ಪ್ರಧಾನಿಯವರ ಈ ಸ್ಫೂರ್ತಿದಾಯಕ ವಿಡಿಯೋಗೆ ಮೆಚ್ಚುಗೆಗಳ ಮಹಾಪೂರ

ನವದೆಹಲಿ: ಭಾರತದ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ(PIB) ಪ್ರಧಾನಿ ನರೇಂದ್ರ ಮೋದಿ ಅವರ ಸ್ಫೂರ್ತಿದಾಯಕ ವಿಡಿಯೋವೊಂದನ್ನು ಶೇರ್​ ಮಾಡಿದೆ. ಪ್ರಧಾನಿ ಅವರು ಕಾರಿನೊಳಗೆ ಪ್ರವೇಶಿಸುತ್ತಿದ್ದಂತೆ ರಸ್ತೆ ಸುರಕ್ಷತೆಗಾಗಿ ತಮ್ಮ ಸೀಟ್​ ಬೆಲ್ಟ್​ ಧರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಮೆಚ್ಚುಗೆಗಳ ಮಹಾಪೂರವೇ ಹರಿದುಬರುತ್ತಿದೆ.

ಪಿಐಬಿ ತನ್ನ ಟ್ವಿಟರ್​ ಖಾತೆಯಲ್ಲಿ ಮಂಗಳವಾರ ವಿಡಿಯೋ ಶೇರ್​ ಮಾಡಿಕೊಂಡಿದ್ದು, ಪ್ರಧಾನಿ ಮಂತ್ರಿ ಅವರೇ ಕಾರಿನೊಳಗೆ ಪ್ರವೇಶಿಸಿದಾಗ ಮೊದಲು ತಮ್ಮ ಸೀಟ್​ ಬೆಲ್ಟನ್ನು ಹಾಕಿಕೊಳ್ಳುತ್ತಾರೆ. ನಿಮ್ಮ ಸಬೂಬು ಏನು? ನಿಮ್ಮ ಸೀಟ್​ ಬೆಲ್ಟನ್ನು ಧರಿಸಿ ಎಂದು ಅಡಿಬರಹವನ್ನು ಬರೆದುಕೊಂಡಿದ್ದಾರೆ.

ವಿಡಿಯೋದಲ್ಲಿ ಪ್ರಧಾನಿ ಅವರು ಎಸ್​ಯುವಿ ಕಾರಿನ ನ್ಯಾವಿಗೇಟರ್ ಸೀಟಿನಲ್ಲಿ ಕುಳಿತುಕೊಳ್ಳುವ ಮುಂಚೆ ತಮ್ಮ ಸೀಟ್​ ಬೆಲ್ಟನ್ನು ಧರಿಸಿಕೊಳ್ಳುತ್ತಾರೆ.

ನಿಮ್ಮ ಸೀಟ್​ ಬೆಲ್ಟನ್ನು ಧರಿಸಿ ಎಂಬ ಅಡಿಬರಹದೊಂದಿಗೆ ಇರುವ ವಿಡಿಯೋವನ್ನು ಕೇಂದ್ರ ರಸ್ತೆ, ಸಾರಿಗೆ ಸಚಿವಾಲಯ ರಸ್ತೆ ಸುರಕ್ಷಾ ಅಭಿಯಾನದ ಬೆಂಬಲಕ್ಕಾಗಿ ಬಳಸಿಕೊಳ್ಳುತ್ತಿದ್ದು, ಶೇರ್​ ಮಾಡುತ್ತಿದೆ.

ಟ್ವೀಟ್​ ಲೋಕದಲ್ಲಿ ಸಂಚರಿಸುತ್ತಿರುವ ವಿಡಿಯೋ ಕುರಿತು ಈಗಾಗಲೇ 6,000 ಲೈಕ್ಸ್​ , ಸಾವಿರಾರು ರೀಟ್ವೀಟ್ ಹಾಗೂ ಕಮೆಂಟ್ಸ್​ಗಳು ಹರಿದುಬರುತ್ತಿದೆ.​

ಕಾನೂನು ಪಾಲಿಸುವ ಪ್ರಧಾನಿ ಮಾತ್ರ ಕಾನೂನನ್ನು ಪಾಲಿಸುವ ನಾಗರಿಕರನ್ನು ರಚಿಸಬಹುದು. ನಿಜವಾದ ನಾಯಕ ಎಂದು ಓರ್ವ ಟ್ವಿಟರ್​ ಬಳಕೆದಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾನೆ. (ಏಜೆನ್ಸೀಸ್​)