ಕೊಂಡ್ಲಹಳ್ಳಿ: ನೇಯ್ಗೆಯನ್ನೇ ಬದುಕನ್ನಾಗಿಸಿಕೊಂಡ ನೇಕಾರರನ್ನು ಗುರುತಿಸಿ ಗೌರವಿಸುವುದು ಸಮಾಜದ ಜವಾಬ್ದಾರಿ ಎಂದು ಧಾರವಾಡ ಕೃಷಿ ವಿವಿಯ ಡಾ.ಕೆ.ಜೆ.ಸಣ್ಣಪಾಪಮ್ಮ ತಿಳಿಸಿದರು.
ಕೋನಸಾಗರ ಗ್ರಾಪಂ ವ್ಯಾಪ್ತಿಯ ಉಡೇವು ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಶ್ವಮಟ್ಟದಲ್ಲಿ ತನ್ನದೇ ಕಲೆ, ವೃತ್ತಿಗಳಿಂದ ಗುರುತಿಸಿಕೊಂಡಿರುವ ದೇಶದಲ್ಲಿನ ವಿವಿಧ ಕಲೆ, ವೈವಿಧ್ಯ ವೃತ್ತಿಗಳ ಪರಿಚಯಕ್ಕಾಗಿಯೇ ದಿನಾಚರಣೆ ಆಯೋಜಿಸಲಾಗುತ್ತಿದೆ ಎಂದರು.
ಇಂದು ಸಿಂಥೆಟಿಕ್ ಉತ್ಪನ್ನಗಳು ಕಂಬಳಿಗಳಿಗೆ ಪೈಪೋಟಿ ನೀಡುತ್ತಿವೆ. ಇದಕ್ಕೆ ತಡೆ ನೀಡಲು ಹಾಗೂ ನೇಕಾರಿಕೆ ಮಹಿಳೆಯರನ್ನು ಸಬಲೀಕರಣಗೊಳಿಸುವ ಜತೆಗೆ ಶ್ರಮ ಕಡಿಮೆ ಮಾಡಲು ಹೊಸ ತಾಂತ್ರಿಕ ಅಳವಡಿಕೆ ಅಗತ್ಯ ಎಂದು ತಿಳಿಸಿದರು.
ಕಂಬಳಿಯನ್ನು ಮೃದುತ್ವಗೊಳಿಸಿ ಕೇವಲ ಪೂಜೆಗಷ್ಟೇ ಅಲ್ಲ, ಅದರಿಂದ ಶಾಲು, ಟವೆಲ್, ಯೋಗ ಮ್ಯಾಟ್, ಟೇಬಲ್ ಕ್ಲಾತ್ ಇತರ ವೈವಿಧ್ಯ ಉತ್ಪನ್ನಗಳನ್ನು ತಾಂತ್ರಿಕತೆಯಿಂದ ತಯಾರಿಸಬಹುದು ಎಂದರು.
ಮೊಳಕಾಲ್ಮೂರು ಎಂದಾಕ್ಷಣ ನೆನಪಾಗುವ ರೇಷ್ಮೆ ಸೀರೆಯಂತೆ ಇಲ್ಲಿನ ಉಣ್ಣೆ ಕಂಬಳಿ ಕೂಡ ಖ್ಯಾತಿ ಗಳಿಸಿದೆ. ಆದ್ದರಿಂದ ನೈಸರ್ಗಿಕ ಉತ್ಪನ್ನ ಆಗಿರುವ ಕಂಬಳಿಗೆ ಮಾರುಕಟ್ಟೆ ಒದಗಿಸುವುದು ಸರ್ಕಾರದ ಜವಾಬ್ದಾರಿ ಆಗಿದೆ ಎಂದು ತಿಳಿಸಿದರು.
ಹಿರಿಯ ಕಂಬಳಿ ನೇಕಾರ ಸಣ್ಣಪೋತಪ್ಪ ಮಾತನಾಡಿ, ಕಂಬಳಿ ನೇಯ್ಗೆಯಲ್ಲಿ ತಾಲೂಕು, ಜಿಲ್ಲಾ, ರಾಜ್ಯಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆದಿರುವ ನಮ್ಮೂರು ನೇಯ್ಗೆಯಲ್ಲಿ ಉತ್ತಮ ಪ್ರಶಂಸೆ ಪಡೆದಿದೆ. ಸರ್ಕಾರ ಇನ್ನಷ್ಟು ಪ್ರೋತ್ಸಾಹ ನೀಡಬೇಕಿದೆ ಎಂದು ಕೋರಿದರು.
ಜಿಪಂ ಮಾಜಿ ಅಧ್ಯಕ್ಷ ಕೆ.ಜಗಲೂರಯ್ಯ ಮಾತನಾಡಿ, ಕಂಬಳಿ ನೇಯ್ಗೆಯಲ್ಲಿ ಕಾಲಘಟ್ಟಕ್ಕೆ ತಕ್ಕಂತೆ ಮಾರ್ಪಾಡು ಮಾಡಿಕೊಂಡು ಸಾಗಬೇಕಾಗಿದೆ. ಈ ನಿಟ್ಟಿನಲ್ಲಿ ನೇಕಾರರು ಮತ್ತು ಅವರ ಮಕ್ಕಳಿಗೆ ಅಗತ್ಯ ಸಹಕಾರ, ನೆರವು ಸರ್ಕಾರ ನೀಡಬೇಕು ಎಂದರು.
ಗ್ರಾಪಂ ಅಧ್ಯಕ್ಷ ಪಿ.ರಾಮಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಹನುಮಂತಪ್ಪ, ಮಾಜಿ ಸದಸ್ಯರಾದ ಟಿ.ನಾಗರಾಜಪ್ಪ, ಉಣ್ಣೆ ಕೈಮಗ್ಗ ಸಹಕಾರ ಸಂಘದ ಉಪಾಧ್ಯಕ್ಷ ಶ್ರೀನಿವಾಸ್, ರಾಜಣ್ಣ, ಶೇಖರಪ್ಪ, ಯರ‌್ರಿಸ್ವಾಮಿ, ಚಂದ್ರಣ್ಣ, ತಿಪ್ಪೇಸ್ವಾಮಿ ಇತರರಿದ್ದರು.
ಧಾರವಾಡ ಕೃಷಿ ವಿವಿ, ಅಖಿಲ ಭಾರತ ಸಮನ್ವಯ ಸಂಶೋಧನಾ ಯೋಜನೆ, ಉಡೇವು ಉಣ್ಣೆ ಕೈಮಗ್ಗ ನೇಕಾರ ಮಾರಾಟಗಾರರ ಸಹಕಾರ ಸಂಘದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.