ನೀರು ಸಂಗ್ರಹಾಗಾರ ಉದ್ಘಾಟನೆಗೆ ಸಿದ್ಧ

ಮೈಸೂರು: ಕೇಂದ್ರ ಸರ್ಕಾರದ ಅಮೃತ್ ಯೋಜನೆಯಡಿ ವಿಜಯನಗರದಲ್ಲಿ ಮರು ನಿರ್ಮಾಣಗೊಂಡಿರುವ ಬೃಹತ್ ನೀರು ಸಂಗ್ರಹಾಗಾರ ಇನ್ನೊಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟನೆಗೆ ಸಿದ್ಧಗೊಳ್ಳಲಿದೆ.

ನೀರು ಸಂಗ್ರಹಾಗಾರಕ್ಕೆ ಅಧಿಕಾರಿಗಳೊಂದಿಗೆ ಬುಧವಾರ ಭೇಟಿ ನೀಡಿದ್ದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಸನ್ನಮೂರ್ತಿ ಈ ಕುರಿತು ಮಾಹಿತಿ ನೀಡಿ, ಸುಮಾರು ಒಂದೂವರೆ ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಈ ಬೃಹತ್ ನೀರು ಸಂಗ್ರಹಾಗಾರವನ್ನು 28 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಮೈಸೂರು ಉತ್ತರ, ಪಶ್ವಿಮ ಭಾಗದ ಸುಮಾರು 20ಕ್ಕೂ ಹೆಚ್ಚು ಬಡಾವಣೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಿದೆ ಎಂದು ತಿಳಿಸಿದರು.

ಸುಮಾರು ಆರು ತಿಂಗಳಿನಿಂದ ಕುಡಿಯುವ ನೀರಿಗಾಗಿ ಪರಿತಪಿಸುತ್ತಿರುವ ವಿಜಯನಗರ, ಹೆಬ್ಬಾಳು, ಕುಂಬಾರಕೊಪ್ಪಲು, ಮೇಟಗಳ್ಳಿ, ಸರಸ್ವತಿಪುರಂ, ಕೆ.ಜಿ.ಕೊಪ್ಪಲು, ಜಯನಗರ, ಕುವೆಂಪುನಗರ ಶಾರದಾದೇವಿನಗರ, ಟಿ.ಕೆ.ಲೇಔಟ್ ಸೇರಿದಂತೆ ಇನ್ನಿತರ ಬಡಾವಣೆಗಳಿಗೆ ಇನ್ನೆರಡು ತಿಂಗಳಲ್ಲಿ ಪರಿಪೂರ್ಣ ಕುಡಿಯುವ ನೀರು ದೊರೆಯಲಿದೆ ಎಂದು ಹೇಳಿದರು.

ವಿಜಯನಗರ 2ನೇ ಹಂತದ ಕೇಂದ್ರ ಜಲ ಸಂಗ್ರಹಾಗಾರ (ಸಿಎಸ್‌ಆರ್)ದಲ್ಲಿ ಈಗಾಗಲೇ ಇರುವ ಹಳೆಯ 18 ಎಂಎಲ್‌ನ ಒಂದು, 27 ಎಂಎಲ್ ಸಾಮರ್ಥ್ಯದ ಸಂಗ್ರಹಾಗಾರದ ಜತೆಗೆ ಹೆಚ್ಚುವರಿಯಾಗಿ 26 ಎಂಎಲ್‌ಡಿ ಸಾಮರ್ಥ್ಯದ ಸಂಗ್ರಹಾಗಾರ ಸದ್ಯವೇ ಚಾಲನೆಗೊಳ್ಳಲಿದೆ. ಶಿಥಿಲಗೊಂಡಿದ್ದ ಈ ಬೃಹತ್ ಜಲ ಸಂಗ್ರಹಾಗಾರವನ್ನು ಅಮೃತ್ ಯೋಜನೆಯಡಿ ಪುನರ್ ನಿರ್ಮಿಸಲಾಗಿದೆ.

ಕೇಂದ್ರ ಪುರಸ್ಕೃತ ಅಟಲ್ ನಗರ ಪರಿವರ್ತನ ಪುನರುಜ್ಜೀವನ ಅಭಿಯಾನ (ಅಮೃತ್) ಯೋಜನೆಯಡಿ 2021ರ ವೇಳೆಗೆ ನಗರದ ಕುಡಿಯುವ ನೀರು ಪೂರೈಕೆಗಾಗಿ 156 ಕೋಟಿ ರೂ. ಅನ್ನು ನಿಗದಿ ಪಡಿಸಲಾಗಿದೆ ಎಂದು ಹೇಳಿದರು.

ಈಗಾಗಲೇ ಈ ಯೋಜನೆಯಡಿ ವಿಜಯನಗರದಲ್ಲಿ ಜಲಸಂಗ್ರಹಾಗಾರಗಳ ದುರಸ್ತಿ, ಪುನರ್ ನಿರ್ಮಾಣ ಕಾರ್ಯ ನಡೆದಿದೆ. ಅಲ್ಲದೆ ಹೊಂಗಳ್ಳಿ 2 ಮತ್ತು 3ನೇ ಹಂತ, ಬೆಳಗೊಳ, ಮೇಳಾಪುರ ಮತ್ತು ಕಬಿನಿ ನೀರು ಸರಬರಾಜು ಯೋಜನೆಗಳ ಅಭಿವೃದ್ಧಿ ಕಾಮಗಾರಿ ಆರಂಭಿಸಲಾಗಿದೆ. ಕೊಳವೆ ಮಾರ್ಗ, ಪಂಪಿಂಗ್ ಮಷಿನ್ ಸರಬರಾಜು ಸೇರಿದೆ.

ಹೊಂಗಳ್ಳಿಯಲ್ಲಿ ಹೊಸದಾಗಿ ಪಂಪ್ ಮನೆ, ಪ್ಯಾನಲ್ ಕೊಠಡಿ ನಿರ್ಮಾಣ ಕಾರ್ಯ ನಡೆದಿದೆ. ಮೈಸೂರು ನಗರದ ಒಳ ಚರಂಡಿ ವ್ಯವಸ್ಥೆ ಅಭಿವೃದ್ಧಿಯನ್ನು ಇದೇ ಯೋಜನೆಯಡಿ ಕೈಗೊಳ್ಳಲಾಗಿದ್ದು, 77.68 ಕೋಟಿ ರೂ.ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಪ್ರಸನ್ನಮೂರ್ತಿ ವಿವರಿಸಿದರು.

ಶಾಸಕ ನಾಗೇಂದ್ರರಿಂದ ತರಾಟೆ: ವಿಜಯನಗರ 2ನೇ ಹಂತದಲ್ಲಿ ಕುಡಿಯುವ ನೀರಿನ ಜಲ ಸಂಗ್ರಹಾಗಾರ ಮರುನಿರ್ಮಾಣ ಕಾಮಗಾರಿ ವೀಕ್ಷಿಸಿದ ಶಾಸಕ ಎಲ್. ನಾಗೇಂದ್ರ ಅವರು ಕಾಮಗಾರಿ ವಿಳಂಬಕ್ಕೆ ಅಧಿಕಾರಿಗಳನ್ನು ಸ್ಥಳದಲ್ಲಿಯೇ ತರಾಟೆಗೆ ತೆಗೆದುಕೊಂಡರು.

ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸದೆ ಇರುವುದರಿಂದ ಪ್ರತಿನಿತ್ಯ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಜನರು ನನ್ನನ್ನು ರಸ್ತೆಯಲ್ಲಿ ಓಡಾಡಲು ಬಿಡುತ್ತಿಲ್ಲ. ನಿಮ್ಮ ಉದಾಸೀನತೆಯಿಂದ ನಾವು ಬೈಗುಳ ಕೇಳುವಂತಾಗಿದೆ. ಕಾಮಗಾರಿ ಪೂರ್ಣಗೊಳ್ಳಲು ಇನ್ನು ಎಷ್ಟು ದಿನ ಬೇಕು ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕೆಲ ಬಡಾವಣೆಗಳಿಗೆ ಬೆಳಗ್ಗೆ ಇಲ್ಲವೇ ಸಂಜೆ ನೀರು ನೀಡಲಾಗುತ್ತಿದೆ. ಕಾಮಗಾರಿ ಪೂರ್ಣಗೊಂಡು ಕೊಳವೆ ಅಳವಡಿಕೆ ಕಾಮಗಾರಿ ಮುಗಿದರೆ ಹೆಚ್ಚುವರಿಯಾಗಿ 18 ಎಂಎಲ್‌ಡಿ ನೀರು ದೊರೆಯಲಿದ್ದು, ನಿತ್ಯ ಬೆಳಗ್ಗೆಯೇ ಎಲ್ಲ ಬಡಾವಣೆಗಳಿಗೂ ನೀರು ನೀಡಲಾಗುವುದು. ಕಾಮಗಾರಿ ಮುಗಿದಿದ್ದು, ಬಣ್ಣ ಬಳಿಯುವ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ಸಮಜಾಯಷಿ ನೀಡಿದರು.

ನಗರಪಾಲಿಕೆ ಸದಸ್ಯ ಎಂ.ಯು. ಸುಬ್ಬಯ್ಯ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಸನ್ನಮೂರ್ತಿ, ವಾಣಿ ವಿಲಾಸ ನೀರು ಸರಬರಾಜು ಕೇಂದ್ರದ ಕಾರ್ಯ ನಿರ್ವಾಹಕ ಇಂಜಿನಿಯರ್ ಹರೀಶ್, ಸಹಾಯಕ ಇಂಜಿನಿಯರ್ ಸಿ. ಜಯಣ್ಣ, ಶಿವಣ್ಣ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *