ಅನಿಲ್ ಕುಂಬ್ಳೆ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಲು ಕೊಹ್ಲಿ ಕಾರಣ : ವಿವಿಎಸ್ ಲಕ್ಷ್ಮಣ್

ವಿಶಾಖಪಟ್ಟಣಂ: ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರನ್ನು ಭಾರತ ತಂಡದ ಮುಖ್ಯ ತರಬೇತುದಾರ ಹುದ್ದೆಯಲ್ಲಿ ಮುಂದುವರಿಸುವ ಆಶಯವನ್ನು ಬಿಸಿಸಿಐ ಸಲಹಾ ಸಮಿತಿ ಹೊಂದಿತ್ತು. ಆದರೆ, ನಾಯಕ ವಿರಾಟ್ ಕೊಹ್ಲಿ ಅವರೊಂದಿಗಿನ ಮನಸ್ತಾಪದಿಂದ ಮಾಜಿ ಸ್ಪಿನ್ನರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಎಂದು ಬಿಸಿಸಿಐ ಸಲಹಾ ಸಮಿತಿ ಸದಸ್ಯ ಹಾಗೂ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಬೇಸರ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ನಡೆದಿದ್ದ ಐಸಿಸಿ ಚಾಂಪಿಯನ್ ಟ್ರೋಫಿ ವೇಳೆ ಟೀಂ ಇಂಡಿಯಾದಲ್ಲಿ ನಡೆದಿದ್ದ ಕಹಿ ಘಟನೆಯನ್ನು ಹೊರ ಹಾಕಿದ ಅವರು, ನಾಯಕ ವಿರಾಟ್ ಕೊಹ್ಲಿ ಎಲ್ಲೆ ಮೀರಿದ ಕುರಿತು ನಾವು ಯೋಚನೆ ಮಾಡಿರಲಿಲ್ಲ ಎಂದಿದ್ದಾರೆ.

ವಿಶಾಖಪಟ್ಟಣಂನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಳೆಯ ಘಟನೆಗಳನ್ನು ಮೆಲುಕು ಹಾಕಿದ ಅವರು, ಅನಿಲ್ ಕುಂಬ್ಳೆ ಅವರನ್ನು ತಂಡದ ಮುಖ್ಯ ಕೋಚ್ ಆಗಿ ಮುಂದುವರಿಸಲು ಬಿಸಿಸಿಐ ಸಲಹಾ ಕ್ರಿಕೆಟ್ ಸಮಿತಿ ನಿರ್ಧರಿಸಿತ್ತು. ಆದರೆ, ಅನಿಲ್ ಆಗಲೇ ರಾಜೀನಾಮೆ ನಿರ್ಧಾರ ಪ್ರಕಟಿಸಿ ಟೀಂ ಇಂಡಿಯಾದಿಂದ ಹೊರ ನಡೆದಿದ್ದರು ಎಂದರು.

ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಮಣ್ ಒಳಗೊಂಡ ಬಿಸಿಸಿಐ ಸಲಹಾ ಸಮಿತಿ ಕಳೆದ 2016ರಲ್ಲಿ ಭಾರತ ತಂಡಕ್ಕೆ ಮುಖ್ಯ ತರಬೇತುದಾರ ಹುದ್ದೆಗೆ ಕುಂಬ್ಳೆ ಅವರನ್ನು ಆಯ್ಕೆ ಮಾಡಿತ್ತು. ಅದರಂತೆ ಅನಿಲ್ ಕುಂಬ್ಳೆ ಸಾರಥ್ಯದಲ್ಲಿ ಭಾರತ ತಂಡ ಉತ್ತಮ ಸಾಧನೆ ಮಾಡಿತ್ತು. ಆದರೆ, ನಾಯಕ ವಿರಾಟ್ ಕೊಹ್ಲಿ ಸಾರ್ವಜನಿಕವಾಗಿ ಕುಂಬ್ಳೆ ವಿರುದ್ಧ ಭಿನ್ನಭಿಪ್ರಾಯ ಹೊರಹಾಕಿದ್ದರು. ಈ ಹಿನ್ನೆಲೆಯಲ್ಲಿ ಅನಿಲ್ ಕುಂಬ್ಳೆ ತನ್ನ ತರಬೇತುದಾರ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರನಡೆದಿದ್ದರು. (ಏಜೆನ್ಸೀಸ್)