ಸದಾ ನಮಗಿರಲಿ ಹಾಸ್ಯ ಪ್ರವೃತ್ತಿ

‘ಹಾಸ್ಯ ಎಂಬುದು ಎಲ್ಲರೂ ಇಷ್ಟಪಡುವ, ಎಲ್ಲರಿಗೂ ಖುಷಿ ಕೊಡುವ ವಿಷಯ. ನವರಸಗಳಲ್ಲಿ ಒಂದಾಗಿರುವ ಹಾಸ್ಯಕ್ಕೆ ಅದ್ಭುತವಾದ ಶಕ್ತಿ ಸಾಮರ್ಥ್ಯಗಳಿವೆ. ಹಾಸ್ಯ ಎಂತಹ ಗಂಭೀರ ಬಿಗು ವಾತಾವರಣವನ್ನೂ ತಿಳಿಗೊಳಿಸಬಲ್ಲುದು; ಮುನಿಸನ್ನು ಶಮನ ಮಾಡಬಲ್ಲುದು. ಹಾಸ್ಯ ನಮ್ಮ ಬೇಸರ, ದುಃಖ, ನೋವುಗಳನ್ನು ಮರೆಸುತ್ತದೆ. ಹಾಸ್ಯದಿಂದ ಹೊರಹೊಮ್ಮುವ ನಗು ಆರೋಗ್ಯವರ್ಧಕವೂ ಹೌದು. ನಗುವೆಂಬ ದಿವ್ಯ ಔಷಧಿಗೆ expiry date ಎಂಬುದೇ ಇಲ್ಲ. ಹಾಗೇನೆ ಯಾವ ಸೈಡ್ ಇಫೆಕ್ಟ್ ಕೂಡಾ ಇಲ್ಲ. ಮತ್ತೆ ನಾವು ಬಿದ್ದೂ ಬಿದ್ದೂ ನಕ್ಕರೆ ನಮ್ಮ ಸೈಡ್​ನಲ್ಲಿ ಕೂತವರಿಗೆ ಸ್ವಲ್ಪ ಇಫೆಕ್ಟ್ ಆಗಬಹುದೇನೋ?

ಹೀಗೆ ನಗೋದು ಆರೋಗ್ಯದ ಭಾಗವಾದರೆ, ನಗಿಸೋದು ಒಂದು ಯೋಗ. ಯಾಕೆಂದರೆ ಯಾರನ್ನಾದರೂ ಅಳಿಸೋದು ಸುಲಭದ ಕೆಲಸ. ಆದರೆ ನಗಿಸೋದು ಅಷ್ಟು ಸುಲಭವಲ್ಲ. ಆದರೆ, ನಾವು ಎಲ್ಲಿ ನಗಬೇಕೋ ಅಲ್ಲಿ ಮಾತ್ರ ನಗಬೇಕು; ಎಷ್ಟು ನಗಬೇಕೋ ಅಷ್ಟು ಮಾತ್ರ ನಗಬೇಕು. ಎಲ್ಲಿ ನಗಬೇಕೋ ಅಲ್ಲಿ ನಗದಿದ್ದರೆ, ಎಲ್ಲಿ ನಗಬಾರದೋ ಅಲ್ಲಿ ಒಬ್ಬರೇ ನಗಲು ಶುರು ಮಾಡಿದರೆ ಅದು ಒಂದು ರೋಗ! ಕಾರಣ ನಗು ನಮ್ಮ ಮಾನಸಿಕ ಆರೋಗ್ಯ ಮತ್ತು ಸ್ಥಿತಿಯನ್ನು ಸೂಚಿಸುತ್ತದೆ.

ಹಾಸ್ಯಕ್ಕೂ, ನಗುವಿಗೂ ನಿಕಟ ಸಂಬಂಧವಿದೆ. ನಗುವಿಲ್ಲದೆ ಹಾಸ್ಯವಿಲ್ಲ; ಹಾಸ್ಯವಿಲ್ಲದೆ ನಗುವಿಲ್ಲ. ನಗು ತರದ ಹಾಸ್ಯ ಹಾಸ್ಯವೇ ಅಲ್ಲ. ಕೆಲವರು ಮುಸಿ ಮುಸಿ ನಕ್ಕರೆ, ಕೆಲವರು ಗಹಗಹಿಸಿ ನಗ್ತಾರೆ. ಕೆಲವರು ಬಿದ್ದು ಬಿದ್ದು ನಕ್ಕರೆ, ಕೆಲವರು ಕದ್ದು ಕದ್ದೂ ನಗ್ತಾರೆ. ಕೆಲವರು ಒಳಗೊಳಗೆ ನಕ್ಕರೆ ಕೆಲವರು ಮೈತುಂಬಾ ನಗ್ತಾರೆ. ಕೆಲವರದ್ದು ಮಕ್ಕಳ ತರಹ ಮುಗ್ಧ ನಗು, ಇನ್ನೂ ಕೆಲವರದ್ದು ವೈರಾಗ್ಯದ , ವಿಷಾದದ, ವಿಕಾರದ ನಗು ಇಲ್ಲವೇ ಕುಹಕ ನಗು. ಕೆಲವರದು ಒತ್ತಾಯದ, ಕಾಟಾಚಾರದ ದೇಶಾವರೀ ನಗೆಯಾದರೆ. ಕೆಲವರದ್ದು ಸಹಜ ಸಂತೋಷದ ನಗು. ಕೆಲವರದು ಮುಗುಳು ನಗೆಯಾದರೆ, ಇನ್ನು ಹಲವರದು ತುಂಟ ನಗೆ, ತುಟಿ ನಗೆ, ತಾತ್ಸಾರದ ನಗೆ ಇಲ್ಲವೇ ಬಿಂಕದ ನಗೆ.

ಸಣ್ಣಪುಟ್ಟ ವಿಷಯಗಳು, ಚಿಲ್ಲರೆ ಸಂಗತಿಗಳು ಹಾಸ್ಯಕ್ಕೆ ವಸ್ತುವಾಗಬಲ್ಲುದು. ಆದರೆ ಅವನ್ನು ನೋಡುವ ಕಣ್ಣುಗಳು, ಕೇಳಿಸಿಕೊಳ್ಳುವ ಕಿವಿಗಳು ಹಾಗೂ ಗುರುತಿಸಿ, ಅರ್ಥೈಸಿಕೊಳ್ಳುವ ಮಾತ್ರವೇ ಅಲ್ಲ, ರಂಗುರಂಗಾಗಿ ಪ್ರಸ್ತುತಪಡಿಸುವ ಕಲೆ ಇರಬೇಕು. ಇದನ್ನೇ ‘ಹಾಸ್ಯಪ್ರಜ್ಞೆ’ ಎನ್ನುತ್ತೇವೆ. ಇದು ಎಲ್ಲರಲ್ಲೂ ಇರೋದಿಲ್ಲ. ಈ ಕಾರಣದಿಂದಲೇ ಒಂದೇ ಹಾಸ್ಯದ ವಿಷಯವನ್ನು ಎಲ್ಲರೂ ಹೇಳಿದರೆ, ಅದು ಹಾಸ್ಯವಾಗೋದಿಲ್ಲ. ಅಂತೆಯೇ ಹಾಸ್ಯ ಸಮಯೋಚಿತವಾಗಿರಬೇಕು. ಸಂದಭೋಚಿತವಾಗಿರಬೇಕು.

ಹಾಸ್ಯದಲ್ಲಿ ಹಲವು ವಿಧ- ಅಪಹಾಸ್ಯ, ಪರಿಹಾಸ್ಯ, ವ್ಯಂಗ್ಯ, ವಿಡಂಬನೆ, ನವಿರಾದ ತಿಳಿಹಾಸ್ಯ, ಕೆಟ್ಟ ಹಾಸ್ಯ ಇತ್ಯಾದಿ. ಅಪಹಾಸ್ಯವೆಂದರೆ, ಇತರರಿಗೆ ನೋವಾಗುವ ಹಾಸ್ಯ. ಇವುಗಳಿಗೆ ಕ್ಷಮೆ ಇಲ್ಲ. ಇದೇ ರೀತಿ ವ್ಯಂಗ್ಯ ವಿಡಂಬನೆಗಳು ಕೂಡ ತರವಲ್ಲ. ಏನಿದ್ದರೂ ಹಾಸ್ಯ ತಿಳಿಹಾಸ್ಯವಾಗಿರಬೇಕು; ಹೇಳಿದವರಿಗೂ ಕೇಳಿದವರಿಗೂ ಮುದ ನೀಡುವ ನವಿರಾದ ಹಾಸ್ಯವಾಗಿರಬೇಕು. ಇದಕ್ಕೊಂದು ಉದಾಹರಣೆ: ಒಮ್ಮೆ ಭಟ್ಟರ ಮನೆಯ ಎದುರು ಕತ್ತೆಯೊಂದು ಸತ್ತು ಬಿದ್ದಿತು. ತಕ್ಷಣ ಭಟ್ಟರು ಬಿಬಿಎಂಪಿ ಇಂಜಿನಿಯರ್​ಗೆ ಫೋನಾಯಿಸಿ ಸತ್ತ ಕತೆ್ತೆಯನ್ನು ಎತ್ತಿಕೊಂಡು ಹೋಗುವ ವ್ಯವಸ್ಥೆಯನ್ನು ಮಾಡುವಂತೆ ಕೇಳಿಕೊಂಡರು. ಉತ್ತರವಾಗಿ ಹಾಸ್ಯ ಪ್ರಿಯರಾದ ಆ ಇಂಜಿನಿಯರ್ ಹೀಗೆ ಹೇಳಿದರು. ‘ಅಲ್ಲ ಭಟ್ರೆ ಸತ್ತವರಿಗೆ ಅಂತ್ಯ ಸಂಸ್ಕಾರ ಮಾಡೋದು ನಿಮ್ಮ ಕೆಲಸ ಅಲ್ಲವೇ ನಮಗೇಕೆ ಫೋನ್ ಮಾಡುತ್ತೀರಿ?’ ಹಾಸ್ಯ ಪ್ರವೃತ್ತಿಯವರೇ ಆದ ಭಟ್ರು ಹೇಳಿದರು. ‘ಹೌದು ಸಾರ್ ಸತ್ತವರ ಅಂತ್ಯ ಸಂಸ್ಕಾರಗಳನ್ನು ಮಾಡೋದು ನಮ್ಮದೇ ಕೆಲಸ, ಆದರೆ ಯಾರಾದರೂ ಸತ್ತಾಗ ಅವರ ಹತ್ತಿರದ ಬಂಧುಬಾಂಧವರಿಗೆ ತಕ್ಷಣ ತಿಳಿಸೋದು ನಮ್ಮ ಕೆಲಸ ಅಲ್ಲವೇ, ಅದಕ್ಕೆ ನಿಮಗೇ ಫೋನ್ ಮಾಡಿದೆ’. ಇದನ್ನು ಕೇಳಿದ ಇಂಜಿನಿಯರ್ ನಕ್ಕುಬಿಟ್ಟರು. ನಗು ಎನ್ನುವುದು ಎಲ್ಲರೂ ಏಕಕಾಲದಲ್ಲಿ ಬಳಸಬಹುದಾದ ಸಾರ್ವತ್ರಿಕ ಭಾಷೆ.

ಕೆಲವರು ಮಾರ್ವಿುಕವಾಗಿ ಮಾತನಾಡಿ ಹಾಸ್ಯ ಚಟಾಕಿಯನ್ನು ಹಾರಿಸುತ್ತಾರೆ. ಉದಾಹರಣೆಗೆ ‘ಶಂಕುಸ್ಥಾಪನೆ ಎಂದರೇನು?’ ಎಂಬ ಪ್ರಶ್ನೆಗೆ, ಜಾಣರೊಬ್ಬರು, ‘ಶಂಕುಸ್ಥಾಪನೆ ಎಂದರೆ, ಒಳ್ಳೆಯ ಕೆಲಸಕ್ಕೆ ದೊಡ್ಡವರು ಬಂದು ಕಲ್ಲು ಹಾಕೋದು’; ಅಂತೆಯೇ ‘ಹೆಂಗಸರೇಕೆ ದೀರ್ಘ ಕಾಲ ಬದುಕುತ್ತಾರೆ?’ ಎಂಬ ಪ್ರಶ್ನೆಗೆ ಅವರ ಉತ್ತರ ‘ಅವರಿಗೆ ಹೆಂಡತಿ ಇಲ್ಲವಲ್ಲ!’…

ಒಂದು ವಾಕ್ಯದ ಕಥೆ ಹೇಳಿ ಎಂಬ ನಿವೇದನೆಗೆ ಕವಿಯೊಬ್ಬ ಹೇಳಿದ, ‘ನನಗೆ ಒಂದು ಮದುವೆ ಆಯಿತು, ಅಲ್ಲಿಗೆ ನನ್ನ ಕಥೆ ಮುಗಿಯಿತು’. ಇದೇ ಕವಿಯನ್ನು ‘ಕವಿತೆಗೂ, ಪ್ರಬಂಧಕ್ಕೂ ಏನು ವ್ಯತ್ಯಾಸ’ ಎಂದು ಕೇಳಿದಾಗ ಬಂದ ಉತ್ತರ : ‘ಹುಡಿಗಿಯ ಬಗ್ಗೆ ಬರೆದರೆ ಕವಿತೆ, ಮಡದಿಯ ಬಗ್ಗೆ ಬರೆದರೆ ಮಹಾ ಪ್ರಬಂಧ’. ‘ದ್ವೇಷ ಮತ್ತು ಸಂತೋಷಕ್ಕೆ ಏನು ವ್ಯತ್ಯಾಸ?’ ಎಂಬ ಮಡದಿಯ ಪ್ರಶ್ನೆಗೆ ಕಿಲಾಡಿ ಗಂಡ ಹೇಳುತ್ತ್ತಾನೆ. ‘ನಾನೇ ನಿನ್ನನ್ನು ಬಾವಿಗೆ ತಳ್ಳಿದರೆ ಅದು ದ್ವೇಷ; ಆದರೆ ನೀನು ನೀನಾಗಿಯೇ ಬಾವಿಗೆ ಬಿದ್ದರೆ ಅದು ಸಂತೋಷ!’… ಹೀಗೆ ಹಾಸ್ಯ ಚಟಾಕಿಗಳನ್ನು ಹಾರಿಸುತ್ತಾ ನಗಿಸುವವರನ್ನು ಎಲ್ಲರೂ ಇಷ್ಟಪಡುತ್ತಾರೆ. ಅವರ ಸುತ್ತ ಜನ ಸೇರುತ್ತಾರೆ. ಹಾಸ್ಯ ಪ್ರವೃತ್ತಿ ಉಳ್ಳವರು ಎಲ್ಲರ ಜತೆ ಬೇಗ ಬೆರೆಯುತ್ತಾರೆ. ಹಾಗೂ ಎಲ್ಲರನ್ನೂ ಬೇಗ ತಮ್ಮ ಮಿತ್ರರನ್ನಾಗಿ ಮಾಡಿಕೊಳ್ಳುತ್ತಾರೆ.

ಗಂಭೀರ ಸ್ವಭಾವದ ಒಣ ಒರಟು ಮಾತಿನ ವ್ಯಕ್ತಿಗಳು ಯಾರಿಗೆ ತಾನೆ ಇಷ್ಟ! ನಗುವಿನಿಂದಲೇ ಜನರ ವ್ಯಕ್ತಿತ್ವವನ್ನು ಅಳೆಯಬಹುದು. ಒಳಗೊಳಗೆ ನಗುವವನು ಜ್ಞಾನಿ, ಕಾರಣವಿಲ್ಲದೆ ನಗುವವನು ಹುಚ್ಚ; ಇತರರಿಗೆ ನೋವಾಗುವಂತೆ ನಗುವವನು ದುಷ್ಟ, ಇನ್ನೊಬ್ಬರನ್ನು ನೋಡಿ ನಗುವವನು ದುರಹಂಕಾರಿ, ಇತರರನ್ನೂ ನಗಿಸುವವನು ವಿದೂಷಕ, ಇತರರ ಜತೆ ನಗುವವನು ರಸಿಕ ಹಾಗೂ ನಗು ನಗುತಾ ಕೆಲಸಗಳನ್ನು ಮಾಡುವವನು ಜಾಣ.

‘ನಗುವುದು ಸಹಜದ ಧರ್ಮ; ನಗಿಸೋದು ಪರಧರ್ಮ, ನಗುವ ಕೇಳುತ ನಗುವುದು ಅತಿಶಯದ ಧರ್ಮ’ ಎಂದು ಡಿವಿಜಿಯವರು ಬರೆದರೆ, ‘ನಗೆಯಲ್ಲಿ ಹೊಗೀ ಬ್ಯಾಡ; ಹೊಗೀ ಹಿಂದೆ ಧಗಿ ಬ್ಯಾಡ; ಬಾಳಿಗೆ ಎರಡು ಬಗೀ ಬ್ಯಾಡ; ನನ ಗೆಳೆಯ ಬ್ಯಾಸರಿಕೆ ಬೇಡೋ ನಗುವಾಗ‘ ಎಂಬುದಾಗಿ ಬೇಂದ್ರೆ ಹೇಳಿದರು. ಒಟ್ಟಿನಲ್ಲಿ ನಗುವಾಗ ಮನಸಾರೆ ನಗೋಣ; ಮಕ್ಕಳಂತೆ ನಗೋಣ, ಕಾರಣ ನಕ್ಕಷ್ಟು ದಿನ ನಮ್ಮದು, ನಗದ ದಿನ ನಮ್ಮದಲ್ಲ!

(ಪ್ರತಿಕ್ರಿಯಿಸಿ: [email protected])