ಚಳಿಗಾಲದಲ್ಲಿ ಇವುಗಳನ್ನು ತಿಂದರೆ ನಿಮ್ಮ ಬೆಲ್ಲಿ ಫ್ಯಾಟ್​ ಬೇಗ ಕರಗುತ್ತದೆ…

ಬೆಂಗಳೂರು: ಚಳಿಗಾಲದಲ್ಲಿ ದೇಹದ ತೂಕ ಇಳಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಚುಮು ಚುಮು ಚಳಿಗೆ ಬಿಸಿ ಬಿಸಿ ಬೋಂಡಾ, ಬಜ್ಜಿ, ಕರಿದ ಆಹಾರ ಪದಾರ್ಥಗಳನ್ನು ತಿನ್ನುತ್ತಿರಬೇಕು ಎಂದೆನಿಸುತ್ತದೆ. ಈ ಎಲ್ಲ ಬಯಕೆಗಳ ಮಧ್ಯೆ ತೂಕ ಇಳಿಸಿಕೊಳ್ಳುವುದು, ತೂಕದಲ್ಲಿ ಸಮತೋಲನ ಕಂಡುಕೊಳ್ಳುವುದು ಕಷ್ಟವಾಗದೆ ಏನು?

ಇವೆಲ್ಲವುಗಳ ಮಧ್ಯೆಯೂ ನೀವು ಈ ಆಹಾರ ಪದಾರ್ಥಗಳನ್ನು ಸೇವಿಸಿದರೆ ಚಳಿಗಾಲದಲ್ಲಿಯೂ ಸುಲಭವಾಗಿ ನಿಮ್ಮ ಬೆಲ್ಲಿ ಫ್ಯಾಟ್​ನ್ನು (ಹೊಟ್ಟೆ ಭಾಗದ ಬೊಜ್ಜು) ಕಡಿಮೆ ಮಾಡಿಕೊಳ್ಳಬಹುದು. ಆ ಆಹಾರ ಪದಾರ್ಥಗಳ್ಯಾವುವು ಎಂಬ ಕುತೂಹಲವಿದ್ದರೆ ಮುಂದೆ ಓದಿ…

1. ಕ್ಯಾರೆಟ್​

ಕ್ಯಾರೆಟ್​ ಫೈಬರ್​ಯುಕ್ತ ತರಕಾರಿ. ಕ್ಯಾರೆಟ್​ಗಳನ್ನು ಸೇವಿಸಿದಾಗ ಜೀರ್ಣಶಕ್ತಿಗೆ ಹೆಚ್ಚಿನ ಸಮಯ ತೆಗೆದುಕೊಳ್ಳುವುದಲ್ಲದೆ, ಅಷ್ಟು ಬೇಗ ಹಸಿವಾಗುವುದಿಲ್ಲ. ನಿಮಗೆ ಬೇಗ ಹಸಿವಾಗದಿದ್ದರೆ ಸ್ವಾಭಾವಿಕವಾಗಿ ತೂಕ ಕಡಿಮೆಯಾಗುತ್ತದೆ. ಕ್ಯಾರೆಟ್​ ಅತಿ ಕಡಿಮೆ ಕ್ಯಾಲೋರಿ ಹೊಂದಿರುತ್ತದೆ. ಹಾಗಾಗಿ ನಿಮ್ಮ ಡಯಟ್​ನಲ್ಲಿ ಕ್ಯಾರೆಟ್​ನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುವುದು ನಿಮ್ಮ ತೂಕ ಇಳಿಕೆಗೆ ಸಹಾಯ ಮಾಡುತ್ತದೆ.

2.ಬೀಟ್​ರೂಟ್​

ಬೀಟ್​ರೂಟ್​ ಕೂಡ ತೂಕ ಇಳಿಗೆ ಸಹಾಯ ಮಾಡುವಂಥ ಫೈಬರ್​ಗಳನ್ನು ಹೊಂದಿರುವ ತರಕಾರಿಯಾಗಿದೆ. ಯುನೈಟೆಡ್​ ಸ್ಟೇಟ್ಸ್​ ಡಿಪಾರ್ಟ್​ಮೆಂಟ್​ ಆಫ್​ ಅಗ್ರಿಕಲ್ಚರ್​ (ಯುಎಸ್​ಡಿಎ) ಅಧ್ಯಯನದಂತೆ , 100 ಗ್ರಾಂ ಬೀಟ್​ರೂಟ್​ 43 ಕ್ಯಾಲೊರಿ, 0.2 ಫ್ಯಾಟ್​ ಮತ್ತು 10 ಗ್ರಾಂ ಕಾರ್ಬೊಹೈಡ್ರೇಟ್​ಗಳನ್ನು ಹೊಂದಿದೆ. ಹಾಗಾಗಿ ನಿಮ್ಮ ಸಲಾಡ್​ನಲ್ಲಿ ಬೀಟ್​ರೂಟ್​ಗಳನ್ನು ಬಳಸಿ, ಬೀಟ್​ರೂಟ್​ ಜ್ಯೂಸ್​ ಕುಡಿದು ತೂಕ ಇಳಿಕೆ ಮಾಡಿಕೊಳ್ಳಬಹುದು. ಬೀಟ್​ರೂಟ್ ಅನ್ನು ಫ್ರೆಶ್​ ಆಗಿ ಕಟ್​ ಮಾಡಿ ಬಳಸುವುದು ಉತ್ತಮ.

3.ಚಕ್ಕೆ ಪುಡಿ (Cinnamon​)

ಮಸಾಲೆ ಪದಾರ್ಥಗಳಲ್ಲಿ ಒಂದಾದ ಚಕ್ಕೆ ತೂಕ ಇಳಿಸುವಲ್ಲಿ ಮಹತ್ತರ ಪಾತ್ರ ಹೊಂದಿದೆ. ಚಕ್ಕೆ ಪುಡಿಯನ್ನು ಬಿಸಿ ನೀರಿನಲ್ಲಿ ಹಾಕಿಕೊಂಡು ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ತೂಕ ಇಳಿಕೆಯಾಗುವ ಜತೆ ಚಯಾಪಚಯ ಕ್ರಿಯೆ ಉತ್ತಮವಾಗುತ್ತದೆ. ಇದು ಅಧ್ಯಯನಗಳಿಂದಲೂ ದೃಢಪಟ್ಟಿದ್ದು, ಅತಿ ಬೇಗ ತೂಕ ಇಳಿಸಿಕೊಳ್ಳಬಹುದಾದ ಒಂದು ಮಾರ್ಗ ಎನ್ನಲಾಗುತ್ತದೆ.

4. ಮೆಂತೆ ಕಾಳು (Fenugreek Seeds)

ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿರ್ವಹಿಸುವಲ್ಲಿ ಮೆಂತೆ ಕಾಳುಗಳು ಹೆಚ್ಚು ಪರಿಣಾಮಕಾರಿಯಾಗಿವೆ. ಚಕ್ಕೆ ಪುಡಿಯಂತೆ ಮೆಂತೆ ಕಾಳುಗಳೂ ಚಯಾಪಚಯ ಕ್ರಿಯೆ ಸುಲಭವಾಗಲು ಸಹಾಯಕವಾಗಿದೆ. ಮೆಂತೆ ಕಾಳಿನಲ್ಲಿ ಗ್ಯಾಲಕ್ಟೊಮನ್ನನ್ ಎಂಬ ನೀರಿನಲ್ಲಿ ಕರಗಬಲ್ಲ ಅಂಶವಿದ್ದು, ಇದು ರುಚಿಯಾದ ಆಹಾರ ತಿನ್ನುವ ಬಯಕೆಯನ್ನು ತಡೆ ಹಿಡಿಯುತ್ತದೆ. ಮೆಂತೆ ಕಾಳುಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದು ತೂಕ ಇಳಿಸಿಕೊಳ್ಳಬಹುದು.

5.ಸೀಬೆಕಾಯಿ (Guava)
ಸೀಬೆಕಾಯಿ ಅಥವಾ ಪೇರಲ ಹಣ್ಣು ಕೂಡ ತೂಕ ಇಳಿಕೆಗೆ ಸಹಾಯವಾಗಲಿದೆ. ಸೀಬೆಕಾಯಿ ಸೇವನೆಯು ದೇಹಕ್ಕೆ ಬೇಕಾದ ಶೇ.12ರಷ್ಟು ಫೈಬರ್​ನ್ನು ಪೂರೈಸುತ್ತದೆ. ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವಲ್ಲಿ ಸೀಬೆಕಾಯಿ ಉತ್ತಮ ಪಾತ್ರ ಹೊಂದಿದೆ. ಹಾಗಾಗಿ ನಿಮ್ಮ ಚಳಿಗಾಲದ ಡಯೆಟ್​ ಪಟ್ಟಿಯಲ್ಲಿ ಸೀಬೇಕಾಯಿಯನ್ನೂ ಸೇರಿಸಿಕೊಂಡರೆ ಆದಷ್ಟು ಬೇಗ ನಿಮ್ಮ ತೂಕ ಇಳಿಕೆ ಗುರಿ ತಲುಪಬಹುದು. (ಏಜೆನ್ಸೀಸ್)