ಚೇಳಾರಿಗೆ ನೀರಿನ ತೀವ್ರ ಅಭಾವ

ಲೋಕೇಶ್ ಸುರತ್ಕಲ್

ಚೇಳಾರು ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗುವ ಸಾಧ್ಯತೆ ಕಾಣಿಸಿದೆ.

ನೀರು ಪೂರೈಕೆ ಯೋಜನೆಯ ಕೊಲ್ಯ ಖಂಡಿಗೆಯಲ್ಲಿರುವ ಎರಡು ಬಾವಿಗಳಲ್ಲಿ ನೀರು ಕಳೆದ ವರ್ಷಕ್ಕಿಂತ ಸುಮಾರು 8 ಅಡಿ ಕೆಳಗೆ ಇಳಿದಿದೆ. ಕೊಳವೆಬಾವಿ ಬೋರ್‌ವೆಲ್‌ಗಳಲ್ಲೂ ನೀರಿನಮಟ್ಟ ಕುಸಿದಿದ್ದು, ಇದಕ್ಕೆ ಅಂತರ್ಜಲಮಟ್ಟ ಕುಸಿತ ಕಾರಣ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಪಂಚಾಯಿತಿಯಲ್ಲಿ ಅನುದಾನವಿಲ್ಲ: ಸದ್ಯವೇ ಚೇಳಾರಿಗೆ ಟ್ಯಾಂಕರ್‌ಗಳಲ್ಲಿ ನೀರುಪೂರೈಕೆಗೆ ಟೆಂಡರ್ ಕರೆಯಲು ಸಿದ್ಧತೆ ನಡೆಸಲಾಗಿದೆ. ಇದಕ್ಕೆ ಪಂಚಾಯಿತಿಯಲ್ಲಿ ಸೂಕ್ತ ಅನುದಾನವಿಲ್ಲದ ಕಾರಣ ಜಿಲ್ಲಾ ಟಾಸ್ಕ್ ಫೋರ್ಸ್‌ನ ಅನುದಾನ ಬಳಸುವುದು ಅನಿವಾರ್ಯ ಎಂದು ಮೂಲಗಳು ತಿಳಿಸಿವೆ.

ಜನರ ಆಕ್ರೋಶ: ನೀರು ಪೂರೈಕೆಗೆ ಬಳಸಲಾಗುವ ಕೊಲ್ಯ ಬಾವಿಯಲ್ಲಿ ನೀರು ತೀರಾ ಕಡಿಮೆಯಾಗಿದೆ. ಖಂಡಿಗೆ ಕಾಲನಿ, ನಾರಾಯಣ ಶೆಟ್ಟಿ (ಎಚ್‌ಪಿಸಿಎಲ್) ಬಾವಿಗಳಲ್ಲಿ ಅಲ್ಲದೇ ಮೊದಲಗುರಿಯಲ್ಲಿ ತೆರೆದ ಬಾವಿಗಳಲ್ಲೂ ನೀರು ಕಡಿಮೆಯಾಗಿದೆ. ಅಗರಿ ಚೇಳಾರು, ಕೊಲ್ಯ, ಮಧ್ಯ ಕಾಲನಿ, ಖಡ್ಗೇಶ್ವರಿ ದೇವಸ್ಥಾನ ಬಳಿ, ವಿಜಯನಗರ ಬೋರ್‌ವೆಲ್‌ಗಳಲ್ಲಿ ನೀರು ಕಡಿಮೆಯಾಗಿರುವುದು ನಾಗರಿಕರನ್ನು ದಂಗು ಬಡಿಸಿದೆ. ನೀರಿನ ಸಮಸ್ಯೆ ಪ್ರತಿವರ್ಷವಿದ್ದರೂ ಪಂಚಾಯಿತಿ ಅಥವಾ ಜನಪ್ರತಿನಿಧಿಗಳು ಶಾಶ್ವತ ಪರಿಹಾರ ರೂಪಿಸದಿರುವುದರ ಬಗ್ಗೆ ಜನರ ಆಕ್ರೋಶ ವ್ಯಕ್ತವಾಗಿದೆ. ಎಂಆರ್‌ಪಿಎಲ್ ಪುನಃ ವಸತಿ ಕಾಲನಿಗೆ ಪಾಲಿಕೆ ದಿನಕ್ಕೆ 1 ಲಕ್ಷ ಲೀ. ನೀರು ನೀಡಬೇಕಾಗಿದ್ದರೂ ಸುಮಾರು 50 ಸಾವಿರ ಲೀ. ನೀರು ಮಾತ್ರ ನೀಡುತ್ತಿದೆ ಎಂದು ಕಾಲನಿ ನಿವಾಸಿಗಳು ಹೇಳುತ್ತಾರೆ. ಈ ಬಗ್ಗೆ ಅಧಿಕಾರಿಗಳ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ಪ್ರಯೋಜನವಿಲ್ಲ ಎಂಬ ಆರೋಪ ಕೇಳಿಬಂದಿದೆ.

ಅಧಿಕಾರಿಗಳ ನಿರ್ಲಕ್ಷೃ: ಚೇಳಾರು ನಂದಿನಿ ನದಿಗೆ ನಿರ್ಮಿಸಲಾಗಿರುವ ಅಣೆಕಟ್ಟಿನ ಕಿಂಡಿಗಳಿಗೆ ಅಧಿಕಾರಿಗಳ ನಿರ್ಲಕ್ಷೃದಿಂದಾಗಿ ನವೆಂಬರ್‌ನಲ್ಲಿ ಬಾಗಿಲು ಹಾಕದೆ ಡಿಸೆಂಬರ್‌ಗೆ ಹಾಕಿದ ಪರಿಣಾಮ ನೀರಿನಮಟ್ಟ ಪಾತಾಳಕ್ಕೆ ಇಳಿದಿದೆ. ಇದರಿಂದ ಈ ಭಾಗದ ಬಾವಿಗಳು, ಅಂತರ್ಜಲ ಬತ್ತಿವೆ. ಅಲ್ಲದೆ ಗದ್ದೆಗಳಿಗೆ ನೀರು ಪೂರೈಸದಂತಾಗಿದೆ. ನೀರಿನಮಟ್ಟ ಕಡಿಮೆಯಾದ ಕಾರಣ ಅಣೆಕಟ್ಟದ ಮೇಲಿನ ಪದರದಲ್ಲಿ ಉಪ್ಪು ನೀರು ಆವರಿಸಿದೆ ನೀರು ಪೂರೈಕೆ ಸಮಿತಿ ರಚನೆಯಾಗಿಯೇ ಇಲ್ಲ. ಈ ಬಗ್ಗೆ ಇಲಾಖಾ ಇಂಜಿನಿಯರ್ ಸಂಪರ್ಕಕ್ಕೆ ಸಿಕ್ಕಿಲ್ಲ ಎನ್ನುತ್ತಾರೆ ಇಲ್ಲಿನ ಕಟ್ಟಪುಣಿ ನಿವಾಸಿ ದಿನೇಶ್ ಕೋಟ್ಯಾನ್.

ಇತ್ತೀಚೆಗೆ ಖಂಡಿಗೆ ಬಳಿ ಉದ್ಯಮದವರ ನೆರವಿನಿಂದ ಜಿಲ್ಲಾ ಪಂಚಾಯಿತಿ ಮೂಲಕ 20 ಲಕ್ಷ ರೂ. ವೆಚ್ಚದಲ್ಲಿ ತೆರೆದ ಬಾವಿ ನಿರ್ಮಿಸಲಾಗಿದೆ. ಅಂತರ್ಜಲ ಮಟ್ಟ ಕುಸಿತ ಕಾರಣ ಅದರಲ್ಲೂ ನೀರಿಲ್ಲ. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಬಿಲ್ ತಡೆ ಹಿಡಿಯಬೇಕಿದೆ.
|ಜಯಾನಂದ ಚೇಳಾರು, ಪಂಚಾಯಿತಿ ಅಧ್ಯಕ್ಷ