More

  Web Exclusive|ತುಂಗಭದ್ರಾ ಏತ ನೀರಾವರಿಯಿಂದ ಸಿಎಂ ಕ್ಷೇತ್ರಕ್ಕೆ ನೀರು; ಭೂಸ್ವಾಧೀನಕ್ಕೆ ರೈತರ ವಿರೋಧ

  ಹಾವೇರಿ: ರಟ್ಟಿಹಳ್ಳಿ ತಾಲೂಕಿನ ಜಮೀನುಗಳ ಮೂಲಕ ಹಾಯ್ದು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಹೋಬಳಿಯ ಉಡಗಣಿ, ತಲಗುಂದ, ಹೊಸೂರ ಹೋಬಳಿಯ ಕೆರೆಗಳಿಗೆ ನೀರು ತುಂಬಿಸಲು ಆರಂಭಿಸಿರುವ ಏತ ನೀರಾವರಿ ಯೋಜನೆ ವಿರೋಧಿಸಿ ರೈತರು ಕೈಗೊಂಡಿರುವ ಹೋರಾಟ ದಿನದಿಂದ ದಿನಕ್ಕೆ ತೀವ್ರಗೊಳ್ಳತೊಡಗಿದೆ.

  11 ದಿನಗಳಿಂದ ರಟ್ಟಿಹಳ್ಳಿ ಹಾಗೂ ಹಿರೇಕೆರೂರ ತಾಲೂಕುಗಳ ರೈತರು ನಮ್ಮ ಭೂಮಿ ನಮ್ಮ ಹಕ್ಕು ಹೋರಾಟ ಸಮಿತಿ ರಚಿಸಿಕೊಂಡು ಅನಿರ್ದಿಷ್ಟಾವಧಿ ಸತ್ಯಾಗ್ರಹ ಕೈಗೊಂಡಿದ್ದಾರೆ. ರೈತರ ಹೋರಾಟಕ್ಕೆ ವಿವಿಧ ಸಂಘಟನೆಗಳು, ನ್ಯಾಯವಾದಿ ಬಿ.ಡಿ. ಹಿರೇಮಠ ಸಹ ಕೈಜೋಡಿಸಿದ್ದರಿಂದ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡು, ಇದೀಗ ಆಮರಣಾಂತ ಉಪವಾಸ ಸತ್ಯಾಗ್ರಹವಾಗಿ ಪರಿವರ್ತನೆಯಾಗಿದೆ.

  ಏನಿದು ಯೋಜನೆ?

  ರಟ್ಟಿಹಳ್ಳಿ ತಾಲೂಕು ಚಟ್ನಳ್ಳಿ ಬಳಿಯ ತುಂಗಭದ್ರಾ ನದಿಯಿಂದ ಏತ ನೀರಾವರಿ ಯೋಜನೆ ಮೂಲಕ ಸಿಎಂ ಸ್ವಕ್ಷೇತ್ರ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಹೋಬಳಿಯ ಉಡಗಣಿ, ತಲಗುಂದ, ಹೊಸೂರ ಹೋಬಳಿಯ ಹಾಗೂ ಹಿರೇಕೆರೂರ ತಾಲೂಕಿನ ಕೆಲ ಕೆರೆಗಳಿಗೆ ನೀರು ತುಂಬಿಸುವ ಉದ್ದೇಶ ಹೊಂದಲಾಗಿದೆ. ಈ ಸಂಬಂಧ 850 ಕೋಟಿ ರೂ.ಗಳ ಏತ ನೀರಾವರಿ ಯೋಜನೆಗೆ ಸರ್ಕಾರವು 3-8-2019ರಂದು ಮಂಜೂರಾತಿ ನೀಡಿತು. ಈ ಏತ ನೀರಾವರಿ ಯೋಜನೆಯ ಮೂಲಕ ನೀರನ್ನು ಪೈಪ್ ಲೈನ್ (ರೈಸಿಂಗ್ ಮೇನ್) ಮೂಲಕ ರೈತರ ಜಮೀನುಗಳಲ್ಲಿ ತೆಗೆದುಕೊಂಡು ಹೋಗಲು ಹಾಗೂ ಸರ್ವೀಸ್ ರಸ್ತೆಗೆಂದು ಅಂದಾಜು 400 ಎಕರೆ ಜಮೀನು ಭೂಸ್ವಾಧೀನಕ್ಕೆ ಸರ್ಕಾರ ಆದೇಶ ಹೊರಡಿಸಿತು. ಅದರಂತೆ ರಟ್ಟಿಹಳ್ಳಿ ತಾಲೂಕಿನ 17 ಗ್ರಾಮಗಳ ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಂಡು ಕಾಮಗಾರಿ ಆರಂಭಿಸಲಾಗಿದೆ.

  Web Exclusive|ತುಂಗಭದ್ರಾ ಏತ ನೀರಾವರಿಯಿಂದ ಸಿಎಂ ಕ್ಷೇತ್ರಕ್ಕೆ ನೀರು; ಭೂಸ್ವಾಧೀನಕ್ಕೆ ರೈತರ ವಿರೋಧ
  ರಟ್ಟಿಹಳ್ಳಿ ತಾಲೂಕಿನ ಚಟ್ನಳ್ಳಿ ಬಳಿಯ ತುಂಗಭದ್ರಾ ನದಿ ದಂಡೆಯಲ್ಲಿ ಆರಂಭಗೊಂಡಿರುವ ಶಿಕಾರಿಪುರ ಏತ ನೀರಾವರಿ ಯೋಜನೆಯ ಜಾಕ್​ವೆಲ್ ನಿರ್ಮಾಣ ಕಾಮಗಾರಿ ದೃಶ್ಯ.

  ರೈತರ ವಿರೋಧವೇಕೆ?

  ಸಿಎಂ ಸ್ವಕ್ಷೇತ್ರಕ್ಕೆ ತುಂಗಭದ್ರಾ ನದಿಯಿಂದ ನೀರು ಒಯ್ಯಲು ಈ ಮೊದಲು ಹೊನ್ನಾಳಿ ಬಳಿಯಲ್ಲಿ ಯೋಜನೆಗೆ ಚಿಂತನೆ ನಡೆಸಲಾಗಿತ್ತು. ಆಗ ಅಲ್ಲಿನ ಜನರು ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪರಿಣಾಮ ಅದನ್ನು ರಟ್ಟಿಹಳ್ಳಿ-ಹಿರೇಕೆರೂರ ತಾಲೂಕಿನ ಮೂಲಕ ನೀರು ಒಯ್ಯಲು ಯೋಜನೆ ಶಿಫ್ಟ್ ಮಾಡಲಾಗಿದೆ. ಈ ಭಾಗದಲ್ಲಿ ಮಾತ್ರ ಪೈಪ್​ಲೈನ್​ನ್ನು ರೈತರ ಜಮೀನುಗಳ ಮೂಲಕ ಒಯ್ಯಲಾಗುತ್ತಿದೆ. ಶಿಕಾರಿಪುರ ತಾಲೂಕಿನಲ್ಲಿ ರಸ್ತೆ ಬದಿಯಲ್ಲಿಯೇ ಯೋಜನೆಯ ಪೈಪ್​ಲೈನ್ ಅಳವಡಿಸಲು ಯೋಜನೆ ರೂಪಿಸಲಾಗಿದೆ. ಇದು ರೈತರನ್ನು ಮತ್ತಷ್ಟು ಕೆರಳಿಸಿದೆ.

  ನಮ್ಮ ಭಾಗದಲ್ಲಿನ ಜಮೀನುಗಳನ್ನು ಕಸಿದುಕೊಂಡು ಉಳಿದೆಡೆ ರಸ್ತೆ ಪಕ್ಕದಲ್ಲಿ ಕಾಮಗಾರಿ ನಿರ್ವಿುಸುತ್ತಿರುವುದೇಕೆ? ನಮ್ಮ ಭಾಗದಲ್ಲಿ ಹಾಯ್ದು ಹೋಗುವ ಪೈಪ್​ಲೈನ್​ಗಳನ್ನು ಗುಡ್ಡದ ಬಳಿ ಇಲ್ಲವೇ ರಸ್ತೆಯ ಪಕ್ಕದಲ್ಲಿಯೇ ಒಯ್ಯಬೇಕು. ಅದು ಬಿಟ್ಟು ಫಲವತ್ತಾದ ಭೂಮಿಯನ್ನು ವಶಪಡಿಸಿಕೊಂಡು ಕಾಮಗಾರಿ ಮಾಡುವುದು ಬೇಡ ಎಂಬುದು ರೈತರ ವಾದ. ಅಲ್ಲದೆ, ಈಗಾಗಲೇ ಜಿಲ್ಲೆಯಲ್ಲಿ ಅನುಷ್ಠಾನಗೊಂಡಿರುವ ಯುಟಿಪಿ (ತುಂಗಾ ಮೇಲ್ದಂಡೆ ಯೋಜನೆ)ಗೆ ಕಳೆದ 2 ದಶಕಗಳ ಹಿಂದೆಯೇ ವಶಪಡಿಸಿಕೊಂಡಿರುವ ಜಮೀನಿಗೆ ಇದುವರೆಗೆ ಪೂರ್ಣ ಪ್ರಮಾಣದಲ್ಲಿ ಪರಿಹಾರ ಕೊಟ್ಟಿಲ್ಲ. ಇನ್ನು ಈಗ ವಶಪಡಿಸಿಕೊಂಡಿರುವ ಜಮೀನಿಗೆ ಪರಿಹಾರ ಯಾವಾಗ ಸಿಗುತ್ತೇ ಎಂಬ ನಂಬಿಕೆಯಿಲ್ಲ. ಈ ಎಲ್ಲ ಕಾರಣಗಳಿಂದ ರೈತರು ಯೋಜನೆಯ ವಿರುದ್ಧ ಪ್ರಬಲವಾಗಿ ತಿರುಗಿ ಬೀಳುವಂತೆ ಮಾಡಿದೆ. ಯುಟಿಪಿ ಪರಿಹಾರ ಕೊಟ್ಟು, ಈಗ ಭೂಸ್ವಾಧೀನಕ್ಕೆ ನೋಟಿಫೈ ಮಾಡಿರುವ ಜಮೀನನ್ನು ಡಿನೋಟಿಫೈ ಮಾಡಿ ಆದೇಶಿಸಬೇಕು. ರೈತರ ಜಮೀನು ಬಿಟ್ಟು ಗುಡ್ಡ, ರಸ್ತೆ ಬದಿಯಲ್ಲಿ ಕಾಮಗಾರಿ ಆರಂಭಿಸಬೇಕು. ಅಲ್ಲಿಯವರೆಗೆ ಹೋರಾಟ ಕೈಬಿಡುವುದಿಲ್ಲ ಎಂದು ಹೋರಾಟಗಾರ, ರೈತ ಉಜನೆಪ್ಪ ಕೋಡಿಹಳ್ಳಿ ತಿಳಿಸಿದ್ದಾರೆ.

  ನಾವು ಯಾವುದೇ ಕಾರಣಕ್ಕೂ ರೈತರ ಜಮೀನಿನಲ್ಲಿ ಪೈಪ್​ಲೈನ್ ಹಾಕಲು ಬಿಡುವುದಿಲ್ಲ. ಸರ್ಕಾರ ಹಾಗೂ ಈ ಭಾಗದ ಶಾಸಕರು, ಕೃಷಿ ಸಚಿವರಾಗಿರುವ ಬಿ.ಸಿ. ಪಾಟೀಲರು ರೈತರ ಹೋರಾಟ ಸ್ಥಳಕ್ಕೆ ಬರಬೇಕು. ಬರುವ ಮುನ್ನ ಯುಟಿಪಿಗೆ ಜಮೀನು ಕೊಟ್ಟಿರುವ ರೈತರಿಗೆ ಕೊಡಬೇಕಿರುವ 154 ಕೋಟಿ ರೂ.ಗಳ ಬಾಕಿ ಹಣ ಬಿಡುಗಡೆಗೊಳಿಸಬೇಕು. ಇಲ್ಲಿನ ರೈತರ ಜಮೀನು ಸ್ವಾಧೀನಕ್ಕೆ ಹೊರಡಿಸಿರುವ ಆದೇಶವನ್ನು ಹಿಂಪಡೆದು ಜಮೀನುಗಳ ಡಿ-ನೋಟಿಫೈ ಆದೇಶ ಪ್ರತಿಯನ್ನು ಇಲ್ಲಿಯೇ ಕೊಡಬೇಕು. ಈ ಕುರಿತು ಇಲ್ಲಿಯೇ ಚರ್ಚೆ ನಡೆಯಬೇಕು. ಅದನ್ನು ಹೊರತುಪಡಿಸಿ ನಮ್ಮ ಹೋರಾಟ ನಿಲ್ಲುವುದಿಲ್ಲ.

  | ಬಿ.ಡಿ. ಹಿರೇಮಠ ನ್ಯಾಯವಾದಿ

  ರಟ್ಟಿಹಳ್ಳಿ ತಾಲೂಕಿನಲ್ಲಿ ನಡೆಯುತ್ತಿರುವ ಶಿಕಾರಿಪುರ ಏತ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಗುರುವಾರ ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ, ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ರ್ಚಚಿಸಿದ್ದೇನೆ. ಯೋಜನೆಯ ಪೈಪ್​ಲೈನ್ ಹಾಯ್ದು ಹೋಗುವ ರೈತರ ಜಮೀನುಗಳಲ್ಲಿ ಪೈಪ್​ಲೈನ್​ನ ಹೋಗುವ ಭೂಮಿಗೆ ಮಾತ್ರ ಸಹ ಮೋಜಣಿ ಪತ್ರ (ಜೆಎಂಸಿ) ನೀಡಿ, ಅಲ್ಲಿ ಯಾವುದೇ ರಸ್ತೆ ನಿರ್ವಿುಸುವುದಿಲ್ಲ. ಜೆಎಂಸಿ ನೀಡಿ ವಶಪಡಿಸಿಕೊಂಡ ಭೂಮಿಗೆ ಮಾತ್ರ ಸರ್ಕಾರದಿಂದ ಶೀಘ್ರವೇ ಅಧಿಕ ಮೊತ್ತದ ಪರಿಹಾರ ಹಣವನ್ನು ಕೊಡಿಸಲು ತೀರ್ವನಿಸಲಾಗಿದೆ. ಪೈಪ್​ಲೈನ್ ಮೇಲೆ ರೈತರು ಎಂದಿನಂತೆ ತಮ್ಮ ಬೆಳೆಗಳನ್ನು ಬೆಳೆಯಬಹುದು. ಈ ಯೋಜನೆಯಿಂದ ರೈತರಿಗೆ ಅನಾನುಕೂಲವಾಗುವುದಿಲ್ಲ. ಕೆರೆಗಳಿಗೆ ನೀರು ತುಂಬಿಸಿ ರೈತರಿಗೆ ಅನುಕೂಲ ಕಲ್ಪಿಸುವುದೇ ಯೋಜನೆಯ ಮುಖ್ಯ ಉದ್ದೇಶವಾಗಿದೆ.

  | ಬಿ.ಸಿ. ಪಾಟೀಲ ಕೃಷಿ ಸಚಿವರು

  ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ: ಡಿ. 11ರಂದು ವಿಧಾನಸಭೆ ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ಸೂಚಿಸಲಿದ್ದಾರೆ. ಹೀಗಾಗಿ, ಈ ಹೋರಾಟ ಮತ್ತಷ್ಟು ತೀವ್ರಗೊಳ್ಳುವ ಲಕ್ಷಣಗಳು ಗೋಚರವಾಗುತ್ತಿವೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts