ವಾರ ಭವಿಷ್ಯ| 03-03-2019 ರಿಂದ 09-03-2019

ಮೇಷ: ಶತ ಪ್ರಯತ್ನಗಳು ನಡೆಸಿದರೂ ಬೊಗಸೆಗೆ ದಕ್ಕದೆ ದೂರವಾಗಿರುವುದನ್ನು ದಕ್ಕಿಸಿಕೊಳ್ಳಲು ಸಕಾಲ ಈಗ ಬಂದಿದೆ. ಆದರೂ ವಾಯವ್ಯ ದಿಕ್ಕಿನ ಕೆಲವು ಅಗೋಚರ ನಕಾರಾತ್ಮಕ ಶಕ್ತಿ ಸುಳಿಗಳು ಪರದಾಟಕ್ಕೆ ನಿಮ್ಮನ್ನು ಸಿಲುಕಿಸುವ ಸಾಧ್ಯತೆ ಇದೆ. ಆದ್ದರಿಂದ ತಾಮ್ರದ ಬಟ್ಟದಲ್ಲಿ ಅರಳಿ ಮರದ ಚಿಕ್ಕ ಒಣ ಕಾಷ್ಠವಿರಿಸಿ ವಿಷ್ಣುಸ್ತೋತ್ರ ಅಥವಾ ಶ್ರೀ ದುರ್ಗಾ ಸ್ತೋತ್ರ ಸ್ತುತಿ ಮಾಡಿ. ಸಿನಿಮಾ, ಮಾಡೆಲಿಂಗ್, ವಿದೇಶಿ ಕರೆನ್ಸಿಗೆ ಸಂಬಂಧಪಡುವ ವಹಿವಾಟುಗಳಲ್ಲಿ ಎಚ್ಚರ. ಜಾತಕ ಕುಂಡಲಿಯ ರಾಹು ಸಿದ್ಧಿ ಗಮನಿಸದೆ ದೊಡ್ಡ ಬಂಡವಾಳ ಹೂಡದಿರಿ.

ಶುಭದಿಕ್ಕು: ಉತ್ತರ ಶುಭಸಂಖ್ಯೆ: 6

ವೃಷಭ: ಬಾಳಸಂಗಾತಿಯೊಡನೆ ಜಗಳ ಬೇಡ. ಪರಮ ತತ್ತ್ವ ಸಿದ್ಧಿ ಚಿಂತಾಮಣಿ ಶ್ರೀ ಜಗದ್ಧಾತ್ರಿ ಐಂದ್ರಿತ ಆರಾಧನೆಯನ್ನು ಗೋಧೂಳಿ ಸಮಯದಲ್ಲಿ ಮಾಡಿ. ಅರಿಶಿನ ಬಣ್ಣ ಲೇಪಿಸಿದ ಉರುಟು ಹುರಿದಾರವನ್ನು ಕತ್ತರಿಸಿ ಗೋಟಡಕೆಯ ಮೇಲೆ ಶುಕ್ರವಾರದಂದು ಸುತ್ತಿಟ್ಟು ಆರಾಧನೆ ಮಾಡಿ. ಹನುಮಾನ್ ಚಾಲೀಸಾ ಓದಿ. ಸಹಜವಾಗಿ, ಸರಳವಾಗಿ ಕೈಗೆಟುಕಬೇಕಾದ ವಿಚಾರಗಳು ಗಾವುದ ದೂರಕ್ಕೆ ಜಾರುತ್ತಿವೆ. ಬದಲಾದ ಸನ್ನಿವೇಶವನ್ನು ಸಿದ್ಧಿ ಪರಿಕರಗಳಿಂದ ನೀವು ಗೆಲ್ಲಬಹುದು. ನಾಗನನ್ನು ಆರಾಧಿಸಿ.

ಶುಭದಿಕ್ಕು: ನೈರುತ್ಯ ಶುಭಸಂಖ್ಯೆ: 9

ಮಿಥುನ: ಸಿನಿಮಾ ನಟನಟಿಯರಿಗೆ, ವಿದೇಶಿ ವ್ಯಾಪಾರ ವಹಿವಾಟು ಆಯಾತ ನಿರ್ಯಾತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರಿಗೆ ಪ್ರಸನ್ನ ಗಣಪತಿಯ ಸಿದ್ಧಿ ಬೇಕು. ರಜತಾದ್ರಿಯಲ್ಲಿ ಬೀಡು ಬಿಟ್ಟಿರುವ ಶಿವನನ್ನು ನೆನೆಸಿ ಚಂದ್ರಚೂಡ ಸ್ತೋತ್ರ ಪಠಣ ಮಾಡಿ. ಡಾಕ್ಯುಮೆಂಟ್​ಗಳನ್ನು ಸೂಕ್ತವಾಗಿ ಓದದೇ ಸಹಿ ಹಾಕದಿರಿ. ಗಣಿಗಾರಿಕೆಯ ಜನರಿಗೆ ಮಿಶ್ರಫಲ. ಮುಳ್ಳಿನ ಬಾಲದಲ್ಲಿ ಚಂದ್ರದಶಾ ಕಾವು ಸೂರ್ಯನಿಂದಾಗಿ ಪರಿತಾಪದಲ್ಲಿದ್ದರೆ ಚಿನ್ನಾಭರಣ ವ್ಯಾಪಾರ ಕೈಬಿಡಿ.

ಶುಭದಿಕ್ಕು: ಪಶ್ಚಿಮ ಶುಭಸಂಖ್ಯೆ: 4

ಕಟಕ: ಚಂದ್ರನನ್ನು ಕ್ರಮವಾಗಿ ದತ್ತಾತ್ರೇಯ, ಶಿವ ಅಥವಾ ವಿಷ್ಣುವಿನ ರೂಪದಲ್ಲಿ ಆರಾಧಿಸಿ. ಪುನರ್ವಸು ನಕ್ಷತ್ರದವರು ದತ್ತನನ್ನೂ, ಪುಷ್ಯ ನಕ್ಷತ್ರದವರು ಶಿವನನ್ನೂ, ಆಶ್ಲೇಷ ನಕ್ಷತ್ರದವರು ವಿಷ್ಣುವನ್ನೂ ಆರಾಧಿಸಬೇಕು. ಕಮಲಪುಷ್ಪ ನಾಗಸಂಪಿಗೆ ಅಥವಾ ಮಲ್ಲಿಕಾ ಪುಷ್ಪಗಳಿಂದ ದುರ್ಗೆಯನ್ನು ಇಲ್ಲವೇ ಶ್ರೀಲಕ್ಷ್ಮಿಯನ್ನು ಆರಾಧಿಸಿದರೂ ಸರಿಯೇ. ನಕ್ಷತ್ರಗಳು ತುಂಬಿದ ರಾತ್ರಿಯ ಹೊತ್ತು ಬೆಳಗ್ಗೆ ನೆನೆಸಿದ ಗೋಧಿಯ ಕಾಳುಗಳನ್ನು ಒಂದು ಚಮಚದಲ್ಲಿಟ್ಟು ನಕ್ಷತ್ರದರ್ಶನ ಪ್ರಾರ್ಥನೆ ನಂತರ ಸೇವಿಸಿದರೆ ಅನಿಷ್ಠ ದೂರ.

ಶುಭದಿಕ್ಕು: ಉತ್ತರ ಶುಭಸಂಖ್ಯೆ: 9

ಸಿಂಹ: ಪಂಚಮ ಶನಿ ದಿನಗಳು. ಎಲ್ಲಾ ಬೀಗಗಳನ್ನು ಸರಿಯಾಗಿ ಭದ್ರತೆಯೊಂದಿಗೆ ತಿಜೋರಿಗೆ ಕಡತಗಳಿರುವ ಕಪಾಟುಗಳಿಗೆ ಹಾಗೆಯೇ ಇಡಿ. ಹಾಕಿದ ಕೀಲಿಕೈ ಎಲ್ಲಿದೆ ಎಂಬುದನ್ನು ಜಾಗರೂಕತೆ ನೆನಪಿಟ್ಟುಕೊಳ್ಳಿ. ಚಾಣಾಕ್ಷತೆಯಿಂದ ಅಪಹರಿಸುವ ಜನ ಹತ್ತಿರದಲ್ಲೇ ಇರುತ್ತಾರೆ. ಎಳೆ ನೀರಿನ ಸಿಹಿಗಂಜಿಗೆ ಜೇನು ಬೆರೆಸಿ ಕಾಲಭೈರವನಿಗೆ ಸಮರ್ಪಿಸಿ, ಸೇವಿಸಿ. ಎಲುಬಿನ ಸಂಬಂಧವಾದ ವ್ಯಾಧಿಗಳನ್ನು ಅಲಕ್ಷಿಸದಿರಿ. ಬಿರುಗಾಳಿ ಇದೆ ಎಂಬುದು ಸತ್ಯ. ತಾಳ್ಮೆ ಇರಲಿ. ಹನುಮಂತನನ್ನು ಆರಾಧಿಸಿ.

ಶುಭದಿಕ್ಕು: ನೈರುತ್ಯ ಶುಭಸಂಖ್ಯೆ: 1

ಕನ್ಯಾ: ಅಕ್ಷತ, ಅರಿಶಿಣ, ಕುಂಕುಮ, ಗಂಧ ಚಂದನದೊಂದಿಗೆ ದಕ್ಷಿಣಾಮೂರ್ತಿಯನ್ನು ಆರಾಧಿಸಿ. ನಿಜದ ಶಕ್ತಿಯ ಮೂಲಕ ಹೋರಾಟದಲ್ಲಿ ಜಯವನ್ನು ಸಂಪಾದಿಕೊಡುತ್ತಾನೆ. ಭೂಮಿ ಸಂಬಂಧದ ವ್ಯಾಜ್ಯಗಳು ತಲೆನೋವು ತಂದಿಡಬಹುದಾದರೂ ಸೂಕ್ತವಾದ ರಾಜಿ ವಿಚಾರ ಸಂವಾದ ರೂಪಕ್ಕೆ ಬಂದಿದ್ದಾದರೆ ಹಿಂದೆ ಸರಿಯದಿರಿ. ಹಿರಿಯರ ಮೂಲಕ ಸ್ಪಷ್ಟವಾದ ಆದರೆ ಮೃದುಮಾತಿನ ವಿಚಾರಗಳನ್ನು ಮಂಡಿಸಿ. ನಿಮ್ಮ ಮಾತುಗಳನ್ನು ಒರೆಗಲ್ಲಿಗೆ ಹಚ್ಚಿ ಚಿನ್ನದಂತೆ ಪರೀಕ್ಷಿಸಿ. ಕ್ಷೇಮಕ್ಕೆ ದಾರಿ ಸುಲಭ.

ಶುಭದಿಕ್ಕು: ದಕ್ಷಿಣ ಶುಭಸಂಖ್ಯೆ: 6

ತುಲಾ: ವಿವಾದಗಳನ್ನು ದಾಟಿ ಹೊರಬಂದಿದ್ದೀರಿ. ಹಲವು ರೀತಿಯ ಅನುಭವಗಳನ್ನೂ ದಕ್ಕಿಸಿಕೊಂಡದ್ದಾಗಿದೆ. ನೇತೃತ್ವ ವಹಿಸುವ ದೊಡ್ಡ ಜವಾಬ್ದಾರಿಯೊಂದನ್ನು ರಾಜಕಾರಣಿಗಳು ಪಡೆಯುವ ಸಾಧ್ಯತೆ ಅಧಿಕ. ಮೂಲ ಜಾತಕದಲ್ಲಿ ಕುಜ ದಶಾ ಕಾಲ ಅಥವಾ ಕುಜನ ಸಂಬಂಧವಿರುವ ಮನೆ ವಿಷಯಗಳಿದ್ದರೂ ಮಂಗಳ ಚಂಡಿಕಾ ಧ್ಯಾನದ ಮೂಲಕ ಸಂಕಷ್ಟ ಪರಿಹರಿಸಿಕೊಳ್ಳಿ.ಉನ್ನತ ವ್ಯಾಸಂಗಕ್ಕಾಗಿ ಅಪೇಕ್ಷೆ ಉಳ್ಳವರು ಶಕ್ತಿ ಶಾರದೆಯನ್ನು ಆರಾಧಿಸಿ. ರಸ್ತೆ, ಕಟ್ಟಡ ನಿರ್ಮಾಣ ಕಂಟ್ರಾ್ಯಕ್ಟರ್​ಗಳಿಗೆ ಎಚ್ಚರ ಅಗತ್ಯ.

ಶುಭದಿಕ್ಕು: ಈಶಾನ್ಯ ಶುಭಸಂಖ್ಯೆ: 2

ವೃಶ್ಚಿಕ: ದತ್ತಾತ್ರೇಯನ ಆರಾಧನೆ ಮುಖ್ಯವಾಗಲಿ. ಅನೂಹ್ಯವಾದುದೊಂದು ಪ್ರಸ್ತುತದ ಪೀಡೆಗಳಿಂದ ನಿಮ್ಮನ್ನು ಪಾರು ಮಾಡಬೇಕು. ಆದರೆ ಶತ್ರುಗಳು ಅನೇಕ ಬಾಧೆಗಳನ್ನು ಹತ್ತಿರದವರಿಂದಲೇ ಸಲಹೆ ಪಡೆದು ನಿಮ್ಮ ಪ್ರಗತಿಯ ದಾರಿಗೆ ಮುಳ್ಳು ಬೀರುತ್ತಿದ್ದಾರೆ. ಪೂರ್ವಿಕರ ಕಾಲದ ದೇವಿ ಸಿದ್ಧಿಯೂ ಇಷ್ಟಾದರೂ ನಿಮ್ಮ ಕೆಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ಪ್ರಶಂಸೆಗೆ ಬೇಕಾದ ಅವಕಾಶವನ್ನೊದಗಿಸುತ್ತದೆ. ಗುರುವಾರದಂದು ಮುಖ್ಯವಾದ ಕೆಲಸ (ಹಳದಿ ಕರವಸ್ತ್ರ ಜತೆಗಿರಲಿ) ಪೂರೈಸಲು ಯತ್ನಿಸಿ.

ಶುಭದಿಕ್ಕು: ಆಗ್ನೇಯ ಶುಭಸಂಖ್ಯೆ: 5

ಧನು: ನಿಮಗೆ ಈಗ ಮಧ್ಯಕಾಲೀನ ಸಾಡೇಸಾತಿ ಕಾಟದ ವಿಚಾರ ವಾಸ್ತವದಲ್ಲಿ ಕಿರಿಕಿರಿಯ ವಿಷಯ. ಆದರೆ ಆತ್ಮಭಾವದ ಯಜಮಾನ ಗುರು ಸರ್ವತ್ರವಾದ ಏಕಾದಶಿ ಸ್ಥಾನ ಬಲವನ್ನು ಒದಗಿಸಿ ಕರುಣಾಮಯಿ ಆಗಿದ್ದಾನೆ. ವ್ಯಾಪಾರ ವ್ಯವಹಾರಗಳಲ್ಲಿ ಅಲಕ್ಷ್ಯ ಬೇಡ. ಉದ್ರಿ ವ್ಯವಹಾರ ತೊಂದರೆ ತಂದೀತು. ಪೂರ್ವಭಾಗದಲ್ಲಿ ಸೂರ್ಯ ಎದ್ದೇಳುವ ಸೂರ್ಯೋದಯ (ಒಂದೆರಡು ಸೆಕೆಂಡ್ ಕಾಲ) ವೀಕ್ಷಿಸಿ. ಪೂಜಾಗೃಹದಲ್ಲಿ ನಂತರ ವಿಷ್ಣು ಸಹಸ್ರನಾಮಾವಳಿ ರಾಮರಕ್ಷಾ ಸ್ತ್ರೆೊತ್ರ ಪಠಿಸಿ. ಕ್ಷೇಮಕ್ಕೆ ದಾರಿಯಿದೆ.

ಶುಭದಿಕ್ಕು: ವಾಯವ್ಯ ಶುಭಸಂಖ್ಯೆ: 8

ಮಕರ: ನಿಮ್ಮ ವಿಷಯದಲ್ಲಿ ಬೇಕಂತಲೇ ತಗಾದೆ ತೆಗೆಯುವ ಜನರ ಗುಂಪು ಆಕಾಶದಲ್ಲಿ ಕವಿದ ಕರಿಮಣಿಗಳಂತೆ ಸುತ್ತಿಕೊಳ್ಳಬಹುದು. ಶ್ರೀ ಪಂಚಮುಖಿ ಹನುಮಂತ ಕವಚ ಪಠಿಸಿ. ವರ್ತಮಾನದ ಸಾಡೇಸಾತಿ ಕಾಟದ ತಾಂಡವ ನರ್ತನದಿಂದ ರಕ್ಷಣೆಯಿದೆ. ಹಣವನ್ನು ನಿಮ್ಮಿಂದ ನಿರೀಕ್ಷಿಸುವ ಮಂದಿ ಜಾಸ್ತಿಯಾಗುತ್ತಾರೆ. ಪ್ರಮೋಷನ್ ವಿಳಂಬವಾಗಬಹುದು. ಆದರೆ ಹಠ, ಛಲ ಬಿಡದೇ ಸವಾಲು ಎದುರಿಸಿ. ಮೊಂಡುತನ ಬೇಡ. ನಗು ಮುಖ ಇರಲಿ.

ಶುಭದಿಕ್ಕು: ಪಶ್ಚಿಮ ಶುಭಸಂಖ್ಯೆ: 4

ಕುಂಭ: ಹಲವು ಅವಕಾಶಗಳ ಮೂಲಕ ವ್ಯಕ್ತಿತ್ವ ವರ್ಚಸ್ಸುಗಳನ್ನು ಬೆಳೆಸಿಕೊಳ್ಳಬಲ್ಲಿರಿ. ರಾಹುದಶಾ ಸಂದರ್ಭ ಇದ್ದಲ್ಲಿ ಹಲವು ಅಡೆತಡೆಗಳು ಸದ್ದಿರದೇ ಒಳಗೆ ಒದಗಿಬರಲು ಅಧಿಕ ಸಾಧ್ಯತೆಗಳಿವೆ. ಸ್ತ್ರೀಯರು ಪ್ರಸೂತಿಯ ಸಮಯದಲ್ಲಿ ಸರ್ವಾರ್ಥ ಸಿದ್ಧಿಗೆ ದಾರಿಯಾಗಬಲ್ಲ ಪಾರ್ವತಿಯನ್ನು ಧ್ಯಾನಿಸಿ. ಮನೆಯ ವಸತಿ ಸ್ಥಳಗಳ ವಿನ್ಯಾಸ ಬದಲಿಸಲು ಅವಕಾಶ ಕೂಡಿಬರಬಹುದು. ತಲೆ ತಿನ್ನುವ ಜನರನ್ನು ಗಾವುದ ದೂರಕ್ಕೆ ಉಪಾಯದಿಂದ ಸಾಗಿಸಿಬಿಡಿ. ನರಸಿಂಹ ಅಷ್ಟೋತ್ತರ ಪಠಣದಿಂದ ಸಿದ್ಧಿ ಇದೆ.

ಶುಭದಿಕ್ಕು: ಆಗ್ನೇಯ ಶುಭಸಂಖ್ಯೆ: 7

ಮೀನ: ಅನಪೇಕ್ಷಿತ ಸದ್ದು, ಭೂಮಿಯ ಕೆಳಪದರಗಳಿಂದ ಅಸ್ಪಷ್ಟ ಸಂಭಾಷಣೆ ಇತ್ಯಾದಿಗಳಿಂದಾಗಿ ರಾತ್ರಿಯ ನಿದ್ರೆಯನ್ನು ಕೆಡಿಸುವ ಸಾಧ್ಯತೆ ಅಧಿಕ. ತುಳಸಿದಳವನ್ನು ತಾಮ್ರದ ಗಿಂಡಿಯಲ್ಲಿರುವ ನೀರಿನಲ್ಲಿ ಮುಳುಗಿಸಿ ಮಲಗುವ ಜಾಗದ ಬಳಿ ಇಟ್ಟುಕೊಳ್ಳಿ. ವರಹಸ್ವಾಮಿ ಅಥವಾ ಪಿನಾಕ ಸಿದ್ಧಿ ಸ್ತೋತ್ರ ಪಠಿಸಿ. ಇಚ್ಛಿಸಿದ ಕಾರ್ಯದಲ್ಲಿ ಸುಗಮವಾಗಿ ಜಯಸಿಗಲು ಇದರಿಂದ ಸುಲಭ ದಾರಿ ಲಭ್ಯ. ತರಕಾರಿಗಳ ಮೂಲಕ, ಹಣ್ಣು- ಹಂಪಲುಗಳ ಮೂಲಕ ಧನಲಾಭವಿದೆ. ಕೃಷಿಯು ಕೈಹಿಡಿಯಬಲ್ಲದು.

ಶುಭದಿಕ್ಕು: ಪೂರ್ವ ಶುಭಸಂಖ್ಯೆ: 3