More

    ಬರಿದಾಗುತ್ತಿದೆ ಜಲಮೂಲ

    ಶಿರಸಿ: ಸಹ್ಯಾದ್ರಿ ಶೃಂಗ ಎಂದೇ ಖ್ಯಾತಿ ಪಡೆದ ಶಿರಸಿಯಲ್ಲೂ ಇದೀಗ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಶಿರಸಿಗೆ ನೀರು ಪೂರೈಕೆ ಮಾಡುವ ಜಲಮೂಲ ಗಳು ಬರಿದಾಗುತ್ತಿದೆ.

    ನಗರದ ಜನತೆಗೆ ಸರಿಯಾದ ರೀತಿಯಲ್ಲಿ ನೀರನ್ನು ಸರಬರಾಜು ಮಾಡಲು ನಗರಸಭೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
    ನಗರಸಭೆಯಿಂದ ಪ್ರತಿ ಎರಡು ದಿನಕ್ಕೆ ಒಮ್ಮೆ ನೀರು ಬಿಡಲು ನಿರ್ಧರಿಸಲಾಗಿದ್ದು, ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದೆ. ನಗರವಾಸಿಗಳು ಎಚ್ಚರಿಕೆಯಿಂದ ನೀರನ್ನು ಬಳಸಿ, ಮಿತವ್ಯಯ ಕಾಯ್ದುಕೊಳ್ಳಬೇಕಿದೆ.

    ಜಲಮೂಲಗಳಲ್ಲಿ ನೀರಿನ ಕೊರತೆ

    70 ಸಾವಿರ ಜನಸಂಖ್ಯೆ ಇರುವ ಶಿರಸಿ ನಗರಕ್ಕೆ ಎರಡು ಮೂಲಗಳಿಂದ ನೀರು ಸರಬರಾಜಾಗುತ್ತದೆ. ಅಘನಾಶಿನಿ ನದಿಯ ಮಾರಿಗದ್ದೆ ಬಳಿ ಪಂಪ್ ಅಳವಡಿಸಿಕೊಂಡು ನಗರದ ಅರ್ಧ ಭಾಗಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ.

    ಇನ್ನೊಂದೆಡೆ ಹುಲೇಕಲ್ ರಸ್ತೆಯಲ್ಲಿ ಕೆಂಗ್ರೆ ಬಳಿ ಕೆಂಗ್ರೆ ಹೊಳೆಯಿಂದ ನೀರು ಪಂಪ್ ಮಾಡಿ ನಗರಕ್ಕೆ ತರಲಾಗುತ್ತಿದೆ. ಆದರೆ, ಈ ವರ್ಷ ಈ ಎರಡೂ ಕಡೆಗಳಲ್ಲಿ ಏಕಕಾಲಕ್ಕೆ ನೀರಿನ ಹರಿವು ಕ್ಷೀಣಿಸಿದೆ.

    ಶಿರಸಿ ನಗರಕ್ಕೆ ಪ್ರತಿ ದಿನ 10 ಲಕ್ಷ ಗ್ಯಾಲನ್ ನೀರು ಬೇಕಾಗುತ್ತದೆ. ಅಂದರೆ, 37 ಲಕ್ಷ ಲೀಟರ್ ನೀರು. ಆದರೆ, ಅಘನಾಶಿನಿ ನದಿ ಮತ್ತು ಕೆಂಗ್ರೆಯಲ್ಲಿ ನೀರಿನ ಹರಿವು ಗಣನೀಯವಾಗಿ ಇಳಿಕೆ ಆಗಿರುವುದರಿಂದ ಇಷ್ಟೊಂದು ಪ್ರಮಾಣದಲ್ಲಿ ನೀರು ಲಭ್ಯವಿಲ್ಲ.

    ಕೆಂಗ್ರೆ ಜಾಕ್‌ವೆಲ್‌ನಲ್ಲಿ ಈ ವರ್ಷ ಹೊಸ ಪಂಪ್‌ಗಳನ್ನು ಅಳವಡಿಸಿ, ಪೈಪ್ ಮಾರ್ಗವನ್ನೂ ಹೊಸದಾಗಿ ನಿರ್ಮಿಸಲಾಗಿದೆ. ಹೀಗಾಗಿ, ನೀರು ಸೋರಿಕೆಯ ಪ್ರಮಾಣ ಕಡಿಮೆ.

    ನಗರದಲ್ಲಿ ಭೀಮನ ಗುಡ್ಡ ಮತ್ತು ರಾಘವೇಂದ್ರ ಮಠದ ಸಮೀಪ ನೀರು ಶುದ್ಧೀಕರಿಸಿ 9 ಟ್ಯಾಂಕ್ ಗಳಲ್ಲಿ ಶೇಖರಿಸಿ ನಗರವಾಸಿಗಳಿಗೆ ನೀಡಲಾಗುತ್ತಿದೆ.

    ಹೊಸದಾಗಿ ಆರು ಟ್ಯಾಂಕ್‌ಗಳನ್ನು ಈ ವರ್ಷ ನಿರ್ಮಾಣ ಮಾಡಲಾಗಿದ್ದರೂ, ನೀರಿನ ಕೊರತೆಯಿಂದ ಟ್ಯಾಂಕ್ ಭರ್ತಿ ಮಾಡಲು ಸಾಧ್ಯವಾಗದಂತಾಗಿದೆ.

    ಈ ಎಲ್ಲದರ ಹಿನ್ನೆಲೆಯಲ್ಲಿ ನಗರಸಭೆ ಎರಡು ದಿನಗಳಿಗೆ ಒಮ್ಮೆ ನೀರು ಸರಬರಾಜು ಮಾಡಲು ನಿರ್ಧರಿಸಿದೆ. ಜೊತೆಯಲ್ಲಿ ಪ್ರಕಟಣೆ ಹೊರಡಿಸಿ ನೀರು ದುರ್ಬಳಕೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.

    ಜನವರಿ, ಫೆಬ್ರವರಿಯಲ್ಲಿ ಮಳೆಯಾಗಿದ್ದರೆ ನೀರಿನ ಸಮಸ್ಯೆ ಇಷ್ಟು ಬಾಧಿಸುತ್ತಿರಲಿಲ್ಲ. ಈ ವರ್ಷ ಮಳೆಯಾಗದಿರುವುದು ಮತ್ತು ಅಧಿಕ ತಾಪಮಾನದಿಂದ ನಗರಕ್ಕೆ ಅಗತ್ಯ ಪ್ರಮಾಣದ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ.
    – ಸೂಫಿಯಾನ್ ಬ್ಯಾರಿ ಇಂಜಿನಿಯರ್, ನಗರಸಭೆ ಶಿರಸಿ

    ಕೆಂಗ್ರೆ ಮತ್ತು ಅಘನಾಶಿನಿ ನದಿಗಳಲ್ಲಿ ಹೊಂಡಗಳಲ್ಲಿ ಸಂಗ್ರಹವಾಗಿರುವ ನೀರನ್ನು ನಗರಕ್ಕೆ ಪೂರೈಸುತ್ತಿದ್ದೇವೆ. ಮಳೆಯಾಗದಿದ್ದರೆ ಮೇ ಅಂತ್ಯದವರೆಗೂ ಇದೇ ನೀರನ್ನು ಸಂಗ್ರಹಿಸಬೇಕಿರುವುದರಿಂದ ಸಾರ್ವಜನಿಕರು ನೀರಿನ ಮೌಲ್ಯ ಅರಿತು ಬಳಸಬೇಕು.
    – ಗಣಪತಿ ನಾಯ್ಕ ಅಧ್ಯಕ್ಷರು, ನಗರಸಭೆ ಶಿರಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts