ಮೈಸೂರು: ಕೆಆರ್‌ಎಸ್‌ನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ.ವಿಶ್ವೇಶ್ವರಯ್ಯನವರ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿರುವ ರಾಜ್ಯ ಸರ್ಕರದ ಕ್ರಮವನ್ನು ನಗರದ ವಿವಿಧ ಸಂಘ-ಸಂಸ್ಥೆಗಳು ಭಾನುವಾರ ನಗರದ ಜಲದರ್ಶಿನಿಯಲ್ಲಿ ಸಭೆ ಸೇರಿ ಸ್ವಾಗತಿಸಿವೆ.
ಮಾಜಿ ಮೇಯರ್ ಸಂದೇಶ್‌ಸ್ವಾಮಿ ಮಾತನಾಡಿ, ಪ್ರತಿಮೆ ನಿರ್ಮಾಣ ಕೆಲಸ ಆಗುತ್ತಿರುವುದು ಸಂತಷದ ವಿಷಯ. ಕೆಲವರು ಪ್ರಚಾರಕ್ಕಾಗಿ ಸರ್ ಎಂ.ವಿ ಪ್ರತಿಮೆ ವಿರೋಧಿಸುತ್ತಿದ್ದು, ಅವರ ಮಾತುಗಳಿಗೆ ಉತ್ತರ ನೀಡಲ್ಲ ಎಂದರು.
ಮೈವಿವಿ ಸಿಂಡಿಕೇಟ್ ಸದಸ್ಯ ಡಾ.ಈ.ಸಿ.ನಿಂಗರಾಜಗೌಡ ಮಾತನಾಡಿ, ವಿವಿ ಅವರಣದಲ್ಲಿ ಸರ್ ಎಂವಿಯವರ ಪ್ರತಿಮೆ ನಿರ್ಮಾಣವನ್ನು ಕೆಲವರ ವಿರೋಧದಿಂದ ಸ್ಥಗಿತಗೊಳಿಸಲಾಗಿತ್ತು. ಮತ್ತೆ ಆ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಹೇಳಿದರು.
ಪಾಲಿಕೆ ಮಾಜಿ ಸದಸ್ಯ ಎಂ.ಜಿ.ಮಹೇಶ್ ಮಾತನಾಡಿ, ರಾಜ್ಯ ಸರ್ಕಾರವು ಯಾವುದೇ ಕಾರಣಕ್ಕೂ ಈ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬ್ರಾಹ್ಮಣ ಸಂಘದ ಜಿಲ್ಲಾಧ್ಯಕ್ಷ ಡಿ.ಟಿ.ಪ್ರಕಾಶ್, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಜಿ.ಮಂಜು, ಹೋಟೆಲ್ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ನಾರಾಯಣಗೌಡ, ಪಾಲಿಕೆ ಸದಸ್ಯ ಸಾತ್ವಿಕ್ ಸಂದೇಶ್, ಸಮಾಜ ಸೇವಕ ಡಾ.ಕೆ.ರಘುರಾಮ್ ವಾಜಪೇಯಿ, ಮೈಸೂರು ರಕ್ಷಣಾ ವೇದಿಕೆಯ ಅಧ್ಯಕ್ಷ ಮೈ.ಕಾ.ಪ್ರೇಮ್‌ಕುಮಾರ್, ಕೆಆರ್‌ಎಸ್ ಗ್ರಾಪಂ ಸದಸ್ಯ ವಿಜಯ್‌ಕುಮಾರ್ ಇನ್ನಿತರರು ಭಾಗವಹಿಸಿದ್ದರು.