ಬಸ್ ನಿಲ್ದಾಣದಲ್ಲಿಲ್ಲ ನೀರಿನ ವ್ಯವಸ್ಥೆ

ಗುಂಡ್ಲುಪೇಟೆ: ಪಟ್ಟಣದ ಹೈಟೆಕ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಬಸ್‌ನಿಲ್ದಾಣಕ್ಕೆ ನಿತ್ಯ ಸಾವಿರಾರು ಪ್ರಯಾಣಿಕರು ಆಗಮಿಸಿ, ದೂರದ ಊರುಗಳಿಗೆ ಬಸ್‌ನಲ್ಲಿ ಪಯಣಿಸುತ್ತಾರೆ. ಆದರೆ ಇಲ್ಲಿ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದರಿಂದ ಪ್ರಯಾಣಿಕರಿಗೆ ಅನನುಕೂಲವಾಗಿದೆ. ಬಾಯಾರಿಕೆಯಾದರೆ ನೀರಿಗೆ ಪರದಾಡುವಂತಹ ದುಸ್ಥಿತಿ ಇದೆ.

ನಿಲ್ದಾಣದ ಹೊರಭಾಗದ ಎತ್ತರ ಪ್ರದೇಶದಲ್ಲಿ ಒಂದು ನಲ್ಲಿ ಅಳವಡಿಸಿದ್ದು, ಇದರಲ್ಲಿ ಸಮರ್ಪಕವಾಗಿ ನೀರು ದೊರಕುತ್ತಿಲ್ಲ. ಕೆಲ ದಿನಗಳ ಹಿಂದೆ ನಿಲ್ದಾಣದಲ್ಲಿ ನೀರು ಶುದ್ಧೀಕರಣ ಯಂತ್ರ ಅಳವಡಿಸಲಾಗಿತ್ತು. ನಿರ್ವಹಣೆಯ ಕೊರತೆಯಿಂದ ಅದು ಕೆಟ್ಟಿದ್ದು, ಇದನ್ನು ದುರಸ್ತಿಪಡಿಸದ ಪರಿಣಾಮ ಮೂಲೆಗುಂಪಾಗಿದೆ.

ಇದರಿಂದ ದೂರದ ಊರುಗಳಿಗೆ ಬರುವ ಗ್ರಾಮೀಣ ಹಾಗೂ ಬಡ ಪ್ರಯಾಣಿಕರು ಅಂಗಡಿಗಳಲ್ಲಿ ದುಬಾರಿ ಬೆಲೆ ತೆತ್ತು ಮಿನರಲ್ ನೀರು ಖರೀದಿಸಲು ಸಾಧ್ಯವಾಗದೆ ಸಮೀಪದ ಹೋಟೆಲ್‌ಗೆ ತೆರಳಿ ಅಲ್ಲಿ ಕಾಡಿ ಬೇಡಿ ನೀರು ಕುಡಿಯುವಂತಾಗಿದೆ. ರಾತ್ರಿ ಹೋಟೆಲ್ ಮುಚ್ಚಿದ ನಂತರ ಬರುವವರು ಬಾಯಾರಿಕೆಯಿಂದ ಬಳಲುವಂತಾಗಿದೆ. ಅಲ್ಲದೆ ಸಾರಿಗೆ ಸಿಬ್ಬಂದಿಗೂ ಶುದ್ಧ ಕುಡಿಯುವ ನೀರು ದೊರಕದೆ ಸಿಕ್ಕಸಿಕ್ಕಲ್ಲಿ ಬಸ್ ನಿಲ್ಲಿಸಿ ನೀರು ತುಂಬಿಸಿಕೊಳ್ಳಬೇಕಾಗಿದೆ.

ಡಿಪೋಗೆ ಪುರಸಭೆ ವತಿಯಿಂದ ಕಬಿನಿ ನೀರು ಸರಬರಾಜು ಮಾಡಲಾಗುತ್ತಿದೆ. ಅದರಂತೆ ಬಸ್ ನಿಲ್ದಾಣದಲ್ಲಿ ಶಾಸಕರ ನಿಧಿಯಿಂದ ಶುದ್ಧ ಕುಡಿಯುವ ನೀರು ಘಟಕ ಸ್ಥಾಪಿಸಲು ಸ್ಥಳಾವಕಾಶವಿದೆ. ಶುದ್ಧೀಕರಿಸಿದಾಗ ಹೊರಬರುವ ನೀರನ್ನು ಬಸ್‌ಗಳನ್ನು ಶುಚಿಗೊಳಿಸಲು ಹಾಗೂ ಶೌಚಗೃಹಕ್ಕೆ ಬಳಕೆ ಮಾಡಿದರೆ ಸ್ವಲ್ಪವೂ ನೀರು ವ್ಯರ್ಥವಾಗದೆ ಸದ್ಬಳಕೆಯಾಗಲಿದೆ. ಇದಕ್ಕೆ ಸಾರಿಗೆ ಇಲಾಖೆಯು ಶಾಸಕರಿಗೆ ಮನವಿ ಮಾಡಿದ್ದರೂ ಇನ್ನೂ ಸಾಧ್ಯವಾಗಿಲ್ಲ. ನಿಗದಿತ ಕಾಯಿನ್ ಹಾಕಿ ಶುದ್ಧ ಕುಡಿಯುವ ನೀರು ದೊರಕುವಂತೆ ಮಾಡಿದರೆ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಆದ್ದರಿಂದ ಇನ್ನಾದರೂ ಘಟಕ ತೆರೆಯಲು ಮುಂದಾಗಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಬಸ್ ನಿಲ್ದಾಣದ ನಲ್ಲಿಯಲ್ಲಿ ಬರುತ್ತಿರುವ ನೀರು ಸಾರ್ವಜನಿಕರು ಕುಡಿಯಲು ಯೋಗ್ಯವಾಗಿಲ್ಲ. ಆದ್ದರಿಂದ ನೂತನ ಶಾಸಕರು ಡಿಪೋ ಪರಿಶೀಲನೆಗೆ ಆಗಮಿಸಿದ್ದಾಗ ನಿಲ್ದಾಣದ ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಮನವಿ ಸಲ್ಲಿಸಲಾಗಿದೆ. ಸದ್ಯ ಡಿಪೋ ಹಾಗೂ ಸಿಬ್ಬಂದಿಗೆ ಶುದ್ಧ ಕುಡಿಯುವ ನೀರನ್ನು ಬೇಗೂರಿನಿಂದಲೇ ತರಲಾಗುತ್ತಿದೆ.
ಎಂ.ಜಿ.ಜಯಕುಮಾರ್, ಸಾರಿಗೆ ಡಿಪೋ ಮ್ಯಾನೇಜರ್, ಗುಂಡ್ಲುಪೇಟೆ