ವೆಬ್​ಟಾಕ್ ಮಿನಿ ಎಟಿಎಂ ಸೇವೆಗೆ ಚಾಲನೆ

ವಿಜಯವಾಣಿ ಸುದ್ದಿಜಾಲ ಶಿಗ್ಗಾಂವಿ

ಗ್ರಾಮೀಣ ಭಾಗದ ಜನರಿಗೆ ಹಣಕಾಸಿನ ವ್ಯವಹಾರಕ್ಕೆ ಅನುಕೂಲ ಕಲ್ಪಿಸಲು ವೆಬ್​ಟಾಕ್ ಮಿನಿ ಎಟಿಎಂ ಸೇವೆ ಪ್ರಾರಂಭಿಸಿರುವುದು ಗ್ರಾಮೀಣ ಪ್ರದೇಶದ ಜನತೆಗೆ ಅನುಕೂಲವಾಗಲಿದೆ ಎಂದು ಪಟ್ಟಣದ ವಿರಕ್ತಮಠದ ಸಂಗನಬಸವ ಸ್ವಾಮಿಗಳು ಹೇಳಿದರು.

ಪಟ್ಟಣದ ರಾಜಶ್ರೀ ಚಲನಚಿತ್ರ ಮಂದಿರದ ಹತ್ತಿರವಿರುವ ಓಂಕಾರೇಶ್ವರ ಆಲೂರ ಅವರ ಮಳಿಗೆಯಲ್ಲಿ ವೆಬ್​ಟಾಕ್ ಮಿನಿ ಎಟಿಎಂ ಸೇವೆ ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಗ್ರಾಮೀಣ ಪ್ರದೇಶಗಳ ಎಲ್ಲ ಬ್ಯಾಂಕ್​ಗಳ ಮೂಲಕ ಎಟಿಎಂ ವ್ಯವಸ್ಥೆ ನೀಡಲು ಸಾಧ್ಯವಾಗಿಲ್ಲ. ಆದ್ದರಿಂದ ಇಂತಹ ಸಮಸ್ಯೆಗಳನ್ನು ಮನಗಂಡು ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ಸುಲಭವಾಗಿ ಹಣಕಾಸಿನ ವ್ಯವಹಾರಕ್ಕೆ ನೆರವಾಗಲು ಖಾಸಗಿ ಕಂಪನಿಗಳು ಮುಂದೆ ಬಂದಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ವೆಬ್​ಟಾಕ್ ಸಮೂಹ ವ್ಯವಸ್ಥಾಪಕ ರಾಘವೇಂದ್ರ ಎಂ. ಮಾತನಾಡಿ, ಈಗಾಗಲೇ ಶಿಗ್ಗಾಂವಿ ಪಟ್ಟಣ, ತಾಲೂಕಿನ ಮಣಕಟ್ಟಿ, ಹಿರೇಬೆಂಡಿಗೇರಿ, ಮುಗಳಿ, ಬೆಳಗಲಿ, ಕೋಣನಕೇರಿ, ಕುನ್ನೂರ ಗ್ರಾಮಗಳಲ್ಲಿ ವೆಬ್​ಟಾಕ್ ಮಿನಿ ಎಟಿಎಂ ಸೇವೆ ಪ್ರಾರಂಭ ಮಾಡಲಾಗಿದೆ. ಇದರ ಉಪಯೋಗವನ್ನು ಗ್ರಾಮೀಣ ಪ್ರದೇಶದ ಜನರು ಪಡೆದುಕೊಳ್ಳಬೇಕು ಎಂದರು.

ಶಶಿಕಾಂತ ತಡಸ, ಓಂಕಾರೇಶ್ವರ ಆಲೂರ, ರಾಜಶೇಖರ ಅಂಕಲಕೋಟಿ, ಈರಪ್ಪ ಮಂಟಗಣಿ, ರಂಗನಾಥ ಎಸ್. ಇತರರು ಇದ್ದರು.