ಮಲೇಬೆನ್ನೂರು: ಗುರುಗಳ ಆದೇಶ ಉಲ್ಲಂಘಿಸುವ ಮಾತು ಸಿರಿಗೆರೆ ಮಠದ ಪರಂಪರೆಯಲ್ಲಿ ಎಂದಿಗೂ ಇಲ್ಲ. ಅಂತಹ ಮಠದ ಪರಂಪರೆಗೆ ಚ್ಯುತಿ ಬರದಂತೆ ಭಕ್ತರು ನಡೆದುಕೊಳ್ಳಬೇಕು ಎಂದು ತರಳಬಾಳು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಿರಿಗೆರೆಯಲ್ಲಿ 24 ರಂದು ಜರುಗುವ ಲಿಂ. ಶಿವಕುಮಾರ ಶ್ರೀಗಳ 32 ನೇ ಶ್ರದ್ಧಾಂಜಲಿ ದಾಸೋಹಕ್ಕೆ ಯಲವಟ್ಟಿ ಗ್ರಾಮದಲ್ಲಿ ಶನಿವಾರ ಹರಿಹರ ತಾಲೂಕು ಸಾಧು ಲಿಂಗಾಯತ ಸಮಾಜದಿಂದ ಹಮ್ಮಿಕೊಂಡಿದ್ದ ಭಕ್ತಿ ಸಮರ್ಪಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ನಮ್ಮ ಮಠದಲ್ಲಿ ಏನೇ ತೀರ್ಮಾನ ಮಾಡಿದರೂ ಅದು ಭಕ್ತರ ಹಿತಕ್ಕಾಗಿ. ರಾಜಕೀಯ ಕಾರಣಕ್ಕಾಗಿ ಹಿರಿಯ ಗುರುಗಳ ಮೇಲೂ ಆರೋಪ ಬಂದಿತ್ತು. ಈಗ ನಮ್ಮ ಮೇಲೂ ಬಂದಿದೆ. ಗುರುಗಳ ಮೇಲಿನ ಆರೋಪಕ್ಕೆ ಹೋಲಿಸಿದರೆ ನಮ್ಮದು ಗುಲಗಂಜಿಯಷ್ಟು. ಈ ಬಗ್ಗೆ ಭಕ್ತರು ಗೊಂದಲ, ಆತಂಕಕ್ಕೆ ಒಳಗಾಗಬೇಕಿಲ್ಲ ಎಂದರು.
ದಾವಣಗೆರೆಯಲ್ಲಿ ನಮ್ಮ ವಿರುದ್ಧ ನಡೆಸಿದ ಸಭೆಯಿಂದ ಮನನೊಂದ ಭಕ್ತರು ತಾವೇ ತಾವಾಗಿ ಸಿರಿಗೆರೆಗೆ ಬಂದು ನಮಗೆ ಭಕ್ತಿ-ಭಾವ ತೋರಿಸಿದ್ದಾರೆ. ನಾವು ಮಠಕ್ಕೆ ಬಂದಾಗಿನಿಂದ ಇಲ್ಲಿವರೆಗೆ 8 ಕೋಟಿ ರೂ. ಪಾದ ಕಾಣಿಕೆ ಬಂದಿದ್ದು, ಅದರಲ್ಲಿ 25 ಲಕ್ಷ ರೂ. ಗಳನ್ನು ನಮಗೆ ಚಿಕಿತ್ಸೆ ನೀಡಿದ ಸ್ಪರ್ಶ ಆಸ್ಪತ್ರೆಗೆ ನೀಡಿದ್ದೇವೆ. ಕೆಲವರು ಇದಕ್ಕೆ ಬೇರೆ ರೀತಿ ಅರ್ಥ ಕಲ್ಪಿಸಿ, ಅಪಪ್ರಚಾರ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಕೋರ್ಟಿಗೂ ಹೋಗಿದ್ದಾರೆ. ಸಿರಿಗೆರೆ ಮಠಕ್ಕೆ ಕೋರ್ಟ್ ಹೊಸದೇನೂ ಅಲ್ಲ. ಸತ್ಯಕ್ಕಾಗಿ ಮಠ ಮೊದಲಿನಿಂದಲೂ ಹೋರಾಟ ಮಾಡಿ ಗೆದ್ದಿದೆ. ಈಗಲೂ ಸತ್ಯ ಗೆಲ್ಲುವ ಸಂಪೂರ್ಣ ವಿಶ್ವಾಸ ನಮಗಿದೆ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಯಲವಟ್ಟಿ ಗುರುಸಿದ್ಧಾಶ್ರಮದ ಶ್ರೀ ಯೋಗಾನಂದ ಸ್ವಾಮೀಜಿ ಮಾತನಾಡಿ, ತುಂಗಭದ್ರಾ ನದಿಯಿಂದ ನೂರಾರು ಕಿ.ಮೀ. ದೂರ ನೀರನ್ನು ತೆಗೆದುಕೊಂಡು ಹೋಗಿ ಅನೇಕ ಕೆರೆ-ಕಟ್ಟೆ ತುಂಬಿಸುವ ಮೂಲಕ ಎಲ್ಲ ವರ್ಗಗಳ ಜನರಿಗೆ ನೆರವಾದ ಸಿರಿಗೆರೆ ಶ್ರೀಗಳು ಆಧುನಿಕ ಭಗೀರಥರು ಎಂದು ಬಣ್ಣಿಸಿದರು.
ಶಾಸಕ ಹರೀಶ್, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಹನಗವಾಡಿ ವೀರೇಶ್, ಅಧ್ಯಕ್ಷ ಅಮರಾವತಿ ಮಹಾದೇವಪ್ಪ ಗೌಡ, ತಾಲೂಕು ಸಾಧು ವೀರಶೈವ ಸಮಾಜದ ಕಾರ್ಯದರ್ಶಿ ಇಟಗಿ ಶಿವಣ್ಣ, ಗ್ರಾಮದ ಡಿ. ರಾಜಪ್ಪ ಮಾತನಾಡಿದರು.
ಸಮಾಜದ ಉಪಾಧ್ಯಕ್ಷ ಹಲಸಬಾಳು ಶಿವಾನಂದಪ್ಪ, ರತ್ನಮ್ಮ, ಡಿ.ಎಚ್. ಚನ್ನಬಸಪ್ಪ, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಸಿರಿಗೆರೆ ರಾಜಣ್ಣ, ಯಕ್ಕನಹಳ್ಳಿ ಬಸವರಾಜಪ್ಪ, ತಳಸದ ಬಸವರಾಜ್, ನಿಟ್ಟೂರಿನ ಬಿ.ಜಿ. ಧನಂಜಯ, ಗ್ರಾಮದ ಡಿ.ಎಚ್. ಮಹೇಂದ್ರಪ್ಪ, ಡಿ.ಎಚ್. ಚನ್ನಬಸಪ್ಪ, ಗುತ್ತಿಗೆದಾರ ಡಿ.ಜಿ. ರಾಜೇಶ್‌ಗೌಡ, ಬಿ. ಸಿದ್ದೇಶ್ ಇದ್ದರು.