ವಾರ ಭವಿಷ್ಯ| 19-05-2019 ರಿಂದ 25-05-2019

ಮೇಷ: ನಿಮ್ಮನ್ನು ಸತ್ವ ಪರೀಕ್ಷೆಗೆ ಒಳಪಡಿಸುವ ಕಿರಾತಕರು ಉದ್ಭವಿಸಿಕೊಳ್ಳುತ್ತಾರೆ. ನೀವು ದುರ್ಬಲರಾಗಬಾರದು. ನಿಮ್ಮ ಸಿದ್ಧಾಂತದ ಕುರಿತು ನಿಶ್ಚಿತವಾದ ನಿಲುವಿರಲಿ. ಬಹುತೇಕವಾಗಿ ನಿಮ್ಮ ಧೋರಣೆಗೆ ಹೆಚ್ಚಿನ ಸ್ವಾಗತ ಸಿಗುವ ಹಾಗೆ ನಿಮ್ಮ ಶಾಂತವಾದ ನಡೆ, ನುಡಿಗಳಿರಲಿ. ತಾಳ್ಮೆಯಿಂದ ಒಮ್ಮೆ ಎದುರಾದ ಸಂದಿಗ್ಧತೆಗಳನ್ನು ಎದುರಿಸಿದಿರಿ ಎಂತಾದರೆ ಮುಂದಿನ ದಿನಗಳ ಹಲವು ಒಳಿತುಗಳಿಗೆ ಬೇಕಾದ ಉತ್ತಮ ವೇದಿಕೆಯೊಂದು ನಿಮಗೆ ಲಭ್ಯವಾಗಲಿದೆ. ಮಕ್ಕಳನ್ನು ಹಿತವಚನಗಳೊಂದಿಗೆ ನಿಯಂತ್ರಿಸಿ. ಅವರೂ ಸನ್ಮಾರ್ಗಕ್ಕೆ ಬರಲು ಸಾಧ್ಯ. ಮನದ ಸಂತೋಷಕ್ಕಿದು ದಾರಿ.

ಶುಭದಿಕ್ಕು: ಉತ್ತರ ಶುಭಸಂಖ್ಯೆ: 6

ವೃಷಭ: ಕೆಂಡದ ಮೇಲೆ ನಿಂತಿರುವ ಅನುಭವ ಎದುರಿಸುತ್ತಿದ್ದೀರಿ. ಸ್ವಯಂಕೃತಾಪರಾಧ, ಹೆರವರ ಮೂಲಕ ತಪ್ಪಿಸಿಕೊಂಡ ದಾರಿ ಇತ್ಯಾದಿ ನಿಮಗೆ ಎಲ್ಲವೂ ಅಶಾಂತಿಯ ವಿಚಾರಗಳೇ ಆಗಿವೆ. ಹಳದಿ ಹೂವುಗಳಿಂದ ಗುರು ನರಸಿಂಹನನ್ನು ಆರಾಧಿಸಿ. ನಿಮ್ಮದೇ ಆದ ಸಂಯಮದ ದಾರಿ ಸೂಕ್ತ. ಹೆರವರು, ಸದ್ಯ, ನಿಮ್ಮ ದುರಾದೃಷ್ಟ ತರುವ ಗ್ರಹಗಳ ಕಾರಣದಿಂದಾಗಿ ತಪು್ಪ ದಾರಿಗೆ ಎಳೆಯುತ್ತಾರೆ. ಮಾನಸಿಕವಾಗಿ ಗಟ್ಟಿತನ ಇರಲಿ. ಅನಂತಪದ್ಮನಾಭನನ್ನು ಸ್ತುತಿಸಿ. ಸಂಪೂರ್ಣ ರಾಮಸಿದ್ಧ ತಾರಕ ಮಂತ್ರ ಪಠಣದೊಂದಿಗೆ ಮಾರುತಿಯನ್ನು ಕಾರ್ಯಶೀಲಗೊಳಿಸಿ.

ಶುಭದಿಕ್ಕು: ಪಶ್ಚಿಮ ಶುಭಸಂಖ್ಯೆ: 9

ಮಿಥುನ: ಮಾಯೆ ಯಾವ ರೂಪದಲ್ಲಿ ಆವಿರ್ಭವಿಸುತ್ತದೆ ಎನ್ನುವುದು ಒಂದು ಒಗಟಾಗಿದೆ ನಿಮಗೆ. ಹೆಚ್ಚಿನ ಎಚ್ಚರ ಬೇಕೇ ಬೇಕು. ವಿರುದ್ಧ ಲಿಂಗಿಗಳೊಂದಿಗೆ ಎಚ್ಚರ. ಕಾರಣವಿರದೆ ತಪು್ಪ ಆಪಾದನೆಗಳಿಗೆ ಸಿಕ್ಕಿ ಹಾಕಿಕೊಳ್ಳುತ್ತೀರಿ. ಮೂಲದಲ್ಲಿನ ನಿಮ್ಮ ಜನ್ಮ ಕುಂಡಲಿಯಲ್ಲಿ ಕುಜ ಶುಕ್ತಯುತಿ ಇದ್ದು, ದುಃಸ್ಥಾನ ಸ್ಥಿತಿ ಸಂಯೋಜನೆಯಾಗಿದೆ ಎಂದಾದರೆ ಮಂಗಳ ಚಂಡಿಕಾ ಸ್ತೋತ್ರ ಓದಿ. ನಿಮ್ಮ ಆಸ್ತಿಯ ವಿಚಾರದ ಕಾಗದ ಪತ್ರಗಳಲ್ಲಿನ ದೋಷಗಳನ್ನು ಆಲಸ್ಯಮಾಡದೇ ಸರಿಪಡಿಸಿಕೊಳ್ಳಿ. ಜತೆಗೆ ಸಾಲಗಾರರಾಗಿದ್ದಲ್ಲಿ ವೃಥಾ ತೊಂದರೆಗೊಳಗಾಗದಂತೆ ನಿಭಾಯಿಸಿ. ತ್ರಿದಳದೊಂದಿಗೆ ಶಿವನ ಅರ್ಚನೆ ಸೂಕ್ತ.

ಶುಭದಿಕ್ಕು: ದಕ್ಷಿಣ ಶುಭಸಂಖ್ಯೆ: 2

ಕಟಕ: ಸುಗಮವಾಗಿದೆ ಎಂದುಕೊಳ್ಳುವಾಗಲೇ ಚಂಡಮಾರುತ ಬೀಸಲಾರಂಭಿಸುವ ಚೋದ್ಯ ಎದುರಾಗುತ್ತದೆ. ಭದ್ರಕಾಳಿಯನ್ನು ಆರಾಧಿಸುವುದು ಶಕ್ತಿ ಸಂಚಯನಕ್ಕೆ ಅನುಪಮವಾದ ದಿವ್ಯದ ದಾರಿ ನಿರ್ವಿುಸುತ್ತದೆ. ರಾಜಕಾರಣಿಗಳಿಗೆ ಯಶಸ್ಸು ಹಾಗೂ ಅಪಮಾನಗಳ ಮಿಶ್ರ ದಾರಿಗಳು ಎದುರಾಗಲಿವೆ. ಕೋಟ್ಯಂತರ ರೂಪಾಯಿಗಳ ಆಸ್ತಿಯ ಭಾಗ್ಯ ಸುಲಭವಿದ್ದಂತೆ ಕಂಡರೂ ಹಲವು ತೊಡಕುಗಳು ಎದುರಾಗಬಹುದು. ಹಸುವಿನ ಹಸಿ ಹಾಲಿಗೆ ಸಕ್ಕರೆ ಹಾಗೂ ಕಾಮಕಸ್ತೂರಿ ಬೀಜ ಬೆರೆಸಿ ಹಕ್ಕಿಗಳು ಬರುವಲ್ಲಿ ಸಿಂಪಡಿಸಿ. ಒಳಿತಿಗೆ ದಾರಿ ಇದೆ.

ಶುಭದಿಕ್ಕು: ಆಗ್ನೇಯ ಶುಭಸಂಖ್ಯೆ: 6

ಸಿಂಹ: ಗುಂಡಿಗೆಯ ಬಿಸಿ ರಕ್ತ ಯಾಕೆ? ಭಯವನ್ನು ಹೊತ್ತ ವರ್ತಮಾನದಲ್ಲಿ ತಣ್ಣಗೆ ಕ್ರಿಯಾಶೀಲತೆ ಇರದೆಯೇ ತನ್ನನ್ನು ನಿಸ್ತೇಜವಾಗಿ ಕುಳ್ಳಿರಿಸಿದೆ ಎಂಬ ಪ್ರಶ್ನೆ ಕೇಳಿಕೊಳ್ಳುತ್ತೀರಿ. ಏನೂ ಬೇಡ ಎಂಬ ಜಾಡ್ಯ ಆವರಿಸಬಹುದು. ಚಾಮುಂಡಿ ಅಷ್ಟೋತ್ತರವನ್ನು ದಿನವೂ ಮೂರು ಬಾರಿ ಪಠಿಸಿ. ಲಿಂಬೆ ಹಣ್ಣಿನ ದೀಪವನ್ನು ಮನೆಯ ಹೊರ ಅಂಗಳದಲ್ಲಿ ದಿನವೂ ಸ್ನಾನಾನಂತರ ಬೆಳಗಿ ಕುಂಕುಮ ಬೆರೆಸಿದ ನೀರನ್ನು ಸಸ್ಯದ ತಳದಲ್ಲಿ ಸೇಚನ ಮಾಡಿ. ಯಾರೂ ತುಳಿಯದ ಜಾಗ ಇರಲಿ. ಧನ ಲಾಭದ ದಾರಿ ಇದರಿಂದ ಸುಲಭ.

ಶುಭದಿಕ್ಕು: ಈಶಾನ್ಯ ಶುಭಸಂಖ್ಯೆ: 1

ಕನ್ಯಾ: ಇದ್ದಕ್ಕಿದ್ದಂತೆ ಬೆಂಬಲಿಗರ ಗುಂಪು ನಿಮ್ಮ ಜತೆ ನಾವಿದ್ದೇವೆ ಎಂಬ ಧೈರ್ಯ ಹೊತ್ತು ತರುವುದು ನಿಮಗೆ ದೊಡ್ಡ ಖುಷಿಯನ್ನು ಒದಗಿಸುತ್ತದೆ. ಎದೆಗುಂದುವ ಸಂದರ್ಭವನ್ನು ಅಂತಿಮವಾದ ವಿಜಯಕ್ಕೆ ಪರಿವರ್ತಿಸಿಕೊಳ್ಳುವ ಪವಾಡ ಸಂಭವಿಸಲು ಅವಕಾಶವಿದೆ. ಕಾಳಿಕಾಳನ್ನು ಆರಾಧಿಸಿ. ಮಣ್ಣಿನ ಹಣತೆಯಲ್ಲಿ ದೀಪವನ್ನು ಉರಿಸಿ ಕಾಳಿಕಾಳನ್ನು ಸ್ತುತಿಸಿ. ತಲ್ಲಣಗೊಂಡ ಮನಸ್ಸು ಹೊಸ ಲವಲವಿಕೆಯನ್ನು ಭರಿಸಿಕೊಳ್ಳಲು ಸಹಾಯಕ. ಸದ್ಯ ಸಾಲಕ್ಕಾಗಿ ಮುಂದಾಗದಿರಿ. ಕೃಷಿಕರಾಗಿದ್ದರೆ, ರಿಯಲ್ ಎಸ್ಟೇಟ್ ಬಿಸಿನೆಸ್​ನವರಾಗಿದ್ದರೆ, ಫೈನಾನ್ಸ್ ವ್ಯವಹಾರ ಹೊಂದಿದ್ದರೆ ಹೆಚ್ಚಿನ ಏಕಾಗ್ರತೆ ಬೇಕು.

ಶುಭದಿಕ್ಕು: ಉತ್ತರ ಶುಭಸಂಖ್ಯೆ: 3

ತುಲಾ: ನಿಮಗೆ ಸುರಕ್ಷಿತವಾಗಿ ದಡ ತಲುಪಬೇಕು ಎಂಬ ಆಸೆಯೋನೋ ಇದೆ. ಇಂಥ ಆಸೆ ತಪ್ಪೇನಲ್ಲ. ಆದರೆ ಹಾಗೆ ನಿಮ್ಮ ಲೆಕ್ಕಾಚಾರಗಳೆಲ್ಲ ಪೂರ್ತಿಯಾಗಿ ಕೈಗೂಡಬಹುದು ಎಂಬ ಲೆಕ್ಕಾಚಾರ ಹಾಕಬೇಡಿ. ಪ್ರಮುಖವಾಗಿ ಕೊಟ್ಟ ಹಣ ಹಿಂದಿರುಗಿ ಬರುವಂತೆ ನಡೆಸುವ ಪ್ರಯತ್ನ ಸುಮ್ಮನೆ ಮೇಲ್ಪದರದಲ್ಲಿ ಆದರೆ ಸೂಕ್ತವಾಗದು. ಸರಿಯಾದ ಸಾಕ್ಷಿ, ಆಧಾರ ಇರಿಸಿಕೊಂಡು ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲೇರುವ ಪ್ರಸಂಗ ಬಂದರೆ ಶುಭಸ್ಯ ಶೀಘ್ರಂ. ಅದಕ್ಕೆ ಮುಂದಾಗಿ. ನಿಮ್ಮ ಸಂಬಂಧವಾದ ಅಂತಿಮ ನ್ಯಾಯಕ್ಕೆ ಬೇಕಾದ ವೇದಿಕೆಯನ್ನು ದುರ್ಗೆ ಒದಗಿಸುತ್ತಾಳೆ. ದುರ್ಗಾ ಸ್ತುತಿ ಮಾಡಿ.

ಶುಭದಿಕ್ಕು: ಪಶ್ಚಿಮ ಶುಭಸಂಖ್ಯೆ: 8

ವೃಶ್ಚಿಕ: ಶೂನ್ಯ ಸ್ಥಿತಿಯಲ್ಲಿಯೇ ಬಂಧಿಯಾಗುವ ವಿಚಾರ ನಿಮ್ಮನ್ನು ಹೈರಾಣಗೊಳಿಸಿದೆ. ಯಾರು ಸಹಕರಿಸಿದ್ದರೆ ಒಳಿತು ಎಂದು ತಿಳಿಯುತ್ತೀರೋ ಆ ವ್ಯಕ್ತಿ ಕೆರಳುವ ದುಷ್ಟ ಶಕ್ತಿಯಾಗಿ ಅಶುಭವನ್ನೇ ಸೃಷ್ಟಿಸುತ್ತಾನೆ. ಇಂಥ ದುರವಸ್ಥೆ ನೀಗಲು, ದುರ್ಭರತೆ ಕೊನೆಗೊಳಿಸಲು ತ್ರಯಂಬಕ ಶಕ್ತಿ ಮಂತ್ರ, ಮಾರುತಿ ಅಷ್ಟೋತ್ತರ ಓದಿ. ಕೇಸರಿ ದಳ, ಸಕ್ಕರೆ ಬೆರೆಸಿದ ಮೊಸರನ್ನು ಲಿಂಬು ಫಲಕ್ಕೆ ಸುರಿದು, ಆ ಲಿಂಬು ಫಲವನ್ನು ತುಳಸಿ ಗಿಡದ ತಳದಲ್ಲಿ ಇಟ್ಟುಬಿಡಿ. ಸಂದಿಗ್ಧವಾದ ಸಮಯದಲ್ಲಿ ಬೇಕಾದ ಅರಿವಿನ ಬೆಳಕು ಇದರಿಂದ ಸಿಗಲಿದೆ.

ಶುಭದಿಕ್ಕು: ನೈಋತ್ಯ ಶುಭಸಂಖ್ಯೆ: 4

ಧನು: ಮೂಲ ಜಾತಕದಲ್ಲಿ ಅರಿಷ್ಟದ ಯೋಗಗಳು ಅಥವಾ ಸಲ್ಲದ ಅವಿವೇಕದಿಂದಾಗಿ ನಡೆದ ಅಹಿತಕರ ಸಂಬಂಧ ದೋಷಗಳು ಕೆಲವು ಅಸಹಾಯಕ ಸ್ಥಿತಿಯನ್ನು ನಿರ್ವಿುಸಬಹುದು. ಹತ್ತಿರವಾಗಿದೆ ಎಂದಂದುಕೊಂಡ ಲಾಭಕರ ವಹಿವಾಟು ನಿರರ್ಥಕವಾಗಿ ಹರಳುಗಟ್ಟುವ ನಷ್ಟಕ್ಕೆ ಮುಖ ಮಾಡಿಸಬಹುದು. ಬಾಲ ಗಣಪತಿಯನ್ನು ಪಂಚಮುಖಿ ಹನುಮನನ್ನು ಆರಾಧಿಸಿ. ವಿಧಿಯುಕ್ತವಾಗಿ ಜಲಾಭಿಷೇಕ ಪೂರೈಸುವ, ಶಿವಾಲಯಕ್ಕೆ ಪ್ರತಿದಿನ ಸ್ನಾನಾನಂತರ ದರ್ಶನ ಮಾಡಿ ಬನ್ನಿ. 21 ಸುತ್ತುಗಳಷ್ಟು ಪ್ರದಕ್ಷಿಣೆಯನ್ನೂ ಹಾಕಿ. ಸಂಕಲ್ಪಿತ ಕಾರ್ಯಕ್ಕೆ ದಾರಿ ನಿರಾಳ.

ಶುಭದಿಕ್ಕು: ಪೂರ್ವ ಶುಭಸಂಖ್ಯೆ: 9

ಮಕರ: ಗೋಧೂಳಿ ಹೊತ್ತಿನ ಚಂಡಿಕಾ ಧ್ಯಾನ ನಿಮ್ಮ ಅನೇಕ ತೊಂದರೆಗಳನ್ನು ನಿವಾರಿಸಲು ಶಕ್ತಿ ತುಂಬಿಕೊಡಲಿದೆ. ಆಫೀಸಿನ ವಾತಾವರಣ ನಿಮಗೆ ಜಿಗುಪ್ಸೆ ತರಬಹುದು. ಅನಾವಶ್ಯಕವಾದ ಗೊಂದಲಗಳಿರುವಲ್ಲಿ ಹತಾಶ ಮನೋಭಾವ ತೋರಿಸದಿರಿ. ಮುಗುಳ್ನಗೆ ವಿರೋಧಿಗಳನ್ನು ನಿಯಂತ್ರಿಸಲು ಸುಲಭ, ಬುಧನು ನಿಮಗೀಗ ಪ್ರಬಲನಾಗಿರುವುದರಿಂದ ನಿಮ್ಮ ವಿದ್ವತ್, ವರ್ಚಸ್ಸಿನ, ಸಮತೋಲನ ಹೊಂದಿದ ತೂಕದ ನಡವಳಿಕೆ ಎದುರಾಳಿಗಳನ್ನು ದಂಗು ಬಡಿಸಲು ವಜ್ರಾಯುಧವಾಗಿದೆ. ದಿವ್ಯ ಶಕ್ತಿಯ ಸಾಕ್ಷಾತ್ಕಾರಕ್ಕೆ ಶ್ರೀ ಭಗವತೀ ಖಡ್ಗಮಾಲಿನಿ ಅಷ್ಟೋತ್ತರ ಪಠಿಸಿ.

ಶುಭದಿಕ್ಕು: ವಾಯವ್ಯ ಶುಭಸಂಖ್ಯೆ: 5

ಕುಂಭ: ನೀವು ಒಳ್ಳೆಯವರಾಗಲು ಬಯಸಿದಷ್ಟೂ ಕೆಲ ಅವಿವೇಕಿಗಳು ಕೆರಳಿಸಲು, ಕೆರಳಿ ನಿಮ್ಮಿಂದ ತಪು್ಪ ಘಟಿಸುವಂತಾಗಲು ಪ್ರಯತ್ನಿಸುತ್ತಿರುತ್ತಾರೆ. ಆದರೆ ನಿಮ್ಮ ತರ್ಕ ಮತ್ತು ಸಮಯ ಪ್ರಜ್ಞೆಯಿಂದ ಈ ಪ್ರಯತ್ನಗಳನ್ನು ನಿಷ್ಕೀ›ಯಗೊಳಿಸಿ. ಮಾತು ನಿಯಂತ್ರಣ ಹೊಂದಿರಲಿ. ತೂಕದ ಅಭಿವ್ಯಕ್ತಿಯಿಂದಾಗಿ ಹಲವಾರು ಯಶಸ್ಸು ನಿಮಗೆ ವಿಶೇಷವಾಗಿ ಪುರಂದರನ ಅನುಗ್ರಹದಿಂದಾಗಿ ಸಿಗುವುದು. ಹೊಸದೇ ಜವಾಬ್ದಾರಿ, ಸ್ಥಾನಮಾನಗಳನ್ನು ನಿರೀಕ್ಷಿಸಬಹುದಾಗಿದೆ. ತಾಮ್ರದ ಬಿಂದಿಗೆಯಲ್ಲಿ ಶೇಖರಿಸಿದ್ದ ಶುದ್ಧ ಜಲವನ್ನು ತುಳಸಿಯೊಂದಿಗೆ, ಬಿಳಿ ಹೂವುಗಳೊಂದಿಗೆ ಶಿವಲಿಂಗಕ್ಕೆ ಅಭಿಷೇಕ ಉತ್ತಮ.

ಶುಭದಿಕ್ಕು: ದಕ್ಷಿಣ ಶುಭಸಂಖ್ಯೆ: 7

ಮೀನ: ವೃಥಾ ದಣಿಯದಿರಿ. ಹಲವು ಸೂಕ್ಷ್ಮ ರೀತಿಯ ಎಡರುತೊಡರುಗಳಿದ್ದರೂ ಗೆಲ್ಲುವ ಅದೃಷ್ಟವನ್ನು ಗುರು ಗ್ರಹ ತಂದು ಕೊಡುತ್ತದೆ. ನಿಧಾನವಾಗುವ ದಾರಿ ನಿಮ್ಮ ಪಾಲಿಗೀಗ ಅನಿವಾರ್ಯ. ಹೀಗಾಗಿ ತಾಳ್ಮೆಯಿಂದಿರಿ. ಅವಸರಿಸದಿರಿ. ಒಬ್ಬ ವ್ಯಕ್ತಿಯ ಒಪ್ಪಿಗೆಯ ಮೇಲೆ ನಿಮ್ಮ ಹಲವು ನಿರೀಕ್ಷೆಗಳು ನಿಂತುಕೊಂಡಿವೆೆ. ಆ ವ್ಯಕ್ತಿಯ ಒಪ್ಪಿಗೆ ದೊರಕುವ ಅದೃಷ್ಟ ದಯಾಮಯಳಾದ ಕಾತ್ಯಾಯಿನಿ ದೇವಿಯ ಅನುಗ್ರಹದ ಮೇಲೆ ನಿಂತಿದೆ. ನವಧಾನ್ಯ ಫಲ ಪಂಚಾಮೃತಾಭಿಷೇಕವನ್ನು ದುರ್ಗಾ ದೇವಿಯ ದೇವಾಲಯದಲ್ಲಿ ಪೂರೈಸಿ. ಕಾತ್ಯಾಯಿನಿ ಅಷ್ಟೋತ್ತರ ಓದಿ. ಯಶಸ್ಸಿನ, ಸಿದ್ಧಿಯ ದಾರಿ ಇದರಿಂದ ನಿರಾಯಾಸ.

ಶುಭದಿಕ್ಕು: ಈಶಾನ್ಯ ಶುಭಸಂಖ್ಯೆ: 1

Leave a Reply

Your email address will not be published. Required fields are marked *