ಯಾದಗಿರಿ ಕೇಂದ್ರ ಬಸ್ ನಿಲ್ದಾಣದಲ್ಲೇ ನೀರಿಲ್ಲ! ಬಡ ಪ್ರಯಾಣಿಕರ ಪರದಾಟ

ಯಾದಗಿರಿ: ಅಂತರ್ಜಲ ಕುಸಿತದಿಂದಾಗಿ ಇಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿದ್ದ ಆರ್​ಒ ಪ್ಲಾಂಟ್​ನಲ್ಲಿ ಶುದ್ಧ ಕುಡಿವ ನೀರು ಸರಬರಾಜು ಸ್ಥಗಿತಗೊಂಡ ಕಾರಣ ನೀರಿಗೆ ಹಾಹಾಕಾರ ಏಳುವಂತಾಗಿದೆ.

ಬೇಸಿಗೆ ಸಂದರ್ಭದಲ್ಲಿ ಕೊಳವೆ ಬಾವಿಗಳಲ್ಲಿ ನೀರು ಬತ್ತುತ್ತಿದ್ದು ಇದರಿಂದ ಜನತೆ ತೊಂದರೆ ಅನುಭವಿಸುತ್ತಿರುವುದು ಸಾಮಾನ್ಯವಾಗಿದೆ. ಈ ಸಮಸ್ಯೆ ಇದೀಗ ಬಸ್ ನಿಲ್ದಾಣಕ್ಕೂ ಕಾಲಿಟ್ಟಿದ್ದು, ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಕುಡಿವ ನೀರಿನ ಸಮಸ್ಯೆ ಎದುರಾಗಿದ್ದು, ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ಇಲ್ಲಿನ ಕೇಂದ್ರ ಬಸ್ ನಿಲ್ದಾಣಕ್ಕೆ ಆಗಮಿಸುತ್ತಾರೆ. ಅಲ್ಲದೆ ಪ್ರಯಾಣಿಕರ ಅನುಕೂಲಕ್ಕಾಗಿಯೇ ಕೆಎಸ್ಆರ್​ಟಿಸಿಯಿಂದ ಆರ್​ಒ ಪ್ಲಾಂಟ್ ಸ್ಥಾಪನೆ ಮಾಡಲಾಗಿದೆಯಾದರೂ ಅದರಿಂದ ಒಂದು ಹನಿ ನೀರು ಕೂಡಾ ಸಿಗುತ್ತಿಲ್ಲ ಎಂಬ ಆರೋಪ ಪ್ರಯಾಣಿಕರದ್ದಾಗಿದೆ.

ಬೇಸಿಗೆ ದಿನವಾದ ಕಾರಣ ಬಸ್ ನಿಲ್ದಾಣದಲ್ಲಿ ಕುಡಿವ ನೀರಿನ ಅವಶ್ಯಕತೆ ಹೆಚ್ಚಿರುತ್ತದೆ. ಅಲ್ಲದೆ ಬಸ್​ನಿಲ್ದಾಣಕ್ಕೆ ಬಹುತೇಕ ಗ್ರಾಮೀಣ ಭಾಗದಿಂದಲೇ ಜನತೆ ಆಗಮಿಸುತ್ತಾರೆ. ಪುಟ್ಟ ಮಕ್ಕಳಂತೂ ನೀರಿಗಾಗಿ ಪರಿತಪ್ಪಿಸುತ್ತಾರೆ. ಆದರೆ ನಿಲ್ದಾಣದಲ್ಲಿ ನೀರಿಲ್ಲದೆ ಬಡಜನತೆ ಅನಿವಾರ್ಯವಾಗಿ 15 ರಿಂದ 20 ರೂ. ಹಣ ನೀಡಿ ನೀರಿನ ಬಾಟಲ್ ಖರೀದಿಸಿ ಕುಡಿಯುವಂತಾಗಿದೆ. ಅಲ್ಲದೆ ಸಧ್ಯ ಪಿಯುಸಿ ಪರೀಕ್ಷೆಗಳು ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭಗೊಳ್ಳಲಿವೆ. ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳಿಗೆ ಬಸ್​ ನಿಲ್ದಾಣ ಹಾಗೂ ರೈಲು ನಿಲ್ದಾಣಗಳಲ್ಲಿನ ನೀರಿನ ಅರವಟ್ಟಿಗೆಗಳೇ ಆಸರೆಯಾಗಿವೆ. ಇಂಥ ಪರಿಸ್ಥಿತಿಯಲ್ಲಿ ಕೇಂದ್ರ ಬಸ್ ನಿಲ್ದಾಣದಲ್ಲಿ ನೀರಿಲ್ಲದೆ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ.

ಸಾರಿಗೆ ಸಂಸ್ಥೆಗೆ ಪ್ರಯಾಣಿಕರಿಂದ ಆದಾಯ ಬೇಕು. ಆದರೆ ಮೂಲಸೌಕರ್ಯ ಒದಗಿಸುವ ಚಿಂತೆ ಇಲ್ಲ. ಬೇಸಿಗೆ ವೇಳೆ ಬಸ್ನಿಲ್ದಾಣಗಳಲ್ಲಿ ಕಡ್ಡಾಯವಾಗಿ ನೀರಿನ ವ್ಯವಸ್ಥೆ ಕಲ್ಪಿಸಬೇಕಾದ ಅಧಿಕಾರಿಗಳು ಇದಕ್ಕೂ ತನಗೂ ಸಂಬಂಧವಿಲ್ಲದಂತೆ ನಡೆದುಕೊಳ್ಳುತ್ತಿದ್ದು, ಕೂಡಲೇ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಪ್ರಯಾಣಿಕರಾದ ಸೋಮನಾಥರಡ್ಡಿ ಯಲ್ಹೇರಿ ಆಗ್ರಹಿಸಿದ್ದಾರೆ.

ಬಸ್ ನಿಲ್ದಾಣದಲ್ಲಿದ್ದ ಕೊಳವೆ ಬಾವಿಯಲ್ಲಿ ನೀರು ಬತ್ತಿದ ಕಾರಣ ಕುಡಿವ ನೀರಿಗೆ ಸಮಸ್ಯೆ ಎದುರಾಗಿದೆ. ನಿಲ್ದಾಣದಲ್ಲಿ ಸದ್ಯ 3 ಪಾಯಿಂಟ್​ಗಳ (ಜಲಮೂಲ)ನ್ನು ಗುರುತಿಸಲಾಗಿದ್ದು, ಕೊಳವೆ ಬಾವಿ ಕೊರೆಯುವ ಯಂತ್ರಗಳು ಸಿಗುತ್ತಿಲ್ಲ. ಯಂತ್ರಗಳು ಬಂದ ನಂತರ ಸಮಸ್ಯೆಗೆ ಪರಿಹಾರ ದೊರೆಯಲಿದೆ.
|ಸಂತೋಷ ಗೋಗೇರಿ ಡಿಸಿ ಕೆಎಸ್ಆರ್ಟಿಸಿ