ಪ್ರಜ್ಞಾ ಸಿಂಗ್​ ಹೇಳಿಕೆ ಸಹಿಸಲಾಗದು ಎಂದ್ರು ಸಿಎಂ ನಿತೀಶ್​ ಕುಮಾರ್​: ಮುಖ್ಯಮಂತ್ರಿ ರಾಜೀನಾಮೆ ನೀಡಬೇಕಿತ್ತು ಎಂದ್ರು ರಾಬ್ಡಿ ದೇವಿ

ಪಾಟ್ನಾ: ನಾಥುರಾಮ್​ ಗೋಡ್ಸೆ ಓರ್ವ ದೇಶಭಕ್ತ ಎಂದು ಹೇಳಿರುವ ಭೋಪಾಲ್​ ಲೋಕಸಭಾ ಕ್ಷೇತ್ರದ ಬಿಜೆಪಿ ಪ್ರಜ್ಞಾ ಸಿಂಗ್​ ಠಾಕೂರ್​ ವಿರುದ್ಧ ಈಗಾಗಲೇ ಹಲವರು ತಿರುಗಿಬಿದ್ದಿದ್ದಾರೆ. ವಿರೋಧ ಪಕ್ಷಗಳು ಇರಲಿ, ಸ್ವತಃ ಬಿಜೆಪಿಯೇ ಆ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದ್ದಲ್ಲದೆ, ಮೋದಿಯವರೂ ಕೂಡ ಯಾವ ಕಾರಣಕ್ಕೂ ಪ್ರಜ್ಞಾರನ್ನು ಕ್ಷಮಿಸುವುದಿಲ್ಲ ಎಂದಿದ್ದಾರೆ.

ಈಗ ಬಿಜೆಪಿ ಮೈತ್ರಿ ಪಕ್ಷ ಜೆಡಿ(ಯು)ಮುಖಂಡ, ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್​ ಕೂಡ ಪ್ರಜ್ಞಾ ಸಿಂಗ್​ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದು, ಗೋಡ್ಸೆ ವಿಚಾರದಲ್ಲಿ ಪ್ರಜ್ಞಾ ಅವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಆದರೆ, ಪಕ್ಷದಿಂದ ಅವರನ್ನು ಉಚ್ಚಾಟನೆ ಮಾಡುವುದು, ಬಿಡುವುದು ಬಿಜೆಪಿಯ ಆಂತರಿಕ ವಿಚಾರ. ನಾವೂ ಕೂಡ ಇಂಥ ಮಾತುಗಳನ್ನು ಸಹಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

ಮತ್ತೆ ಕೇಂದ್ರದಲ್ಲಿ ಪ್ರಧಾನಿ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ರಚನೆ ಮಾಡಲಿದೆ ಎಂದು ಭರವಸೆ ವ್ಯಕ್ತಪಡಿಸಿದ ಅವರು, ನಾನು ನನ್ನ ಅಭಿವೃದ್ಧಿ ಕೆಲಸಗಳ ಆಧಾರದ ಮೇಲೆ ಈ ಚುನಾವಣೆ ಎದುರಿಸಿದ್ದೇನೆ ಎಂದು ತಿಳಿಸಿದರು.

ಹಾಗೇ ಚುನಾವಣೆಯನ್ನು ಎರಡರಿಂದ ಮೂರು ಹಂತದ ಮತದಾನದಲ್ಲಿ ಮಾಡಬೇಕು. ಇಷ್ಟು ಸುದೀರ್ಘ ಹಂತದ ಮತದಾನ ಇರಬಾರದು. ಆಗ ಜನರಿಗೂ ಅನುಕೂಲವಾಗುತ್ತದೆ. ನಿಜಹೇಳಬೇಕೆಂದರೆ ಒಂದೇ ಹಂತದಲ್ಲಿ ಚುನಾವಣೆ ಮುಗಿದುಹೋಗಬೇಕು. ಆದರೆ, ನಮ್ಮದು ದೊಡ್ಡ ದೇಶವಾಗಿದ್ದರಿಂದ ಎರಡರಿಂದ ಮೂರು ಹಂತದಲ್ಲಿ ಮಾಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ನಿತೀಶ್​ ಕುಮಾರ್ ರಾಜೀನಾಮೆ ನೀಡಬೇಕಿತ್ತು

ಬಿಜೆಪಿ ಪ್ರಜ್ಞಾ ಸಿಂಗ್​ ಠಾಕೂರ್​ ಹೇಳಿಕೆ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ನಿತೀಶ್​ ಕುಮಾರ್​ ಬಿಜೆಪಿಯನ್ನು ವಿರೋಧಿಸುತ್ತಿದ್ದಾರೆ. ಅಂದಮೇಲೆ ಅವರು ಆ ಪಕ್ಷದಿಂದ ಹೊರಬಂದು ರಾಜೀನಾಮೆ ನೀಡಿದ್ದರೆ ಒಳ್ಳೆಯದರಿತ್ತು ಎಂದು ಆರ್​ಜೆಡಿ ನಾಯಕಿ ರಾಬ್ಡಿ ದೇವಿ ಹೇಳಿದ್ದಾರೆ.

ಪ್ರಜ್ಞಾ ಸಿಂಗ್​ ಹೇಳಿಕೆಯಿಂದ ನಿತೀಶ್​ಕುಮಾರ್​ಗೆ ನೋವಾಗಿದ್ದರೆ ಅವರು ಕೂಡಲೇ ಆ ಪಕ್ಷದೊಂದಿಗೆ ಮಾಡಿಕೊಂಡಿರುವ ಮೈತ್ರಿಯಿಂದ ಹೊರಬರಬೇಕಿತ್ತು. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು ಎಂದಿದ್ದಾರೆ.

ನಾವು 40ಕ್ಕೆ 40 ಸೀಟುಗಳನ್ನೂ ಗೆಲ್ಲುತ್ತೇವೆ. ಮಹಾಘಟ​ಬಂಧನ್​ಗೆ ಯಾವುದೇ ಆತಂಕವಿಲ್ಲ. ಮೇ 23ರ ನಂತರ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಹೇಳಿದ್ದಾರೆ.

One Reply to “ಪ್ರಜ್ಞಾ ಸಿಂಗ್​ ಹೇಳಿಕೆ ಸಹಿಸಲಾಗದು ಎಂದ್ರು ಸಿಎಂ ನಿತೀಶ್​ ಕುಮಾರ್​: ಮುಖ್ಯಮಂತ್ರಿ ರಾಜೀನಾಮೆ ನೀಡಬೇಕಿತ್ತು ಎಂದ್ರು ರಾಬ್ಡಿ ದೇವಿ”

  1. First up all your whole family retire from politics , we know scandals from your family , heart Indian economy.

Leave a Reply

Your email address will not be published. Required fields are marked *