ಮೋದಿ, ಹಿಂದುತ್ವದ ಅಲೆಯಲ್ಲಿ ತೇಲಿದ ಬಿಜೆಪಿ

ವಿಜಯವಾಣಿ ಸುದ್ದಿಜಾಲ ಮಂಗಳೂರು/ಉಡುಪಿ

ಕರಾವಳಿಯಲ್ಲಿ ಮೋದಿ ಅಲೆ ಪ್ಲಸ್ ರಾಜ್ಯ ಸರ್ಕಾರದ ವಿರೋಧಿ ಅಲೆ ಶೇ.100 ವರ್ಕ್ ಔಟ್ ಆಗಿದೆ. ಕರಾವಳಿಯ ಇತಿಹಾಸದಲ್ಲೇ ಪ್ರಥಮ ಬಾರಿಗೆ ಬಿಜೆಪಿ ದಾಖಲೆಯ ಗೆಲುವು ಸಾಧಿಸಿದೆ. ಕಾಂಗ್ರೆಸ್ ನಾಯಕರ ನಿರುತ್ಸಾಹ, ಸಂಘಟನೆ ಕೊರತೆ ಮತ್ತಿತರ ಕಾರಣಗಳಿಂದ ಕಾಂಗ್ರೆಸ್ ಅಕ್ಷರಶಃ ಧರಾಶಾಯಿಯಾಗಿದೆ.
ದ.ಕ. ಕ್ಷೇತ್ರದಲ್ಲಿ ಬಿಜೆಪಿ ದಾಖಲೆಯ 2,74,621 ಮತಗಳ ಅಂತರದ ಗೆಲುವು ದಾಖಲಿಸಿದೆ. 2014ರ ಚುನಾವಣೆಯಲ್ಲಿ ನಳಿನ್ ಕಾಂಗ್ರೆಸ್‌ನ ಜನಾರ್ದನ ಪೂಜಾರಿ ವಿರುದ್ಧ 1,43,709 ಮತಗಳ ಅಂತರದ ಜಯ ಸಾಧಿಸಿದ್ದು, ಹಿಂದಿನ ದಾಖಲೆಯಾಗಿತ್ತು. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲೂ ಬಿಜೆಪಿಯದ್ದು ದಾಖಲೆಯ ಅಂತರ ವಿಜಯ.

ಕಾಂಗ್ರೆಸ್ ನಾಯಕರ ನಿರುತ್ಸಾಹ: ದ.ಕ. ಕ್ಷೇತ್ರಕ್ಕೆ ಮಾಜಿ ಸಚಿವರಾದ ಬಿ.ರಮಾನಾಥ ರೈ, ವಿನಯಕುಮಾರ್ ಸೊರಕೆ ಸಹಿತ ಕಾಂಗ್ರೆಸ್‌ನಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿತ್ತು. ಆದರೆ ಹಿರಿಯ ನಾಯಕರು ಸತತ ಸೋಲು ಕಂಡ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರಿಗೆ ಹೈಕಮಾಂಡ್ ಅವಕಾಶ ಕಲ್ಪಿಸಿತ್ತು. ಇದರಿಂದ ಪಕ್ಷದ ಯುವ ಕಾರ್ಯಕರ್ತರು ಉತ್ಸಾಹದಿಂದ ಪ್ರಚಾರ ಕಾರ್ಯಕ್ಕೆ ಇಳಿದಿದ್ದರು. ಹಿಂದುಗಳ ಮತ ಸೆಳೆಯಲು ಮಿಥುನ್ ರೈ ಇನ್ನಿಲ್ಲದ ಪ್ರಯತ್ನ ನಡೆಸಿದ್ದರು. ಆದರೆ ಅಭ್ಯರ್ಥಿಯನ್ನು ಗೆಲ್ಲಿಸಲೇಬೇಕೆನ್ನುವ ಛಲದಿಂದ ಹಿರಿಯ ನಾಯಕರು ಕಾರ್ಯನಿರ್ವಹಿಸಲಿಲ್ಲ ಎನ್ನುವುದು ಕಾರ್ಯಕರ್ತರ ಆರೋಪ. ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್ ಧಾರಾಳ ಖರ್ಚು ಕೂಡ ಮಾಡಿತ್ತು. ಆದರೆ ಮೋದಿ ಅಲೆ ಎಲ್ಲವನ್ನೂ ಕೊಚ್ಚಿಕೊಂಡು ಹೋಗಿದೆ.

ಮೋದಿ.. ಮೋದಿ..: ವಿಧಾನಸಭಾ ಚುನಾವಣೆ ಗೆಲುವಿನ ಬಳಿಕ ಬಿಜೆಪಿ ಲೋಕಸಭಾ ಚುನಾವಣೆ ಗೆಲುವನ್ನು ನಿರೀಕ್ಷಿಸಿತ್ತು. ಆದರೆ ಪಕ್ಷದೊಳಗೆ ಕೆಲವರು ನಳಿನ್‌ಕುಮಾರ್ ವಿರುದ್ಧ ಮಸಲತ್ತು ನಡೆಸಿದ್ದರು. ಇದನ್ನು ಸವಾಲಾಗಿ ಸ್ವೀಕರಿಸಿದ ಆರ್‌ಎಸ್‌ಎಸ್ ಪ್ರಮುಖರು ಹೆಚ್ಚು ಸದ್ದಿಲ್ಲದೆ ಪ್ರಚಾರ ಕಾರ್ಯ ಆರಂಭಿಸಿದ್ದರು. ಜತೆಗೆ ಜಿಲ್ಲೆಯಲ್ಲಿ ಮೋದಿ ಅಲೆ ಬಲವಾಗಿ ಬೀಸಿತ್ತು. ಮೋದಿ ನೆಹರು ಮೈದಾನಕ್ಕೆ ಆಗಮಿಸಿ ನಡೆಸಿದ ಪ್ರಚಾರ ಸಭೆ ಬಿಜೆಪಿ ಗೆಲುವಿಗೆ ಭದ್ರ ಬುನಾದಿ ಹಾಕಿತ್ತು. 2.50 ಲಕ್ಷಕ್ಕೂ ಅಧಿಕ ಮತಗಳ ಜಯವನ್ನು ಆರ್‌ಎಸ್‌ಎಸ್ ನಾಯಕರು ನಿರೀಕ್ಷಿಸಿದ್ದರು. ಅದು ಅಕ್ಷರಶಃ ನಿಜವಾಗಿದೆ.

ಮೈತ್ರಿ-ಬೆಂಬಲ ಲೆಕ್ಕಕ್ಕಿಲ್ಲ: ರಾಜ್ಯದಲ್ಲಿ ಮೈತ್ರಿ ಪಕ್ಷವಾದ ಜೆಡಿಎಸ್ ನಾಯಕರು ಕಾಂಗ್ರೆಸ್ ಪರ ಪ್ರಚಾರ ನಡೆಸಿದ್ದರು. ಎಡಪಕ್ಷಗಳು ಕೂಡ ಜಾತ್ಯತೀತ ಪಕ್ಷದ ಅಭ್ಯರ್ಥಿಗೆ ಬೆಂಬಲ ಎಂದು ಘೋಷಿಸಿದ್ದವು. ಆದರೆ ಕಾಂಗ್ರೆಸ್ ಗಣನೀಯ ಮತ ಪಡೆಯಲು ಯಶಸ್ವಿಯಾಗಿಲ್ಲ. ದ.ಕ. ಕ್ಷೇತ್ರದ 2014ರ ಚುನಾವಣೆಯಲ್ಲಿ ಒಟ್ಟು ಚಲಾಯಿತ ಮತಗಳ ಪೈಕಿ ನಳಿನ್ ಶೇ.53.22 ಮತ ಗಳಿಸಿದ್ದರೆ, ಪೂಜಾರಿ ಶೇ.41.32 ಮತ ಗಳಿಸಲು ಶಕ್ತರಾಗಿದ್ದರು. ಈ ಬಾರಿ ನಳಿನ್ ಶೇ.57.47 ಮತ ಗಳಿಸುವ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ. ಕಾಂಗ್ರೆಸ್ ಮತ ಶೇ.37.15ಕ್ಕೆ ಕುಸಿದಿದೆ.

ಕ್ಷೇತ್ರ ಬಿಟ್ಟುಕೊಟ್ಟ ಕೈಗೆ ಮುಖಭಂಗ
ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಸತತ ಸೋಲನುಭವಿಸುತ್ತಿದ್ದರೂ ಸ್ಪರ್ಧೆಯಿಂದ ಹಿಂದೆ ಸರಿದ ಉದಾಹರಣೆ ಇರಲಿಲ್ಲ. ಆದರೆ ಮೈತ್ರಿ ನೀತಿ ಅಡಿಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು ಇಲ್ಲಿ ಅಸ್ತಿತ್ವವೇ ಇಲ್ಲದ ಜೆಡಿಎಸ್‌ಗೆ ಕಾಂಗ್ರೆಸ್ ಬಿಟ್ಟುಕೊಟ್ಟಿತ್ತು. ಜೆಡಿಎಸ್ ಅಭ್ಯರ್ಥಿ ಹುಡುಕಾಟದಲ್ಲಿ ಸೋತು ಕೊನೆಗೆ ಕಾಂಗ್ರೆಸ್‌ನ ಪ್ರಮೋದ್ ಮಧ್ವರಾಜ್‌ಗೆ ಟಿಕೆಟ್ ನೀಡಿದರೂ ಸೋಲಿನ ಅಂತರವನ್ನು ಕಡಿಮೆ ಮಾಡಿಕೊಳ್ಳುವುದಕ್ಕೂ ಸಾಧ್ಯವಾಗಿಲ್ಲ.

ಪ್ರಮೋದ್ ಮಧ್ವರಾಜ್ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದರೂ, ಕೆಲಸ ಮಾಡಿದ್ದು ಕಾಂಗ್ರೆಸ್ ಕಾರ್ಯಕರ್ತರು ಮಾತ್ರ. ಜಿಲ್ಲೆಯಲ್ಲಿ ಜೆಡಿಎಸ್‌ಗೆ ಬಲವಿಲ್ಲ. ಪ್ರಮೋದ್ ವರ್ಚಸ್ಸು ಮತ್ತು ಅಭಿಮಾನದ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ಕೊನೆಯ ಕ್ಷಣದಲ್ಲಿ ಪ್ರಮೋದ್ ಮಧ್ವರಾಜ್ ಆಖಾಡಕ್ಕೆ ಧುಮುಕಿ ಮೈತ್ರಿ ಅಭ್ಯರ್ಥಿ ಎಂದು ಕರೆಸಿಕೊಂಡರು.

ಸುವರ್ಣ ತ್ರಿಭುಜ ಮೀನುಗಾರಿಕೆ ಬೋಟು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಚುನಾವಣೆ ಹೊತ್ತಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದು ಮೀನುಗಾರ ಸಮುದಾಯ ಅಸಮಾಧಾನದಿಂದ ನೋಡುವಂತಾಯಿತು. ಪ್ರಮುಖ ನಾಯಕರು ಚಳಿ ಬಿಟ್ಟು ಕೆಲಸ ಮಾಡದಿರುವುದು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ‘ಕರಾವಳಿಯವರು ತಿಳಿವಳಿಕೆ ಇಲ್ಲದವರು’ ಎಂಬ ಹೇಳಿಕೆ, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಅಮೃತ್ ಶೆಣೈ ಬಂಡಾಯ, ಬೂತ್‌ಮಟ್ಟದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಘಟನಾತ್ಮಕವಾಗಿ ಕೆಲಸ ಮಾಡದಿರುವುದು ಸೋಲಿಗೆ ಪ್ರಮುಖ ಕಾರಣವಾಯಿತು. ಇದರೊಂದಿಗೆ ಅಸ್ತಿತ್ವವಿಲ್ಲದ ಜೆಡಿಎಸ್‌ಗೆ ಕ್ಷೇತ್ರ ಬಿಟ್ಟುಕೊಟ್ಟು ಕಾಂಗ್ರೆಸ್ ಕೈ ಸುಟ್ಟುಕೊಂಡಿರುವುದು ಸ್ಪಷ್ಟವಾಗಿದ್ದು, ಪದೇಪದೆ ಮುಖಭಂಗ ಅನುಭವಿಸುತ್ತಿರುವ ಪಕ್ಷಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಮೋದಿ- ಹಿಂದುತ್ವದ ಬಲ:  ಶೋಭಾ ಕರಂದ್ಲಾಜೆಗೆ ಒಂದು ವರ್ಗದ ಕಾರ್ಯಕರ್ತರ ವಿರೋಧವಿದ್ದರೂ ವರಿಷ್ಠರು ಟಿಕೆಟ್ ನೀಡಿದ್ದರು. ಬಳಿಕ ಸಂಘ ಪರಿವಾರ, ಪಕ್ಷ ಜಿದ್ದಿಗೆ ಬಿದ್ದು ದುಡಿದ ಪರಿಣಾಮ ಗೆಲುವಿನ ಅಂತರ ಹೆಚ್ಚಿದೆ. ಪ್ರಮುಖವಾಗಿ ಗೆಲುವಿಗೆ ಕಾರಣವಾಗಿರುವುದು ಮೋದಿ- ಹಿಂದುತ್ವದ ಅಲೆ, ಸಂಘಟನಾತ್ಮಕ ಪ್ರಚಾರ.
ಕ್ಷೇತ್ರದಲ್ಲಿ ಕೇಂದ್ರ ನಾಯಕರಾದ ನಿರ್ಮಲಾ ಸೀತಾರಾಮನ್, ಮೀನಾಕ್ಷಿ ಲೇಖಿಯವರೂ ಪ್ರಚಾರ ಕೈಗೊಂಡಿದ್ದರು. ಕಾರ್ಯಕರ್ತರ ಹುಮ್ಮಸ್ಸು ಹೆಚ್ಚಿಸುವ ಕಾರ್ಯಕ್ರಮಗಳು, ಮಹಿಳೆಯರಿಗಾಗಿಯೇ ರಾಷ್ಟ್ರೀಯವಾದದ ಉಪನ್ಯಾಸ, ದೇಶದ ರಕ್ಷಣೆ, ರಾಷ್ಟ್ರೀಯವಾದ, ಸಾಂಸ್ಕೃತಿಕ, ಧಾರ್ಮಿಕ ಚಿಂತನೆ ಬಗ್ಗೆ ಸಮಾಜದ ವಿವಿಧ ವರ್ಗಗಳನ್ನು ಗುರುತಿಸಿ ಸಣ್ಣ, ಸಣ್ಣ ಶಿಬಿರ, ಕಾರ್ಯಕ್ರಮಗಳು ಪರಿಣಾಮ ಬೀರಿವೆ. ಕಾರ್ಯಕರ್ತರು ನಿರಂತರ ಮನೆಮನೆ ಭೇಟಿ ನೀಡಿ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಪ್ರಚಾರ ಮಾಡುತ್ತಿದ್ದರು.

ಉಡುಪಿ – ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ಚಲಾಯಿತ ಮತದಲ್ಲಿ ಶೇ.62.46 ಮತಗಳನ್ನು ಪಡೆದಿದ್ದಾರೆ. ಪ್ರಮೋದ್ ಮಧ್ವರಾಜ್ ಶೇ.32.09 ಮತಗಳನ್ನಷ್ಟೇ ಪಡೆಯುವಲ್ಲಿ ಶಕ್ತರಾಗಿದ್ದಾರೆ.

5 ವರ್ಷದಲ್ಲಿ ಏರಿಕೆಯಾದ ಕಾಂಗ್ರೆಸ್ ಮತ ಕೇವಲ 634
* 2014ರಲ್ಲಿ ನಳಿನ್ 6,42,739 ಮತ ಗಳಿಸಿದ್ದರೆ, ಕಾಂಗ್ರೆಸ್‌ನ ಜನಾರ್ದನ ಪೂಜಾರಿ 4,99,030 ಮತ ಗಳಿಸಿದ್ದರು. ಈ ಬಾರಿ ನಳಿನ್ ಪಡೆದ ಮತ 7,74,285ಕ್ಕೆ ಏರಿಕೆಯಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಪಡೆದ ಮತ 4,99,664ಕ್ಕೆ ಸೀಮಿತವಾಗಿದೆ.
* ದ.ಕ ಕ್ಷೇತ್ರ (ಹಿಂದಿನ ಮಂಗಳೂರು )ದಲ್ಲಿ ಬಿಜೆಪಿಗೆ ಸತತ 8ನೇ ಜಯ. ಕಾಂಗ್ರೆಸ್‌ಗೆ ಸತತ 8ನೇ ಸೋಲು.
* ನಳಿನ್‌ಕುಮಾರ್ ದ.ಕ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಜಯ ಸಾಧಿಸಿದ್ದಾರೆ. ಹಿಂದಿನ ಮಂಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಜನಾರ್ದನ ಪೂಜಾರಿ ಮತ್ತು ಬಿಜೆಪಿಯ ಧನಂಜಯಕುಮಾರ್ ಸತತ 4 ಬಾರಿ ಆಯ್ಕೆಯಾಗಿದ್ದರು.
* 1991ರಲ್ಲಿ ಪ್ರಥಮ ಬಾರಿಗೆ ಬಿಜೆಪಿ ಮಂಗಳೂರು ಕ್ಷೇತ್ರವನ್ನು ಕಾಂಗ್ರೆಸ್‌ನಿಂದ ಕಸಿದು ಕೊಂಡಿತ್ತು. ಇಂದಿಗೂ ಕ್ಷೇತ್ರ ಕಾಂಗ್ರೆಸ್‌ಗೆ ಮರೀಚಿಕೆಯಾಗಿದೆ.

ಕಾಂಗ್ರೆಸ್ ಸೋಲಿಗೆ ಕಾರಣ
* ಪ್ರಚಾರಕ್ಕೆ ನಾಯಕರ ನಿರುತ್ಸಾಹ
* ರಾಜ್ಯ ಸರ್ಕಾರ ವಿರೋಧಿ ಅಲೆ
* ಸಂಘಟನೆ ಕೊರತೆ
* ಅಲ್ಪಸಂಖ್ಯಾತ ಮತಗಳ ಅತಿಯಾದ ನಿರೀಕ್ಷೆ
* ನೆಗೆಟಿವ್ ಪ್ರಚಾರ
* ಹಿಂದು ವಿರೋಧಿ ಪಕ್ಷ ಎನ್ನುವ ಹಣೆಪಟ್ಟಿ

ಬಿಜೆಪಿ ಗೆಲುವಿಗೆ ಕಾರಣ
* ಮೋದಿ ಅಲೆ
* ಅರ್ಪಣಾ ಮನೋಭಾವದ ಕಾರ್ಯಕರ್ತರು
* ಆರ್‌ಎಸ್‌ಎಸ್‌ನ ವ್ಯವಸ್ಥಿತ ಕಾರ್ಯತಂತ್ರ
* ಪಾಸಿಟಿವ್ ಪ್ರಚಾರ
* ಹಿಂದು ಮತಗಳನ್ನು ಸೆಳೆಯಲು ಯಶಸ್ವಿ

Leave a Reply

Your email address will not be published. Required fields are marked *