More

    ನಮ್ಮ ಜೀವನದ ಹೀರೋ, ನಿರ್ದೇಶಕ ಎಲ್ಲ ನಾವೇ…

    ನಮ್ಮ ಜೀವನದ ಹೀರೋ, ನಿರ್ದೇಶಕ ಎಲ್ಲ ನಾವೇ...

    ನಾನು ನಟಿಸಿ ನಿರ್ದೇಶನ ಮಾಡಿರುವ ‘100’ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ನಾನು, ರಚಿತಾ ರಾಮ್ ಪೂರ್ಣ ನಟನೆ ಮಾಡಿದ್ದೀವಿ. ಸತ್ಯ ಹೆಗಡೆ ಛಾಯಾಗ್ರ್ರಣ ಮಾಡಿದ್ದಾರೆ. ರವಿ ಬಸ್ರೂರು ಸಂಗೀತ ಕಂಪೋಸ್ ಮಾಡಿದ್ದಾರೆ. ಶ್ರೀನಿವಾಸ್ ಎನ್ನುವ ಹೊಸ ಹುಡುಗ ಎಡಿಟಿಂಗ್ ಮಾಡಿದರೆ, ಮಂಜುನಾಥ್ ಜಂಬೆ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ. ಇಡೀ ತಂಡವನ್ನು ಸೇರಿಸಿ ಚಿತ್ರ ನಿರ್ಮಾಣ ಮಾಡಿರುವವರು ರಮೇಶ್ ರೆಡ್ಡಿ. ಕೊನೆಗೆ ಚಿತ್ರ ನೋಡಿ ಬಹಳ ತೃಪ್ತಿಯಾಯ್ತು ನನಗೆ. ಆದರೆ, ಆ ಎರಡು ಗಂಟೆ ಚಿತ್ರದ ಹಿಂದೆ ಅದೆಷ್ಟು ಪರಿಶ್ರಮ ಇದೆ ಎಂದು ನಮ್ಮ ತಂಡಕ್ಕೆ ಮಾತ್ರ ಗೊತ್ತು. ಆ ಚಿತ್ರಕ್ಕೆ ನಿಮ್ಮ ಪ್ರತಿಕ್ರಿಯೆಗಾಗಿ ಬಹಳ ಕುತೂಹಲದಿಂದ ಕಾಯುತ್ತಿದ್ದೀನಿ.

    ಈ ಸಂದರ್ಭದಲ್ಲಿ ಇನ್ನೊಂದು ಯೋಚನೆ ಬಂತು. ಪ್ರತಿಯೊಬ್ಬರೂ ಚಿತ್ರರಂಗದವರ ತರಹ ಯಾಕೆ ಯೋಚನೆ ಮಾಡಬಾರದು ಅಂತ?

    ನಾವು ಯಾಕೆ ಒಬ್ಬ ಎಡಿಟರ್ ಆಗಬಾರದು? ಅಂದರೆ, ಒಬ್ಬ ಸಂಕಲನಕಾರನ ಕೆಲಸ ಏನು? ನಾನು ಇಡೀ ದಿನ ಶೂಟಿಂಗ್ ಮಾಡುತ್ತೇನೆ. ಎಂಟು ಗಂಟೆ, 10 ಗಂಟೆ ಚಿತ್ರೀಕರಣ ಮಾಡಿದ ಫುಟೇಜನ್ನು ಎಡಿಟರ್​ಗೆ ಕೊಡುತ್ತೀನಿ. ಅವನು ಅದನ್ನು ಎಡಿಟ್ ಮಾಡಿದಾಗ, ಒಂದು ದಿನಕ್ಕೆ ಸಿಗೋದು ಎರಡೂವರೆ ನಿಮಿಷ ಅಥವಾ ಮೂರು ನಿಮಿಷ ಮಾತ್ರ. ನೂರು ದಿನ ಶೂಟ್ ಮಾಡಿ ಒಂದು ಲಾರಿ ಲೋಡ್​ನಷ್ಟು ಫುಟೇಜ್​ನ ಎಡಿಟರ್​ಗೆ ಕೊಟ್ಟರೆ, ಅವರು ಎರಡೂವರೆ ಗಂಟೆಗಳ ಅವಧಿಯ ಚಿತ್ರರೂಪಕ್ಕೆ ತರಬೇಕು. ಎಡಿಟರ್ ಕೆಲಸವೇನು? ಅನಗತ್ಯವಾದ ವಿಷಯಗಳನ್ನು ತೆಗೆಯೋದು. ಲೈಫ್​ನಲ್ಲಿ ಬಹಳ ಮುಖ್ಯ ಅದು. ಅನಗತ್ಯ ವಿಷಯಗಳನ್ನು ತೆಗೆದು, ಅಗತ್ಯ ವಿಷಯಗಳನ್ನು ಮಾತ್ರ ನಾವು ಉಳಿಸಿಕೊಳ್ಳಬೇಕು. ಪ್ರತಿ ದಿನ ಬೆಳಿಗ್ಗೆಯಿಂದ ರಾತ್ರಿ ಮಲಗುವವರೆಗೂ ನಾವು ಮಾಡುವ ವಿಷಯಗಳನ್ನು ಒಂದು ಸಲ ಪರಿಶೀಲಿಸೋಣ. ಅದರಲ್ಲಿ ನಮಗೆ ನಿಜವಾಗಲೂ ಅಗತ್ಯ ಇರುವ ವಿಷಯ ಯಾವ್ಯಾವುದು? ಬೇಡದಿರುವ ವಿಷಯ ನಾವೇನು ಮಾಡುತ್ತಿದ್ದೇವೆ? ಈ ಬೇಡದಿರುವ ಗಾಸಿಪ್, ನಮಗೆ ಸಂಬಂಧ ಇಲ್ಲದಿರುವ ವಿಷಯಗಳು, ನಮ್ಮ ಏಳಿಗೆಗೆ ನಮ್ಮ ಕುಟುಂಬಕ್ಕೆ ಸಹಾಯವಾಗದಿರುವ ವಿಷಯಗಳ ಬಗ್ಗೆ ಸಮಯ ಕಳೆಯುತ್ತಿದ್ದೇವೋ, ಅವನ್ನೆಲ್ಲ ಎಡಿಟ್ ಮಾಡಿ, ನಮ್ಮ ಜೀವನವನ್ನು ಯಾಕೆ ಕಲ್ಪಿಸಿಕೊಳ್ಳಬಾರದು?

    ಒಬ್ಬ ಎಡಿಟರ್ ಆ ಕಥೆಗೆ ಏನು ಪೂರಕವಾಗಿದೆಯೋ ಅದನ್ನು ಮಾತ್ರ ಉಳಿಸಿಕೊಳ್ಳುತ್ತಾನೆ. ಹಾಗಾಗಿ ನಮ್ಮ ತಲೆಯಲ್ಲಿ ಆದರ್ಶವಾದ ಜೀವನ ಏನಿದೆಯೋ, ಅದೇ ನಮ್ಮ ನಿಜವಾದ ಕಥೆ. ಅದಕ್ಕೆ ಪೂರಕವಾದ ವಿಷಯಗಳನ್ನು ಮಾತ್ರ ಉಳಿಸಿಕೊಂಡು ಬೇಡದಿರುವ ವಿಷಯಗಳನ್ನೆಲ್ಲ ಎಡಿಟ್ ಮಾಡಿ, ನಮ್ಮ ಜೀವನವನ್ನು ಯಾಕೆ ಒಂದು ಸೂಪರ್​ಹಿಟ್ ಚಿತ್ರ ಮಾಡಬಾರದು?

    ಅಥವಾ ನಾವ್ಯಾಕೆ ಒಬ್ಬ ಕ್ಯಾಮೆರಾಮ್ಯಾನ್ ತರಹ ಯೋಚನೆ ಮಾಡಬಾರದು? ಕ್ಯಾಮೆರಾಮ್ಯಾನ್ ತಾನಿಡುವ ಪ್ರತಿ ಫ್ರೇಮನ್ನೂ ಸುಂದರಗೊಳಿಸುತ್ತಾನೆ. ಆ ತರಹ ನಾವೂ ಯಾಕೆ ನಮ್ಮ ಜೀವನದ ಪ್ರತಿ ಕ್ಷಣವನ್ನು ಸುಂದರಪ್ರಜ್ಞೆಯಿಂದ ಕಾಣಬಾರದು? ಮನೆ ಮತ್ತು ಮನವನ್ನು ಸ್ವಚ್ಛಗೊಳಿಸಿ ಒಂದು ಕ್ಲೀನ್ ಫ್ರೇಮ್ ಆಗಿ ಜೀವನವನ್ನು ಯಾಕೆ ಯೋಚನೆ ಮಾಡಬಾರದು? ತನ್ನ ಅಸಿಸ್ಟೆಂಟ್ ಇಟ್ಟ ಒಂದು ಸಾಧಾರಣ ಫ್ರೇಮ್ ಸಣ್ಣ ಟಿಲ್ಟ್, ಸಣ್ಣ ಫ್ಯಾನ್ ಅನ್ನು ಒಂದು ಡಿಗ್ರಿ ಕರೆಕ್ಷನ್ ಮಾಡಿ ಕ್ಯಾಮೆರಾಮ್ಯಾನ್ ಅದ್ಭುತ ಫ್ರೇಮ್ ಆಗಿ ಮಾಡಬಲ್ಲ. ಒಂದು ಸಣ್ಣ ಕರೆಕ್ಷನ್ ಅಷ್ಟೇ. ಪ್ರತಿಯೊಂದು ಫ್ರೇಮನ್ನು ಸುಂದರಗೊಳಿಸಿದರೆ, ಇಡೀ ಚಿತ್ರವೇ ಒಂದು ಸುಂದರವಾದ ಅನುಭವವಾಗುತ್ತದಲ್ವಾ? ಅದೇ ರೀತಿ ಪ್ರತಿದಿನ, ಪ್ರತಿಕ್ಷಣ ಒಬ್ಬ ಕ್ಯಾಮೆರಾಮ್ಯಾನ್ ತರಹ ಸುಂದರಗೊಳಿಸಿದರೆ, ಇಡೀ ಜೀವನ ಸುಂದರವಾಗೋದು ಖಂಡಿತಾ ಅಲ್ವಾ?

    ಅಥವಾ ನಾವ್ಯಾಕೆ ಒಬ್ಬ ಸಂಗೀತ ನಿರ್ದೇಶಕನ ತರಹ ಯೋಚನೆ ಮಾಡಬಾರದು? ಮ್ಯೂಸಿಕ್ ಡೈರೆಕ್ಟರ್ ಕೆಲಸ ಏನು? ಕಿವಿಗೆ ಇಂಪಾದ ಹಾಡುಗಳ ಜತೆಗೆ ಅವರು ಮಾಡುವ ರೀ-ರೆಕಾರ್ಡಿಂಗ್. ಹಿನ್ನೆಲೆ ಸಂಗೀತದ ಉದ್ದೇಶ, ಒಂದು ಚಿತ್ರದ ಹೈಪಾಯಿಂಟ್ಸ್ ಮತ್ತು ಮುಖ್ಯವಾದ ಅಂಶಗಳನ್ನು ಸರಿಯಾದ ಸಂಗೀತದ ಮೂಲಕ ಅಂಡರ್​ಲೈನ್ ಮಾಡಿ, ಪ್ರೇಕ್ಷಕರ ಗಮನವನ್ನು ಆ ಕಡೆ ತಿರುಗಿಸಿ ಅವರ ಅನುಭವವನ್ನು ಇನ್ನೂ ಹೆಚ್ಚು ಮಾಡೋದು. ಸಂಗೀತ ನಿರ್ದೇಶಕನ ತರಹ ನಮ್ಮ ಜೀವನದ ರೆಗ್ಯುಲರ್ ವಿಷಯಗಳು, ಬ್ರಶ್ ಮಾಡೋದು, ಸ್ನಾನ ಮಾಡೋದು, ಇಂತಹ ವಿಷಯಗಳ ಮಧ್ಯೆ ಹೆಂಡತಿ-ಮಕ್ಕಳ ಜತೆಗೆ ಹಿತವಾಗಿ ನಡೆದುಕೊಳ್ಳೋದು, ವೃತ್ತಿ ಕಡೆ ಗಮನ ಕೊಡೋದು.. ಈ ತರಹ ಹೈಲೈಟ್​ಗಳ ಬಗ್ಗೆ ಗಮನಕೊಟ್ಟು, ಅಂಡರ್​ಲೈನ್ ಮಾಡಿ, ನಮ್ಮ ಜೀವನವನ್ನು ಎಲ್ಲರೂ ಹೊಗಳುವಂತಹ ಒಂದು ಮ್ಯೂಸಿಕಲ್ ಹಿಟ್ ಯಾಕೆ ಮಾಡಬಾರದು?

    ಅಥವಾ ನಾವ್ಯಾಕೆ ಒಬ್ಬ ಹೀರೋ ಅಥವಾ ಹೀರೊಯಿನ್ ತರಹ ಯೋಚನೆ ಮಾಡಬಾರದು? ಒಬ್ಬ ನಾಯಕನಟನಾಗಿ ನನ್ನ ಕೆಲಸ ಏನು? ‘ಅಮೆರಿಕಾ ಅಮೆರಿಕಾ’ ಚಿತ್ರದ ಸೂರ್ಯ ಆಗಬಹುದು, ‘ಅಮೃತವರ್ಷಿಣಿ’ಯ ಅಭಿಷೇಕ್ ಆಗಿರಬಹುದು, ‘ರಾಮ ಶ್ಯಾಮ ಭಾಮ’ದ ರಾಮ ಇರಬಹುದು, ‘ಶಿವಾಜಿ ಸುರತ್ಕಲ್’ನ ಶಿವಾಜಿ ಆಗಿರಬಹುದು… ಆ ಪಾತ್ರಕ್ಕೆ ತಕ್ಕಂತೆ ನನ್ನನ್ನು ನಾನು ತೊಡಗಿಸಿಕೊಳ್ಳಬೇಕು. ಜೀವನದಲ್ಲೂ ಬೇರೆಬೇರೆ ಪಾತ್ರಗಳಿರುತ್ತವೆ. ಅಪ್ಪ ಅಂತ ಒಂದು ಪಾತ್ರ. ಗಂಡ ಅಂತ ಒಂದು ಪಾತ್ರ. ಅಣ್ಣ-ತಮ್ಮ ಅಂತ ಇನ್ನೊಂದು ಪಾತ್ರ. ಸ್ನೇಹಿತ ಎಂಬ ಮತ್ತೊಂದು ಪಾತ್ರ. ಹೀಗೆ ಜೀವನ ನೀಡುವ ಬೇರೆಬೇರೆ ಪಾತ್ರಗಳಿಗೆ ನ್ಯಾಯ ಸಲ್ಲಿಸುವುದು ಬಹಳ ಮುಖ್ಯ. ಹಾಗಾಗಿ, ಒಬ್ಬ ನಟನಾಗಿ ಅಥವಾ ನಟಿಯಾಗಿ ಕೊಟ್ಟ ಪಾತ್ರಗಳಿಗೆ ನ್ಯಾಯ ಸಲ್ಲಿಸುವ ತರಹ ನಾವು ಯಾಕೆ ಯೋಚನೆ ಮಾಡಬಾರದು?

    ಅಥವಾ ನಾವ್ಯಾಕೆೆ ಒಬ್ಬ ನಿರ್ದೇಶಕನ ತರಹ ಯೋಚನೆ ಮಾಡಬಾರದು? ಒಬ್ಬ ಡೈರೆಕ್ಟರ್ ಆಗಿ ನನ್ನ ಕೆಲಸವೇನು? ಸಂಗೀತ, ಅಭಿನಯ, ಕಥೆ, ಚಿತ್ರಕಥೆ, ಎಡಿಟಿಂಗ್… ಹೀಗೆ ಚಿತ್ರದ ಪ್ರತಿಯೊಂದು ಅಂಶದ ಬಗ್ಗೆಯೂ ಗಮನಕೊಟ್ಟು, ಇಡೀ ಚಿತ್ರ ಸಮಗ್ರವಾಗಿ, ಒಂದು ಹಿತಾನುಭವ ಆಗುವ ಹಾಗೆ ನೋಡಿಕೊಳ್ಳಬೇಕು. ಚಿತ್ರ ಒಂದು ವಿಭಾಗದಲ್ಲಿ ಚೆನ್ನಾಗಿದ್ದರೆ ಸಾಲದು, ಎಲ್ಲ ವಿಭಾಗಗಳಲ್ಲೂ ಚೆನ್ನಾಗಿದ್ದು, ಆಯ್ಕೆ ಮಾಡಿಕೊಂಡ ಕಥೆಯನ್ನು ಸ್ಪಷ್ಟವಾಗಿ ಮತ್ತು ಸರಳವಾಗಿ ಪ್ರೇಕ್ಷಕರಿಗೆ ತಲುಪುವ ಹಾಗೆ ನೋಡಿಕೊಳ್ಳಬೇಕು. ಹಾಗಾಗಿ, ಒಬ್ಬ ನಿರ್ದೇಶಕನ ತರಹ ಯೋಚನೆ ಮಾಡಿ. ನಮ್ಮ ಜೀವನದ ಎಲ್ಲ ಅಂಶಗಳು, ಸರಿಯಾದ ರೀತಿಯಲ್ಲಿ, ಸರಿಯಾದ ಪ್ರಪೋಷನ್​ನಲ್ಲಿ, ಒಳ್ಳೆಯ ಬ್ಯಾಲೆನ್ಸ್ ಜತೆ ನಡೆಸೋದು ನಮ್ಮ ಜವಾಬ್ದಾರಿ. ನಮ್ಮ ಜೀವನ ಎನ್ನುವ ಚಿತ್ರದ ನಾಯಕ ಅಥವಾ ನಾಯಕಿ ನಾವೇ. ಅದರ ಸಂಗೀತ ನಿರ್ದೇಶಕರೂ ನಾವೇ, ಸಂಕಲನಕಾರರೂ ನಾವೇ, ಕ್ಯಾಮೆರಾಮ್ಯಾನ್ ಸಹ ನಾವೇ, ನಿರ್ದೇಶಕರೂ ನಾವೇ. ಜಗತ್ತಿನ ಸರ್ವ ಶಕ್ತಿಗಳು ನಿಮ್ಮ ಜತೆ ಇದ್ದು, ನೀವು ನಿಮ್ಮ ಜೀವನ ಚಿತ್ರವನ್ನು ಸೂಪರ್ ಮಾಡೋದನ್ನು ನೋಡೋಕೆ ಒಬ್ಬ ಪ್ರೇಕ್ಷಕನಾಗಿ ಕಾಯುತ್ತಿದ್ದೇನೆ.

    ಸರಿ, ‘100’ ಚಿತ್ರದ ಬಿಡುಗಡೆ ದಿನ ಚಿತ್ರಮಂದಿರಗಳಲ್ಲಿ ಸಿಗೋಣ…

    (ಲೇಖಕರು ನಟ, ನಿರ್ದೇಶಕ)

    (ಓದುಗರ ಗಮನಕ್ಕೆ: ಕಳೆದ 13 ವಾರಗಳಿಂದ ನನ್ನ ಯೋಚನೆಗಳನ್ನು, ಚಿಂತನೆಗಳನ್ನು ಹಂಚಿಕೊಳ್ಳುವುದಕ್ಕೆ ವಿಜಯವಾಣಿ ಅವಕಾಶ ಮಾಡಿಕೊಟ್ಟಿದೆ. ಓದುಗರ ಸ್ಪಂದನೆ ಕೂಡ ಅದ್ಭುತವಾಗಿದೆ. ಆದರೆ ನನ್ನ ಕಾರ್ಯದೊತ್ತಡದಿಂದಾಗಿ ಅಂಕಣ ಬರಹದಿಂದ ತಾತ್ಕಾಲಿಕ ವಿರಾಮ ಪಡೆದುಕೊಳ್ಳುತ್ತಿದ್ದೇನೆ. ಮತ್ತೆ ನಿಮ್ಮನ್ನು ಭೇಟಿಯಾಗಲು ಉತ್ಸುಕನಾಗಿದ್ದೇನೆ….)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts