ಮೆರವಣಿಗೆ ನಿಷೇಧ ಚಿಂತನೆ: ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್

ಮಂಗಳೂರು: ನಗರದಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಹಿನ್ನೆಲೆಯಲ್ಲಿ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ತನಕ ರಾಜಕೀಯ, ಧಾರ್ಮಿಕ ಸೇರಿದಂತೆ ಎಲ್ಲ ರೀತಿಯ ಮೆರವಣಿಗೆಗಳನ್ನು ನಿಷೇಧಿಸಲು ಚಿಂತನೆ ನಡೆಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಈ ವಿಚಾರ ತಿಳಿಸಿದರು.

ಮಂಗಳೂರು ನಗರದ ರಸ್ತೆಗಳ ವಿಸ್ತರಣೆ ಸಾಧ್ಯವಾಗುತ್ತಿಲ್ಲ. ಪ್ರತಿವರ್ಷ 1 ಲಕ್ಷ ವಾಹನಗಳು ನಗರ ಸಂಚಾರಕ್ಕೆ ಸೇರ್ಪಡೆಯಾಗುತ್ತಿವೆ. ಇದಕ್ಕೆ ಅನುಗುಣವಾಗಿ ರಸ್ತೆಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಇಂತಹ ವ್ಯವಸ್ಥೆಯಲ್ಲಿ ಆಗಾಗ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಗಳಿಂದ ಜನಸಾಮಾನ್ಯರ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ ಎಂದರು.

ನಗರದ ನೆಹರು ಮೈದಾನದಲ್ಲಿ ಯಾವುದೇ ಸಮಾವೇಶ, ಕಾರ್ಯಕ್ರಮ, ಪ್ರತಿಭಟನೆಗಳನ್ನು ನಡೆಸುವ ವೇಳೆ ಅಲ್ಲಿನ ಎರಡು ಮೈದಾನ (ಫುಟ್ಬಾಲ್ ಮೈದಾನ ಸೇರಿ)ಗಳಲ್ಲಿ ಒಂದನ್ನು ಕಡ್ಡಾಯವಾಗಿ ಪಾರ್ಕಿಂಗ್ ವ್ಯವಸ್ಥೆಗೆ ಮೀಸಲಿಡುವ ನಿಯಮ ಅಳವಡಿಕೆಗೂ ಇಲಾಖೆ ಚಿಂತಿಸಿದೆ ಎಂದು ಆಯುಕ್ತರು ತಿಳಿಸಿದರು.
ಕಲ್ಯಾಣ ಮಂಟಪ, ಖಾಸಗಿ ಜಾಗಗಳಲ್ಲಿ ವಿವಾಹ ಹಾಗೂ ಇನ್ನಿತರ ಕಾರ್ಯಕ್ರಮಗಳ ಸಂದರ್ಭ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಉಂಟಾಗುತ್ತಿರುವ ಅಡಚಣೆ ನಿವಾರಿಸುವ ಸಲುವಾಗಿ ಸ್ಥಳೀಯಾಡಳಿತದಿಂದ ಸೂಚನೆ ನೀಡುವ ಕುರಿತು ಸಭೆ ನಡೆಸಲು ಆಲೋಚಿಸಲಾಗಿದೆ ಎಂದರು.

ನಗರದಲ್ಲಿ ಡ್ರಗ್ಸ್ ಹಾವಳಿ ಕುರಿತಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಾಗಿ ಕಾರ್ಯ ನಿರ್ವಹಿಸುತ್ತಿದ್ದು, ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಸುತ್ತಿದೆ. ರೌಡಿಸಂ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿಯೂ ಪರಿಣಾಮಕಾರಿ ಕಾರ್ಯಗಳನ್ನು ಇಲಾಖೆ ನಡೆಸುತ್ತಿದೆ ಎಂದವರು ಹೇಳಿದರು.
ಡಿಸಿಪಿ ಉಮಾ ಪ್ರಶಾಂತ್, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ, ಪ್ರಧಾನ ಕಾರ್ಯ ದರ್ಶಿ ಇಬ್ರಾಹಿಂ ಅಡ್ಕಸ್ಥಳ, ಪ್ರೆಸ್‌ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು ಉಪಸ್ಥಿತರಿದ್ದರು. ಆರ್.ಸಿ. ಭಟ್ ಕಾರ‌್ಯಕ್ರಮ ನಿರೂಪಿಸಿದರು. ವಿಜಯ ಕೋಟ್ಯಾನ್ ವಂದಿಸಿದರು.

ಹಾರ್ನ್ ರಹಿತ ವಲಯ ಶೀಘ್ರ : ನಗರದಲ್ಲಿ ಸುಗಮ ಸಂಚಾರಕ್ಕೆ ಒತ್ತು ನೀಡಿ ಹಾರ್ನ್ ರಹಿತ ದಿನವನ್ನಾಗಿಸುವ ಬದಲು ಹಾರ್ನ್ ರಹಿತ ವಲಯಗಳನ್ನು ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ. 1993ರಲ್ಲಿ ನಗರದ ಹಂಪನಕಟ್ಟೆಯಿಂದ ಕ್ಲಾಕ್‌ಟವರ್ ಹಾಗೂ 2000ರಲ್ಲಿ ಅತ್ತಾವರ ಕೆಎಂಸಿಯಿಂದ ಮಿಲಾಗ್ರಿಸ್ ರಸ್ತೆಯನ್ನು ಹಾರ್ನ್ ರಹಿತ ವಲಯಗಳನ್ನಾಗಿ ಗುರುತಿಸಿ ಅಧಿಸೂಚನೆ ಹೊರಡಿಸಾಗಿತ್ತು. ಆ ಅಧಿಸೂಚನೆಯನ್ನು ಶೀಘ್ರವೇ ಮರು ಅನುಷ್ಠಾನಗೊಳಿಸಲಾಗುವುದು. ಆರಂಭದಲ್ಲಿ ಒಂದು ವಾರ ವಿದ್ಯಾರ್ಥಿಗಳ ಮೂಲಕ ಜಾಗೃತಿ ಮೂಡಿಸುವ ಕೆಲಸ ಈ ವಲಯದಲ್ಲಿ ಮಾಡಲಾಗುವುದು. ಬಳಿಕ ನಿಯಮ ಉಲ್ಲಂಘಿಸಿದರೆ ಪ್ರಕರಣ ದಾಖಲಿಸಿ ದಂಡ ವಿಧಿಸುವ ಕ್ರಮವನ್ನು ಪೊಲೀಸ್ ಇಲಾಖೆ ಮಾಡಲಿದೆ ಎಂದು ಆಯುಕ್ತರು ತಿಳಿಸಿದರು.

ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಬ್ರ್ಯಾಂಡ್ ಮಂಗಳೂರು ಕಾರ್ಯಕ್ರಮದ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ‘ನನ್ನ ಜಿಲ್ಲೆ-ನನ್ನ ಕನಸು’ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಹಾಗೂ ಡಿಸಿಪಿ ಉಮಾ ಪ್ರಶಾಂತ್ ಬಹುಮಾನ ವಿತರಿಸಿದರು.