ಯಾವುದೇ ಸಂದರ್ಭದಲ್ಲೂ ನಾವು ಯುದ್ಧಕ್ಕೆ ಸಿದ್ಧರಿದ್ದೇವೆ: ಪಾಕ್​ಗೆ ಖಡಕ್​ ಎಚ್ಚರಿಕೆ ನೀಡಿದ ರಕ್ಷಣಾ ಸಚಿವೆ

ಬೆಂಗಳೂರು: ಯಾವುದೇ ಸಂದರ್ಭದಲ್ಲೂ ನಾವು ಯುದ್ಧಕ್ಕೆ ಸಿದ್ಧರಿದ್ದೇವೆ ಎಂದು ಹೇಳುವ ಮೂಲಕ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ ನೆರೆ ರಾಷ್ಟ್ರ ಪಾಕಿಸ್ತಾನಕ್ಕೆ ಖಡಕ್​ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದಿನಿಂದ ಆರಂಭವಾಗುವ ಏರ್​ ಶೋ ಇಂಡಿಯಾ ಕಾರ್ಯಕ್ರಮಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿಆರ್​ಪಿಎಫ್​ ಯೋಧರ ಮೇಲಿನ ಉಗ್ರರ ದಾಳಿಯಿಂದ ನಾವು ನೈತಿಕ ಸ್ಥೈರ್ಯ ಕಳೆದುಕೊಂಡಿಲ್ಲ. ದಾಳಿ ನಡೆದ ದಿನವೇ ಯೋಧರು ಪ್ರತಿದಾಳಿಗೆ ಸಿದ್ಧರಿದ್ದರು. ಈಗಲೂ ನಮ್ಮ ಯೋಧರು ಹಾಗೂ ಗೃಹ ಸಚಿವ ರಾಜನಾಥ್ ಸಿಂಗ್ ಕೂಡ ಸಿದ್ಧರಿದ್ದು, ಕಾಶ್ಮೀರಿ ಮೂಲದ ಅಧಿಕಾರಿಗಳ ಜತೆ ಗೃಹಸಚಿವರು ಸಂಪರ್ಕದಲ್ಲಿದ್ದಾರೆ ಎಂದು ಹೇಳಿದರು.

ಪುಲ್ವಾಮಾ ಅಷ್ಟೇ ಅಲ್ಲ, ಮುಂಬೈನಲ್ಲೂ ದಾಳಿ ನಡೆದಿತ್ತು. ಅಂದು ಪಾಕಿಸ್ತಾನಕ್ಕೆ ಸಾಕ್ಷ್ಯಸಹಿತ ಮಾಹಿತಿ ನೀಡಿದ್ದೆವು. ಆದರೆ, ಉಗ್ರರ ವಿರುದ್ಧ ಪಾಕ್ ಯಾವುದೇ ಕ್ರಮ ಕೈಗೊಂಡಿಲ್ಲ. ಈಗ ಸಾಕ್ಷ್ಯಾ ಕೇಳುತ್ತಿರುವ ಪಾಕ್​ ಪ್ರಧಾನಿ ಪೊಳ್ಳು ಭರವಸೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.

ಪುಲ್ವಾಮಾ ದಾಳಿ ಯಾರೂ ಊಹಿಸದಂತಹ ದುರ್ಘಟನೆಯಾಗಿದೆ. ದಾಳಿಯ ಪ್ರತೀಕಾರದ ಬಗ್ಗೆ ಮುಂದೆ ಏನೆಲ್ಲಾ ಮಾಡುತ್ತೇವೆ ಎಂಬುದರ ಬಗ್ಗೆ ಸಾರ್ವಜನಿಕವಾಗಿ ಮಾಹಿತಿ ನೀಡಲು ಸಾಧ್ಯವಿಲ್ಲ. ನಮ್ಮದೇ ರೀತಿಯಲ್ಲಿ ಯೋಜನೆ ರೂಪಿಸಿದ್ದೇವೆ. ಇಂತಹ ಘಟನೆಯಿಂದ ಸೇನೆ ಕಲಿಯಬೇಕಾದದ್ದು ಸಾಕಷ್ಟಿದೆ. ಸಮಯ ಬಂದಾಗ ಎಲ್ಲವನ್ನೂ ಮಾಡಿ ತೋರಿಸುತ್ತೇವೆ ಎಂದರು.

ಬೆಂಗಳೂರಿನಲ್ಲಿ 2 ಯುದ್ಧ ವಿಮಾನ ಪತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಈ ಘಟನೆ ದುರದೃಷ್ಟಕರವಾಗಿದೆ. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ. ಈ ಬಗ್ಗೆ ಈಗಲೇ ಏನೂ ಹೇಳಲು ಆಗಲ್ಲ. ತನಿಖೆ ನಡೆದ ಬಳಿಕವಷ್ಟೇ ಸತ್ಯಾಸತ್ಯತೆ ಗೊತ್ತಾಗಲಿದೆ ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್​)