ಬೀಡಾಡಿ ದನಗಳಿಗೆ ಹಟ್ಟಿ, ತೊಟ್ಟಿ

ಭರತ್‌ರಾಜ್ ಸೊರಕೆ ಮಂಗಳೂರು

ಸುರತ್ಕಲ್, ನವಮಂಗಳೂರು ಬಂದರು ಪ್ರದೇಶದಲ್ಲಿ ಬೀಡಾಡಿ ದನಗಳ ಸಂಖ್ಯೆ ಹೆಚ್ಚಿದ್ದು, ಬೇಸಿಗೆಯಲ್ಲಿ ನೀರು ಮತ್ತು ಆಹಾರಕ್ಕೆ ಪರದಾಡುತ್ತಿವೆ. ಇದನ್ನರಿತ ನವಮಂಗಳೂರು ಬಂದರು ಮತ್ತು ಶಕ್ತಿನಗರದ ಅನಿಮಲ್ ಕೇರ್ ಟ್ರಸ್ಟ್ ದನಗಳ ದಾಹ ತೀರಿಸುವ, ನೆರಳು ನೀಡುವ ಮಾನವೀಯ ಕಾರ್ಯದಲ್ಲಿ ತೊಡಗಿದೆ.
ಸುರತ್ಕಲ್, ನವಮಂಗಳೂರು ಬಂದರು ಆಸುಪಾಸು ಸುಮಾರು 200 ಲೀಟರ್ ನೀರು ತುಂಬುವ 15ಕ್ಕೂ ಅಧಿಕ ಸಿಮೆಂಟ್ ತೊಟ್ಟಿಗಳನ್ನು ಇಡಲಾಗಿದ್ದು, ಇವುಗಳಿಗೆ ನೀರು ತುಂಬಿಸಿ ದನಗಳ ಬಾಯಾರಿಕೆ ನೀಗಿಸುವ ಕಾರ್ಯ ನಡೆಸುತ್ತಿದೆ.

ಎನ್‌ಎಂಪಿಟಿ ಆಸುಪಾಸು ರಸ್ತೆ ಬದಿಯಲ್ಲಿ ಮಳೆಗಾಲದಲ್ಲಿ ಸಾಕಷ್ಟು ಹಸಿರು, ಹುಲ್ಲು ಇದ್ದು ದನಗಳಿಗೆ ಮೇವು ಸಿಗುತ್ತದೆ. ಈ ಪ್ರದೇಶಲ್ಲಿ ರಸ್ತೆ ಬದಿ ಹೆಚ್ಚಿನ ಜಾಗವಿರುವುದರಿಂದ ಗೋವುಗಳ ಓಡಾಟಕ್ಕೂ ಅನುಕೂಲವಾಗಿದೆ. ಅಂಗಡಿ ಮುಂಗಟ್ಟುಗಳಲ್ಲಿ, ಸಮುದ್ರದ ಆಸುಪಾಸು ಹೊಟ್ಟೆ ತುಂಬಿಸಿಕೊಳ್ಳುತ್ತಿದೆ.

ಮಳೆಗಾಲದಲ್ಲಿ ಎಲ್ಲಾದರೂ ತೊರೆ, ಗುಂಡಿಗಳಲ್ಲಿ ನೀರು ಸಂಗ್ರಹವಾಗಿರುತ್ತದೆ. ಸಮಸ್ಯೆಯಾಗುವುದು ಬೇಸಿಗೆಯಲ್ಲಿ. ತೀವ್ರ ಬಿಸಿಲಿಗೆ ಮನುಷ್ಯರಿಗೆ ಮಾತ್ರವಲ್ಲ, ಪ್ರಾಣಿ ಪಕ್ಷಿಗಳಿಗೂ ಕುಡಿಯಲು ನೀರು ಸಿಗುವುದಿಲ್ಲ. ಆಹಾರ ಮತ್ತು ನೀರಿಗೆ ಕೊರತೆಯಾಗುತ್ತದೆ. ಪಕ್ಷಿಗಳು, ಬೀದಿನಾಯಿಗಳು, ದನಗಳು ಪರದಾಡುತ್ತವೆ. ನೀರಿಲ್ಲದೆ ಬಳಲುವ ದನಗಳನ್ನು ರಾತ್ರಿ ವೇಳೆ ಕಟುಕರು ಕದ್ದೊಯ್ಯುವ ಸಾಧ್ಯತೆಗಳು ಹೆಚ್ಚು. ಈ ಹಿನ್ನೆಲೆಯಲ್ಲಿ ಅನಿಮಲ್‌ಕೇರ್ ಟ್ರಸ್ಟ್ ನವಮಂಗಳೂರು ಬಂದರು ಆಡಳಿತ ಮಂಡಳಿಗೆ ವಿಷಯ ಪ್ರಸ್ತಾಪಿಸಿದಾಗ ಅಲ್ಲಲ್ಲಿ ಟ್ಯಾಂಕ್‌ಗಳನ್ನಿಡುವ ಬಗ್ಗೆ ತಕ್ಷಣ ಸ್ಪಂದಿಸಿದ್ದಾರೆ.

ಹಟ್ಟಿ ರಚನೆ: ರಸ್ತೆಯಲ್ಲಿ ಮಾತ್ರವಲ್ಲ, ನವಮಂಗಳೂರು ಬಂದರಿನ ಒಳಗೂ ನೂರಾರು ದನಗಳಿವೆ. ಇದಕ್ಕಾಗಿ ಆವರಣದ ಒಳಗಡೆ ಪ್ರತ್ಯೇಕ ಒಂದು ದೊಡ್ಡ ಹಟ್ಟಿಯನ್ನು ಕಟ್ಟಿದ್ದಾರೆ. ನೀರಿನ ತೊಟ್ಟಿಗಳಿಗೆ ನಿತ್ಯ ನೀರು ಹಾಕಲು ಪ್ರತ್ಯೇಕ ಟ್ಯಾಂಕರ್ ಮತ್ತು ಸಿಬ್ಬಂದಿಯನ್ನು ನೇಮಿಸಲಾಗಿದೆ. ಕೆ.ಐ.ಒ.ಸಿ.ಎಲ್. ಆಸುಪಾಸು ಮತ್ತೆ 10 ನೀರಿನ ತೊಟ್ಟಿಗಳನ್ನು ಇಡುವ ಬಗ್ಗೆ ಚರ್ಚಿಸಲಾಗಿದೆ ಎಂದು ಅನಿಮಲ್ ಕೇರ್ ಟ್ರಸ್ಟ್ ಸದಸ್ಯರು ತಿಳಿಸಿದ್ದಾರೆ.

ನಾಯಿಗಳಿಗೆ ಆಹಾರ: ಈಗಾಗಲೇ ಶಕ್ತಿನಗರದ ಅನಿಮಲ್‌ಕೇರ್ ಟ್ರಸ್ಟ್ (ಎಸಿಟಿ) ನಗರದ ಹಲವೆಡೆ ಮಣ್ಣಿನ ಪಾತ್ರೆಗಳನ್ನಿಟ್ಟು ಶ್ವಾನಗಳಿಗೆ ನೀರುಣಿಸುವ ಕಾರ್ಯ ಮಾಡುತ್ತಿದೆ. ನಗರದಲ್ಲಿ ಹೆಚ್ಚು ನಾಯಿಗಳು ಗುಂಪಾಗಿರುವ 70 ಕಡೆಗಳಲ್ಲಿ ಪಾತ್ರೆಗಳನ್ನಿಡಲಾಗಿದೆ. ಆಯಾ ಪ್ರದೇಶದ ಪ್ರಾಣಿ ಪ್ರೇಮಿಗಳಿಗೆ, ನಿತ್ಯ ನಾಯಿಗಳಿಗೆ ಆಹಾರ ಒದಗಿಸುವವರು ಇವುಗಳಿಗೆ ನೀರು ತುಂಬಿಸುವ ಜವಾಬ್ದಾರಿ ವಹಿಸಲಾಗಿದೆ. ಕೆಲವೊಮ್ಮೆ ಟ್ರಸ್ಟ್‌ನ ಸದಸ್ಯರೇ ಖುದ್ದಾಗಿ ಆಹಾರ, ನೀರು ಒದಗಿಸುವ ಕಾರ್ಯ ನಡೆಸುತ್ತಾರೆ.

ನವಮಂಗಳೂರು ಬಂದರು ಸುತ್ತ ನೂರಾರು ದನಗಳಿದ್ದು, ಅವುಗಳಿಗೆ ನೀರೊದಗಿಸುವ ದೃಷ್ಟಿಯಿಂದ ನವಮಂಗಳೂರು ಬಂದರು ಸಹಕಾರದೊಂದಿಗೆ ನೀರಿನ ತೊಟ್ಟಿಗಳನ್ನು ಇಡಲಾಗಿದೆ. ಇದರಿಂದ ಬೇಸಗೆಯಲ್ಲಿ ದನಗಳು ದಾಹದಿಂದ ಬಳಲುವುದು ತಪ್ಪಲಿದೆ.
|ನಿಶ್ಚಲ್ ಶೆಟ್ಟಿ, ಅನಿಮಲ್‌ಕೇರ್ ಟ್ರಸ್ಟ್ ಕಾರ್ಯಕರ್ತ