ಜೈ ಕಿಸಾನ್​ ಎಂಬುದು ಶಾಸ್ತ್ರಿ ತತ್ವ, ರೈತರ ಮೇಲಿನ ದಾಳಿ ಖಂಡನೀಯ: ದೇವೇಗೌಡ

ದೆಹಲಿ: ರಾಷ್ಟ್ರ ರಾಜಧಾನಿಯತ್ತ ತೆರಳುತ್ತಿದ್ದ ಕಿಸಾನ್​ ಕ್ರಾಂತಿ ಯಾತ್ರೆಯ ರೈತರ ಮೇಲೆ ಪೊಲೀಸರು ಮಂಗಳವಾರ ನಡೆಸಿದ ದಾಳಿಯನ್ನು ಮಾಜಿ ಪ್ರಧಾನಿ ಎಚ್​.ಡಿ ದೇವೇಗೌಡರು ಖಂಡಿಸಿದ್ದಾರೆ. ಈ ದಾಳಿ ಲಾಲ್​ ಬಹದ್ದೂರ್​ ಶಾಸ್ತ್ರಿ ಅವರು ಪ್ರತಿಪಾದಿಸಿದ್ದ ಜೈಜವಾನ್​ ಜೈಕಿಸಾನ್​ ತತ್ವಕ್ಕೆ ವಿರುದ್ಧವಾದದ್ದು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಂಗವಾರ ಟ್ವೀಟ್​ ಮಾಡಿರುವ ಅವರು, ಭಾರತೀಯ ಕಿಸಾನ್​ ಯೂನಿಯನ್​ ಕರೆ ನೀಡಿದ್ದ ಕಿಸಾನ್​ ಕ್ರಾಂತಿ ಯಾತ್ರೆಯನ್ನು ಪೊಲೀಸರು ತಡೆದರು ಎಂಬುದನ್ನು ಕೇಳಿ ನಾನು ದಿಗ್ಭ್ರಾಂತನಾಗಿದ್ದೇನೆ. ಶಾಂತಿಯುತವಾಗಿ ಸಾಗಿದ್ದ ಪ್ರತಿಭಟನಾ ಯಾತ್ರೆಯನ್ನು ಗಾಂಧಿ ಜಯಂತಿಯ ಇದೇ ದಿನ ತಡೆದದ್ದು ಒಪ್ಪತಕ್ಕದ್ದಲ್ಲ. ‘ಜೈ ಕಿಸಾನ್’​ ಎಂಬುದು ಲಾಲ್​ ಬಹುದ್ದೂರ್​ ಶಾಸ್ತ್ರಿ ಅವರು ಪ್ರತಿಪಾದಿಸಿದ್ದ ‘ಜೈ ಜವಾನ್​ ಜೈ ಕಿಸಾನ್​’ ತತ್ವದ ಭಾಗ ಎಂಬುದನ್ನು ನಾವು ಮರೆಯಬಾರದು ಎಂದು ಅವರು ಹೇಳಿದ್ದಾರೆ.

ಇನ್ನು ರೈತರ ಮೇಲಿನ ದಾಳಿಯನ್ನು ದೇಶದ ಹಲವು ನಾಯಕರು ಖಂಡಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಆಕ್ರೋಶ ವ್ಯಕ್ತವಾಗಿದ್ದು, #KisanKrantiYatra ಹ್ಯಾಷ್​ ಟ್ಯಾಗ್​ ಅಡಿಯಲ್ಲಿ ನೆಟ್ಟಿಗರು ಟೀಕಿಸಿದ್ದಾರೆ.

ಪ್ರತಿಭಟನಾ ನಿರತ ರೈತರ ಮೇಲೆ ಅಮಾನವೀಯವಾಗಿ ದಾಳಿ ನಡೆಸಲಾಗಿದೆ. ಇದು ಖಂಡನೀಯ ಎಂದು ಜೆಡಿಯು ಮುಖಂಡ ಕೆ.ಸಿ ತ್ಯಾಗಿ ಟೀಕಿಸಿದ್ದಾರೆ.

ರೈತರ ಮೇಲಿನ ದಾಳಿ ಮೂಲಕ ಕೇಂದ್ರ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಸಿಪಿಎಂ ಮುಖಂಡ ಸೀತಾರಾಂ ಯಚೂರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ದಾಳಿ ಮೋದಿ ಸರ್ಕಾರದ ಅಚ್ಚೆ ದಿನವನ್ನು ಅನಾವರಣವರಣ ಗೊಳಿಸಿದೆ. ಗಾಂಧಿ ನೀಡಿದ ಪ್ರತಿಭಟನೆಯ ಅಸ್ತ್ರವನ್ನು ಗಾಂಧಿ ಜಯಂತಿಯಂದೇ ಹತ್ತಿಕ್ಕುವ ಮೂಲಕ ರೈತರ ಹೋರಾಟದ ಹಕ್ಕನ್ನು ಕೇಂದ್ರ ಸರ್ಕಾರ ಕಿತ್ತುಕೊಳ್ಳುತ್ತಿರುವುದೇಕೆ? ಎಂದು ಕಾಂಗ್ರೆಸ್​ ಮುಖಂಡ ನಟರಾಜ್​ ಗೌಡ ಅವರು ಟ್ವೀಟ್​ ಮೂಲಕ ಟೀಕಿಸಿದ್ದಾರೆ.