ಬೇಲೂರು: ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಬೇಲೂರು ತಾಲೂಕಿಗೆ ಆಗಮಿಸಿದ ಪ್ರಚಾರ ರಥವನ್ನು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರು ಸ್ವಾಗತಿಸಿ ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ದೇಗುಲ ಆವರಣಕ್ಕೆ ಕರೆತಂದು ಪುಷ್ಪ ನಮನ ಸಲ್ಲಿಸಲಾಯಿತು.
ಕಸಾಪ ತಾಲೂಕು ಅಧ್ಯಕ್ಷ ಮಾ.ನ.ಮಂಜೇಗೌಡ ಮಾತನಾಡಿ, ಡಿಸೆಂಬರ್ 20ರಿಂದ 22ರವರೆಗೆ ನಡೆಯಲಿರುವ ಸಮ್ಮೇಳನದ ಅಂಗವಾಗಿ ಪ್ರಚಾರ ರಥವು ರಾಜ್ಯಾದ್ಯಂತ ಸಂಚರಿಸುತ್ತಿದೆ. ಅದೇ ರೀತಿ ಸಕಲೇಶಪುರದ ಮೂಲಕ ಬೇಲೂರು ತಾಲೂಕಿಗೆ ಆಗಮಿಸಿದ್ದು, ತಾಲೂಕಿನ ಗಡಿಭಾಗವಾದ ಬ್ಯಾದನೆ ಗ್ರಾಮದಲ್ಲಿ ರಥವನ್ನು ಸ್ವಾಗತಿಸಿ ಚನ್ನಕೇಶವಸ್ವಾಮಿ ದೇಗುಲ ಆವರಣಕ್ಕೆ ತಂದು ಸಮ್ಮೇಳನದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಜತೆಗೆ ಡಿಸೆಂಬರ್ 20ರಿಂದ 22ರವರೆಗೆ ನಡೆಯಲಿರುವ ಈ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲ ಕನ್ನಡಿಗರು ಭಾಗವಹಿಸಿ ಕನ್ನಡಾಭಿಮಾನ ಮೆರೆಯಬೇಕಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ, ಬಿಆರ್‌ಸಿ ಶಿವಮರಿಯಪ್ಪ, ಕರವೇ ತಾಲೂಕು ಅಧ್ಯಕ್ಷ ಚಂದ್ರಶೇಖರ್, ಕಸಾಪ ಮುಖಂಡರಾದ ಮಹೇಶ್, ರಾಜೇಗೌಡ, ಸುಲೇಮಾನ್, ಲೋಕೇಶ್ ಇತರರಿದ್ದರು.