ಮುನ್ಸೂಚನೆ ನೀಡದ ಕೃಷಿ ಹವಾಮಾನ ಕೇಂದ್ರ

ಡಿ.ವಿ. ಕಮ್ಮಾರ ಧಾರವಾಡ

ಈಚೆಗೆ ಹವಾಮಾನ ವೈಪರೀತ್ಯದಿಂದ ಸಾಕಷ್ಟು ಮಳೆಯಾಗಿ ಇಡೀ ಉತ್ತರ ಕರ್ನಾಟಕವೇ ನಲುಗಿ ಹೋಯಿತು. ಹೀಗೆ ರಣಭೀಕರ ಮಳೆ ಹಾಗೂ ವಾತಾವರಣದ ಬಗ್ಗೆ ಉತ್ತರ ಕರ್ನಾಟಕದ ರೈತರಿಗೆ ಮೊದಲೇ ಮುನ್ಸೂಚನೆ ನೀಡುವ ಉದ್ದೇಶದಿಂದ ಧಾರವಾಡದ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಉತ್ತರ ಕರ್ನಾಟಕ ಹವಾಮಾನ ಮುನ್ಸೂಚನಾ ಕೇಂದ್ರ ಸ್ಥಾಪನೆಯಾಗಿದೆ. ಆರು ತಿಂಗಳ ಹಿಂದೆಯೇ ಶುರು ಮಾಡಿರುವ ಕೇಂದ್ರಕ್ಕೆ ಸಿಬ್ಬಂದಿಯೇ ಇಲ್ಲ.

ಕೇಂದ್ರ ಸರ್ಕಾರದಿಂದ ಸ್ಥಾಪಿತ ಈ ಕೇಂದ್ರವನ್ನು ಕಳೆದ ಫೆಬ್ರವರಿಯಲ್ಲಿ ಅಂದಿನ ಭೂ ವಿಜ್ಞಾನ ಸಚಿವ ಡಾ. ಹರ್ಷವರ್ಧನ ಉದ್ಘಾಟಿಸಿದ್ದರು. ಆದರೆ, ಇದುವರೆಗೆ ಸಿಬ್ಬಂದಿ ನೇಮಕವಾಗಿಲ್ಲ. ಹಾಗಾಗಿ 12 ಜಿಲ್ಲೆಗಳ ರೈತರು ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಹವಾಮಾನ ಮುನ್ಸೂಚನೆಯಿಂದ ವಂಚಿತರಾಗುತ್ತಿದ್ದಾರೆ. ಒಂದು ವೇಳೆ ಸಂಪೂರ್ಣ ಕಾರ್ಯಾರಂಭಗೊಂಡಿದ್ದರೆ, ಮಳೆ, ನೆರೆ ಅಬ್ಬರದಿಂದ ಸ್ವಲ್ಪಾದರೂ ಬಚಾವ್ ಆಗಬಹುದಿತ್ತು.

ಹೇಗಿದೆ ಕೇಂದ್ರ?: ಕೃಷಿ ವಿಶ್ವವಿದ್ಯಾಲಯ ಕೃಷಿ ಹವಾಮಾನ ಶಾಸ್ತ್ರ ವಿಭಾಗದಲ್ಲಿ ಪ್ರತ್ಯೇಕವಾಗಿ ಎರಡು ಕೊಠಡಿಗಳನ್ನು ಈ ಕೇಂದ್ರಕ್ಕೆ ಮೀಸಲಿಡಲಾಗಿದೆ. ಅದರಲ್ಲಿ ಒಂದು ಕೊಠಡಿಯಲ್ಲಿ ಎರಡು ಕಂಪ್ಯೂಟರ್, ಒಂದಷ್ಟು ಹವಾಮಾನ ಅಧ್ಯಯನದ ಭೂಪಟಗಳು ಬಿಟ್ಟರೆ ಬೇರೇನೂ ಇಲ್ಲ. ತಾತ್ಕಾಲಿಕವಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣದ ಹವಾಮಾನ ಅಧಿಕಾರಿಯನ್ನೇ ಕರ್ತವ್ಯಾಧಿಕಾರಿಯನ್ನಾಗಿ ನೇಮಿಸಿದ್ದಾರೆ.

ಅವರು ವಿಮಾನ ನಿಲ್ದಾಣದ ಜತೆಗೆ ಈ ಕೇಂದ್ರವನ್ನೂ ನೋಡಿಕೊಳ್ಳ ಬೇಕಿರುವುದರಿಂದ ಹಾಗೂ ಕೆಳ ಹಂತದ ಸಿಬ್ಬಂದಿ ಕೊರತೆಯಿಂದ ಹಮಾವಾನ ಅಧ್ಯಯನ, ಸರ್ವೆಗಳು ನಡೆಯುತ್ತಿಲ್ಲ. ಎರಡು ಕಂಪ್ಯೂಟರ್​ಗಳೇ ಈ ಕಚೇರಿಗೆ ದಿಕ್ಕು ದೆಸೆ. ತುರ್ತಾಗಿ ಐವರು ಹವಾಮಾನ ತಜ್ಞರ ನೇಮಕದ ಅಗತ್ಯವಿದೆ.

ನಿರ್ಲಕ್ಷ್ಯೂ ಕಾರಣ: ಕೇಂದ್ರ ಸರ್ಕಾರದಿಂದ ಸಿಬ್ಬಂದಿ ನೇಮಕವಾಗದೇ ಇರುವುದಕ್ಕೆ ರಾಜ್ಯದಲ್ಲಿ ಹಿಂದಿನ ಮೈತ್ರಿ ಸರ್ಕಾರದ ಉತ್ತರ ಕರ್ನಾಟಕ ನಿರ್ಲಕ್ಷ್ಯೂ ಕಾರಣ. ಈ ಕೇಂದ್ರ ಉದ್ಘಾಟನೆಯಾದ ಬಳಿಕ ರಾಜ್ಯ ಸರ್ಕಾರದ ಹವಾಮಾನ ಇಲಾಖೆ ಹಾಗೂ ಕೇಂದ್ರ ಸರ್ಕಾರದ ಭಾರತ ಹವಾಮಾನ ಇಲಾಖೆಯೊಂದಿಗೆ ಒಡಂಬಡಿಕೆಯಾಗಬೇಕಿತ್ತು. ಇದಕ್ಕೆ ಸಂಬಂಧಿಸಿದ ಪ್ರಸ್ತಾವವೊಂದನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ಸಲ್ಲಿಸಬೇಕಿತ್ತು. ಆದರೆ, ಅಂತಹ ಯಾವುದೇ ಪ್ರಸ್ತಾವ ಮೈತ್ರಿ ಸರ್ಕಾರದಿಂದ ರವಾನೆಯಾಗಲಿಲ್ಲ ಎನ್ನಲಾಗಿದೆ.

ಕೃವಿವಿಯಿಂದ ನಡೆದಿದೆ ಕಾರ್ಯ: ಹೊಸ ಹವಾಮಾನ ಮುನ್ಸೂಚನೆ ಕೇಂದ್ರಕ್ಕೆ ಸಿಬ್ಬಂದಿ ನೇಮಕವಾಗದೇ ಮೊದಲಿನ ಕೇಂದ್ರ ತನ್ನ ಕಾರ್ಯ ಎಂದಿನಂತೆ ಮುಂದುವರಿಸಿದೆ. ಆದರೆ, ಈ ಕೇಂದ್ರ ಕೃವಿವಿ ವ್ಯಾಪ್ತಿಯ 7 ಜಿಲ್ಲೆಗೆ ಮಾತ್ರ ಸೀಮಿತವಾಗಿದೆ.

ಎನ್​ಕೆಎಎಫ್​ಸಿ ಕೇಂದ್ರವು ಕೇಂದ್ರ ಸರ್ಕಾರದ ಅನುದಾನದಡಿ ನಡೆಯುತ್ತದೆ. ಹೀಗಾಗಿ ನಾವು ಸ್ಥಳ ಮಾತ್ರ ಕೊಟ್ಟಿದ್ದೇವೆ. ಕೇಂದ್ರ ಹವಾಮಾನ ಇಲಾಖೆ ಅಡಿಯಲ್ಲೇ ಸಿಬ್ಬಂದಿ ನೇಮಕ ನಡೆಯುತ್ತದೆ.

| ಡಾ. ಎಂ.ಬಿ. ಚೆಟ್ಟಿ ಕುಲಪತಿ, ಕೃಷಿ ವಿಶ್ವವಿದ್ಯಾಲಯ-ಧಾರವಾಡ

Leave a Reply

Your email address will not be published. Required fields are marked *