ರಾಷ್ಟ್ರಾದ್ಯಂತ ಸಮೀಕ್ಷೆ ಸಂಚಲನ ಮೂಡಿಸಿದೆ, ಮಹಾಘಟಬಂಧನ್ ನುಚ್ಚುನೂರಾಗಲಿದೆ: ಕೋಟ ಶ್ರೀನಿವಾಸ್​ಪೂಜಾರಿ​

ಉಡುಪಿ: ಮತದಾನೋತ್ತರ ಸಮೀಕ್ಷೆ ರಾಷ್ಟ್ರಾದ್ಯಂತ ಸಂಚಲನ ಮೂಡಿಸಿದೆ. ಲೋಕಸಭಾ ಚುನಾವಣೆಯಲ್ಲಿ 350ಕ್ಕೂ ಅಧಿಕ ಸ್ಥಾನ ಗೆಲ್ಲುವ ನಮ್ಮ ನಿರೀಕ್ಷೆ ನಿಜವಾಗಲಿದೆ. ಕರ್ನಾಟಕದಲ್ಲಿ 22ಕ್ಕೂ ಅಧಿಕ ಸ್ಥಾನ ಗೆಲ್ಲಲಿದ್ದೇವೆ. ದೇಶದಲ್ಲಿ ಮಹಾಘಟಬಂಧನ್ ನುಚ್ಚುನೂರಾಗಲಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಉಡುಪಿಯಲ್ಲಿ ಮಾತನಾಡಿದ ಅವರು, ಮೈತ್ರಿ ಕೂಟದಲ್ಲಿ ಚುನಾವಣೆ ಸಂದರ್ಭದಲ್ಲೇ ಬಿರುಕು ಮೂಡಿದೆ. ಚುನಾವಣೆ ಫಲಿತಾಂಶದ ಬಳಿಕ ಆಂತರಿಕ ಭಿನ್ನಾಭಿಪ್ರಾಯ ಪರಾಕಾಷ್ಟೆಗೆ ತಲುಪಲಿದ್ದು, ರಾಜ್ಯದಲ್ಲಿರುವ ಜೆಡಿಎಸ್​-ಕಾಂಗ್ರೆಸ್​ ಮೈತ್ರಿಕೂಟ ಛಿದ್ರವಾಗಲಿದೆ ಎಂದು ವ್ಯಂಗ್ಯವಾಡಿದರು.

ಮಾಧ್ಯಮಗಳಿಗೆ ಕಡಿವಾಣ ಹಾಕುವುದಾಗಿ ಸಿಎಂ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ತುರ್ತು ಪರಿಸ್ಥಿತಿ ಕಾಲದಲ್ಲೇ ಪತ್ರಿಕಾ ಸ್ವಾತಂತ್ರ್ಯದ ಮೇಲೆ ಕಡಿವಾಣ ಹಾಕಲು ಆಗಿರಲಿಲ್ಲ. ಪ್ರಜಾಪ್ರಭುತ್ವ ಇರುವಂತಹ ರಾಷ್ಟ್ರದಲ್ಲಿ ಇಂತಹಾ ಚಿಲ್ಲರೆ ಆಟಗಳು ನಡೆಯುವುದಿಲ್ಲ ಎಂದರು.

ಮಮತಾ ಬ್ಯಾನರ್ಜಿಗೆ ಈ ದೇಶದ ಮತದಾರರ ಮೇಲೆ ನಂಬಿಕೆಯೇ ಇಲ್ಲ. ಹಾಗಾಗಿ ಮತಯಂತ್ರದ ಮೇಲೂ ನಂಬಿಕೆ ಇಲ್ಲ. ಆದರೆ ಅವರು ಗೆದ್ದರೆ ಎಲ್ಲವೂ ಸರಿ ಇದೆ ಎನ್ನುತ್ತಾರೆ. ಸೋಲಿನ ಭೀತಿಯಿಂದ ಮಮತಾ ಬ್ಯಾನರ್ಜಿಗೆ ಈ ಅಪನಂಬಿಕೆ ಮೂಡಿದೆ. ಇದು ಪ್ರಜಾಪ್ರಭುತ್ವದಲ್ಲಿ ಶೋಭೆ ತರುವುದಿಲ್ಲ ಎಂದು ಟೀಕಿಸಿದರು. (ದಿಗ್ವಿಜಯ ನ್ಯೂಸ್​)