ಏಕದಿನ ವಿಶ್ವಕಪ್​ಗೆ ಇಂದು ಟೀಮ್ ಇಂಡಿಯಾ ಆಯ್ಕೆ

ನವದೆಹಲಿ: ಪ್ರಸ್ತುತ ಇಡೀ ಭಾರತ ‘ಎಲೆಕ್ಷನ್’ ಬಿಸಿಯಲ್ಲಿದೆ. ಆದರೆ, ಸೋಮವಾರದ ಕೆಲ ಸಮಯ ‘ಎಲೆಕ್ಷನ್’ನಲ್ಲಿ ಯಾರು ಗೆಲ್ತಾರೆ, ಸೋಲ್ತಾರೆ ಎನ್ನುವ ಚಿಂತೆಯನ್ನು ಬದಿಗಿಟ್ಟು, ಏಕದಿನ ವಿಶ್ವಕಪ್​ಗಾಗಿ ಟೀಮ್ ಇಂಡಿಯಾ ಸೆಲೆಕ್ಷನ್​ನ ಬಗ್ಗೆ ಕುತೂಹಲ ಇರಿಸಿಕೊಳ್ಳಲಿದ್ದಾರೆ. ಎಂಎಸ್​ಕೆ ಪ್ರಸಾದ್ ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿ, ಸೋಮವಾರ ಮಧ್ಯಾಹ್ನ 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಿದೆ. ವಿಶೇಷವೆಂದರೆ ಈ ಬಾರಿಯ ವಿಶ್ವಕಪ್ ತಂಡವನ್ನು ಅತ್ಯಂತ ಊಹಿಸಬಹುದಾದ ಟೀಮ್ ಎನ್ನಲಾಗಿದ್ದು, ತೀರಾ ಅಚ್ಚರಿಯ ಆಯ್ಕೆಗಳು ಅನುಮಾನ.

ಆಸ್ಟ್ರೇಲಿಯಾ ವಿರುದ್ಧ ತವರಿನ ಏಕದಿನ ಸರಣಿಯಲ್ಲಿ ಸೋಲು ಕಂಡ ಬೆನ್ನಲ್ಲಿಯೇ ನಾಯಕ ವಿರಾಟ್ ಕೊಹ್ಲಿ, ವಿಶ್ವಕಪ್​ಗಾಗಿ ಒಂದು ಸ್ಥಾನ ಮಾತ್ರವೇ ಖಾಲಿ ಇದೆ. ಉಳಿದ 14 ಆಟಗಾರರನ್ನು ಕಳೆದೊಂದು ವರ್ಷದಲ್ಲಿಯೇ ರೂಪಿಸಲಾಗಿದೆ ಎಂದು ತಿಳಿಸಿದ್ದರು. ಮೇ 30ರಂದು ಇಂಗ್ಲೆಂಡ್ ನೆಲದಲ್ಲಿ ಆರಂಭವಾಗಲಿರುವ 12ನೇ ಆವೃತ್ತಿಯ ವಿಶ್ವಕಪ್​ಗೆ 14 ಸದಸ್ಯರನ್ನು ಬಹುತೇಕ

ಹೆಸರಿಸಬಹುದಾದರೂ, ಆಯ್ಕೆ ಸಮಿತಿಯ ಸಭೆಯಲ್ಲಿ ತೀರಾ ಪ್ರಮುಖವಾಗಿ ಚರ್ಚೆಯಾಗಲಿರುವುದು ತಂಡದ ಸಂಯೋಜನೆಯ ಬಗ್ಗೆ. ತಂಡದ 2ನೇ ವಿಕೆಟ್ ಕೀಪರ್ ಆಗಿ ಯುವ ಬ್ಯಾಟ್ಸ್ ಮನ್ ರಿಷಭ್ ಪಂತ್ ಹಾಗೂ ಅನುಭವಿ ದಿನೇಶ್ ಕಾರ್ತಿಕ್ ಇವರಿಬ್ಬರಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎನ್ನುವ ಅಂಶ ಹೆಚ್ಚಿನ ಚರ್ಚೆಯಾಗಲಿದೆ. ಏಕದಿನ ಪಂದ್ಯದಲ್ಲಿ ತಂಡದ ರನ್​ಗತಿಯನ್ನು ಏರಿಸುವ ಹಾಗೂ ಆರಂಭಿಕ ಆಘಾತ ಕಂಡಲ್ಲಿ ಚೇತರಿಕೆ ನೀಡುವ ಜವಾಬ್ದಾರಿ ಇರುವ 4ನೇ ಕ್ರಮಾಂಕಕ್ಕೆ ಯಾರು ಆಯ್ಕೆಯಾಗಲಿದ್ದಾರೆ ಎಂಬುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ.

ಇವರ ಆಯ್ಕೆ ಖಚಿತ: 15 ಸದಸ್ಯರ ತಂಡದಲ್ಲಿ 11 ಆಟಗಾರರ ಬಗ್ಗೆ ಯಾವ ಚರ್ಚೆಗಳೇ ಇಲ್ಲ. ತಂಡದ ಸಂಯೋಜನೆ, ಕಳೆದೊಂದು ವರ್ಷದಲ್ಲಿ ಇವರ ಆಯ್ಕೆ ಹಾಗೂ ಅನುಭವವನ್ನು ಆಧರಿಸಿ, ವಿರಾಟ್ ಕೊಹ್ಲಿ ನಾಯಕತ್ವದ ವಿಶ್ವಕಪ್ ತಂಡದಲ್ಲಿ, ರೋಹಿತ್ ಶರ್ಮ, ಶಿಖರ್ ಧವನ್, ಧೋನಿ (ವಿ.ಕೀ), ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ಕುಲದೀಪ್, ಚಾಹಲ್, ಬುಮ್ರಾ, ಭುವನೇಶ್ವರ್ ಹಾಗೂ ಶಮಿ ಸ್ಥಾನ ಪಡೆಯುವುದು ಖಚಿತ.

ಸಂಭಾವ್ಯ ತಂಡ: ಕೊಹ್ಲಿ (ನಾಯಕ), ರೋಹಿತ್ (ಉಪನಾಯಕ), ಧವನ್, ಕೆಎಲ್ ರಾಹುಲ್, ಧೋನಿ (ವಿ.ಕೀ), ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ಕುಲದೀಪ್, ಚಾಹಲ್, ವಿಜಯ್ ಶಂಕರ್/ರವೀಂದ್ರ ಜಡೇಜಾ, ಬುಮ್ರಾ, ಭುವನೇಶ್ವರ್, ಮೊಹಮದ್ ಶಮಿ. ಮೀಸಲು ವಿಕೆಟ್ಕೀಪರ್: ದಿನೇಶ್ ಕಾರ್ತಿಕ್/ರಿಷಭ್ ಪಂತ್, ನಂ.4 ಬ್ಯಾಟ್ಸ್​ಮನ್: ರಾಯುಡು. -ಪಿಟಿಐ

ನಾಲ್ಕು ಸ್ಥಾನಕ್ಕೆ ನಡೆಯಲಿದೆ ಚರ್ಚೆ

ತಂಡದಲ್ಲಿ ಉಳಿದ 4 ಸ್ಥಾನಗಳಿಗಾಗಿ ಆರು ಆಟಗಾರರು ರೇಸ್​ನಲ್ಲಿದ್ದಾರೆ. ಅವರೆಂದರೆ ಅಂಬಟಿ ರಾಯುಡು, ಕೆಎಲ್ ರಾಹುಲ್, ದಿನೇಶ್ ಕಾರ್ತಿಕ್, ರಿಷಭ್ ಪಂತ್, ವಿಜಯ್ ಶಂಕರ್ ಹಾಗೂ ರವೀಂದ್ರ ಜಡೇಜಾ. ನಂ.4 ಬ್ಯಾಟಿಂಗ್ ಕ್ರಮಾಂಕದಲ್ಲಿ ಯಾರನ್ನು ಆಡಿಸಬೇಕು ಎನ್ನುವ ಗೊಂದಲಕ್ಕೆ ಈವರೆಗೂ ತೆರೆ ಬಿದ್ದಿಲ್ಲ. ಈ ಸ್ಥಾನದಲ್ಲಿ ಬ್ಯಾಟಿಂಗ್ ನಡೆಸಲು ಒಂದಕ್ಕಿಂತ ಹೆಚ್ಚಿನ ಆಯ್ಕೆಗಳು ಸಮಿತಿಯ ಮುಂದಿವೆ. ಆದರೆ, ಯಾರು ಸೂಕ್ತ ಎನ್ನುವುದು ಅಂತಿಮವಾಗಿಲ್ಲ.

ರಿಷಭ್ ಮೀಸಲು ಕೀಪರ್?

ವಿಶ್ವಕಪ್ ತಂಡಕ್ಕೆ ರಿಷಭ್ ಪಂತ್ ಆಯ್ಕೆ ಚರ್ಚೆಯ ವಿಷಯವಾಗಲಿದೆ. ಅವರ ವಿಕೆಟ್ಕೀಪಿಂಗ್ ಕೌಶಲ ಇನ್ನೂ ಪ್ರಗತಿಯಲ್ಲಿದ್ದರೂ, ಇಂಗ್ಲೆಂಡ್ ನೆಲದಲ್ಲಿ ಅವರ ಬ್ಯಾಟಿಂಗ್ ಭಾರತಕ್ಕೆ ಬಲ ನೀಡಲಿದೆ. ಅದಲ್ಲದೆ, ಎಡಗೈ ಆಟಗಾರನಾಗಿರುವುದೂ ಪ್ಲಸ್ ಪಾಯಿಂಟ್. 2011ರ ವಿಶ್ವಕಪ್​ನಲ್ಲಿ ಎಡಗೈ ಆಟಗಾರರಾದ ಯುವ ರಾಜ್ ಸಿಂಗ್ ಹಾಗೂ ಸುರೇಶ್ ರೈನಾ ಪ್ರಮುಖ ಪಾತ್ರ ನಿಭಾಯಿಸಿದ್ದರು.