ಸಿದ್ದಕಟ್ಟೆ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಂದ ಜಲ ಮರುಪೂರಣ

ಸಂದೀಪ್ ಸಾಲ್ಯಾನ್ ಬಂಟ್ವಾಳ
ಮಳೆ ಬಂದಾಗ ನೀರನ್ನು ಇಂಗಿಸಿ ಜಲ ಮರುಪೂರಣ ಮಾಡಿಕೊಳ್ಳಬೇಕು ಎಂಬ ಬಗ್ಗೆ ಮಾಹಿತಿ ಕಾರ್ಯಾಗಾರಗಳು ಅಲ್ಲಲ್ಲಿ ನಡೆಯುತ್ತವೆ. ಇದನ್ನು ಅನುಷ್ಠಾನಗೊಳಿಸುವವರ ಸಂಖ್ಯೆ ಬಲು ವಿರಳ.

ಬೇಸಿಗೆಯಲ್ಲಿ ಬರ ಪರಿಸ್ಥಿತಿ ಎದುರಾದಾಗ ಮಳೆಕೊಯ್ಲು ಮಾಡಿಕೊಳ್ಳಬೇಕು ಎಂದುಕೊಂಡವರೂ ಮಳೆಗಾಲ ಬಂದಾಗ ಮರೆತು ಬಿಡುವುದೇ ಹೆಚ್ಚು. ಆದರೆ ಸಿದ್ದಕಟ್ಟೆ ಸರ್ಕಾರಿ ಪ್ರೌಢಶಾಲೆಯ 204 ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ ಮಳೆ ನೀರಿಂಗಿಸುವ ಗುಂಡಿ ಮಾಡಿ ಮಾದರಿಯಾಗಿದ್ದಾರೆ.

ಸದಾ ಒಂದಿಲ್ಲೊಂದು ಚಟುವಟಿಕೆ ಮೂಲಕ ಗಮನ ಸೆಳೆಯುವ ಸಿದ್ದಕಟ್ಟೆ ಸರ್ಕಾರಿ ಪ್ರೌಢಶಾಲೆ ಉಪಪ್ರಾಂಶುಪಾಲ ರಮಾನಂದ ನೂಜಿಪ್ಪಾಡಿಯವರು ಮಳೆ ನೀರಿಂಗಿಸುವಿಕೆ ಮಹತ್ವದ ಬಗ್ಗೆ ಮಳೆಗಾಲ ಆರಂಭದ ಸಂದರ್ಭ ವಿದ್ಯಾರ್ಥಿಗಳಿಗೆ ತಿಳಿಸಿದ್ದರು. ಇದರಿಂದ ಪ್ರೇರಣೆ ಪಡೆದ 204 ವಿದ್ಯಾರ್ಥಿಗಳು ತಮ್ಮ ಮನೆಯ ಆವರಣ, ತೋಟ, ಗುಡ್ಡಗಳಲ್ಲಿ ನೀರಿಂಗಿಸುವ ಹೊಂಡಗಳನ್ನು ನಿರ್ಮಿಸಿದ್ದಾರೆ. 10 ಮಂದಿ ಶಿಕ್ಷಕರು ಕೂಡ ತಮ್ಮ ಮನೆಗಳಲ್ಲಿ ಇಂಗುಗುಂಡಿ ನಿರ್ಮಿಸಿ ಜಲ ಮರುಪೂರಣ ವ್ಯವಸ್ಥೆ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದ್ದಾರೆ. ವಿದ್ಯಾರ್ಥಿಗಳ ಈ ಕಾರ್ಯಕ್ಕೆ ಪಾಲಕರೂ ನೆರವಾಗಿದ್ದಾರೆ.

ಶಾಲೆಯಲ್ಲೂ ಜಲ ಮರುಪೂರಣ: ಸಿದ್ದಕಟ್ಟೆ ಶಾಲೆಯಲ್ಲೂ ಜಲ ಮರುಪೂರಣ ವ್ಯವಸ್ಥೆ ಅಳವಡಿಸಲಾಗಿದೆ. ಹೆಂಚಿನ ಛಾಚಣಿಯಿಂದ ಹರಿದು ಬರುವ ನೀರು ಪೈಪ್ ಮೂಲಕ ಯಾಂತ್ರೀಕೃತ ವಿಧಾನದಲ್ಲಿ ಶುದ್ಧೀಕರಣಗೊಂಡು ಬಾವಿ ಹಾಗೂ ಕೊಳವೆ ಬಾವಿಗೆ ಹಾಯಿಸಲಾಗುತ್ತಿದೆ. ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳೇ ಈ ವ್ಯವಸ್ಥೆ ನಿರ್ವಹಿಸುತ್ತಿದ್ದು ಜಲ ಮರುಪೂರಣದ ಪ್ರಾಯೋಗಿಕ ಕಲಿಕೆಯೂ ಶಾಲೆಯಿಂದಲೇ ವಿದ್ಯಾರ್ಥಿಗಳಿಗೆ ಕರಗತವಾಗಿದೆ.

ಮನೆಯಲ್ಲಿ ತರಕಾರಿ ಬೆಳೆ: ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಯೂ ಮನೆಯಲ್ಲಿ ವಿವಿಧ ತರಕಾರಿ ಬೆಳೆಯುತ್ತಿದ್ದಾರೆ. ಈ ಮೂಲಕ ಕೃಷಿ ಪಾಠವೂ ವಿದ್ಯಾರ್ಥಿಗಳಿಗೆ ಸಿದ್ಧಿಸಿದೆ. ಜೂನ್ 5ರ ಪರಿಸರ ದಿನಾಚರಣೆಯಂದು ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೂ ವಿವಿಧ ಬಗೆಯ ತರಕಾರಿಯ ಐದು ಬೀಜಗಳನ್ನು ವಿತರಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಈ ಬೀಜ ಬಿತ್ತಿ, ತರಕಾರಿ ಬೆಳೆಸುತ್ತಿದ್ದಾರೆ. ಮುಂದೊಂದು ದಿನ ಎಲ್ಲ ವಿದ್ಯಾರ್ಥಿಗಳೂ ತಾವು ಬೆಳೆದ ತರಕಾರಿಯನ್ನು ಶಾಲೆಯಲ್ಲಿ ಪ್ರದರ್ಶಿಸಲಿದ್ದಾರೆ.

ನೀರಿಂಗಿಸುವಿಕೆಯ ಮಹತ್ವ, ಕೃಷಿ ಹಾಗೂ ಪರಿಸರದ ಬಗ್ಗೆ ಕಾಳಜಿ ಮೂಡಿಸುವ ನಿಟ್ಟಿನಲ್ಲಿ ಇಂಥ ಚಟುವಟಿಕೆಗಳನ್ನು ಮಾಡುತ್ತಿದ್ದೇವೆ. ವಿಶೇಷವೆಂದರೆ ಶಾಲೆಯ ಎಲ್ಲ ಶಿಕ್ಷಕರ ಸಹಿತ 204 ವಿದ್ಯಾರ್ಥಿಗಳೂ ತಮ್ಮ ಮನೆಯಲ್ಲಿ ಇಂಗುಗುಂಡಿ ಮಾಡಿದ್ದಾರೆ. ಶಾಲೆಯಲ್ಲಿ ಕೊಟ್ಟ ತರಕಾರಿ ಬೀಜಗಳನ್ನು ಬಿತ್ತಿ ಬೆಳೆಯುತ್ತಿದ್ದಾರೆ.
– ರಮಾನಂದ ನೂಜಿಪ್ಪಾಡಿ, ಉಪಪ್ರಾಂಶುಪಾಲ ಸರ್ಕಾರಿ ಪ್ರೌಢಶಾಲೆ ಸಿದ್ದಕಟ್ಟೆ

Leave a Reply

Your email address will not be published. Required fields are marked *