ಕಾರ್ಯಾರಂಭ ಮಾಡಿಲ್ಲ ಕುಡಿವ ನೀರಿನ ಘಟಕ

>

ಪ್ರವೀಣ್‌ರಾಜ್ ಕೊಲ ಕಡಬ
ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಮಹಾತ್ವಾಕಾಂಕ್ಷಿ ಯೋಜನೆ ನಿಮಿತ್ತ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ(ಕೆಆರ್‌ಡಿಎಲ್)ದಿಂದ ಸವಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಳವಡಿಸಲಾದ ಎರಡು ಘಟಕಗಳು ಕಾರ‌್ಯಾರಂಭ ಮಾಡದೆ ಯೋಜನೆ ವ್ಯರ್ಥವಾಗಿದೆ.
ಸವಣೂರು-ಕಾಣಿಯೂರು ಮುಖ್ಯ ರಸ್ತೆ ಸಮೀಪ ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಹಸಿರು ಮೇವಿನ ತೋಟದ ಎದುರು ಅಟ್ಟೋಳೆ ಎಂಬಲ್ಲಿ ಮತ್ತು ಪಾಲ್ತಾಡಿ ಗ್ರಾಮದ ಬಂಬಿಲ-ಅಂಕತ್ತಡ್ಕ ರಸ್ತೆಯ ಮಂಜುನಾಥನಗರ ಅಂಗನವಾಡಿ ಕೇಂದ್ರದ ಮುಂಭಾಗ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕಗಳು ಇನ್ನೂ ಕಾರ್ಯಾರಂಭ ಮಾಡಿಲ್ಲ.
ಈ ಘಟಕಗಳ ಕಾಮಗಾರಿ ಆರಂಭವಾಗಿ ಒಂದೂವರೆ ವರ್ಷ ಕಳೆದರೂ ಇನ್ನೂ ಪೂರ್ಣಗೊಳಿಸಲು ಸಂಬಂಧಪಟ್ಟವರಿಗೆ ಸಾಧ್ಯವಾಗಿಲ್ಲ. ಬೇಸಿಗೆಯ ಬಿಸಿ ದಿನದಿಂದ ದಿನಕ್ಕೆ ಏರುತ್ತಿದೆ. ನೀರಿನ ಸಮಸ್ಯೆಯೂ ಹೆಚ್ಚುತ್ತಿದೆ. ಜನರಿಗೆ ನೀರು ಪೂರೈಸಬೇಕಾದ ಈ ಘಟಕಗಳು ನಿರ್ಮಾಣವಾದರೂ ಉಪಯೋಗವಿಲ್ಲದಂತಾಗಿದೆ.
ಘಟಕದ ಕಾಮಗಾರಿ ಪೂರ್ಣಗೊಂಡಿದ್ದು, ವಿದ್ಯುತ್ ಸಂಪರ್ಕ ನೀಡಲು ಬಾಕಿಯಿದೆ. ಈಗಾಗಲೇ ನೀರು ಸಂಗ್ರಹಣಾ ಟ್ಯಾಂಕ್ ಮತ್ತು ಇನ್ನಿತರ ಶುದ್ಧೀಕರಣ ಉಪಕರಣಗಳು ಸೇರಿದಂತೆ ಲಕ್ಷಾಂತರ ರೂ. ವೆಚ್ಚದ ಸಲಕರಣೆಗಳನ್ನು ಘಟಕದಲ್ಲಿ ಅಳವಡಿಸಲಾಗಿದ್ದರೂ ಉಪಯೋಗ ಆರಂಭಗೊಳ್ಳದೆ ತುಕ್ಕು ಹಿಡಿಯಲಾರಂಭಿಸಿದೆ.
ಈ ಘಟಕಗಳ ಕಾಮಗಾರಿ ಹೊಣೆ ಕೆಆರ್‌ಡಿಎಲ್ ನಿಗಮ ವಹಿಸಿಕೊಂಡಿದ್ದು, ಕಾಮಗಾರಿ ಪೂರ್ಣಗೊಂಡ ಅನಂತರ ನಿರ್ವಹಣೆ ಜವಾಬ್ದಾರಿ ಸ್ಥಳೀಯ ಗ್ರಾಪಂಗೆ ಹಸ್ತಾಂತರಿಸಲಾಗುತ್ತದೆ. ಈಗಾಗಲೇ ಗ್ರಾಪಂನಿಂದ ಘಟಕಕ್ಕೆ ವಿದ್ಯುತ್ ಸಂಪರ್ಕ ಮಂಜೂರಾಗಿಸಲು ನಿರಾಕ್ಷೇಪಣಾ ಪತ್ರ ನೀಡಿ ಮೂರು ತಿಂಗಳು ಕಳೆದಿವೆ. ಆದರೆ ಕೆಆರ್‌ಡಿಎಲ್ ಅಧಿಕಾರಿಗಳ ನಿರ್ಲಕ್ಷೃದಿಂದ ಇನ್ನೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿಲ್ಲ.
ಎರಡು ರೂ. ನಾಣ್ಯ ಹಾಕಿದರೆ 20 ಲೀಟರ್ ಶುದ್ಧ ಕುಡಿಯುವ ನೀರು ಪಡೆಯುವ ವ್ಯವಸ್ಥೆ ಈ ಘಟಕಗಳಲ್ಲಿ ಅಳವಡಿಸಲಾಗುತ್ತಿದ್ದು, ಆ ಮೂಲಕ ಜನರಿಗೆ ಕುಡಿಯುವ ನೀರು ದೊರಕಿಸುವ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆ ಇದು.

ಸವಣೂರು ಗ್ರಾಪಂ ವ್ಯಾಪ್ತಿಯಲ್ಲಿ ಎರಡು ಶುದ್ಧ ಕುಡಿಯುವ ನೀರು ಪೂರೈಕೆಯ ಘಟಕ ಸ್ಥಾಪಿಸಲಾಗಿದ್ದು, ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಕಾಮಗಾರಿ ಪೂರ್ಣಗೊಳಿಸಿದ ಬಳಿಕ ಅದರ ನಿರ್ವಹಣೆ ಜವಾಬ್ದಾರಿ ಗ್ರಾಪಂ ವಹಿಸಿಕೊಳ್ಳಲಿದೆ. ಗ್ರಾಪಂ ವತಿಯಿಂದ ಆಗಬೇಕಾದ ಎಲ್ಲ ಕೆಲಸಗಳನ್ನೂ ಪೂರ್ತಿಗೊಳಿಸಿದ್ದು, ಕೆಆರ್‌ಡಿಎಲ್ ನಿಗಮದ ಅಧಿಕಾರಿಗಳಿಗೆ ಕೆಲಸ ಬೇಗ ಮುಗಿಸುವಂತೆ ಮನವಿ ಸಲ್ಲಿಸಲಾಗಿದೆ.
ಇಂದಿರಾ ಬಿ.ಕೆ, ಅಧ್ಯಕ್ಷೆ ಸವಣೂರು ಗ್ರಾಪಂ

Leave a Reply

Your email address will not be published. Required fields are marked *