ಶಸ್ತ್ರ ಕಸಿಯಲು ಬಂದ ಉಗ್ರನ ಹತ್ಯೆಗೈದ ಭಾರತದ ಯೋಧ

ಶ್ರೀನಗರ: ಅನಂತ್​​ನಾಗ್​ ಜಿಲ್ಲೆಯ ಅಚಬಲ್​ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ಯೋಧನ ಮೇಲೆ ದಾಳಿಗೆ ಮುಂದಾದ ಲಷ್ಕರ್​ ಎ ತೊಯ್ಬಾ ಸಂಘಟನೆಯ ಉಗ್ರನನ್ನು ಹೊಡೆದುರುಳಿಸಲಾಗಿದೆ.

ಇಂದು ಮುಂಜಾನೆ ಕರ್ತವ್ಯದಲ್ಲಿದ್ದ ಯೋಧನ ಮೇಲೆ ದಾಳಿಗೆ ಮುಂದಾದ ಉಗ್ರ ಶಸ್ತ್ರಾಸ್ತ್ರಗಳನ್ನು ಕಸಿದುಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಆತನನ್ನು ಕೊಲೆ ಮಾಡಲಾಗಿದೆ. ಯೋಧ ಕೂಡ ಗಾಯಗೊಂಡಿದ್ದು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹತ್ಯೆಯಾದ ಉಗ್ರನನ್ನು ಬಿಲಾಲ್​ ಅಹ್ಮದ್​ ಎಂದು ಗುರುತಿಸಲಾಗಿದ್ದು ಕುಲ್ಗಾಮ್ ಜಿಲ್ಲೆಯವನು. ಈತ ಲಷ್ಕರ್​ ಎ ತೊಯ್ಬಾ ಸೇರಿ ಮೂರು ತಿಂಗಳು ಆಗಿದೆ. ಈ ಮೊದಲು ಕೂಡ ಶಸ್ತ್ರ ಅಪಹರಣ ಪ್ರಕರಣದಲ್ಲಿ ಪಾಲ್ಗೊಂಡಿದ್ದ. ಅಲ್ಲದೆ, ಭದ್ರತಾ ಸಿಬ್ಬಂದಿ, ನಾಗರಿಕರ ಮೇಲಿನ ದಾಳಿಯಲ್ಲೂ ಭಾಗವಹಿಸಿದ್ದ ಎಂದು ಮಾಹಿತಿ ನೀಡಿದ್ದಾರೆ.

ದಾಳಿಯಾದ ಸ್ಥಳದಲ್ಲಿ ಉಗ್ರರು ಬಳಸುತ್ತಿದ್ದ ಎರಡು ಕಾರುಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)