗಳ ಆವಾಸತಾಣವಾಗಿರುವ ಚರಂಡಿ ಪಕ್ಕದಲ್ಲೇ ಅಂಗನವಾಡಿ ಕೇಂದ್ರ ಇದೆ. 28 ಪುಟಾಣಿಗಳ ಭವಿಷ್ಯ ಇದೇ ಅಂಗನವಾಡಿಯಲ್ಲಿ ರೂಪುಗೊಳ್ಳುತ್ತಾದರೂ, ಪರಿಸರದ ಕಲುಷಿತ, ಸಾಂಕ್ರಾಮಿಕ ರೋಗಗಳ ಭೀತಿಯಿಂದಾಗಿ ಪಾಲಕರು ಮಕ್ಕಳನ್ನು ಅಂಗನವಾಡಿಗೆ ಕಳುಹಿಸಲು ಹಿಂಜರಿಯುತ್ತಿರುವುದರಿಂದ ಪ್ರಸ್ತುತ 10 ಮಕ್ಕಳು ಮಾತ್ರ ಆಗಮಿಸುತ್ತಿದ್ದಾರೆ.
ಸುರೇಖಾ ಅಂಗನವಾಡಿ ಸಹಾಯಕಿ

ಚರಂಡಿ ನಿರ್ಮಾಣ ಕಾಮಗಾರಿ ಕಳಪೆಯಾಗಿದೆ. ಮಾತ್ರವಲ್ಲದೆ ಚರಂಡಿಗೆ ಮುಚ್ಚಿಗೆ ಇನ್ನು ಅಳವಡಿಸದೇ ಹೋಗಿರುವುದು ಈ ಎಲ್ಲ ಸಮಸ್ಯೆಗೆ ಕಾರಣವಾಗಿದೆ. ಪರಿಸರದ ಬಾವಿಗಳ ಸ್ವಚ್ಛತಾ ಕಾರ್ಯದ ಖರ್ಚನ್ನು ಕಾರ್ಕಳ ಪುರಸಭಾ ಆಡಳಿತವೇ ಭರಿಸಬೇಕು.
ಖಾದರ್, ಸ್ಥಳೀಯ ನಿವಾಸಿ

Leave a Reply

Your email address will not be published. Required fields are marked *