ತೂಗಾಡುತ್ತಿದೆ ವಾಟರ್ ಟ್ಯಾಂಕ್!

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
ಐದು ವರ್ಷದಿಂದ ಶಿಥಿಲಾವಸ್ಥೆಯಲ್ಲಿರುವ ಓವರ್‌ಹೆಡ್ ನೀರಿನ ಟ್ಯಾಂಕ್ ನೆಲಸಮಗೊಳಿಸುವಂತೆ ಹೋರಾಟ ನಡೆದಿದೆ. ತಾಲೂಕು ಹಾಗೂ ಜಿಲ್ಲಾಮಟ್ಟದ ದಲಿತ ಕುಂದುಕೊರತೆ ಸಭೆಯಲ್ಲಿ ಪ್ರತಿಸಲವೂ ಈ ಟ್ಯಾಂಕ್ ಗಮನ ಸೆಳೆದಿದೆ. ಆದರೂ ನೀರಿನ ಟ್ಯಾಂಕ್ ಇನ್ನೂ ತೆರವು ಮಾಡಿಲ್ಲ.

ಟ್ಯಾಂಕ್ ಬಳಿ ನೆಲೆಸಿರುವ ಕುಟುಂಬಗಳು ಐದು ವರ್ಷದಿಂದ ನೆಮ್ಮದಿಯ ನಿದ್ದೆ ಮಾಡಿಲ್ಲ. ಚಿಕ್ಕ ಶಬ್ದವಾದರೂ ಟ್ಯಾಂಕ್ ಬಿತ್ತು ಎಂದು ಮನೆಯಿಂದ ಹೊರಗೆ ಓಡಿಬರುತ್ತಾರೆ. ಪ್ರತಿದಿನ ಮಾನಸಿಕ ನೆಮ್ಮದಿ ಕಳೆದುಕೊಂಡು ಅಂಗೈಯಲ್ಲಿ ಜೀವ ಹಿಡಿದು ದಿನ ಕಳೆಯುತ್ತಿದ್ದಾರೆ. 1983-84ರಲ್ಲಿ ಗ್ರಾಮೀಣ ನೀರು ಪೂರೈಕೆ ಯೋಜನೆ ಮೂಲಕ ಗೋಪಾಡಿ ಬೀಜಾಡಿ ಗ್ರಾಮದ ಕುಡಿಯುವ ನೀರು ಪೂರೈಕೆಗಾಗಿ ಓವರ್‌ಹೆಡ್ ನೀರಿನ ಟ್ಯಾಂಕ್ ನಿರ್ಮಿಸಲಾಯಿತು. ಸ್ಥಳೀಯರಿಗೆ ನೀರು ಕೊಡುವ ಭರವಸೆಯಲ್ಲಿ ಟ್ಯಾಂಕ್ ನಿರ್ಮಿಸಿದ್ದು, ದುಸ್ಥಿತಿಯಿಂದ ಸ್ಥಳೀಯ ನಿವಾಸಿಗಳಿಗೆ ದುಸ್ವಪ್ನವಾಗಿ ಕಾಡುತ್ತಿದೆ.

ಮನೆಗಳ ಮಧ್ಯೆ ಇದೆ ಟ್ಯಾಂಕ್: ಕೋಟೇಶ್ವರ ರಾಜ್ಯ ಹೆದ್ದಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ-66 ನಡುವೆ ನಾಲ್ಕು ಮನೆ ಸೇರಿ ಐದು ಕುಟುಂಬ ವಾಸ ಮಾಡುತ್ತಿದ್ದು, ಮಕ್ಕಳು ಹಾಗೂ ದೊಡ್ಡವರು ಸೇರಿ 20ರಷ್ಟು ಜನಸಂಖ್ಯೆ ಇದೆ. ಮನೆಗಳ ಸಮುಚ್ಚಯ ಮಧ್ಯೆ ಓವರ್‌ಹೆಡ್ ವಾಟರ್ ಟ್ಯಾಂಕ್ ಇದೆ. ಟ್ಯಾಂಕ್ ಶಿಥಿಲಾವಸ್ಥೆಯಲ್ಲಿರುವುದರಿಂದ ದಲಿತ ಕುಟುಂಬಕ್ಕಷ್ಟೇ ಅಲ್ಲ, ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುವ ವಾಹನಗಳಿಗೂ ಅಪಾಯವಿದೆ. ದಿನಂಪ್ರತಿ ಟ್ಯಾಂಕ್ ಬಳಿ ನೂರಾರು ಜನರು ಸಂಚರಿಸುತ್ತಾರೆ. ವಾಟರ್ ಟ್ಯಾಂಕ್ ದೊಡ್ಡ ಗಾಳಿ ಬಂದರೆ ಸಾಕು, ಗಾಳಿ ಬಂದ ಕಡೆ ವಾಲುತ್ತದೆ.

ಮನೆ ದುರಸ್ತಿಗೆ ಹಿಂದೇಟು: ಯಾವಾಗ ಓವರ್‌ಹೆಡ್ ವಾಟರ್ ಟ್ಯಾಂಕ್ ಅಲ್ಲಾಡಲು ಆರಂಭಿಸಿತೋ ಅಂದಿನಿಂದ ಈ ಪ್ರದೇಶದಲ್ಲಿ ಮನೆ ದುರಸ್ತಿ ಕಾರ್ಯಕ್ಕೆ ಯಾರೂ ಮುಂದಾಗುತ್ತಿಲ್ಲ. ಮಳೆಗಾಲಕ್ಕೆ ಮುನ್ನ ಮಾಡಿಗೆ ಟಾರ್ಪಾಲ್ ಹೊದಿಸಿ, ಮಳೆ ನೀರು ಒಳಗೆ ಬಾರದಂತೆ ತೇಪೆ ಹಾಕಿದರೂ, ಜೋರು ಮಳೆ ಬಂದರೆ ಮನೆ ಒಳಗೆ ಪಾತ್ರೆಯಿಟ್ಟು ನೀರು ಹಿಡಿದು ಹೊರ ಹಾಕಬೇಕಾಗುತ್ತದೆ. ಮನೆ ದುರಸ್ತಿ ಬಳಿಕ ಟ್ಯಾಂಕ್ ಬಿದ್ದರೆ ಮಾಡಿದ ಕೆಲಸ ವ್ಯರ್ಥವಾಗುತ್ತದೆ. ಜೋರು ಗಾಳಿ ಬೀಸಿ ಮಳೆ ಸುರಿದರೆ, ಟ್ಯಾಂಕ್ ಹತ್ತಿರದ ಮನೆಯಲ್ಲಿ ವಾಸ ಮಾಡುವವರು ಬೇರೊಂದು ಜಾಗಕ್ಕೆ ಹೋಗಿ, ಗಾಳಿ ಮಳೆ ಕಡಿಮೆಯಾದ ಬಳಿಕ ಬಂದು ಮನೆ ಸೇರುತ್ತಾರೆ. ಟ್ಯಾಂಕ್ ಗಾಳಿ ಮಳೆಗೆ ಅಲುಗಾಡುವುದು ಕಂಡರೆ ಹತ್ತಿರ ಹೋಗುವುದಕ್ಕೂ ಭಯವಾಗುತ್ತದೆ.

ಐದು ವರ್ಷದಿಂದ ದಲಿತ ಕುಂದುಕೊರತೆ ಸಭೆಯಲ್ಲಿ ಶಿಥಿಲಗೊಂಡ ವಾಟರ್ ಟ್ಯಾಂಕ್ ವಿಚಾರ ಪ್ರಸ್ತಾಪಿಸಲಾಗಿದೆ. ಅಧಿಕಾರಿಗಳ ಭರವಸೆ ಕೇಳಿ, ಇವತ್ತು ಟ್ಯಾಂಕ್ ತೆರವು ಮಾಡುತ್ತಾರೆ, ನಾಳೆ ಮಾಡುತ್ತಾರೆ ಎಂದು ನಂಬಿ ಐದು ವರ್ಷ ಕಳೆದರೂ ಟ್ಯಾಂಕ್ ಹಾಗೆಯೇ ಇದೆ. ಇದು ದಲಿತರ ಸಮಸ್ಯೆಗೆ ಜಿಲ್ಲಾಡಳಿತ, ಅಧಿಕಾರಿಗಳು ಹೇಗೆ ಸ್ಪಂದಿಸತ್ತಾರೆ ಎನ್ನುವುದಕ್ಕೆ ಸಾಕ್ಷಿ. ಡಿಸಿ, ಎಸಿ ಎಲ್ಲರೂ ಸ್ಥಳಕ್ಕೆ ಬಂದು ಟ್ಯಾಂಕ್ ಸ್ಥಿತಿ ಕಂಡು ಟ್ಯಾಂಕ್ ತೆರವು ಮಾಡುವ ಮಾತನಾಡಿದ್ದಾರೆ. ಒಂದು ವಾರದಲ್ಲಿ ಶಿಥಿಲಗೊಂಡ ನೀರಿನ ಟ್ಯಾಂಕ್ ತೆರವು ಮಾಡಬೇಕು. ಇಲ್ಲದಿದ್ದರೆ, ಮನೆಯವರ ಜತೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಬೇಕಾಗುತ್ತದೆ.
ಕೆ.ಸಿ.ರಾಜು ಬೆಟ್ಟಿನಮನೆ
ಅಧ್ಯಕ್ಷ, ದಲಿತ ಸಂಘರ್ಷ ಸಮಿತಿ ಕುಂದಾಪುರ ತಾಲೂಕು

ಗೋಪಾಡಿ ಗ್ರಾಮದಲ್ಲಿರುವ ಶಿಥಿಲ ನೀರಿನ ಟ್ಯಾಂಕ್ ಇರುವ ಸ್ಥಳಕ್ಕೆ ಹಿಂದಿನ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಭೇಟಿ ನೀಡಿ, ಟ್ಯಾಂಕ್ ತೆರವು ಭರವಸೆ ನೀಡಿದ್ದರು. ಅವರ ವರ್ಗಾವಣೆ ಆಗಿ, ಚುನಾವಣೆ ನೀತಿಸಂಹಿತೆಯಿಂದ ಗ್ರಾಪಂ ಪ್ರಸ್ತಾಪ ನನೆಗುದಿಗೆ ಬಿತ್ತು. ಟ್ಯಾಂಕ್ ತೆರವು ಮಾಡಲು 2.50 ಲಕ್ಷ ರೂ. ಅಂದಾಜು ಪಟ್ಟಿ ತಯಾರಿಸಲಾಗಿದ್ದು, ಅಷ್ಟು ಹಣ ಗ್ರಾಪಂನಿಂದ ಹೊಂದಿಸಲು ಆಗುವುದಿಲ್ಲ. ಪ್ರಕೃತಿ ವಿಕೋಪ ನಿಧಿಯಲ್ಲಿ ಸಾಕಷ್ಟು ಅನುದಾನವಿದ್ದು, ಆ ಅನುದಾನ ಬಳಸಿ ಟ್ಯಾಂಕ್ ತೆರವು ಮಾಡಬಹುದು.
ಸರಸ್ವತಿ ಜಿ.ಪುತ್ರನ್
ಅಧ್ಯಕ್ಷರು, ಗೋಪಾಡಿ ಗ್ರಾಪಂ

ಡಾ.ಎಂ.ಟಿ.ರೇಜು ಉಡುಪಿ ಜಿಲ್ಲಾಧಿಕಾರಿ ಆಗಿದ್ದಾಗಲೇ ಆ್ಯಕ್ಷನ್ ಪ್ಲಾನ್‌ನಲ್ಲಿ 2.50 ಲಕ್ಷ ರೂ. ಅನುದಾನ ಮೀಸಲಿಟ್ಟಿದ್ದು, ಶೀಘ್ರ ಟ್ಯಾಂಕ್ ನೆಲಸಮ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ. 15 ದಿನದಲ್ಲಿ ಟ್ಯಾಂಕ್ ತೆರವು ಮಾಡಲಾಗುತ್ತದೆ. ಟ್ಯಾಂಕ್ ತೆರವಿಗೆ ಎಸ್ಟಿಎಫ್ ಅನುದಾನವಿಟ್ಟಿದ್ದು, ಯಾವ ಹಂತದಲ್ಲಿದೆ? ಏನಾಗಿದೆ? ಎನ್ನುವುದನ್ನು ಫಾಲೋಅಪ್ ಮಾಡಲಾಗುತ್ತದೆ.
ಸಿಂಧೂ ಬಿ.ರೂಪೇಶ್
ಉಡುಪಿ ಜಿಪಂ ಸಿಇಒ

Leave a Reply

Your email address will not be published. Required fields are marked *