ನೀರಿಗಾಗಿ ದೇವನೂರು ಗ್ರಾಪಂಗೆ ಮುತ್ತಿಗೆ

ಪಂಚನಹಳ್ಳಿ: ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿ ಕಡೂರು ತಾಲೂಕಿನ ದೇವನೂರು ಗ್ರಾಪಂ ವ್ಯಾಪ್ತಿಯ ಹಳ್ಳದಹಳ್ಳಿ ಗ್ರಾಮದ ಮಹಿಳೆಯರು ಶುಕ್ರವಾರ ದೇವನೂರು ಗ್ರಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕುಡಿಯುವ ನೀರಿಗೆ ತೀವ್ರ ಸಮಸ್ಯೆಯಿಂದ ಜನ, ಜಾನವಾರುಗಳ ಜತೆ ವಲಸೆ ಹೋಗಬೇಕಾದ ಪರಿಸ್ಥಿತಿ ನಿರ್ವಣವಾಗಿದೆ. ಗ್ರಾಮದ ಕುಡಿಯುವ ನೀರಿನ ಟ್ಯಾಂಕ್ ತೊಳೆದು ವರ್ಷಗಳೇ ಕಳೆದಿವೆ. ಬೇಸಿಗೆ ಮುನ್ನವೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಈ ಬಗ್ಗೆ ಗ್ರಾಮಕ್ಕೆ ಆಗಮಿಸಿದ ತರೀಕೆರೆ ಉಪ ವಿಭಾಗಾಧಿಕಾರಿಗೆ ಮನವಿ ಮಾಡಿದಾಗ ಅವರು 24 ಗಂಟೆ ಒಳಗೆ ಸಮಸ್ಯೆ ಬಗೆಹರಿಸುವಂತೆ ಪಿಡಿಒಗೆ ಸೂಚಿಸಿದರೂ ಕ್ರಮಕೈಗೊಂಡಿಲ್ಲ ಎಂದು ದೂರಿದರು.

4 ತಿಂಗಳಿನಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಪಿಡಿಒ ಬಸವರಾಜ್ ನಾಯ್ಕಗೆ ದೂರು ನೀಡಿದರೂ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಹಣ ಬರುವ ಕೆಲಸಗಳನ್ನು ಮುತುವರ್ಜಿ ವಹಿಸಿ ತಾವೇ ಮುಂದೆ ನಿಂತು ಮಾಡಿಸುತ್ತಾರೆ. ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರ ಜತೆ ಸೌಜನ್ಯದಿಂದ ವರ್ತಿಸುವುದಿಲ್ಲ. ಹಿರಿಯ ಅಧಿಕಾರಿಗಳು ನನ್ನನ್ನು ಏನೂ ಮಡಲು ಸಾಧ್ಯವಿಲ್ಲ ಎಂದು ದರ್ಪದಿಂದ ಮಾತನಾಡುತ್ತಾರೆ ಎಂದು ಪ್ರತಿಭಟನಾಕಾರರು ದೂರಿದರು.

ಬಸವರಾಜ್ ನಾಯ್ಕ ದೇವನೂರು ಪಿಡಿಒ ಆಗಿ ಏಳು ವರ್ಷಗಳಾಗಿವೆ. ಇಲ್ಲಿಗೆ ಬಂದಾಗಿನಿಂದ ಕೆಲಸ ನಿರ್ವಹಿಸದೆ ಮೊಂಡುತನ ಪ್ರದರ್ಶಿಸುತ್ತಿದ್ದಾರೆ. ಕೂಡಲೆ ಅವರನ್ನು ವರ್ಗಾವಣೆ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.</