ಕರ್ನಾಟಕದಿಂದ ಸ್ಪರ್ಧೆ ಮಾಡುವಂತೆ ರಾಹುಲ್​ ಗಾಂಧಿಗೆ ಅಧಿಕೃತ ಆಹ್ವಾನ ನೀಡಿದ ಸಿದ್ದರಾಮಯ್ಯ, ದಿನೇಶ್​

ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಅವರು ಕರ್ನಾಟಕದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವಿಟರ್​ ಮೂಲಕ ಮನವಿ ಮಾಡಿದ್ದಾರೆ.

ಇನ್ನೊಂದೆಡೆ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಅವರು ಮಾಧ್ಯಮಗಳ ಎದುರು ಇದೇ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.

ರಾಹುಲ್​ ಗಾಂಧಿ ಮತ್ತು ಎಐಸಿಸಿಗೆ ಟ್ಯಾಗ್​ ಮಾಡಿ ಇಂದು ಟ್ವೀಟ್​ ಮಾಡಿರುವ ಸಿದ್ದರಾಮಯ್ಯ, ಕರ್ನಾಟಕ ಅನಾದಿ ಕಾಲದಿಂದಲೂ ಕಾಂಗ್ರೆಸ್​ನ ನಾಯಕರನ್ನು ಬೆಂಬಲಿಸಿ ಉತ್ತೇಜಿಸಿದೆ. ಇಂದಿರಾಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ವಿಚಾರದಲ್ಲೂ ಇದು ಸಾಬೀತಾಗಿದೆ. ಆದ್ದರಿಂದ ಮುಂದಿನ ಪ್ರಧಾನಿ ಎಂದು ಬಿಂಬಿತರಾಗುತ್ತಿರುವ ರಾಹುಲ್​ ಗಾಂಧಿ ಅವರು ಕರ್ನಾಟಕದಿಂದ ಸ್ಪರ್ಧೆ ಮಾಡಬೇಕು ಎಂದು ನಾವು ಬಯಸುತ್ತೇವೆ. ಅಭಿವೃದ್ಧಿ ಮಾದರಿಗೆ ಅವರು ರಾಯಭಾರಿಯಾಗಬೇಕು ಎಂದು ನಾವು ಬಯಸುತ್ತೇವೆ ಎಂದು ಅವರು ಟ್ವೀಟ್​ ಮಾಡಿದ್ದಾರೆ.

ಇನ್ನೊಂದೆಡೆ ಚಾಮರಾಜನಗರದಲ್ಲಿ ಮಾತನಾಡಿರುವ ದಿನೇಶ್​ ಗುಂಡೂರಾವ್​, “ರಾಹುಲ್ ಗಾಂಧಿಯವರು ಕೇವಲ ಉತ್ತರ ಭಾರತದಿಂದ ಮಾತ್ರ ಸ್ಪರ್ಧೆ ಮಾಡೋದಲ್ಲ. ದಕ್ಷಿಣ ಭಾರತದಿಂದಲೂ ಸ್ಪರ್ಧೆ ಮಾಡಲಿ. ಅದರಲ್ಲೂ ಕರ್ನಾಟಕದಿಂದಲೇ ಸ್ಪರ್ಧೆ ಮಾಡಲಿ. ಈ ಹಿಂದೆ ಇಂದಿರಾ ಗಾಂಧಿ, ಸೋನಿಯಾ ಗಾಂಧಿಯವರನ್ನು ಕರ್ನಾಟಕ ಆಯ್ಕೆ ಮಾಡಿದೆ. ಈಗ ರಾಹುಲ್ ಗಾಂಧಿಯವರನ್ನು ಆಯ್ಕೆ ಮಾಡಿ ಪ್ರಧಾನ ಮಂತ್ರಿಯನ್ನಾಗಿ ಮಾಡೋಣ,” ಎಂದು ಅವರು ಹೇಳಿದ್ದಾರೆ.

ತುರ್ತು ಪರಿಸ್ಥಿತಿಯ ಬಳಿಕ 1977ರಲ್ಲಿ ನಡೆದ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ ದೇಶಾದ್ಯಂತ ನೆಲಕಚ್ಚಿತ್ತು. ಪಕ್ಷದ ಅಧ್ಯಕ್ಷೆಯಾಗಿದ್ದ ಇಂದಿರಾ ಅವರು ರಾಯ್​ಬರೇಲಿಯಲ್ಲಿ ಸೋತಿದ್ದರು. ಆದರೆ, ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್​ ದೇವರಾಜ ಅರಸರ ನೇತೃತ್ವದಲ್ಲಿ ತ್ರಿವಿಕ್ರಮ ಮೆರೆದಿತ್ತು. ಚಿಕ್ಕಮಗಳೂರು ಕ್ಷೇತ್ರದಲ್ಲಿ ಡಿ.ಬಿ. ಚಂದ್ರೇಗೌಡ ಗೆದ್ದಿದ್ದರು. ಇಂದಿರಾ ಅವರಿಗಾಗಿ ಚಂದ್ರೇಗೌಡರು ಕ್ಷೇತ್ರ ಬಿಟ್ಟುಕೊಟ್ಟರು. ಅವರ ರಾಜೀನಾಮೆಯಿಂದ ತೆರವಾದ ಚಿಕ್ಕಮಗಳೂರು ಕ್ಷೇತ್ರಕ್ಕೆ 1978ರಲ್ಲಿ ಉಪಚುನಾವಣೆ ನಡೆದಿತ್ತು. ಅದರಲ್ಲಿ ಇಂದಿರಾ ಭರ್ಜರಿ ಜಯ ದಾಖಲಿಸಿದ್ದರು.

ಇದಾದ ನಂತರ 1999ರ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಕೆಲ ರಾಜಕೀಯ ಕಾರಣಗಳಿಂದ ಸೋನಿಯಾ ಗಾಂಧಿ ಅವರು ತಮ್ಮ ಸಾಂಪ್ರದಾಯಿಕ ಕ್ಷೇತ್ರ ರಾಯ್​ಬರೇಲಿ ಜತೆಗೇ ಬಳ್ಳಾರಿ ಕ್ಷೇತ್ರದಿಂದಲೂ ಸ್ಪರ್ಧೆ ಮಾಡಿದ್ದರು. ಆ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಅವರು 4,14,650 ಮತ ಪಡೆದು ತಮ್ಮ ಪ್ರತಿಸ್ಪರ್ಧಿ ಸುಷ್ಮಾ ಸ್ವರಾಜ್​ ಅವರನ್ನು 56 ಸಾವಿರ ಮತಗಳ ಅಂತರದಲ್ಲಿ ಸೋಲಿಸಿದ್ದರು. ಅತ್ತ ರಾಯ್​ಬರೇಲಿಯಲ್ಲೂ ಗೆದ್ದಿದ್ದರು.

“ನನ್ನ ಅತ್ತೆಯವರಿಗೆ ಕರ್ನಾಟದಕದೊಂದಿಗೆ ಆತ್ಮೀಯ ನಂಟಿತ್ತು. ಆ ಕಾರಣಕ್ಕಾಗಿಯೇ ನಾನು ಕರ್ನಾಟಕದಿಂದ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ,” ಎಂದು ಸೋನಿಯಾ ಗಾಂಧಿ ಹೇಳಿಕೊಂಡಿದ್ದರು. ಚುನಾವಣೆ ನಂತರ ಅವರು ರಾಯ್​ಬರೇಲಿಯನ್ನು ಉಳಿಸಿಕೊಂಡು ಬಳ್ಳಾರಿಗೆ ರಾಜೀನಾಮೆ ನೀಡಿದ್ದರು.