17 ನಿಮಿಷದಲ್ಲಿ ಬಾಬ್ರಿ ಮಸೀದಿ ಕೆಡವಿದೆವು, ರಾಮ ಮಂದಿರಕ್ಕಾಗಿ ಕಾನೂನು ತರಲು ಎಷ್ಟು ಸಮಯ ಬೇಕು?

ನವದೆಹಲಿ: ವಿವಾದಿತ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವ ವಿಚಾರವಾಗಿ ಶಿವಸೇನೆ ಇಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ. ” ಬಾಬ್ರಿ ಮಸೀದಿಯನ್ನು ನಾವು 17 ನಿಮಿಷಗಳಲ್ಲಿ ಧ್ವಂಸ ಮಾಡಿದೆವು. ಮಂದಿರ ನಿರ್ಮಾಣಕ್ಕಾಗಿ ಕಾನೂನು ಜಾರಿಗೆ ತರಲು ಬಿಜೆಪಿಗೆ ಎಷ್ಟು ಸಮಯ ಬೇಕು,” ಎಂದು ಶಿವಸೇನೆಯ ನಾಯಕ ಸಂಜಯ್​ ರಾವತ್​ ಪ್ರಶ್ನೆ ಮಾಡಿದ್ದಾರೆ.

ಇದೇ ವೇಳೆ ಮಂದಿರ ನಿರ್ಮಾಣ ವಿರೋಧಿಸುವವರ ವಿರುದ್ಧ ಕಿಡಿ ಕಾರಿರುವ ರಾವತ್​, ” ರಾಮ ಮಂದಿರದ ವಿರುದ್ಧ ಇರುವವರು ಈ ದೇಶದಲ್ಲಿ ಸ್ವತಂತ್ರವಾಗಿ ಓಡಾಡಿಕೊಂಡಿರಲು ಸಾಧ್ಯವಿಲ್ಲ,” ಎಂದೂ ಎಚ್ಚರಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, “ಅಲ್ಲಿದ್ದ ಬಾಬ್ರಿ ಮಸೀದಿಯನ್ನು ನಾವು 17 ನಿಮಿಷದಲ್ಲಿ ಒಡೆದು ಹಾಕಿದೆವು. ಅಲ್ಲಿ ಹಲವು ವರ್ಷಗಳಿಂದಲೂ ಇದ್ದ ದೋಷಗಳನ್ನು ರಾಮನ ಭಕ್ತರು ನಿಮಿಷಾರ್ಧದಲ್ಲಿ ತೊಡೆದು ಹಾಕಿದರು. ಆದರೆ, ಕಾನೂನು ಬರೆಯಲು ಎಷ್ಟು ಸಮಯ ಬೇಕು. ರಾಷ್ಟ್ರಪತಿ ಭವನದಿಂದ ಹಿಡಿದು ಉತ್ತರ ಪ್ರದೇಶದ ವರೆಗೆ ಬಿಜೆಪಿ ಸರ್ಕಾರ ಇದೆ. ಸುಗ್ರೀವಾಜ್ಞೆ ತರಲು ಬಿಜೆಪಿಗೆ ಇನ್ನೇನು ಬೇಕು,” ಎಂದು ಅವರು ಪ್ರಶ್ನಿಸಿದ್ದಾರೆ.

ರಾಮ ಮಂದಿರ ನಿರ್ಮಾಣದ ವಿಚಾರದಲ್ಲಿ ಸುಗ್ರೀವಾಜ್ಞೆ ಜಾರಿಗೆ ತರುವಂತೆ ಕೇಂದ್ರದ ಬಿಜೆಪಿ ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ವಿಶ್ವ ಹಿಂದುಪರಿಷತ್​ ಸೇರಿದಂತೆ ಹಲವು ಹಿಂದು ಸಂಘಟನೆಗಳು ಅಯೋಧ್ಯೆಯಲ್ಲಿ ಬೃಹತ್​ ಪ್ರತಿಭಟನೆ ಹಮ್ಮಿಕೊಂಡಿವೆ. ಇದಕ್ಕೆ ಪೂರಕವಾಗಿ ರಾವತ್​ ಅವರು ಈ ಹೇಳಿ ನೀಡಿದ್ದಾರೆ.

ಇನ್ನೊಂದೆಡೆ ರಾಮ ಮಂದಿರಕ್ಕಾಗಿ ಸುಗ್ರೀವಾಜ್ಞೆ ಜಾರಿಗೆ ತರುವ ವಿಚಾರವಾಗಿ ಬಿಜೆಪಿ ಮೇಲೆ ಹೇರುತ್ತಿರುವ ಒತ್ತಡದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿಯ ನಾಯಕ ಮುರಳಿ ಮನೋಹರ ಜೋಷಿ, ” ಸಮಾಜದಲ್ಲಿ ಬಹಳಷ್ಟು ಬೇಡಿಕೆಗಳಿವೆ. ಅದರಲ್ಲಿ ರಾಮ ಮಂದಿರವೂ ಒಂದು. ಅದರಲ್ಲಿ ಯಾವುದೇ ಸಮಸ್ಯೆ ಕಾಣಿಸುತ್ತಿಲ್ಲ, ” ಎಂದಿದ್ದಾರೆ.

ಎನ್​ಡಿಎ ಮೈತ್ರಿಕೂಟದಲ್ಲಿರುವ ಶಿವಸೇನೆ, ಮಹಾರಾಷ್ಟ್ರ ಸರ್ಕಾರದಲ್ಲಿ ಪಾಲುದಾರ ಪಕ್ಷವೂ ಹೌದು. ಇದರ ಜತೆಗೆ ಬಿಜೆಪಿಯ ಪ್ರಬಲ ಟೀಕಾಕಾರ ಪಕ್ಷವೂ ಸಹ. ರಾಮ ಮಂದಿರ ವಿಚಾರದಲ್ಲಿ ಶಿವಸೇನೆ ಹಲವು ಬಾರಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ.