ತಜ್ಞರ ಒಪ್ಪಿಗೆ ಇಲ್ಲದೇ ನಿರ್ಧಾರ ಮಾಡ್ತೀವಾ? ಕಾವೇರಿ ಮಾತೆಯ ಪ್ರತಿಮೆ ನಿರ್ಮಾಣ ಮಾಡಿಯೇ ಸಿದ್ಧ

ಮೇಲುಕೋಟೆ (ಮಂಡ್ಯ): ತಜ್ಞರ ಒಪ್ಪಿಗೆ ಇಲ್ಲದೇ ನಾವೂ ಯಾವ ನಿರ್ಧಾರಕ್ಕೂ ಬಂದಿಲ್ಲ. ಕಾವೇರಿಯ ಪ್ರತಿಮೆ ನಿರ್ಮಾಣ ಮಾಡಲು ವಿರೋಧಿಸುತ್ತಿರುವವರು ಸೂಚಿಸಿದ ತಜ್ಞರ ಮೂಲಕವೇ ಸಲಹೆ ಪಡೆದು ಮುಂದಿನ ಹೆಜ್ಜೆ ಇಡುತ್ತೇವೆ. ಕಾವೇರಿ ಮಾತೆಯ ಪ್ರತಿಮೆ ನಿರ್ಮಾಣವನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಸಿ.ಎಸ್​ ಪುಟ್ಟರಾಜು ಸ್ಪಷ್ಟಪಡಿಸಿದ್ದಾರೆ.

ಮಂಡ್ಯದ ಕೆ.ಆರ್​.ಎಸ್​ ಜಲಾಶಯದ ಬಳಿ ನಿರ್ಮಿಸಲು ಉದ್ದೇಶಿಸಿರುವ ಡಿಸ್ನಿಲ್ಯಾಂಡ್​ ಮತ್ತು ಕಾವೇರಿ ಮಾತೆಯ ಎತ್ತರದ ಪ್ರತಿಮೆ ನಿರ್ಮಾಣದ ವಿಚಾರದಲ್ಲಿ ಕೇಳಿ ಬಂದಿರುವ ವಿರೋಧದ ಹಿನ್ನೆಲೆಯಲ್ಲಿ ಇಂದು ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವ ಸಿ.ಎಸ್​ ಪುಟ್ಟರಾಜು, 30 ಅಡಿ ಗುಂಡಿ ತೋಡಿ ಕಾವೇರಿ ಪ್ರತಿಮೆ ನಿಲ್ಲಿಸುವುದು ದೊಡ್ಡ ವಿಚಾರವಲ್ಲ. ಇಂದು ವೈಜ್ಞಾನಿಕ ಜಗತ್ತಿನಲ್ಲಿ ಅನೇಕ ತಂತ್ರಜ್ಞಾನಗಳು ಬಂದಿವೆ. ಬೇಕಿದ್ದರೆ, ಯೋಜನೆ ವಿರೋಧಿಸುತ್ತಿರುವವರೇ ಸೂಚಿಸುವ ತಜ್ಞರನ್ನು ಮುಂದಿಟ್ಟಕೊಂಡು ಒಂದು ತೀರ್ಮಾನಕ್ಕೆ ಬರೋಣ,” ಎಂದು ಅವರು ಹೇಳಿದರು.

“ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಬೃಂದಾವನ ಅಭಿವೃದ್ಧಿಯಾದರೆ ಸಾವಿರಾರು ಜನರಿಗೆ ಕೆಲಸ ಸಿಗುವುದಿಲ್ಲವೇ? ನಾನು ಮುಖ್ಯಮಂತ್ರಿಗಳು ಮಾತ್ರ ಈ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವೇ? ತಜ್ಞರ‌ ಸಲಹೆಯಂತೇ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಬೃಂದಾವನ ಅಭಿವೃದ್ಧಿ ಮಾಡುವ ನಿರ್ಧಾರಕ್ಕೆ ಬರಲಾಗಿದೆ. ಈ ಯೋಜನೆಗೆ ರೈತರ ಜಮೀನು ವಶಪಡಿಸಿಕೊಳ್ಳುವ ಪ್ರಶ್ನೆ ಇಲ್ಲ,” ಎಂದೂ ಅವರು ತಿಳಿಸಿದರು.

ಬೇಕಿದ್ದರೆ ನನ್ನ ಜಮೀನು ಬರೆದುಕೊಡುತ್ತೇನೆ

“ಕೆಆರ್‌ಎಸ್ ಸುತ್ತ ಮುತ್ತ ಸರ್ಕಾರದ 300 ಎಕರೆ ಜಮೀನಿದೆ. ಆ ಭಾಗದಲ್ಲಿ ನನ್ನ ಕುಟುಂಬದ 10ಎಕರೆ ಜಮೀನೂ ಇದೆ. ಅಗತ್ಯ ಬಿದ್ದರೆ ನಾನು ಜಮೀನು ಕೊಡುತ್ತೇನೆ. ಸಚಿವ ಎಂದು ಜಮೀನು ಕೊಡದೇ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಬೆಂಗಳೂರು ಮೈಸೂರು ಹೆದ್ದಾರಿಗೆ ರೈತರೇ ಸ್ವಇಚ್ಛೆಯಿಂದ ಜಮೀನು ನೀಡಿದ್ದರು. ಹಾಗೇ ನಾನೂ ಜಮೀನು ಬರೆದುಕೊಡುತ್ತೇನೆ,” ಎಂದರು.

ಅಲ್ಲದೆ, ಯಾರೇ ವಿರೋಧ ವ್ಯಕ್ತಪಡಿಸಿದರೂ ಈ ಯೋಜನೆಯನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.