ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
‘‘ಹೊಲಸು ನೀರಿನೊಂದಿಗೆ ಪ್ಲಾಸ್ಟಿಕ್, ಕಸ ಕಡ್ಡಿ, ಮನೆಯೊಳಗೆ ಸೇರಿಕೊಂಡಿದ್ದವು. ರಾತ್ರಿಯಿಂದ ಬೆಳಗ್ಗೆಯವರೆಗೆ ನಿದ್ರೆಗೆಟ್ಟು ಮನೆ ಕ್ಲೀನ್ ಮಾಡಿದ್ದೇವೆ. ನೆಲದಡಿಯ ನೀರಿನ ಟ್ಯಾಂಕ್ನಲ್ಲೂ ಮಳೆ ನೀರು ಸೇರಿಕೊಂಡು ಕುಡಿಯಲು ನೀರಿಲ್ಲ.’’
ಬುಧವಾರ ರಾತ್ರಿ ಸುರಿದ ರಭಸದ ಮಳೆಯಿಂದ ಮನೆಯೊಳಗೆ ನೀರು ನುಗ್ಗಿದ ಪರಿಣಾಮ ನಗರದ ನಿವಾಸಿಗಳು ಅನುಭವಿಸಿದ ಗೋಳು ಇದು.
ಹುಬ್ಬಳ್ಳಿಯ ಗಣೇಶನಗರ, ಮಾರುತಿನಗರ, ಜಗದೀಶನಗರ, ಕೇತೇಶ್ವರ ಕಾಲನಿ, ಹಳೇ ಹುಬ್ಬಳ್ಳಿ ಮೇದಾರ ಓಣಿ, ಇನ್ನಿತರ ಕಡೆ 300ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದವು. ಈ ಮನೆಯಲ್ಲಿಯ ಜನರು ಬುಧವಾರ ರಾತ್ರಿಯಿಂದ ಗುರುವಾರ ಬೆಳಗ್ಗೆಯವರೆಗೆ ಜಾಗರಣೆ ಮಾಡಿದ್ದಾರೆ. ‘ಮೊಣಕಾಲು ತನಕ ನೀರು ನಿಂತಿದ್ದವು. ಮನೆಯಲ್ಲಿ ನೀರು ನುಗ್ಗಿದಾಗ ಕರೆಂಟ್ ಸಹ ಹೋಗಿತ್ತು. ರಾತ್ರಿ ಮೂರು ಗಂಟೆಗೆ ಮಳೆಯ ನೀರು ಕಡಿಮೆಯಾಗಿದೆ. ಆದಾದ ಮೇಲೆಯೇ ಮನೆ ಕ್ಲೀನ್ ಮಾಡಿದ್ದೇವೆ’ ಎಂದು ಕೇತೇಶ್ವರ ಕಾಲನಿಯ ಯಲ್ಲಮ್ಮ ಹೇಳಿದರು.
ಕೇತೇಶ್ವರ ಕಾಲನಿ, ಜಗದೀಶ ನಗರದಲ್ಲಿ ನೂರಾರು ಮನೆಗಳಿದ್ದರು. ಬಡಾವಣೆಯಲ್ಲಿ ಬಹುತೇಕ ಎಲ್ಲಿಯೂ ಗಟಾರ ಇಲ್ಲ. ಮೇಲ್ಭಾಗ ಪ್ರಶಾಂತ ಕಾಲನಿಯಿಂದ ಮಳೆ ನೀರು, ನಾಲಾ ನೀರು ಹರಿದು ಬಂದು ಮನೆಗಳಿಗೆ ನುಗ್ಗಿವೆ. ‘ಮನೆಯೊಳಗೆ ನೀರು ನುಗ್ಗಿದ್ದರಿಂದ ರಾತ್ರಿಯೀಡಿ ನಿದ್ರೆ ಮಾಡಿಲ್ಲ. ಚಿಕ್ಕ ಮಕ್ಕಳನ್ನು ಜೋಲಿಯಲ್ಲಿ ಮಲಗಿಸಿದ್ದೇವೆ’ ಎಂದು ಜಗದೀಶ ನಗರದ ಅನಿತಾ ಪಾಂಚಣ ಎಂದರು.
‘ಮಳೆಯ ನೀರಿನ ಜತೆ ಸಗಣಿ, ಸಂಡಾಸ್ ಮನೆಯೊಳಗೆ ಬಂದಿದ್ದವು. ಕ್ಲೀನ್ ಮಾಡಲು ನೀರಿನ ವ್ಯವಸ್ಥೆಯೇ ಇಲ್ಲ. ನಾಲಾ ತಡೆಗೋಡೆ ಎತ್ತರಿಸಿದ್ದರೆ ಈ ಸಮಸ್ಯೆ ಆಗುತ್ತಿರಲಿಲ್ಲ. ನಾಲಾ ತುಂಬಿ ರಸ್ತೆ ದಾಟಿ ಮನೆಯೊಳಗೆ ನೀರು ಬಂದವು. ನಾಲಾ ತಡೆಗೋಡೆ ಎತ್ತರಿಸಲು ಕೇಳಿಕೊಂಡರೂ ಪಾಲಿಕೆಯವರು ಏನೂ ಮಾಡಿಲ್ಲ’ ಎಂದು ಹಳೇ ಹುಬ್ಬಳ್ಳಿ ಮೇದಾರ ಓಣಿ ನಿವಾಸಿ ಚೈತ್ರಾ ಕಲಾಲ, ಸೈನಾಜ್ ಮಕಾಂನದಾರ ದೂರಿದರು.
ಗಟಾರ ಮೇಲೆ ಮನೆ
ಹೆಗ್ಗೇರಿ ಮಾರುತಿನಗರದಲ್ಲೂ ಮನೆಯೊಳಗೆ ನೀರು ನುಗ್ಗಿದ್ದವು. ಇದು ಸ್ಲಮ್ ಪ್ರದೇಶವಾಗಿದ್ದು ಕಿರಿದಾದ ರಸ್ತೆಯಲ್ಲಿ ಚಿಕ್ಕ ಚಿಕ್ಕ ಮನೆಗಳಿವೆ. ಮನೆ ವ್ಯವಸ್ಥಿತವಾಗಿದ್ದರೂ ಗಟಾರ ಮುಚ್ಚಿ ಹೋಗಿದೆ. ಕೆಲವರು ದೊಡ್ಡ ಗಟಾರ ಮೇಲೆ ಮನೆ ಕಟ್ಟಿಕೊಂಡಿದ್ದಾರೆ. ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ ಗುರುವಾರ ಮಧ್ಯಾಹ್ನ ಸ್ಥಳಕ್ಕೆ ಭೇಟಿ ನೀಡಿದಾಗ ಸ್ಥಳೀಯರು ಗಟಾರ ಮೇಲಿನ ಮನೆ ಕೆಡವಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಪಾಲಿಕೆ ಸದಸ್ಯ ಚೇತನ ಹಿರೇಕೆರೂರ ಇದ್ದರು.