More

    ಬರಡು ಭೂಮಿಯಲ್ಲಿ ಜಲಕ್ರಾಂತಿ!

    ಶ್ರವಣ್‌ಕುಮಾರ್ ನಾಳ ಪುತ್ತೂರು
    ಹಲವು ವರ್ಷಗಳಿಂದ ಜನವರಿ ನಂತರ ನೀರಿನ ಒರತೆ ಕ್ಷೀಣಗೊಂಡು ಬರಡು ಭೂಮಿಯಂತಾದ ಕೃಷಿ ಭೂಮಿಯಲ್ಲಿ ಕೃಷಿಯನ್ನೇ ಕೈಬಿಟ್ಟಿದ್ದ ಕೆದಿಲ, ಪೆರ್ನೆ, ಪಡ್ನೂರು ಗ್ರಾಮದಲ್ಲಿಗ ಜಲಕ್ರಾಂತಿಯಾಗಿದ್ದು, ಕೆದಿಲ ಸುತ್ತಮುತ್ತ ನಿರ್ಮಿಸಿದ ಕಿಂಡಿ ಅಣೆಕಟ್ಟು 3 ಗ್ರಾಮದ ಕೃಷಿಕರ ಬದುಕನ್ನೇ ಬದಲಿಸಿದೆ.

    5-6 ವರ್ಷಗಳ ಹಿಂದೆ ಈ ಗ್ರಾಮದಲ್ಲಿ 600 ಅಡಿ ಕೊರೆದರೂ ನೀರು ಲಭ್ಯವಿರುತ್ತಿಲ್ಲ. ಆದರೆ ಈಗ ನೂರಡಿ ಕೊರೆದಾಗ ಭರಪೂರ ನೀರು ಸಿಗುತ್ತಿದೆ. ಪುತ್ತೂರು ತಾಲೂಕಿನ ಪಡ್ನೂರು, ಬಂಟ್ವಾಳ ತಾಲೂಕಿನ ಕೆದಿಲ ಹಾಗೂ ಪೆರ್ನೆ ಗ್ರಾಮದ ಬಹುಪಾಲು ಪ್ರದೇಶದಲ್ಲಿ ಅಂತರ್ಜಲ ಮಟ್ಟ ಏರಿದೆ. ಹರಿಯುವ ಪುಟ್ಟ ಹೊಳೆ, ತೋಡುಗಳಿಗೆ ಕಟ್ಟಲಾದ ಕಿಂಡಿ ಅಣೆಕಟ್ಟು ಮತ್ತು ಬೇಸಿಗೆಯಲ್ಲಿ ಒಡ್ಡು ನಿರ್ಮಿಸಿ ನೀರು ಸಂಗ್ರಹಿಸುವ ಗ್ರಾಮೀಣ ಜನರ ದೂರದೃಷ್ಟಿಯೇ ಈ ಜಲಕ್ರಾಂತಿಗೆ ಮೂಲಕಾರಣ.

    ಕಿಂಡಿ ಅಣೆಕಟ್ಟಿನ ಪ್ರಯೋಗ
    ಕೆದಿಲ ಗ್ರಾಮದಲ್ಲಿ ಹಲವು ವರ್ಷಗಳಿಂದಲೇ ಕಿಂಡಿ ಅಣೆಕಟ್ಟಿನ ಪ್ರಯೋಗ ನಡೆಯುತ್ತ ಬಂದಿದ್ದು, ಪುತ್ತೂರು ಪ್ರದೇಶದಲ್ಲೇ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಈ ಪ್ರಯೋಗ ಮಾಡಿದ ಪ್ರದೇಶ ಎಂಬ ಕೀರ್ತಿ ಇಲ್ಲಿಗಿದೆ. ಇತ್ತೀಚಿನ ದಶಕದಲ್ಲಿ ಕಟ್ಟ ಕಟ್ಟುವ ಪದ್ಧತಿಯೇ ನಿಂತು ಹೋದ ಕಾರಣ ಅಂತರ್ಜಲ ವ್ಯಾಪಕವಾಗಿ ಕುಸಿದಿತ್ತು. ಕೆದಿಲ, ಪಡ್ನೂರು ಗ್ರಾಮದಲ್ಲಿ ಹರಿದು ಹೋಗುವ ಕಾಂತುಕೋಡಿ ಎಂಬ ಪುಟ್ಟ ಹೊಳೆಗೆ 1994ರಲ್ಲಿ ಎದುರ್ಕಳ ಎಂಬಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿತ್ತು. ಕೆಲಕಾಲ ಇದರಲ್ಲಿ ನೀರು ಸಂಗ್ರಹಿಸುವ ಗೋಜಿಗೆ ಯಾರೂ ಹೋಗಿರಲಿಲ್ಲ. ನಂತರ ಜನರಲ್ಲಿ ಜಾಗೃತಿ ಮೂಡಿದ ಪರಿಣಾಮ ಕಟ್ಟಕ್ಕೆ ಹಲಗೆ ಇಳಿಸಿ, ಮಣ್ಣು ತುಂಬಿಸಿ ನೀರು ಸಂಗ್ರಹಿಸುವ ಕೆಲಸ ಆರಂಭಗೊಂಡಿತು. ಇತ್ತೀಚಿನ ವರ್ಷಗಳಲ್ಲಿ ಇಲ್ಲಿನ ಸಿವಿಲ್ ಇಂಜಿನಿಯರ್ ರಾಘವೇಂದ್ರ ಭಟ್, ಕೃಷಿಕರಾದ ಶಿವಕುಮಾರ್ ಮುಂತಾದವರ ಉಮೇದಿನಲ್ಲಿ ಗ್ರಾಮಸ್ಥರು ಸೇರಿಕೊಂಡು ತೋಡುಗಳಿಗೆ ಕಟ್ಟ ಕಟ್ಟಲಾರಂಭಿಸಿದರು.

    ಇಲಾಖೆಯ ಶೋಧನೆಯಲ್ಲಿ ದೃಢ
    ಕಾಂತುಕೋಡಿ ಹೊಳೆಗೆ ಎದುರ್ಕಳ ಪ್ರದೇಶದಲ್ಲಿ 2 ಕಿಂಡಿ ಅಣೆಕಟ್ಟುಗಳಲ್ಲಿ ನೀರು ಸಂಗ್ರಹಿಸಲಾಗುತ್ತಿದ್ದು, ಪಡೀಲ್ ಎಂಬಲ್ಲಿ ಮುಳುಗು ಸೇತುವೆಯಲ್ಲೂ ನೀರು ತುಂಬಿ ಹರಿಯುತ್ತಿದೆ. ಇದರಿಂದ ಮೂರು ಗ್ರಾಮಗಳ ಸುಮಾರು ಹತ್ತು ಕಿ.ಮೀ. ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಏರಿದೆ. ಈ ಕಟ್ಟಗಳ ನೀರನ್ನು ಯಾರೂ ನೇರವಾಗಿ ಬಳಕೆ ಮಾಡುತ್ತಿಲ್ಲ. ಬದಲಾಗಿ ಕೇವಲ ಅಂತರ್ಜಲ ಮಟ್ಟ ವೃದ್ಧಿಗಾಗಿಯೇ ಉಳಿಸಿಕೊಳ್ಳುತ್ತಾರೆ. ಫೆಬ್ರವರಿ ಕೊನೆಯವರೆಗೂ ಕಟ್ಟಗಳಲ್ಲಿ ನೀರಿರುತ್ತದೆ. ನಂತರ ನೀರು ಬತ್ತಿದರೂ ಹಳ್ಳಿಗಳ ಬಾವಿ, ಬೋರ್‌ವೆಲ್‌ಗಳಲ್ಲಿ ಮಾತ್ರ ನೀರು ಕಡಿಮೆಯಾಗುವುದಿಲ್ಲ. ಈ ಬಗ್ಗೆ ಮಂಗಳೂರಿನ ಅಂತರ್ಜಲ ಮತ್ತು ಭೂವಿಜ್ಞಾನ ಇಲಾಖೆಯ ಶೋಧನೆಯಲ್ಲಿ ದೃಢಪಟ್ಟಿದೆ.

    ಪಡೀಲ್- ಎದುರ್ಕದಲ್ಲೂ ಅಣೆಕಟ್ಟು
    ಎದುರ್ಕಳ ಪ್ರದೇಶದಲ್ಲಿ ಪೆರ್ನೆಗೆ ಸಂಪರ್ಕಿಸಲು ಸರ್ಕಾರದಿಂದ 50 ಲಕ್ಷ ರೂ. ವೆಚ್ಚ ಸೇತುವೆ ಕಳೆದ ಬೇಸಿಗೆಯಲ್ಲಿ ನಿರ್ಮಿಸಲಾಗಿತ್ತು. ಈಗ ಇಲಾಖೆಯ ಸಹಯೋಗ ಮತ್ತು ಗ್ರಾಮಸ್ಥರ ಸೇರುವಿಕೆಯಿಂದ ಈ ಸೇತುವೆಯ ಕಿಂಡಿಗೆ ಹಲಗೆ ಇಳಿಸಿ, ಮಣ್ಣು ತುಂಬಿಸಿ ನೀರು ಸಂಗ್ರಹಿಸಲಾಗಿದೆ. ಮೇಲ್ಭಾಗದಲ್ಲಿ ಸೇತುವೆಯಿದ್ದರೆ, ಕೆಳಭಾಗದಲ್ಲಿ ನೀರು ಸಂಗ್ರಹಗೊಂಡಿದೆ. ಪಡೀಲ್ ಎಂಬಲ್ಲಿ ಮುಳುಗು ಸೇತುವೆಯ ಮೇಲಿನಿಂದ ನೀರು ಹರಿದು ಹೋಗುತ್ತಿದ್ದು, ಅದಕ್ಕೂ ಹಲಗೆ ಎತ್ತರಿಸಿ ಕಟ್ಟ ಕಟ್ಟಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.

     

    ಇಲಾಖೆ ಹಾಗೂ ಗ್ರಾಮಸ್ಥರ ನೆರವಿನಿಂದ ಕೆದಿಲ, ಪೆರ್ನೆ ಮತ್ತು ಪಡ್ನೂರು ಗ್ರಾಮ ಭಾಗದಲ್ಲಿ ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಜೋಡಿಸಿ ನೀರು ಸಂಗ್ರಹಿಸಲಾಗಿದೆ. ಇದರಿಂದ ಅಂತರ್ಜಲ ಮಟ್ಟ ಸಾಕಷ್ಟು ಏರಿದೆ. ಇತ್ತೀಚೆಗೆ ಈ ಭಾಗದಲ್ಲಿ ಕೊರೆದ 2 ಬೋರ್‌ವೆಲ್‌ಗಳಲ್ಲಿ 65 ಅಡಿ, 100 ಅಡಿಗಳಲ್ಲಿ ಹೇರಳ ನೀರು ಸಿಕ್ಕಿದೆ. ಇದೊಂದು ಜಲಕ್ರಾಂತಿ.
    ಕೆ.ರಾಘವೇಂದ್ರ ಭಟ್ ಸಿವಿಲ್ ಇಂಜಿನಿಯರ್, ಕೆದಿಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts