ನೇಕಾರರ ಸಂಖ್ಯೆ ದಿಢೀರ್ ಕುಸಿತ

ಗೋಪಾಲಕೃಷ್ಣ ಪಾದೂರು ಉಡುಪಿ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ವಿಶಿಷ್ಟ ರೀತಿಯ ಕೈಮಗ್ಗ ಸೀರೆಗಳಿಗೆ ಹೆಸರುವಾಸಿ. ನೇಕಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅವಿಭಜಿತ ದ.ಕ ಜಿಲ್ಲೆಯಲ್ಲಿ ಎಂಟು ನೇಕಾರರ ಸಹಕಾರಿ ಸಂಘಗಳು ಕಾರ್ಯನಿರ್ವಹಿಸುತ್ತಿದ್ದವು. ಆದರೆ ನೇಕಾರರೇ ಇಲ್ಲದೆ ಒಂದು ವರ್ಷದಿಂದ ಮಿಜಾರು ನೇಕಾರರ ಸಂಘ ಚಟುವಟಿಕೆ ಸ್ಥಗಿತಗೊಳಿಸಿದೆ. ಇದು ಸದ್ಯ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ನೇಕಾರರ ಸ್ಥಿತಿಗತಿಗೆ ಹಿಡಿದ ಕೈಗನ್ನಡಿ.

ಕಳೆದ 15 ವರ್ಷಗಳಲ್ಲಿ ಸಹಕಾರಿ ಸಂಘಗಳ ಸದಸ್ಯರ ಸಂಖ್ಯೆಯಲ್ಲಿ ಹೆಚ್ಚು ಬದಲಾವಣೆಯಾಗದಿದ್ದರೂ ನೇಕಾರರ ಸಂಖ್ಯೆ ಮಾತ್ರ ಬೆರಳೆಣಿಕೆಯಷ್ಟಿದೆ. ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ನಾಲ್ಕು ನೇಕಾರರ ಸಂಘಗಳು ಕಾರ್ಯನಿರ್ವಹಿಸುತ್ತಿವೆ.

2004-05ರಲ್ಲಿ ಉಡುಪಿ ನೇಕಾರರ ಸಹಕಾರಿ ಸಂಘದಲ್ಲಿ 292 ಸದಸ್ಯರಿದ್ದು, 408 ಅವಲಂಬಿತ ಕುಟುಂಬಗಳಿದ್ದವು. 131 ಮಗ್ಗಗಳು ಕಾರ್ಯನಿರ್ವಹಿಸುತ್ತಿದ್ದವು. ಬ್ರಹ್ಮಾವರ ಸಂಘದಲ್ಲಿ 336 ಸದಸ್ಯರು, 250 ಆಶ್ರಿತ ಕುಟುಂಬ, 125 ಕೈಮಗ್ಗ, ಬಸ್ರೂರು ನೇಕಾರರ ಸಹಕಾರಿ ಸಂಘದಲ್ಲಿ 79 ಸದಸ್ಯರು, 60 ಅವಲಂಬಿತ ಕುಟುಂಬಗಳು, 30 ಕೈಮಗ್ಗಗಳು, ಶಿವಳ್ಳಿ ನೇಕಾರರ ಸಹಕಾರಿ ಸಂಘದಲ್ಲಿ 542 ಸದಸ್ಯರು, 280 ಅವಲಂಬಿತ ಕುಟುಂಬಗಳು, 20 ಕೈ ಮಗ್ಗಗಳು ಕಾರ್ಯನಿರ್ವಹಿಸುತ್ತಿದ್ದವು. ಒಟ್ಟು 1,249 ಸದಸ್ಯರು ನೇಕಾರರ ಸಂಘದಲ್ಲಿ ನೋಂದಾಯಿಸಿಕೊಂಡು ನೇಕಾರಿಕೆ ನಡೆಸುತ್ತಿದ್ದರು.

ಶಿವಳ್ಳಿ ನೇಕಾರರ ಸಂಘದಲ್ಲಿ ಪ್ರಸ್ತುತ 88 ಸದಸ್ಯರು ಹಾಗೂ ಏಳು ಕೈಮಗ್ಗ ಸೀರೆ ತಯಾರಕರು ಮಾತ್ರ ಉಳಿದಿದ್ದಾರೆ. ಉಡುಪಿ ನೇಕಾರರ ಸಂಘದಲ್ಲಿ 50 ಸದಸ್ಯರಿದ್ದು, 20 ನೇಕಾರರಿದ್ದಾರೆ. ಬಸ್ರೂರು ನೇಕಾರರ ಸಹಕಾರ ಸಂಘದಲ್ಲಿ 75 ಸದಸ್ಯರು, 6 ನೇಕಾರರಿದ್ದಾರೆ. ಬ್ರಹ್ಮಾವರ ನೇ.ಸ. ಸಂಘದಲ್ಲಿ 370 ಸದಸ್ಯರಿದ್ದು, 10 ಮಂದಿ ಮಾತ್ರ ಕೈ ಮಗ್ಗ ಸೀರೆ ಮಾಡುತ್ತಿದ್ದಾರೆ.

ದ.ಕ. ಜಿಲ್ಲೆಯಲ್ಲಿ ಹೆಚ್ಚಿನ ನೇಕಾರರನ್ನು ಹೊಂದಿದ್ದ ತಾಳಿಪಾಡಿ ಸೊಸೈಟಿಯಲ್ಲಿ ಪ್ರಸ್ತುತ 253 ಸದಸ್ಯರಿದ್ದು, ನೇಕಾರರ ಸಂಖ್ಯೆ 15ಕ್ಕೆ ಕುಸಿದಿದೆ. ಮಂಗಳೂರು ಸೊಸೈಟಿಯಲ್ಲಿ 300 ಸದಸ್ಯರಿದ್ದು, 8 ಮಂದಿ ಮಾತ್ರ ನೇಕಾರರಿದ್ದಾರೆ. ಪಡುಪಣಂಬೂರು ಸೊಸೈಟಿಯಲ್ಲಿ 128 ಮಂದಿ ಸದಸ್ಯರಿದ್ದು, 6 ಮಂದಿ ಕೈಮಗ್ಗ ಸೀರೆ ನೇಯುತ್ತಿದ್ದಾರೆ.

ಯುವಪೀಳಿಗೆ ದೂರ: ನೇಕಾರಿಕೆ ಹೆಚ್ಚಿನ ಶ್ರಮ ಬೇಡುತ್ತದೆ. ಜತೆಗೆ ಲಾಭದಾಯಕ ಉದ್ಯಮವಲ್ಲದ ಕಾರಣ ನೇಕಾರ ಸಮುದಾಯದ ಯುವ ಪೀಳಿಗೆ ಪರಂಪರಾಗತ ವೃತ್ತಿಯಿಂದ ವಿಮುಖವಾಗುತ್ತಿದ್ದಾರೆ. ಎರಡು ದಿನಕ್ಕೆ ಒಂದು ಸೀರೆ ತಯಾರಿಸಬಹುದಾಗಿದ್ದು, 60 ಕೌಂಟ್ಸ್ ಸೀರೆಗೆ 450 ರೂ. ಹಾಗೂ 80 ಕೌಂಟ್ಸ್ ಸೀರೆಗೆ 550 ರೂ. ಮಜೂರಿ ಲಭಿಸುತ್ತದೆ. ಆದರೆ ಹೊರಗಿನ ವೃತ್ತಿಯಲ್ಲಿ ದಿನಕ್ಕೆ ಕನಿಷ್ಠ ಕೂಲಿ 500 ರೂ. ಪಡೆಯುವುದರಿಂದ ಕೈಮಗ್ಗ ಸೀರೆಯಿಂದ ಬದುಕು ಕಟ್ಟಿಕೊಳ್ಳುವುದು ಅಸಾಧ್ಯ ಎಂಬುದು ಯುವನೇಕಾರರ ಅಳಲು.

ನೇಕಾರಿಕೆ ಆಧುನೀಕರಣಗೊಳಿಸುವ ನಿಟ್ಟಿನಲ್ಲಿ 25 ವರ್ಷದ ಕೆಳಗೆ ಪವರ್ ಲೂಮ್ಸ್ ಪ್ರಯೋಗವೂ ಜಿಲ್ಲೆಯಲ್ಲಿ ನಡೆದಿತ್ತು. ಆದರೆ ಅದು ಯಶಸ್ವಿಯಾಗಲಿಲ್ಲ. ಉತ್ಪಾದನೆ ಜಾಸ್ತಿಯಾಗಿದ್ದರೂ ಬೇಡಿಕೆ ಹೆಚ್ಚಾಗಿರಲಿಲ್ಲ. ಇದರಿಂದ ಹ್ಯಾಂಡ್‌ಲೂಮ್ಸ್ ಲೋಗೊ ಕಳೆದುಕೊಳ್ಳಬೇಕಾಗುತ್ತದೆ.

ಶಶಿಕಾಂತ ಕೋಟ್ಯಾನ್ಶಿವಳ್ಳಿ ಸಂಘದ ಕಾರ್ಯದರ್ಶಿ

ಇಂದಿನ ಫ್ಯಾಷನ್ ಯುಗದಲ್ಲಿ ಕೈಮಗ್ಗ ಸೀರೆಗಳಿಗೆ ಬೇಡಿಕೆ ಕುಸಿದಿದೆ. ಸಹಕಾರಿ ಸಂಘಗಳು ಮಾರುಕಟ್ಟೆ ವಿಧಾನ ಬದಲಿಸಿದರೆ ಉದ್ಯಮ ಲಾಭದಾಯಕವಾಗಬಹುದು. ಕರಾವಳಿಯ ನೇಕಾರರು ಗ್ರಾಮೀಣ ಪ್ರದೇಶದವರಾದ್ದರಿಂದ ಸರ್ಕಾರದ ಸೌಲಭ್ಯಗಳ ಬಗ್ಗೆ ಅರಿವಿನ ಕೊರತೆ ಇದೆ. ಯುವಜನತೆಗೆ ವಿನೂತನ ತಂತ್ರಜ್ಞಾನಗಳ ಮಾಹಿತಿಯೊಂದಿಗೆ ತರಬೇತಿ ನೀಡಿದರೆ ಕೈಮಗ್ಗ ಬೆಳೆಯಬಹುದು.

ಡಾ.ಮೀನಾಕ್ಷಿ ಕೆ.ಹಿರಿಯ ಸಂಶೋಧಕಿ, ಮಂಗಳೂರು

ದ.ಕ. ನೇಕಾರರ ಸಂಘದ ಸ್ಥಿತಿಗತಿ (2004-05ರಲ್ಲಿ)
ನೇಕಾರರ ಸಂಘಗಳು ಸದಸ್ಯರ ಸಂಖ್ಯೆ ಅವಲಂಬಿತ ಕುಟುಂಬ ಕಾರ್ಯನಿರತ ಕೈಮಗ್ಗಗಳು

  • ಮಂಗಳೂರು 182 165 20
  • ತಾಳಿಪಾಡಿ 437 250 250
  • ಮಿಜಾರು 120 75 30
  • ಪಡುಪಣಂಬೂರು 461 300 227
  • ಒಟ್ಟು 1200 790 527

Leave a Reply

Your email address will not be published. Required fields are marked *