ನಾವು ಸರ್ಕಾರ ಅಸ್ಥಿರಗೊಳಿಸಲ್ಲ

ಬೆಂಗಳೂರು: ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತು ಕೆಲಸ ಮಾಡುತ್ತೇವೆ. ನಮ್ಮಿಂದ ಮೈತ್ರಿ ಸರ್ಕಾರ ಅಸ್ಥಿರಗೊಳ್ಳುವುದಿಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ವಿಧಾನಸಭಾ ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ಡಾಲರ್ಸ್ ಕಾಲನಿ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ನಮ್ಮ ಶಾಸಕರು ವಾಪಸಾಗಿದ್ದಾರೆ. ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರಿಗೆ ಆತಂಕ ಬೇಡ. ಬರ ಅಧ್ಯಯನ ಪ್ರವಾಸಕ್ಕೆ ಯೋಜನೆ ರೂಪಿಸಲಾಗಿದ್ದು, ಪ್ರತಿಪಕ್ಷ ಸ್ಥಾನದಲ್ಲಿ ಕುಳಿತು ಕಾರ್ಯ ಮಾಡುತ್ತೇವೆ ಎಂದಿದ್ದಾರೆ.

ಬಿಜೆಪಿಯಿಂದ ರಾಜ್ಯಪಾಲರ ಭೇಟಿ?: ರಾಜ್ಯ ಸರ್ಕಾರದ ಪಾಲುದಾರ ಪಕ್ಷದಲ್ಲಿ ಭಿನ್ನಮತ ಇದೆ, ಸರ್ಕಾರದ ಕುರಿತು ಅಸಮಧಾನವಿದೆ ಎಂದು ದೃಢಪಟ್ಟಿರುವ ಕಾರಣ ರಾಜ್ಯಪಾಲರ ಅಂಗಳಕ್ಕೆ ವಿಚಾರವನ್ನು ಕೊಂಡೊಯ್ಯಬಹುದು ಎಂಬ ಚರ್ಚೆಗಳು ಬಿಜೆಪಿ ಪಾಳಯದಲ್ಲಿ ಕೇಳಿಬರುತ್ತಿವೆ.

ರಾಜ್ಯ ಸರ್ಕಾರ ಅತಂತ್ರವಾಗಿದೆ ಎಂದು ರಾಜ್ಯಪಾಲರ ಗಮನಕ್ಕೆ ತರಬೇಕು ಎಂಬುದು ಕೆಲವರ ವಾದವಾದರೆ, ಕನಿಷ್ಠ ಏಳೆಂಟು ಶಾಸಕರು ರಾಜೀನಾಮೆ ನೀಡದೆ ಹಾಗೆ ಹೇಳುವುದು ಸಾಧ್ಯವೇ ಎಂಬ ಅನುಮಾನವನ್ನೂ ಕೆಲವರು ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಬಿಜೆಪಿ ವಿಧಾನಪರಿಷತ್ ಸದಸ್ಯ ಲೆಹರ್ ಸಿಂಗ್ ಪತ್ರಿಕಾ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಂದಾಗಿ ಆಡಳಿತ ಕುಸಿದಿದೆ ಎಂಬುದು ಸಾಬೀತಾಗಿದೆ. ಸರ್ಕಾರ ನಡೆಸಬೇಕಾದವರು ಐಷಾರಾಮಿ ಹೋಟೆಲ್​ನಲ್ಲಿರುವುದು ಜನರಲ್ಲಿ ಹತಾಶೆ ಮೂಡಿಸಿದೆ. ರಾಜ್ಯಪಾಲರು ಮಧ್ಯಪ್ರವೇಶಿಸಿ ಆಡಳಿತ ಸಹಜ ಸ್ಥಿತಿಗೆ ಮರಳುವಂತೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್, ಬೆಳವಣಿಗೆ ಆಧರಿಸಿ ರಾಜ್ಯಪಾಲರ ಭೇಟಿ ನಿರ್ಧಾರ ಮಾಡುತ್ತೇವೆ. ಸದ್ಯಕ್ಕೆ ಭೇಟಿ ದಿನಾಂಕ ನಿರ್ಧಾರವಾಗಿಲ್ಲ. ಕಾದುನೋಡುವ ತಂತ್ರ ಅನುಸರಿಸುತ್ತಿದ್ದೇವೆ ಎಂದಿದ್ದಾರೆ.

ಪಕ್ಷದ ಹಿತೈಷಿಗಳ ರೆಸಾರ್ಟ್: ಗುರುಗ್ರಾಮದಲ್ಲಿ ಬಿಜೆಪಿ ಶಾಸಕರ ವಾಸ್ತವ್ಯಕ್ಕೆ ಹಣ ವೆಚ್ಚವಾಗಿಲ್ಲ ಎಂದಿರುವ ಎನ್. ರವಿಕುಮಾರ್, ಅದು ಪಕ್ಷದ ಹಿತೈಷಿಗಳ ರೆಸಾರ್ಟ್. ಅವರಿಂದ ಸಾಕಷ್ಟು ಸಹಾಯವಾಗಿದೆ ಎಂದಿದ್ದಾರೆ.