ಮಧ್ಯಾಹ್ನ ಊಟ ಬೇಕಾ? ನೀರು ತನ್ನಿ!

ಆಲ್ದೂರು: ತರಗತಿಯಲ್ಲಿ ಕುಳಿತು ಪಾಠ ಕೇಳಬೇಕಾದ ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿಯೂಟ ಬೇಕು ಎಂದರೆ ಅಡುಗೆ ತಯಾರಿಗೆ ನೀರು ತರಲೇಬೇಕು.

ಹೌದು, ಆಲ್ದೂರು ಭಾಗದ ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಗೆ ನೀರಿನ ಸಮಸ್ಯೆ ತಲೆದೋರಿದೆ. ಮಧ್ಯಾಹ್ನದ ಬಿಸಿಯೂಟ ತಯಾರಿಗೆ ನೀರಿನ ಕೊರತೆಯಿದ್ದು, ಮಕ್ಕಳು ಕೊಡ ಹಿಡಿದು ಮನೆ ಮನೆ ಸುತ್ತುವ ಪರಿಸ್ಥಿತಿ ತಲೆದೋರಿದೆ.

ಆಲ್ದೂರಿನ ಸರ್ಕಾರಿ ಹಿರಿಯ ಪ್ರಾಥಮಿಕ, ಇಳೇಖಾನ್ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಮಕ್ಕಳು ಪರದಾಡುವತಾಗಿದೆ.

ಇಳೇಖಾನ್ ಗ್ರಾಮದ ಶಾಲೆಗೆ ನೀರಿನ ಸಂಪರ್ಕವಿಲ್ಲ. ಬಿಸಿಯೂಟ ತಯಾರಿಕೆಗೆ ಪ್ರತಿದಿನ ನೀರಿಗಾಗಿ ಅಲೆದಾಡಬೇಕು. ಅಡುಗೆಗೆ ಬೇಕಾದ ಪದಾರ್ಥಗಳನ್ನು ಸಂಬಂಧಪಟ್ಟ ಇಲಾಖೆ ಸರಬರಾಜು ಮಾಡುತ್ತದೆ. ಆದರೆ ಕುಡಿಯುವ ನೀರಿನ ವ್ಯವಸ್ಥೆಗೆ ಯಾವುದೇ ಇಲಾಖೆ ಅಥವಾ ಸ್ಥಳೀಯ ಗ್ರಾಪಂ ಕ್ರಮ ಕೈಗೊಂಡಿಲ್ಲ.

ಶಾಲೆಗಳಲ್ಲಿ ಬಿಸಿಯೂಟ ತಯಾರಿಕೆಗೆ ಸಿಬ್ಬಂದಿ ನೇಮಿಸಿಕೊಂಡು ಸರ್ಕಾರ ಸಂಬಳ ನೀಡುತ್ತಿದೆ. ಅಡುಗೆಗೆ ಬೇಕಾದ ತಯಾರಿಯನ್ನು ಸಿಬ್ಬಂದಿಯೇ ಮಾಡಿಕೊಳ್ಳಬೇಕು. ಆದರೆ ಪಾಠ ಕೇಳುವ ವಿದ್ಯಾರ್ಥಿಗಳನ್ನು ಸುರಿಯುವ ಮಳೆಯಲ್ಲಿ ಕೊಡ ಕೊಟ್ಟು ನೀರು ತರಲು ಮನೆಮನೆಗೆ ಕಳುಹಿಸಲಾಗುತ್ತಿದೆ. ಈ ಬಗ್ಗೆ ಶಿಕ್ಷಕರು ಮೌನ ವಹಿಸಿರುವುದು ವಿಪರ್ಯಾಸ.

ಈ ಬಗ್ಗೆ ಸಂಬಂಧಪಟ್ಟ ಇಲಾಖೆ, ಗ್ರಾಪಂ ಆಡಳಿತ ಗಮನ ಹರಿಸಬೇಕಿದೆ. ಸರ್ಕಾರಿ ಶಾಲೆಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಇಳೇಖಾನ್ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

 

ಇಳೇಖಾನ್ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಹಲವು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆಯಿದೆ. ಈ ಬಗ್ಗೆ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಮಕ್ಕಳು ನೀರಿಗಾಗಿ ಕೊಡಹಿಡಿದು ಮನೆಮನೆ ಸುತ್ತುವ ಪರಿಸ್ಥಿತಿ ಇದೆ.

| ಮಲ್ಲಿಕಾರ್ಜುನಸ್ವಾಮಿ, ಆಲ್ದೂರು ಗ್ರಾಮಸ್ಥ

 

ನೀರಿನ ಸಮಸ್ಯೆ ಬಗ್ಗೆ ವಾರ್ಡ್ ಸಭೆ, ಗ್ರಾಮ ಸಭೆಗಳಲ್ಲಿ ರ್ಚಚಿಸಿದ್ದೇವೆ. ಆದರೆ ಸಮಸ್ಯೆ ಬಗೆಹರಿದಿಲ್ಲ. ನಾಲ್ಕೈದು ವರ್ಷಗಳಿಂದ ಸಮಸ್ಯೆ ಎದುರಿಸುತ್ತಿದ್ದೇವೆ. ನೀರು ಸರಬರಾಜಿಗೆ ತಾತ್ಕಾಲಿಕವಾಗಿ ಪೈಪ್​ಲೈನ್ ವ್ಯವಸ್ಥೆ ಮಾಡಲಾಗಿದೆ. ನೀರುಗಂಟಿ ಸಮರ್ಪಕವಾಗಿ ನೀರು ಬಿಡಬೇಕಿದೆ.

| ಮಹಮದ್ ರಫಿ, ಇಳೇಖಾನ್ ಶಾಲೆ ಮುಖ್ಯ ಶಿಕ್ಷಕ