ವಾರ ಭವಿಷ್ಯ: ಈ ರಾಶಿಯವರು ಗಟ್ಟಿಯಾದದ್ದನ್ನು ಮಾಡಿ ತೋರಿಸುವ ಸಂದರ್ಭದಲ್ಲಿಯೇ ಶನಿ ಕಾಟವನ್ನು ಎದುರಿಸಲಿದ್ದಾರೆ

ಮೇಷ: ಚೈತನ್ಯಮಯವಾದ ವಾರವಾಗಿದೆ. ಸಮತೋಲನ ಸಾಧಿಸಿ, ಕೆರಳಿ ಬೆಂಕಿಯಾಗದ ಸ್ವಭಾವ ನಿಯಂತ್ರಿಸಿ ಮುನ್ನಗ್ಗುವಿರಾದರೆ ಯಶಸ್ಸಿನ ಸಂಭ್ರಮವನ್ನು ವಿದ್ಯುತ್ಕಾಂತಿಗೆ ಭಾಜನನಾದ ಕುಜನಿಂದ, ಅರ್ಥಾತ್ ಸುಬ್ರಹ್ಮಣ್ಯನಿಂದ ಸಿದ್ಧಿಯ ಬಗೆಗಿನ ವಿವಿಧ ಧನ್ಯತೆಗಳು ನಿಮಗೆ ಈ ವಾರ ಶತಃಸಿದ್ಧ. ದುರ್ಗಾಳನ್ನೂ ಆರಾಧಿಸಿ. ಶಾಂತವಾದ, ಮಂದವಾದ, ಕೆಂಪು ಬೆಳಕಿನಲ್ಲಿ ಸುಬ್ರಹ್ಮಣ್ಯ ಹಾಗೂ ಚಂಡಿಕಾಳನ್ನು ಆರಾಧಿಸಿ. ರಕ್ತಶುದ್ಧಿಯೂ, ಲಯಬದ್ಧ ಚೈತನ್ಯವೂ ಸುಹಾಸಕರ ತಾಳಮೇಳಗಳೊಂದಿಗೆ ಸಂಕಲ್ಪಿತ ಕಾರ್ಯಗಳಿಗೆ ಯಶಸ್ಸು ಲಭ್ಯ.

ಶುಭದಿಕ್ಕು: ನೈಋತ್ಯ ಶುಭಸಂಖ್ಯೆ: 8

ವೃಷಭ: ನೀವು ಯೋಚಿಸಿದ ರೀತಿಯಲ್ಲಿಯೇ ಬದುಕಿನ ಹೆಜ್ಜೆ ಇರಿಸಬಹುದು ಎಂಬುದು ನಿಮಗೆ ಮನದಟ್ಟಾಗುವುದು ಸಂತಸ ತರುತ್ತದೆ. ಸಮಸ್ಯೆ ಎಂದರೆ ಅಖೈರಿನಲ್ಲಿ ಅನಿವಾರ್ಯವಾಗಿ ಇನ್ನೊಂದು ಮಹತ್ವದ ವಿಷಯದತ್ತ ನೀವು ಗಮನ ಹರಿಸಬೇಕಾದ ಸಂದರ್ಭ ಒದಗಿ ಕಿರಿಕಿರಿ ಹೊತ್ತಿಸುತ್ತದೆ. ನಿಮಗೆ ತಾಳ್ಮೆ, ಚಾತುರ್ಯ, ವ್ಯವಧಾನ ಇತ್ಯಾದಿಗಳೆಲ್ಲ ಇದ್ದರೂ ಸಂದರ್ಭದ ಇಕ್ಕಟ್ಟು ಹೇಗಿರುತ್ತದೆ ಎಂದರೆ ಎರಡೂ ದೋಣಿಯಾನ ಪ್ರಯಾಸಕರವಾಗಿಯೇ ಉಳಿದು ದಣಿವು, ಜಿಗುಪ್ಸೆ ತುಂಬಿಕೊಳ್ಳುತ್ತವೆ. ರಾಮರಕ್ಷಾ ಸ್ತೋತ್ರ, ಮಂತ್ರಾವಳಿ ಓದಿ.

ಶುಭದಿಕ್ಕು: ಈಶಾನ್ಯ ಶುಭಸಂಖ್ಯೆ: 5

ಮಿಥುನ: ಹಲವು ವಿಚಾರಗಳನ್ನು ರಸವತ್ತಾಗಿ ತಿಳಿಸಿ ಹೇಳುವ ನೀವು ನಿಮ್ಮ ಬಗ್ಗೆ ಖೇದಕರವಾದ ಸುದ್ದಿಯನ್ನು ಹೇಳುವ ಹಾಗೆ ಅತಿರೇಕದ ವರ್ತನೆ ತೋರಬಾರದು. ಗುರು ಬಲವಿರುವುದರಿಂದ ಪ್ರತಿಯೊಂದನ್ನೂ ಜ್ಞಾನದ ಮೂಲಕ ವಿಶ್ಲೇಷಿಸಿ ನಿರ್ಧಾರ ತೆಗೆದುಕೊಳ್ಳಿ. ಪರಿತಪಿಸುವ ವರ್ತಮಾನ ಬರಲಾರದು. ಸಣ್ಣ ತಪ್ಪೂ ನಿಮ್ಮ ವರ್ಚಸ್ಸಿಗೆ ಧಕ್ಕೆ ತರುವ ಪರಿಸ್ಥಿತಿಯನ್ನು ವಿರೋಧಿಗಳು ನಿರ್ವಿುಸುವ ಸಾಧ್ಯತೆ ಬಾರದಿರಲಿ. ಧೂಮ್ರವರ್ಣನಾದ ಶ್ರೀ ಸಿದ್ಧಿವಿನಾಯಕನನ್ನು ರೇಷ್ಮೆಯ ಚಿಕ್ಕ ವಸ್ತ್ರದ ತುಂಡಲ್ಲಿ ಗರಿಕೆಗಳನ್ನು ಇರಿಸಿ 15 ನಿಮಿಷ ಧ್ಯಾನ ಮಾಡಿ.

ಶುಭದಿಕ್ಕು: ದಕ್ಷಿಣ ಶುಭಸಂಖ್ಯೆ: 2

ಕಟಕ: ಮನೋದಾರ್ಢ್ಯತೆಯನ್ನು ಗಟ್ಟಿಯಾಗಿ ಹೊಂದಿರುವಿರಾದರೂ ಕೇತು ಗ್ರಹವು ಕೆಲವು ಮಿಸುಕಾಟಗಳನ್ನು ಒದಗಿಸುವುದರಿಂದ ಬಾಳ ಸಂಗಾತಿಯ ಜತೆ ಸಮಾಧಾನಕರವಾಗಿರಿ. ಶನೈಶ್ಚರನು ಬಲಾಢ್ಯನಾಗಿದ್ದಾನೆ ಎಂಬುದು ಸಮಾಧಾನದ ಸಂಗತಿ. ಆದರೆ ಈಗ ಗುರುಬಲ ಇರದಿರುವುದು ಸಲ ಆತಂಕದ ವಿಷಯವಾಗಿಯೇ ದಂಪತಿ ನಡುವೆ ಉಬ್ಬರದ ಅಲೆ ಏಳಿಸುತ್ತಿರುತ್ತದೆ. ತುಂಬೆ ಹೂವುಗಳನ್ನು ನೀರಿನಲ್ಲಿರಿಸಿ ತುಳಸೀದಳಗಳ ಸಹಿತ ವಿಷ್ಣುವನ್ನು ಆರಾಧಿಸಿ. ವಿಷ್ಣು, ಮಹಾಲಕ್ಷ್ಮಿಯರು ನಿಮ್ಮನ್ನು ತಾಕಲಾಟದಿಂದ ಮೇಲಕ್ಕೆತ್ತುವರು.

ಶುಭದಿಕ್ಕು: ಪೂರ್ವ ಶುಭಸಂಖ್ಯೆ: 8

ಸಿಂಹ: ಮನೋಜನಾದ ಮಾರುತಿಯನ್ನು ಆರಾಧಿಸುವುದು ಮುಖ್ಯವಾಗಲಿ. ಅವಲಕ್ಕಿಗೆ ಬೆಲ್ಲವನ್ನೂ, ತೆಂಗಿನ ತುರಿ ಸೇರಿಸಿದ ತಿನಿಸನ್ನು ನಿಮ್ಮ ಇಷ್ಟ ದೇವತೆಗೆ ಸಮರ್ಪಿಸಿ ಸೇವಿಸಿ. ಶನೈಶ್ಚರನ ಸ್ತೋತ್ರವನ್ನೂ ಓದಿ. ಹಾಗೆಯೇ ಮುಖ್ಯವಾಗಿ ಒಂದು ಚಿಕ್ಕ ಪ್ಲೇಟಿನಲ್ಲಿ ಎಳ್ಳೆಣ್ಣೆ ತುಂಬಿ ಮುಖ ನೋಡಿಕೊಂಡು ಶನಿದೇಗುಲಕ್ಕೆ ಅಥವಾ ಮಾರುತಿ ಮಂದಿರದ ದಿವ್ಯ ದೀಪಕ್ಕೆ ಸುರಿದು ಬನ್ನಿ. ಜಿಣುಕುಗಳಿಂದ ತುಂಬಿರುವ ವರ್ತಮಾನವನ್ನು ನಿರಾಯಾಸವಾದ ನುಣುಪು, ಸರಳತೆಯತ್ತ ತಂದಿಡಲು ಅಲೌಕಿಕ ಶಕ್ತಿಯ ನೆರವು ಈಗ ನಿಮಗೆ ಅನಿವಾರ್ಯ.

ಶುಭದಿಕ್ಕು: ದಕ್ಷಿಣ ಶುಭಸಂಖ್ಯೆ: 1

ಕನ್ಯಾ: ಅನೂಹ್ಯವಾದ ಮೂಲದಿಂದ ಯಶಸ್ಸಿಗೆ ಅವಶ್ಯವಾದ ಪ್ರೇರಣೆಗಳನ್ನು ನೀವು ಪಡೆಯಬಲ್ಲಿರಿ. ಅಚ್ಚ ಬಿಳಿ ಹೂವುಗಳಿಗೆ ಶ್ರೀಗಂಧ ಲೇಪ ಮಾಡಿ ಅಚ್ಯುತನ ಪಾದಕ್ಕೆ ಸಮರ್ಪಿಸಿ, ಚ್ಯುತಿಯಾಗದ ಗಟ್ಟಿಯಾದುದನ್ನು ಸಾಧಿಸುವ ಒಳ್ಳೆಯ ವರ್ತಮಾನವಿದೆ. ಕನಸಿನಲ್ಲಿ ಜಲಚರಗಳು ಕಂಡರೆ ನಾಗಸಂಪಿಗೆಯಿಂದ ಲಕ್ಷ್ಮಿಯನ್ನು ಆರಾಧಿಸಿ. ಇಲ್ಲಿಯವರೆಗಿನ ವಿಚಾರಗಳನ್ನೆಲ್ಲಾ ಮೀರಿ ಹೊಸತೇ ಉತ್ಸಾಹದಿಂದ ಸಾಫಲ್ಯತೆಗೆ ಬೇಕಾದ ದಾರಿಗಳು ಗೋಚರಿಸಲಿವೆ. ಆನೆಯ ಎದುರು ಶ್ವಾನಗಳು ಬೊಗಳಿದರೆ ಏನೂ ಮಾಡಲಾಗದ ಅಸಹಾಯಕತೆ ಆನೆಗಿದ್ದರೂ ಆನೆಯೇ ಶ್ರೇಷ್ಠ ಎಂಬುದನ್ನು ನೀವು ಅರಿತಿರಿ. ನೀವು ಆನೆಯಂತೆ.

ಶುಭದಿಕ್ಕು: ನೈಋತ್ಯ ಶುಭಸಂಖ್ಯೆ: 5

ತುಲಾ: ಏರಿಳಿತಗಳ ಬದುಕು ರಾಹು ಕೇತುಗಳ ಕಾರಣದಿಂದ ಸ್ಪಷ್ಟವಾದರೂ ಜಾಗ್ರತೆಯನ್ನು ವಹಿಸಿ ಹೆಜ್ಜೆ ಇರಿಸಿದಿರಾದರೆ ಅನೇಕ ರೀತಿಯ ಸಮಸ್ಯೆಗಳನ್ನು ನೀವು ನಿವಾರಿಸಿಕೊಳ್ಳಬಲ್ಲಿರಿ. ಸರ›ನೆ ಯಾರೋ ಹೇಳಿದರೆಂದು ವಜ್ರಧಾರಣೆಗೆ ಹೋಗದಿರಿ. ಸ್ವಭಾವದ ವಿಚಾರಗಳಾಗಲೀ, ಯಶಸ್ಸಿನ ಸಮೀಕರಣಗಳಾಗಿರಲಿ ತುಲಾ ರಾಶಿಯ ಶುಕ್ರನ ಕಾರಣಕ್ಕಾಗಿಯೇ ಪದರುಗಟ್ಟುವುದು ವಾಸ್ತವವೇ ಎಂಬುದನ್ನು ಅರಿತೇ ವಜ್ರ ಧರಿಸಿ. ಇಲ್ಲದಿದ್ದರೆ ವಜ್ರಧಾರಣೆ ತುಂಬಾ ತೊಂದರೆ ತಂದೀತು. ಹೊಸ ಕೆಲಸ ಸಿಗುವ ಸಾಧ್ಯತೆ ಆಧಿಕ, ದುರ್ಗಾ ದೇವಿಯ ಆರಾಧಿಸಿ.

ಶುಭದಿಕ್ಕು: ಪೂರ್ವ ಶುಭಸಂಖ್ಯೆ: 2

ವೃಶ್ಚಿಕ: ಧನಲಾಭದ ಬಗೆಗಿನ ದಾರಿಗಳು ನಿಮಗೆ ಸಂಪನ್ನವಾಗಿ ಕಾಣಿಸುವ ಅದೃಷ್ಟ ಗಟ್ಟಿಯಾಗಿ ಕಾಣಿಸುತ್ತದೆ. ಆದರೆ ನಿಮ್ಮ ಬಿಕ್ಕಟ್ಟುಗಳು ಎಲ್ಲಿ ಸೃಷ್ಟಿಯಾಗುತ್ತವೆ ಎಂದರೆ ಸುಖಾಸುಮ್ಮನೆ ನಿಮ್ಮ ಯೋಜನೆಗಳನ್ನು ಅನ್ಯರ ಎದುರು ತೆರೆದಿಡುತ್ತೀರಿ. ಬಿರುಸಾದ ವೇಗದೊಂದಿಗೆ ಗುರಿ ತಲುಪಬೇಕಾದ ಯೋಜನೆ ನಕಾರಾತ್ಮಕ ಕಂಪನಗಳನ್ನು ಹೊಂದಿರದವ ಕಪು್ಪ ಶಕ್ತಿಯ ಅಲೆಗಳಿಂದಾಗಿ ನಿರೀಕ್ಷಿತ ಯಶಸ್ಸನ್ನು ಸಂಪಾದಿಸಲು ವಿಫಲವಾಗುತ್ತದೆ. ನಿಮ್ಮ ಅಂತರ್ಗತವಾದ ಶಕ್ತಿ ಸಂಪನ್ಮೂಲಕ್ಕೆ ದುರ್ಬಲತೆ ಬರುತ್ತದೆ. ಚೈತನ್ಯೆಯಾದ ಶ್ರೀ ಲಲಿತಾಳನ್ನು ಸ್ತುತಿಸಿ. ಹನುಮಾನ್ ಚಾಲೀಸಾ ಓದಿ.

ಶುಭದಿಕ್ಕು: ಉತ್ತರ ಶುಭಸಂಖ್ಯೆ: 9

ಧನು: ಗಟ್ಟಿಯಾದದ್ದನ್ನು ಮಾಡಿ ತೋರಿಸುವ ಸಂದರ್ಭದಲ್ಲಿಯೇ ಶನಿ ಕಾಟವನ್ನು ಎದುರಿಸುತ್ತಿದ್ದೀರಿ. ಶ್ರೀ ಲಕ್ಷ್ಮಿನರಸಿಂಹನ ಸ್ತುತಿ ರಾಹು ಸ್ತುತಿಯಿಂದ ನೀವು ಹೈರಾಣಾಗಿರುವ ಒಂದು ಕುಟುಂಬ ವ್ಯಾಜ್ಯದಿಂದ ಹೊರಬರುತ್ತೀರಿ. ಪಂಚಮುಖಿ ಹನುಮಂತ ಕವಚವನ್ನು ಓದಿ. ಗಣಪತಿ ಮಂಟಪದಲ್ಲಿ ಆರು ರೀತಿಯ ಹೂವುಗಳನ್ನು ಇರಿಸಿ ಗಣಪತಿಯನ್ನೂ, ವಿಷ್ಣ್ಣುವನ್ನೂ ಆರಾಧಿಸಿ. ಜಲಸಂಪನ್ಮೂಲ ವಸ್ತುಗಳು, ಕೃಷಿ ಅಭಿವೃದ್ಧಿ ಚಟುವಟಿಕೆಗಳಿಂದ ಬರಬೇಕಾದ ಲಾಭವನ್ನು ಶನೈಶ್ಚರನ ಮೂಲಕವಾಗಿ ಸಿದ್ಧಿಸಿಕೊಳ್ಳಲು ದಾರಿ ಸರಳವಾಗಲಿದೆ.

ಶುಭದಿಕ್ಕು: ಆಗ್ನೇಯ ಶುಭಸಂಖ್ಯೆ: 6

ಮಕರ: ಮಕ್ಕಳು ವಿಶೇಷವಾಗಿ ತಮ್ಮ ತಪು್ಪಗಳಿಂದ ನಿಮ್ಮ ಮನೋ ವ್ಯಾಕುಲತೆಗೆ ಕಾರಣರಾಗುತ್ತಾರೆ. ಸದ್ಯದ ಸಾಡೇಸಾತಿ ಕಾಟವು ನಿಮ್ಮನ್ನು ಮುಳ್ಳಿನ ಮೇಲೆ ನಿಲ್ಲಿಸಿರುತ್ತದೆ. ತ್ರಿದಳಗಳನ್ನು ಇರಿಸಿದ ಶುದ್ಧ ಜಲದಿಂದ ಈಶ್ವರನನ್ನು ಅಭಿಷೇಕ ಸಹಿತವಾದ ಆರಾಧನೆ ಮಾಡಿ. ಸರಳವಾದ ಮಂತ್ರ, ಮೃತ್ಯುಂಜಯ ಮಂತ್ರ ಪಠಣಗಳ ಮೂಲಕ ಅರಿಷ್ಟಗಳನ್ನು ನಿವಾರಿಸಿ. ನಿಮ್ಮದಾದ ಆಸ್ತಿ,. ಸೈಟು, ನಿವೇಶನಗಳಿಗೆ ಸಂಬಂಧಿಸಿದ ಕಡತಗಳ ಬಗ್ಗೆ ಅಲಕ್ಷ್ಯಬೇಡ. ದಶರಥರಾಜ ವಿರಚಿತ ಶನೈಶ್ಚರ ಸ್ತೋತ್ರ ಓದಿ. ಕ್ಷೇಮ.

ಶುಭದಿಕ್ಕು: ಪಶ್ಚಿಮ ಶುಭಸಂಖ್ಯೆ:3

ಕುಂಭ: ನಿಮಗೀಗ ಸುವರ್ಣಕಾಲ. ಶನೈಶ್ಚರನ ಸಿದ್ಧಿ, ಗುರುಬಲ ಹೀಗೆ ಎರಡೂ ಸಂಪ್ರಾಪ್ತಿಯಾಗಿರುವುದರಿಂದ ನೀವು ಮುಟ್ಟಿದ ಕೆಲಸವೆಲ್ಲ ಸುಸೂತ್ರ. ಆದರೂ ಹಣಕಾಸಿನ ವಿಚಾರದಲ್ಲಿ ಧಾರಾಳಿತನ ಅತಿಯಾಗಿ ಇರದಿದ್ದರೆ ಸೂಕ್ತ. ಆದರೆ ಪರಮೋಚ್ಚವಾದ ಕೆಲಸ ಕಾರ್ಯಗಳಲ್ಲಿ ಜಯ ಸಂಪಾದಿಸುತ್ತೀರಿ. ಅವಸರದ ನಿರ್ಣಯ ಮಾತ್ರ ಕೈಗೊಳ್ಳದಿರಿ. ಏಳೆಂಟು ಹನಿ ಜೇನುತುಪ್ಪನವನ್ನು ಹತ್ತಿಕಾಳಿಗೆ ಬೆರಸಿ ಹಸುವಿಗೆ ಗ್ರಾಸ ಕೊಡಿ. ವಿದೇಶದಲ್ಲಿಯೂ ಯಶಸ್ಸು ಲಭಿಸುವ, ವೈಚಾರಿಕ ಸಂಪನ್ನತೆಯಿಂದ ಗೆಲ್ಲುವ ವಿಚಾರಗಳು ಯಶಸ್ಸು ಪಡೆಯುತ್ತಿವೆ.

ಶುಭದಿಕ್ಕು: ಈಶಾನ್ಯ ಶುಭಸಂಖ್ಯೆ: 7

ಮೀನ: ಅಂತರಂಗ, ಬಹಿರಂಗ ಅನ್ಯಕಾರಣಗಳಿಗಾಗಿ ಪ್ರತ್ಯೇಕ, ಪ್ರತ್ಯೇಕವಾಗಿಯೇ ಸಂವಿಧಾನಕ್ಕೆ ಕಟ್ಟಿ ಹಾಕಿಕೊಳ್ಳಬೇಕು. ನೀವು ಬುದ್ಧಿವಂತರಾಗಿರುತ್ತೀರಿ. ಆದರೆ ನಿಮ್ಮನ್ನು ಬಹಳವಾಗಿ ಆದರಿಸಿ, ಮುನ್ನಡೆಯಬೇಕಾದ ಹತ್ತಿರದ ಜನ ನಿಮ್ಮಷ್ಟೇ ಚಾತುರ್ಯ, ತರ್ಕ ಹೊಂದಿರುತ್ತಾರೆಂದು ಹೇಳಲಾಗದು. ಇವರ ಒಳಿತಿಗಾಗಿ ಎಲ್ಲಾ ವಿಚಾರಗಳನ್ನೂ ಬಹಿರಂಗಗೊಳಿಸದಿರಿ. ಪ್ರತ್ಯೇಕವಾದ ಸಲಹೆ, ಸೂಚನೆಗಳನ್ನು ನಿಮ್ಮ ಅತ್ಯಂತ ಆಪ್ತರಿಗೆ, ಮಕ್ಕಳು ಹಾಗೂ ಪತ್ನಿಗೆ ನೀಡಿ. ವಿಶೇಷವಾದ, ಸಾಂಘಿಕ ಶಕ್ತಿ ಆಗ ಜಾಗ್ರತ. ಶಿವನನ್ನು ಸ್ತುತಿಸಿ.

ಶುಭದಿಕ್ಕು: ವಾಯವ್ಯ ಶುಭಸಂಖ್ಯೆ: 4

Leave a Reply

Your email address will not be published. Required fields are marked *