ಜಲಮೂಲ ಬತ್ತಿ ಸಂಕಷ್ಟ

<<ಕೊಕ್ಕರ್ಣೆಯಲ್ಲಿ ಕುಡಿಯುವ ನೀರಿಗೂ ತತ್ವಾರ * ಬಾಳ್ಕಟ್ಟು ಹೊಳೆಯಲ್ಲಿ ನೀರಿನ ಕೊರತೆ>>

ಅನಂತ ನಾಯಕ್ ಮುದ್ದೂರು ಕೊಕ್ಕರ್ಣೆ
ಉಡುಪಿ ಜಿಲ್ಲೆಯ ಬಾಳ್ಕಟ್ಟು ಸೂರಾಲು ಹೊಳೆ, ಮೊಗವೀರಪೇಟೆ ಹೊಳೆ, ಕೊಕ್ಕರ್ಣೆ ಸೀತಾನದಿ, ಆವರ್ಸೆ ಸಮೀಪದ ಸೀತಾನದಿ, ಜೋಮ್ಲು ತೀರ್ಥ ಈ ಬಾರಿ ಮಳೆಗಾಲದಲ್ಲಿ ನೆರೆಯಿಂದ ತುಂಬಿ ಹರಿದಿತ್ತು. ಮಳೆಗಾಲದಲ್ಲಿ ಪ್ರವಾಹೋಪಾದಿ ಹರಿದಿದ್ದ ಈ ನದಿಗಳು ಪ್ರಸ್ತುತ ನೀರಿಲ್ಲದೆ ತಳ ಕಾಣುತ್ತಿದೆ.
ಕಳೆದ ಕೆಲವು ದಿನಗಳಿಂದ ಸೂರ್ಯನ ತೀಕ್ಷ್ಣ ಪ್ರಖರತೆಯಿಂದ ನೀರು ಆವಿಯಾಗುತ್ತಿದ್ದು, ಈ ಪರಿಸರದಲ್ಲಿ ನದಿ, ಕೆರೆ, ಬಾವಿಗಳು ಬತ್ತುತಿವೆ. ಪ್ರಕೃತಿಯ ಈ ಮುನಿಸು ಜನರಲ್ಲಿ ಆತಂಕವನ್ನೇ ಮೂಡಿಸಿದೆ. ಅನಾವೃಷ್ಟಿಯಿಂದ ಜನರು ದೇವರ ಮೊರೆ ಹೋಗುವಂತಾಗಿದೆ.
ಕೊಕ್ಕರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂರಾಲು ಬಾಳ್ಕಟ್ಟು ಹೊಳೆಯಲ್ಲಿ ನೀರಿಲ್ಲದೆ ತೀರ ಪ್ರದೇಶದ ಕೃಷಿಕರು ಆತಂಕಿತರಾಗಿದ್ದಾರೆ. ಬೆಳೆದು ನಿಂತ ತರಕಾರಿ ಬಳ್ಳಿಗಳು, ಗಿಡಗಳು ಸುಡು ಬಿಸಿಲು ಹಾಗೂ ನೀರಿನ ಅಭಾವದಿಂದ ಕರಟಿ ಹೋಗುತ್ತಿವೆ. ಇದರಿಂದಾಗಿ ಕೃಷಿಯೇ ಮೂಲಾಧಾರವಾಗಿರುವ ಕೊಕ್ಕರ್ಣೆ ಪರಿಸರದಲ್ಲಿ ಇಳುವರಿ ಕಡಿಮೆಯಾಗಿದೆ. ಎಕರೆಗಟ್ಟಲೆ ಜಮೀನಿನಲ್ಲಿ ಕೃಷಿ ಮಾಡಿ ಕೃಷಿಕರು ಕಂಗಾಲಾಗಿದ್ದಾರೆ. ನೀರಿನ ಕೊರತೆಯಿಂದ ಕುಡಿಯುವ ನೀರಿಗಾಗಿ ಜನ ಪರದಾಡುತ್ತಿದ್ದಾರೆ.

ಹೊಂಡ ತೋಡಿ ಕೃಷಿಗೆ ನೀರು!: ಈ ಭಾಗಗಳಲ್ಲಿ ಸೊಪ್ಪು ತರಕಾರಿ, ಕೃಷಿ ಚಟುವಟಿಕೆಗಳು ನಿರಂತರವಾಗಿದ್ದು, ಈವರೆಗೆ ನೀರಿನ ಪ್ರಮಾಣ ಕಡಿಮೆಯಾಗಿರಲಿಲ್ಲ. ಈಗ ಹೊಳೆಯಲ್ಲಿ ಕೂಡ ನೀರು ಬತ್ತಿದ್ದು, ಕೃಷಿಕರು ಹೊಳೆಯಲ್ಲೇ ತಮ್ಮ ಜಮೀನಿಗೆ ಬೇಕಾಗುವಷ್ಟು ಸಣ್ಣ ಸಣ್ಣ ಹೊಂಡಗಳಲ್ಲಿ ನೀರು ನಿಲ್ಲಿಸಿ, ತರಕಾರಿ ಬೆಳೆಗೆ ಪೂರೈಕೆ ಮಾಡುತ್ತಿದ್ದಾರೆ. ಮಾರ್ಚ್ ತಿಂಗಳ ಮಧ್ಯಂತರದಲ್ಲೇ ಈ ಪರಿಸ್ಥಿತಿ ಎದುರಾಗಿದ್ದು, ಇದೇ ರೀತಿ ಬಿಸಿಲು ಮುಂದುವರಿದರೆ ತೀವ್ರ ಬರಗಾಲ ಎದುರಾಗುವುದು ಖಚಿತ. ಕುಡಿಯುವ ನೀರಿಗೆ ಜನರು ಕಷ್ಟಪಡುತ್ತಿದ್ದು, ಕೂಡಲೆ ಗ್ರಾಮ ಪಂಚಾಯಿತಿ ಈ ಪರಿಸರಕ್ಕೆ ಟ್ಯಾಂಕರ್ ಮೂಲಕ ನೀರು ಒದಗಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕೊಕ್ಕರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊರ್ಲಾಳಿ, ವಡ್ಡಂಬೆಟ್ಟು, ಗಾಂಧಿನಗರ, ಸಾಸ್ತಾವು, ಸೂರಾಲು ಭಾಗಗಳಲ್ಲಿ ಕುಡಿಯುವ ನೀರಿನ ಅಭಾವ ಕಂಡುಬಂದಿದ್ದು, ಜಿಲ್ಲಾ ಪಂಚಾಯಿತಿ ಅನುಮತಿ ಪಡೆದು ಟೆಂಡರ್ ಕರೆದು ಕುಡಿಯಲು ನೀರಿನ ವ್ಯವಸ್ಥೆ ಮಾಡಲಾಗುವುದು.
ಪ್ರದೀಪ್ ಕೊಕ್ಕರ್ಣೆ, ಗ್ರಾಪಂ ಪಿಡಿಒ

ಕೊಕ್ಕರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂರಾಲಿನಲ್ಲಿ ಕುಡಿಯುವ ನೀರಿನ ಅಭಾವ ಕಂಡುಬಂದಿದೆ. ಇದುವರೆಗೆ ಮೂರು ಬೋರ್‌ವೆಲ್ ಕೊರೆಯಲಾಗಿದ್ದು, ನಿಷ್ಪ್ರಯೋಜಕವಾಗಿದೆ. ಈ ಭಾಗಕ್ಕೆ ಕುಡಿಯುವ ನೀರಿನ ಶಾಶ್ವತ ಪರಿಹಾರೋಪಾಯಗಳನ್ನು ಅಧಿಕಾರಿಗಳು, ಜನಪ್ರತಿನಿಧಿಗಳು ಶೀಘ್ರದಲ್ಲಿ ಕೈಗೊಂಡು ಜನರ ನೀರಿನ ಸಮಸ್ಯೆಗೆ ಸ್ಪಂದಿಸಬೇಕಾಗಿದೆ.
ಸಂತೋಷ್ ಕುಮಾರ್ ಸೂರಾಲು, ಕೊಕ್ಕರ್ಣೆ ಗ್ರಾಪಂ ಸದಸ್ಯ