ನೀರೆಂದರೆ ಯಾಕಿಷ್ಟು ನಿರ್ಲಕ್ಷೃ?

< ಪ್ರತಿದಿನ ಲಕ್ಷಾಂತರ ಲೀಟರ್ ನೀರು ಪೋಲು >

ಶ್ರೀಪತಿ ಹೆಗಡೆ ಹಕ್ಲಾಡಿ, ಬಿಜೂರು

ಶಿಲೆಕಲ್ಲು ಕ್ವಾರಿಯ ನೀರು ಬಳಸಿಕೊಂಡು ಹಕ್ಲಾಡಿ ಗ್ರಾಮ ಪಂಚಾಯಿತಿ ಕುಡಿಯುವ ನೀರು ಸಮಸ್ಯೆ ನೀಗಿಸಿಕೊಂಡರೆ, ಬಿಜೂರು ಗ್ರಾಮ ಪಂಚಾಯಿತಿ ಟ್ಯಾಂಕ್ ತುಂಬಿ ಸೋರಿ ಹೋಗುತ್ತಿರುವ ಲಕ್ಷಾಂತರ ಲೀಟರ್ ನೀರು ಬಳಸಿಕೊಳ್ಳುವ ಬದಲು ಶಾಲಾ ಮೈದಾನದಲ್ಲಿ ಬಾವಿ ತೆಗೆಯುವ ಹಠಕ್ಕೆ ಬಿದ್ದಿದೆ.

ಪ್ರತಿದಿನ ಬಿಜೂರು ಶಾಲಾ ಮೈದಾನದಲ್ಲಿರುವ ಸಾರ್ವಜನಿಕ ಕುಡಿಯುವ ನೀರು ಪೂರೈಕೆ ಟ್ಯಾಂಕ್‌ನಿಂದ ಮೂರ‌್ನಾಲ್ಕು ಗಂಟೆ ನೀರು ಸೋರಿ ಹೋಗುತ್ತಿದೆ. ಅದೂ ಸಣ್ಣ ಪುಟ್ಟ ಸೋರಿಕೆಯಲ್ಲ, ಗಜಗಾತ್ರದಲ್ಲಿ ಟ್ಯಾಂಕ್ ತುಂಬಿ ನೀರು ಸೋರುತ್ತಿರುತ್ತದೆ. ಹೀಗೆ ನೀರು ಹಳ್ಳವಾಗಿ ಪೋಲಾಗುತ್ತಿದೆ. ಇದೇ ನೀರಿಗೆ ನೂರಾರು ಮನೆಗಳ ಕುಡಿಯುವ ನೀರು ಸಮಸ್ಯೆ ಪೂರೈಸುವಷ್ಟು ತಾಕತ್ತಿದೆ. ಇಷ್ಟೆಲ್ಲ ಇದ್ದರೂ ಬಿಜೂರು ಗ್ರಾಮಸ್ಥರು ನೀರಿಗಾಗಿ ಖಾಲಿ ಕೊಡ ಹಿಡಿದು ಪ್ರತಿಭಟನೆ ನಡೆಸಿದ್ದಾರೆ! ನೀರಿನ ಸಮಸ್ಯೆ ಅತಿ ದೊಡ್ಡ ಶಾಲಾ ಮೈದಾನಕ್ಕೂ ಸಂಚಕಾರ ತರುತ್ತಿದೆ.

ಬಿಜೂರು ಬಯಲಲ್ಲಿ ನಾಲ್ಕೈದು ವರ್ಷದ ಹಿಂದೆ ಗೋಮಾಳದಲ್ಲಿರುವ ಕೆರೆಯಲ್ಲಿ ಬಾವಿ ತೆಗೆದಿದ್ದು, ಬಾವಿಯಲ್ಲಿ 18 ಫೀಟ್ ನೀರಿದೆ. ಬಾವಿ ಕೂಡ ಫಿನಿಷ್ ಆಗಿಲ್ಲ. ಬಾವಿಯ ಕೆಲಸ ಪೂರ್ಣಗೊಳಿಸಿ, ಹೂಳೆತ್ತಿದರೆ ಬಾವಿಯಲ್ಲಿನ ನೀರಿನ ಸಂಗ್ರಹ ಕೂಡ ಹೆಚ್ಚಿ ಕುಡಿಯುವ ನೀರಿನ ಸಮಸ್ಯೆ ಪರಿಹಾರ ಮಾಡುವ ತಾಕತ್ತಿದ್ದರೂ ಉಪಯೋಗಕ್ಕೆ ಇಲ್ಲದಂತಾಗಿದೆ. ಪರಿಸರದ ಮುಖಂಡರೊಬ್ಬರು ದಾನ ನೀಡಿದ ಜಾಗದಲ್ಲಿರುವ ಬಾವಿಯಲ್ಲಿ ಸಾಕಷ್ಟು ನೀರಿದೆ. ಆದೂ ಬಳಕೆ ಆಗುತ್ತಿಲ್ಲ. ಬಿಜೂರು ಶಾಲೆ ಸರಹದ್ದಿನಲ್ಲಿ ಐದು ಸರ್ಕಾರಿ ಬಾವಿಯಿದ್ದರೂ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಒಟ್ಟಾರೆ ಬಾವಿ ತೋಡುವುದಕ್ಕೆ ಕೊಟ್ಟಷ್ಟು ಪ್ರಾಮುಖ್ಯತೆ ನೀರಿನ ಮೂಲಕ್ಕೆ ಕೊಡದಿರುವುದೇ ನೀರಿನ ಸಮಸ್ಯೆಗೆ ಮೂಲ.

ಶಾಲೆಗೆ ಮಕ್ಕಳ ಕಳಿಸಲ್ಲವೆಂದ ಎಸ್‌ಡಿಎಂಸಿ ಅಧ್ಯಕ್ಷೆ : ಶತಮಾನ ಕಂಡ ಬಿಜೂರು ಶಾಲೆ ಅಭಿವೃದ್ಧಿ ನಿಟ್ಟಿನಲ್ಲಿ ಶಾಲಾಭಿವೃದ್ಧಿ ಸಮಿತಿ ಹೆಜ್ಜೆ ಇಡಬೇಕಿದ್ದರೂ, ಬಿಜೂರು ಶಾಲೆ ಎಸ್‌ಡಿಎಂಸಿ ಅಧ್ಯಕ್ಷೆ ಶಾಲಾ ಆಟದ ಮೈದಾನದಲ್ಲಿ ಬಾವಿ ತೆಗೆಯಲು ಬಿಡದಿದ್ದರೆ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಹೇಳಿದ್ದಾರೆ. ಶಾಲಾ ಗ್ರೌಂಡ್‌ನಲ್ಲಿ ಬಾವಿ ತೆಗೆಯಲು ಯಾರದ್ದೂ ತಕರಾರಿಲ್ಲ. ಒಂದಿಬ್ಬರು ಶಾಲಾ ಶಿಕ್ಷಕರು ಶಾಲೆ ತಮ್ಮ ಸ್ವಂತ ಆಸ್ತಿಯಂತೆ ಮಾತನಾಡುತ್ತಾರೆ. ಆ ಶಿಕ್ಷಕರ ಶಾಲೆಯಿಂದ ಎತ್ತಂಗಡಿ ಮಾಡಬೇಕು ಎಂದು ಅಧ್ಯಕ್ಷರು ಫರ್ಮಾನು ಹೊರಡಿಸುತ್ತಾರೆ. ಇದು ಸದ್ಯ ಚರ್ಚೆಯ ವಿಷಯ. ಶಾಲಾ ಆಟದ ಮೈದಾನದಲ್ಲಿ ಬಾವಿ ತೆಗೆಯಲು ಬಿಡದಿದ್ದರೆ, ಎಸ್‌ಡಿಎಂಸಿ ಅಧ್ಯಕ್ಷರು ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂಬುದಕ್ಕೆ ಶಾಲಾ ಗ್ರೌಂಡ್ ಅಧ್ಯಕ್ಷರ ಪಿತ್ರಾರ್ಜಿತ ಆಸ್ತಿಯಲ್ಲ ಎಂದು ಹಳೇ ವಿದ್ಯಾರ್ಥಿಗಳು ತಿರುಗೇಟು ನೀಡಿದ್ದಾರೆ.

ಚುನಾವಣೆ ಬಹಿಷ್ಕಾರ ಎಚ್ಚರಿಕೆ: ಬಿಜೂರು ಸರ್ಕಾರಿ ಶಾಲೆಯಲ್ಲಿ ಜಿಲ್ಲೆಯ ಸರ್ಕಾರಿ ಶಾಲೆಗಳ ಆಟದ ಮೈದಾನಗಳಲ್ಲೇ ಒಂದಾಗಿರುವ ದೊಡ್ಡ ಮೈದಾನವಿದೆ. ಶಾಲೆಗಾಗಿ ತೆರೆದ ಬಾವಿ, ನೀರಿನ ಟ್ಯಾಂಕ್ ಇದ್ದು, ಈ ಬಾವಿ ಸನಿಹ ಸರ್ಕಾರಿ ನಿಯಮದ ಪ್ರಕಾರ 200 ಮೀ. ಒಳಗೆ ಬಾವಿ ತೆಗೆಯಲು ಅವಕಾಶ ಇಲ್ಲ. ಆದರೆ ಸರ್ಕಾರ ನಿಯಮ ಪಾಲಿಸಬೇಕಾದ ಜನಪ್ರತಿನಿಧಿಗಳು ಬಾವಿ ತೆಗೆದೇ ಸಿದ್ಧ ಎಂದು ತೊಡೆ ತಟ್ಟುವ ಮೂಲಕ ಆಟದ ಮೈದಾನ ಬಾವಿ ತೂಗುಗತ್ತಿಯಿಂದ ಬಚಾವಾಗಿಲ್ಲ. ಬಾವಿ ತೆಗೆಯಲು ಬೇರೆ ಸ್ಥಳವಿದ್ದರೂ, ಶಾಲಾ ಗ್ರೌಂಡ್‌ನಲ್ಲೇ ಬಾವಿ ಬೇಕು ಎಂಬ ಹಠ ಏಕೆ ಎಂದು ತಿಳಿಯುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಕುಡಿಯುವ ನೀರು ಕೊಡಿ, ಇಲ್ಲದಿದ್ದರೆ ಚುನಾವಣೆ ಬಹಿಷ್ಕಾರ ಮಾಡುತ್ತೇವೆ ಎಂದು ಖಾಲಿ ಕೊಡ ಹಿಡಿದು ನಡೆಸಿದ ಪ್ರತಿಭಟನೆಯಲ್ಲಿ ಬಹಿರಂಗ ಹೇಳಿಕೆ ನೀಡಲಾಗಿದೆ.

ಬಿಜೂರು ಶಾಲೆ ಬಳಿ ಇರುವ ಟ್ಯಾಂಕ್‌ನಿಂದ ಬಿದ್ದು ಹಾಳಾಗುವ ನೀರು ಬಳಸಿಕೊಂಡರೆ ನೂರಾರು ಮನೆಗೆ ಕುಡಿಯುವ ನೀರು ಪೂರೈಕೆ ಮಾಡಬಹುದು. ಪ್ರತಿದಿನ ಟ್ಯಾಂಕ್‌ನಿಂದ ಗಜಗಾತ್ರದಲ್ಲಿ ಸೋರಿ ಹೋಗಿ, ವೇಸ್ಟ್ ಆಗುತ್ತಿದೆ. ಎರಡು ಮೂರು ಗಂಟೆ ಹೀಗೆ ನೀರು ಪೋಲು ಆಗುತ್ತಿದೆ. ಒಂದು ಕಡೆ ಜನರಿಗೆ ನೀರಿನ ಹಾಹಾಕಾರ, ಇನ್ನೊಂದೆಡೆ ಲಕ್ಷಾಂತರ ಲೀಟರ್ ನೀರು ಬಿಜೂರು ಗ್ರಾಪಂ ನಿರ್ಲಕ್ಷೃದಿಂದ ವೇಸ್ಟ್ ಆಗುತ್ತಿದೆ.
ಮಂಜುನಾಥ, ಬಿಜೂರು ಗ್ರಾಮ ನಿವಾಸಿ.

ಟ್ಯಾಂಕ್‌ನಿಂದ ನಿರುಪಯುಕ್ತವಾಗುತ್ತಿರುವ ನೀರು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಗ್ರಾಪಂ ಮೊದಲ ಹೆಜ್ಜೆ ಇಡಬೇಕು. ನಾಗರಿಕರು ಬಾವಿ ಬೇಡಿಕೆಗೆ ಹೇಗೆ ಮಹತ್ವ ನೀಡಿದ್ದಾರೋ ಹಾಗೆಯೇ ಇರುವ ಬಾವಿಗಳ ನೀರು ಸದ್ಬಳಕೆಗೆ ಒತ್ತಾಯಿಸಬೇಕು. ಬಿಜೂರು ಗ್ರಾಪಂ ಗದ್ದೆ ಬಯಲಲ್ಲಿ ತೋಡಿದ ಬಾವಿಯಲ್ಲಿ ಅಗಾಧ ನೀರಿದ್ದು, ಬಾವಿ ಹೂಳೆತ್ತಿ ಕೆರೆ ದುರಸ್ತಿ ಮಾಡಿದರೆ ಸಾಕಷ್ಟು ನೀರು ಬಾವಿಯಲ್ಲಿ ಸಿಗುತ್ತದೆ. ಬಾವಿ ನೀರು ಫಿಲ್ಟರ್ ಮಾಡಿ ನೀರು ಪೂರೈಸಬಹುದು. ರುದ್ರಭೂಮಿ ಜಾಗದಲ್ಲಿ ಟ್ಯಾಂಕ್ ನಿರ್ಮಿಸಲು ಮುಂದಾಗಿದ್ದು, ಅಲ್ಲೇ ಬಾವಿ ತೆಗೆದರೆ ಸಮೃದ್ಧ ನೀರು ಸಿಗುತ್ತದೆ. ಬಿಜೂರಿನಲ್ಲಿ ಸಾಕಷ್ಟು ನೀರಿದ್ದರೂ ಅದರ ಬಳಸಿಕೊಳ್ಳುವ ನಿಟ್ಟಿನಲ್ಲಿ ಸೋಲಾಗಿದೆ.
ರಾಜು ಬಿಜೂರು, ಪರಿಸರ ನಿವಾಸಿ.