ರಾಜು ಹೊಸಮನಿ ನರಗುಂದ
ಕಳೆದ ವರ್ಷ ಮಳೆಯಿಲ್ಲದೆ ಬರಗಾಲಕ್ಕೆ ಸಿಲುಕಿದ್ದ ತಾಲೂಕಿನ ರೈತರು ಈ ವರ್ಷ ಮಲಪ್ರಭಾ ಪ್ರವಾಹದಿಂದ ಮತ್ತೆ ಆರ್ಥಿಕ ಬಿಕ್ಕಟ್ಟು ಎದುರಿಸುವಂತಾಗಿದೆ. ನವಿಲುತೀರ್ಥ ಜಲಾಶಯದಿಂದ 15 ಸಾವಿರ ಕ್ಯೂಸೆಕ್ ನೀರು ಹರಿಬಿಟ್ಟಿದ್ದರಿಂದ ವಿವಿಧ ಗ್ರಾಮಗಳಲ್ಲಿ ತೋಟಗಾರಿಕೆ ಹಾಗೂ ಇತರ ಬೆಳೆಗಳು ಜಲಾವೃತವಾಗಿವೆ.
ತಾಲೂಕಿನ ರೈತರು ಮುಂಗಾರು ಹಂಗಾಮಿನಲ್ಲಿ ಒಟ್ಟು 22,120 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಕೃಷಿ ಬೆಳೆಗಳನ್ನು ಬೆಳೆದಿದ್ದರು. ಈ ಪೈಕಿ 28 ಹೆಕ್ಟೇರ್ ಹೆಸರು, 240 ಹೆಕ್ಟೇರ್ ಗೋವಿನಜೋಳ, 5 ಹೆಕ್ಟೇರ್ ಹತ್ತಿ, 68 ಹೆಕ್ಟೇರ್ ಕಬ್ಬು, 2 ಹೆಕ್ಟೇರ್ ಶೇಂಗಾ, 13 ಹೆಕ್ಟೇರ್ ಸೂರ್ಯಕಾಂತಿ ಸೇರಿ ಒಟ್ಟು 356 ಹೆಕ್ಟೇರ್ ಪ್ರದೇಶದ ಪ್ರಮುಖ ಬೆಳೆಗಳು ಜಲಾವೃತವಾಗಿ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ.
ಪ್ರತಿ ಹೆಕ್ಟೇರ್ ಮಳೆಯಾಶ್ರಿತ ಬೆಳೆಗಳಿಗೆ 13,600 ರೂಪಾಯಿ, ನೀರಾವರಿ ಬೆಳೆಗಳಿಗೆ 25,000 ರೂ. ಪರಿಹಾರವನ್ನು ಪ್ರಕೃತಿ ವಿಕೋಪ ನಿಧಿಯಿಂದ ನೀಡಬೇಕು. ಆದರೆ, ಮಲಪ್ರಭಾ ಅಚ್ಚುಕಟ್ಟು ಪ್ರದೇಶಗಳಲ್ಲಿನ ಕೆಲ ರೈತರ ಜಮೀನುಗಳಲ್ಲಿ ರಾವಿ (ಮರಳು ಮಿಶ್ರಿತ ಮಣ್ಣು) ಆವರಿಸಿಕೊಂಡಿದೆ. ಇಂತಹ ರೈತರಿಗೆ ಬೆಳೆ ಹಾನಿ ಜತೆಗೆ ಜಮೀನು ಸರಿಪಡಿಸಿಕೊಳ್ಳಲು ಪ್ರತಿ ಹೆಕ್ಟೇರ್‌ಗೆ 12,200 ರೂಪಾಯಿ ಹೆಚ್ಚುವರಿ ಪರಿಹಾರ ನೀಡಬೇಕು. ಇನ್ನು 900 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ತೋಟಗಾರಿಕೆ ಬೆಳೆ ಬೆಳೆಯಲಾಗಿದೆ. ಈ ಪೈಕಿ 70 ಹೆಕ್ಟೇರ್ ಪೇರಲ, 103 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಮೆಣಸಿನಕಾಯಿ, ಉಳ್ಳಾಗಡ್ಡಿ, ಹಿರೇಕಾಯಿ, ಟೊಮ್ಯಾಟೊ, ಬದನೆಕಾಯಿ, ಕ್ಯಾಬೀಜ್, ತೆೆಂಗು, ಚಿಕ್ಕು, ಕರಿಬೇವು, ಲಿಂಬೆಹಣ್ಣು, ನುಗ್ಗೆ, ಬೆಂಡೆ, ಮೂಲಂಗಿ, ಸೊಪ್ಪು ಸೇರಿ ಒಟ್ಟು 174 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ವಿವಿಧ ತರಕಾರಿ ಬೆಳೆಗಳು ಹಾನಿಯಾಗಿದೆ.
ಎನ್‌ಡಿಆರ್‌ಎಫ್ ನಿಯಮದ ಪ್ರಕಾರ ತೋಟಗಾರಿಕೆ ಬೆಳೆಗಳಾದ ತರಕಾರಿ ಬೆಳೆದ ರೈತರಿಗೆ ಪ್ರತಿ ಹೆಕ್ಟೇರ್‌ಗೆ 25 ಸಾವಿರ ರೂಪಾಯಿ ಹಾಗೂ ಹಣ್ಣಿನ ಬೆಳೆಗಳಿಗೆ 28 ಸಾವಿರ ರೂಪಾಯಿ , ಮಳೆಯಾಶ್ರಿತ ಬೆಳೆಗಳಿಗೆ 13,600 ರೂಪಾಯಿ ಪರಿಹಾರ ನೀಡಲು ಅವಕಾಶವಿದೆ. ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಲಾಗುವುದು.
-ಶೈಲೇಂದ್ರ ಬಿರಾದಾರ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ