ಕೊಂಡ್ಲಹಳ್ಳಿ: ಶತಮಾನಗಳ ಇತಿಹಾಸವಿರುವ ಮೊಳಕಾಲ್ಮೂರು ರೇಷ್ಮೆ ಸೀರೆ ನೇಕಾರರ ಬದುಕು ದುಸ್ತರವಾಗಿದೆ. ಗ್ರಾಮದ ಕಾರ್ಮಿಕರಿಗೆ ಕಳೆದ 40 ವರ್ಷಗಳಿಂದ ಆಸರೆಯಾಗಿದ್ದ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ (ಕೆಎಚ್‌ಡಿಸಿ) ಶಾಖೆ ಬಾಗಿಲು ಮುಚ್ಚಿದೆ.
1983ರಲ್ಲಿ ಕೆಎಚ್‌ಡಿಸಿ ಯೋಜನೆ ಉಪ ಕೇಂದ್ರದ ಶಾಖೆಯನ್ನು ಕೊಂಡ್ಲಹಳ್ಳಿಯಲ್ಲಿ ತೆರೆಯಲಾಗಿತ್ತು. ಇದರಿಂದ ಕೊಂಡ್ಲಹಳ್ಳಿ, ಓಬಣ್ಣನಹಳ್ಳಿ, ಚಿಕ್ಕಹಳ್ಳಿ, ಕೋಡಿಹಳ್ಳಿ, ತೊರೆಕೋಲಮ್ಮನಹಳ್ಳಿ, ಕಲ್ಲಹಳ್ಳಿ, ಕಾನಾಹೊಸಹಳ್ಳಿ ಇತರ ಗ್ರಾಮಗಳ 200 ಕ್ಕೂ ಹೆಚ್ಚು ನೇಕಾರರು ಅನುಕೂಲ ಪಡೆಯುತ್ತಿದ್ದರು.
ಆರಂಭದ ದಿನಗಳಲ್ಲಿ ನೇಕಾರರಿಗೆ ಆಸರೆಯಾಗುತ್ತಿದ್ದ ಇಲಾಖೆ, ವರ್ಷಗಳು ಉರುಳಿದಂತೆ ಕೂಲಿ ಹಣ ವಿಳಂಬ, ಕಳಪೆ ರೇಷ್ಮೆ ನೂಲು ವಿತರಣೆ, ಕಚ್ಚಾ ರೇಷ್ಮೆ ನೂಲು ಪೂರೈಕೆ ಮತ್ತಿತರ ಸಮಸ್ಯೆಗಳಲ್ಲಿ ಸಿಲುಕಿತು. ಇತ್ತೀಚಿನ 5 ವರ್ಷಗಳಲ್ಲಿ ನೇಕಾರರಿಗೆ ಯಾವುದೇ ಅನುಕೂಲಗಳು ನಿಗಮದಿಂದ ದೊರೆಯುತ್ತಿರಲಿಲ್ಲ.
ಕುಲಕಸುಬನ್ನು ನಂಬಿ ಬದುಕಿದ ಕುಟುಂಬಗಳು ನೇಕಾರಿಕೆ ಬಿಡಲಾಗದೇ ಬೇರೆ ಕೆಲಸ ಮಾಡಲಾಗದೇ ದ್ವಂದ್ವದಲ್ಲಿದ್ದರು. ಕೆಲವರು ನಿಗಮದ ವ್ಯಾಪ್ತಿಯ ಕಾಟನ್, ಷಟಲ್ ಮಗ್ಗಗಳತ್ತ ವಾಲಿದ್ದರು.
ಒಟ್ಟಾರೆ ನಿಗಮದಿಂದ ದೊರಕುತ್ತಿದ್ದ ನೇಯ್ಗೆ ಮಜೂರಿಯಲ್ಲಿ ಬಹಳ ವ್ಯತ್ಯಾಸ ಕಂಡು ಬಂತು. ಇದರಿಂದ ನೇಕಾರರು ಪರ‌್ಯಾಯವಾಗಿ ಖಾಸಗಿ ಸಾಹುಕಾರರನ್ನು ಅವಲಂಬಿಸುವಂತಾಯಿತು.
ವೃತ್ತಿ ತ್ಯಜಿಸಿ ಗುಳೆ ಹೋದ್ರು: ನೇಕಾರರು ಸ್ವಂತಕ್ಕೆ ರೇಷ್ಮೆ ನೂಲು ಖರೀದಿಸಿ ನೇಯ್ಗೆ ಮಾಡಲಾಗದೇ ಖಾಸಗಿ ಮಾಲೀಕರತ್ತ ವಾಲಿದ್ದು ಒಂದೆಡೆಯಾದರೆ, ದುಬಾರಿ ಬೆಲೆಯ ಕಾರಣ ಸ್ಥಳೀಯ ಮಾಲೀಕರು ರೇಶ್ಮೆಯ ಮೇಲೆ ಬಂಡವಾಳ ಹಾಕಲು ಹಿಂಜರಿಯುತ್ತಿದ್ದಾರೆ. ಹೀಗಾಗಿ ನೇಕಾರರು ಅನಿವಾರ್ಯವಾಗಿ ವೃತ್ತಿ ತ್ಯಜಿಸಿ, ಕೋಳಿಫಾರಂ, ಗಾರೆ ಕೆಲಸ, ನಗರ ಪ್ರದೇಶಗಳಿಗೆ ಗುಳೆ ಹೋದರು.
ಸ್ಪರ್ಧಾತ್ಮಕ ಯುಗದಲ್ಲಿ ರೇಷ್ಮೆ ಸೀರೆ ಮಾರಾಟದಲ್ಲಿನ ತೀವ್ರ ಸ್ಪರ್ಧೆ ಎದುರಿಸಲಾಗದೆ, ಇಂದಿನ ದುಬಾರಿ ಬೆಲೆಗಳ ನಡುವೆ ಕುಟುಂಬ ನಡೆಸುವುದೇ ಕಷ್ಟವಾಗಿದೆ. ನಾವು ಅನುಭವಿಸಿರುವ ಕಷ್ಟವೇ ಸಾಕು, ನಮ್ಮ ಮಕ್ಕಳು ಇದಕ್ಕೆ ಇಳಿಯುವುದು ಬೇಡ ಎಂದು ಹಿರಿಯ ನೇಕಾರ ಕೆ.ಎ.ಟೀಕೇಶ್ವರಪ್ಪ ಹೇಳುತ್ತಾರೆ.
ಇನ್ನಾದರೂ ಸರ್ಕಾರ ರಾಜ್ಯದಲ್ಲಿರುವ ಕೈ ಮಗ್ಗಗಳ ಉಳಿವಿಗೆ ಮಹತ್ವದ ನಿರ್ಧಾರ ಕೈಗೊಳ್ಳಬೇಕಿದೆ. ನೇಕಾರರ ಬದುಕನ್ನು ಹಸನುಗೊಳಿಸಲು ಸೂಕ್ತ ಯೋಜನೆಯ ಅಗತ್ಯವಿದೆ ಎಂದು ನೇಕಾರರು ಹೇಳುತ್ತಾರೆ.
ರಾಜ್ಯದಲ್ಲಿ ನಿಗಮದ ವ್ಯಾಪ್ತಿಯಲ್ಲಿ ರೇಷ್ಮೆ ನೇಕಾರರು ಕಡಿಮೆಯಾದ್ದರಿಂದ ಸಮೀಪದ ಶಾಖೆಗಳಲ್ಲಿ ವಿಲೀನಗೊಳಿಸಲಾಗಿದೆ. ಅದೇ ರೀತಿ ಕೊಂಡ್ಲಹಳ್ಳಿಯನ್ನು ಮೊಳಕಾಲ್ಮೂರು ಶಾಖೆಯಲ್ಲಿ ವಿಲೀನಗೊಳಿಸಲಾಗಿದೆ.
ರಾಜನ್, ವ್ಯವಸ್ಥಾಪಕ, ಕೆಎಚ್‌ಡಿಸಿ ಪ್ರಾದೇಶಿಕ ಕಚೇರಿ ಬೆಂಗಳೂರುಕೆಲ ವರ್ಷಗಳಿಂದ ವಾರಕ್ಕೆ ಒಂದು ದಿನ ಮಾತ್ರ ಸೇವೆ ನೀಡುತ್ತಿದ್ದು, ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿತ್ತು. ಮಜೂರಿ ವಿಚಾರವಾಗಿ ನೇಕಾರರಿಗೆ ಪ್ರತಿ ಸೀರೆಗೆ ಸಾವಿರಗಟ್ಟಲೇ ಕೂಲಿ ಕಡಿಮೆ ನೀಡುತ್ತಿದೆ. ಕುಚ್ಚಿನ ಸೀರೆಗೆ ನಿಗಮ 1000 ರೂ.ನೀಡಿದರೆ, ಖಾಸಗಿ ಮಾಲೀಕರು 2800 ರೂ.ನೀಡುತ್ತಾರೆ. ಇದು ನೇಕಾರರು ನಿಗಮದಿಂದ ಹೊರ ಬರಲು ಮುಖ್ಯ ಕಾರಣ.
ಬಿ.ಜಿ.ತಿಪ್ಪೇಶ್, ನೇಕಾರ