ಮದ್ದೂರು: ಏಳು ತಿಂಗಳಿಂದ ವೇತನ ನೀಡಿಲ್ಲವೆಂದು ಆರೋಪಿಸಿ ಪಟ್ಟಣದ ಕಾವೇರಿ ನೀರಾವರಿ ಕಚೇರಿ ಎದುರು ನೀರುಗಂಟಿಗಳು ಸೋಮವಾರ ಪ್ರತಿಭಟನೆ ನಡೆಸಿದರು.
ಕಚೇರಿ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು, ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಟಾಸ್ಕ್ ವರ್ಕ್ಸ್ ದಿನಗೂಲಿ ನೌಕರರ ಸಂಘದ ಅಧ್ಯಕ್ಷ ಜಗದೀಶ್ ಮಾತನಾಡಿ, ತಾಲೂಕಿನಲ್ಲಿ 44 ನೀರಗಂಟಿಗಳು ಕೆಲಸ ನಿರ್ವಹಿಸುತ್ತಿದ್ದು, 7 ತಿಂಗಳುಗಳಿಂದ ಸಂಬಳ ನೀಡದೆ ಅಧಿಕಾರಿಗಳು ನಮ್ಮ ಬಳಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಸಂಬಳ ಕೇಳಿದರೆ ಉಡಾಫೆಯಿಂದ ಉತ್ತರಿಸುತ್ತಾರೆ ಎಂದು ದೂರಿದರು.
ಸಂಬಳ ನೀಡುವಂತೆ ಹಲವಾರು ಬಾರಿ ಅಧಿಕಾರಿಗಳಿಗೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಸಂಬಳ ನೀಡದ ಕಾರಣ ನಾವುಗಳು ಸಂಸಾರ ನಿರ್ವಹಣೆ ಮಾಡಲು ತುಂಬಾ ಕಷ್ಟಕರವಾಗಿದ್ದು, ಶೀಘ್ರ ಸಂಬಳ ನೀಡದೆ ಹೋದರೆ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ನಾಗರಾಜು ಮಾತನಾಡಿ, ಒಂದು ವಾರದೊಳಗೆ ವೇತನ ಕೊಡಿಸಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ಪ್ರತಿಭಟನೆಯಲ್ಲಿ ಬಸವರಾಜು, ಶ್ರೀಧರ್, ಪುಟ್ಟೇಗೌಡ, ರಘು, ಕುಮಾರ, ರವಿ, ಅಲಮೇಲಮ್ಮ, ಶ್ಯಾಮಲಮ್ಮ, ಭಾರತಿ ಸೇರಿದಂತೆ ಇತರರು ಇದ್ದರು.